ಬಂದೇ ಬಿಡ್ತು ಹೊಸ ಟೊಯೊಟಾ ಫಾರ್ಚ್ಯುನರ್; ಬೆಲೆ, ವೈಶಿಷ್ಟ್ಯಗಳೇನು?
ಟೊಯೊಟಾ ಫಾರ್ಚ್ಯುನರ್ ದೇಶದಲ್ಲಿ ಲಭ್ಯವಿರುವ ಅತಿ ಬೇಡಿಕೆಯ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನಗಳಲ್ಲಿ ಒಂದಾಗಿದೆ.
ಹೊಸ ಹೊಸ ಸೌಲಭ್ಯಗಳಿಂದ ತುಂಬಿ ತುಳುಕುತ್ತಿರುವ ಅತ್ಯಾಕರ್ಷಕ ಇನ್ನೋವಾ ಕ್ರೈಸ್ಟಾ ಬಳಿಕ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಟೊಯೊಟಾ, ಅತಿ ನೂತನ ಫಾರ್ಚ್ಯುನರ್ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವನ್ನು (ಎಸ್ ಯುವಿ) ಭಾರತದಲ್ಲಿ ಬಿಡುಗಡೆಗೊಳಿಸಿದೆ. ಎರಡನೇ ತಲೆಮಾರಿನ ಟೊಯೊಟಾ ಫಾರ್ಚ್ಯುನರ್ ಭಾರತದಲ್ಲಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 25.93 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಟೊಯೊಟಾ ಫಾರ್ಚ್ಯುನರ್ ಪೆಟ್ರೋಲ್ ಬೆಲೆ (ಎಕ್ಸ್ ಶೋ ರೂಂ ದೆಹಲಿ)
ಟು ವೀಲ್ ಡ್ರೈವ್ (ಮ್ಯಾನುವಲ್): 25.92 ಲಕ್ಷ ರು.
ಟು ವೀಲ್ ಡ್ರೈವ್ (ಆಟೋಮ್ಯಾಟಿಕ್): 27.61 ಲಕ್ಷ ರು.

ಟೊಯೊಟಾ ಫಾರ್ಚ್ಯುನರ್ ಡೀಸೆಲ್ (ಎಕ್ಸ್ ಶೋ ರೂಂ ದೆಹಲಿ)
ಟು ವೀಲ್ ಡ್ರೈವ್ (ಮ್ಯಾನುವಲ್): 27.52 ಲಕ್ಷ ರು.
ಟು ವೀಲ್ ಡ್ರೈವ್ (ಆಟೋಮ್ಯಾಟಿಕ್): 29.14 ಲಕ್ಷ ರು.
ಫೋರ್ ವೀಲ್ ಡ್ರೈವ್ (ಮ್ಯಾನುವಲ್): 30.05 ಲಕ್ಷ ರು.
ಫೋರ್ ವೀಲ್ ಡ್ರೈವ್ (ಆಟೋಮ್ಯಾಟಿಕ್): 31.12 ಲಕ್ಷ ರು.

ಇದು ಪ್ರಸಕ್ತ ಸಾಲಿನಲ್ಲಿ ಟೊಯೊಟಾ ಬಿಡುಗಡೆ ಮಾಡುತ್ತಿರುವ ಎರಡನೇ ದೊಡ್ಡ ಲಾಂಚ್ ಆಗಿದೆ. ಇದಕ್ಕೂ ಮೊದಲು ಮೇ ತಿಂಗಳಲ್ಲಿ ಇನ್ನೋವಾ ಕ್ರೈಸ್ಟಾ ಬಿಡುಗಡೆಗೊಳಿಸಿತ್ತು.

ಪ್ರಮುಖವಾಗಿಯೂ ಕಾರಿನ ಅಂದತೆಯಲ್ಲಿ ಬದಲಾವಣೆಯನ್ನು ತರಲಾಗಿದೆ. ಹಾಗೆಯೇ ಭವಿಷ್ಯತ್ತಿನ ವಿನ್ಯಾಸವನ್ನು ಮೈಗೂಡಿಸಿಕೊಂಡು ಬಂದಿದೆ.

ನಗರ ಕ್ರೀಡಾ ಬಳಕೆಯ ವಾಹನಕ್ಕೆ ಸರಿಯಾಗಿ ಕಾರಿನ ಒಳಗೆ ಹಾಗೂ ಹೊರಮೈಯಲ್ಲಿ ಬದಲಾವಣೆಗೊಳಿಸಲಾಗಿದೆ. ಇದು ಐಷಾರಾಮಿ ಗ್ರಾಹಕರತ್ತ ಹೆಚ್ಚಿನ ಒಲವು ತೋರಲಿದೆ.

ನೂತನ ಫಾರ್ಚ್ಯುನರ್ ಕಾರು, ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ ಇಡಿ ಟೈಲ್ ಲೈಟ್, 17 ಅಥವಾ 18 ಇಂಚುಗಳ ಅಲಾಯ್ ಚಕ್ರಗಳು ಮತ್ತು ಹೆಚ್ಚಿನ ಕ್ರೋಮ್ ಸ್ಪರ್ಶತೆಯನ್ನು ಪಡೆದಿದೆ.

ಕಾರಿನೊಳಗೆ ಪ್ರೀಮಿಯಂ ಭಾವನಗೆ ತಕ್ಕಂತೆ ವಿಶಿಷ್ಟ ಬೆಳಕಿನ ಸೇವೆಯನ್ನು ಕೊಡಲಾಗುತ್ತದೆ. ಲೆಥರ್ ಹೋದಿಕೆ, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ನೇವಿಗೇಷನ್ ಸಹ ಪ್ರಮುಖ ಆಕರ್ಷಣೆಯಾಗಲಿದೆ.

ಟೊಯೊಟಾ ನ್ಯೂ ಜನರೇಷನ್ ಆರ್ಕಿಟೇಕ್ಚರ್ (ಟಿಎನ್ ಜಿಎ) ತಳಹದಿಯಲ್ಲಿ ನಿರ್ಮಾಣವಾಗಿರುವ ನೂತನ ಫಾರ್ಚ್ಯುನರ್ ಹಿಂದಿನ ಮಾದರಿಗಿಂತಲೂ ಹಗುರ ಭಾರವೆನಿಸಿಕೊಂಡಿದ್ದು, ಹೆಚ್ಚಿನ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಚಾಲಕ ಸೀಟು ಕಾರಿನಲ್ಲಿ ಕಂಡುಬಂದಿರುವ ಇತರ ಪ್ರಮುಖ ಬದಲಾವಣೆಯಾಗಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಎಲ್ಲ ವೆರಿಯಂಟ್ ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ನೂತನ ಟೊಯೊಟಾ ಫಾರ್ಚ್ಯುನರ್ ಕಾರು 2.7 ಲೀಟರ್ ಪೆಟ್ರೋಲ್ ಮತ್ತು 2.8 ಲೀಟರ್ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸ್ಪಡಲಿದೆ. ಇವೆರಡು ಎಂಜಿನ್ ಗಳನ್ನು ಇನ್ನೋವಾ ಕ್ರೈಸ್ಟಾದಿಂದ ಆಮದು ಮಾಡಲಾಗಿದ್ದು, ಹೆಚ್ಚಿನ ಭಾರ ಹೊರುವ ನಿಟ್ಟಿನಲ್ಲಿ ವಿಶೇಷವಾಗಿ ಟ್ಯೂನ್ ಮಾಡಲಾಗಿದೆ.

ಇದದ 2.7 ಲೀಟರ್ ಪೆಟ್ರೋಲ್ ಎಂಜಿನ್ 245 ಎನ್ ಎಂ ತಿರುಗುಬಲದಲ್ಲಿ 166 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಅಂತೆಯೇ 2.8 ಲೀಟರ್ ಡೀಸೆಲ್ ಎಂಜಿನ್ 450 ಎನ್ ಎಂ ತಿರುಗುಬಲದಲ್ಲಿ 177 ಅಶ್ವಶಕ್ತಿಯನ್ನು ನೀಡಲಿದೆ. ಇದು ಕೂಡಾ ಆರು ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಇನ್ನು ಡೀಸೆಲ್ ಎಂಜಿನ್ ನಲ್ಲಿ ಆಫ್ ರೋಡ್ ಚಾಲನೆಗೆ ಸೂಕ್ತವಾಗಿರುವ ಫೋರ್ ವೀಲ್ ಚಾಲನಾ ವ್ಯವಸ್ಥೆಯು ಲಭ್ಯವಾಗಲಿದೆ.

ಏತನ್ಮಧ್ಯೆ ಫೋರ್ಡ್ ಎಂಡೀವರ್ ಮತ್ತು ಷೆವರ್ಲೆ ಟ್ರೈಲ್ ಬ್ಲೇಜರ್ ಕಾರುಗಳಿಗೆ ನೇರ ಪ್ರತಿಸ್ಪರ್ಧಿಯಾಗಲಿರುವ ನೂತನ ಟೊಯೊಟಾ ಫಾರ್ಚ್ಯುನರ್, ಆರು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಮಾರುಕಟ್ಟೆಯಲ್ಲಿ ನೂತನ ಫಾರ್ಚ್ಯುನರ್ ಕಾರು ಮಿಟ್ಸುಬಿಸಿ ಪಜೆರೊ ಸ್ಪೋರ್ಟ್, ಹೋಂಡಾ ಸಿಆರ್ ವಿ ಮತ್ತು ಹ್ಯುಂಡೈ ಸಾಂಟಾ ಫೆ ಮಾದರಿಗಳಿಗೂ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಆಯಾಮ (ಎಂಎಂ)
ಉದ್ದ: 4795
ಅಗಲ: 1855
ಎತ್ತರ: 1835
ಚಕ್ರಾಂತರ: 2750


Click it and Unblock the Notifications








