ಸ್ವಿಫ್ಟ್ ಮತ್ತು ಬಲೆನೊ ಮಾಲೀಕರೇ ಇತ್ತ ಗಮನಹರಿಸಿ- ಹೊಸ ಕಾರುಗಳಲ್ಲಿ ತಾಂತ್ರಿಕ ದೋಷವಂತೆ.....
ಇತ್ತೀಚೆಗೆ ಬಿಡುಗಡೆಯಾದ 2018ರ ಸ್ವಿಫ್ಟ್ ಮತ್ತು ಬಲೆನೊ ಕಾರುಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದ್ದು, ಗ್ರಾಹಕರ ದೂರುಗಳ ಅನ್ವಯ ಹೊಸ ಕಾರುಗಳನ್ನು ಮಾರುತಿ ಸುಜುಕಿ ಹಿಂಪಡೆಯಲು ನಿರ್ಧರಿಸಿದೆ.
ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಸ್ವಿಫ್ಟ್ ಮತ್ತು ಬಲೆನೊ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟ ಹೊಸ ದಾಖಲೆ ಸೃಷ್ಠಿಸಿದೆ. ಆದ್ರೆ ಇತ್ತೀಚೆಗೆ ಬಿಡುಗಡೆಯಾದ 2018ರ ಸ್ವಿಫ್ಟ್ ಮತ್ತು ಬಲೆನೊ ಕಾರುಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದ್ದು, ಗ್ರಾಹಕರ ದೂರುಗಳ ಅನ್ವಯ ಹೊಸ ಕಾರುಗಳನ್ನು ಮಾರುತಿ ಸುಜುಕಿ ಹಿಂಪಡೆಯಲು ನಿರ್ಧರಿಸಿದೆ.

ವರದಿಗಳ ಪ್ರಕಾರ 2018ರ ಸ್ವಿಫ್ಟ್ ಮತ್ತು ಬಲೆನೊ ಕಾರುಗಳಲ್ಲಿನ ಬ್ರೇಕ್ ಬೂಸ್ಟರ್ ವಿಭಾಗವು ತಾಂತ್ರಿಕ ದೋಷಗಳಿಂದ ಕೂಡಿದ್ದು, ಮಾರಾಟವಾಗಿರುವ ಸುಮಾರು 52,686 ಕಾರುಗಳಲ್ಲಿ ಇಂತಹ ಸಮಸ್ಯೆ ಇದೆ ಎಂದು ಹೇಳಲಾಗಿದೆ. ಹೀಗಾಗಿ ಸಮಸ್ಯೆ ಕುರಿತು ಗ್ರಾಹಕರ ದೂರುಗಳಿಗೆ ಸ್ಪಂದಿಸಿರುವ ಮಾರುತಿ ಸುಜುಕಿ ಸಂಸ್ಥೆಯು ದೋಷಪೂರಿತ ಕಾರುಗಳಲ್ಲಿನ ಸಮಸ್ಯೆಯನ್ನು ಈ ಕೂಡಲೇ ಪರಿಹರಿಸುವುದಾಗಿ ಭರವಸೆ ನೀಡಿದೆ.

ಜೊತೆಗೆ ಸಮಸ್ಯೆ ಕಂಡುಬಂದಿರುವ ಕಾರುಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಮಾರುತಿ ಸುಜುಕಿ, ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಬ್ರೇಕ್ ವಿಭಾಗವನ್ನು ಸರಿಪಡಿಸುವುದಾಗಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

2017ರ ಡಿಸೆಂಬರ್ 1ರಿಂದ ಮಾರ್ಚ್ 14, 2018ರ ತನಕ ಉತ್ಪಾದನೆಯಾಗಿರುವ ಸ್ವಿಫ್ಟ್ ಮತ್ತು ಬಲೆನೊ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಮಾತ್ರ ಈ ಸಮಸ್ಯೆ ಕಂಡುಬಂದಿದ್ದು, ಈ ಅವಧಿಯಲ್ಲಿ ಮಾರಾಟವಾಗಿರುವ ಹೊಸ ಕಾರುಗಳನ್ನು ಹಿಂಪಡೆದು ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಿದೆಯಂತೆ.

ಮಾರುತಿ ಸುಜುಕಿ ಕಾರುಗಳ ಅಧಿಕೃತ ಮಾರಾಟ ಸಂಸ್ಥೆಯಾದ ನೆಕ್ಸಾ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆಯಿರುವ ಕಾರುಗಳ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಬಹುದಾಗಿದ್ದು, ಕಾರಿನ ಚಾರ್ಸಿ ಸಂಖ್ಯೆಯ ಆಧಾರ ಮೇಲೆ ಉಚಿತ ಸರ್ವಿಸ್‌ಗಾಗಿ ಸದ್ಯದಲ್ಲೇ ಆಹ್ವಾನ ಮಾಡಲಿದೆ.

ಗುಜರಾತಿನಲ್ಲಿರುವ ಮಾರುತಿ ಸುಜುಕಿ ಕಾರು ಉತ್ಪಾದನಾ ಘಟಕದಲ್ಲಿ ತಯಾರಾದ ಕಾರುಗಳಲ್ಲಿ ಈ ಸಮಸ್ಯೆಯಾಗಿದ್ದು, ದೋಷರೂಪಿತ ಬ್ರೇಕಿಂಗ್ ವ್ಯವಸ್ಥೆಯಿಂದಾಗಿ ಕಾರು ಚಾಲನೆಯ ಸಂದರ್ಭದಲ್ಲಿ ಬ್ರೇಕ್ ಹಾಕುವಾಗ ನಿಗದಿತ ಅವಧಿಯಲ್ಲಿ ಚಾಲಕನ ಹಿಡಿತಕ್ಕೆ ಸಿಗುತ್ತಿಲ್ಲವಂತೆ.

ಇದರಿಂದ ಕೆಲ ಸಂದರ್ಭಗಳಲ್ಲಿ ಅಪಘಾತಗಳಾಗುವ ಸಾಧ್ಯತೆಗಳಿದ್ದು, ಇದರಿಂದ ಎಚ್ಚೇತ್ತುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ನಿಗದಿತ ಅವಧಿಯಲ್ಲಿ ಬ್ರೇಕ್ ಬೂಸ್ಟರ್ ವಿಭಾಗವನ್ನು ಹೊಸದಾಗಿ ಬದಲಿಸುವ ಭರವಸೆ ನೀಡಿದೆ.

ಒಂದು ವೇಳೆ ನೀವು ಕೂಡಾ 2017ರ ಡಿಸೆಂಬರ್‌ನಿಂದ 2018ರ ಎಪ್ರಿಲ್ ಅವಧಿಯಲ್ಲಿ ಸ್ವಿಫ್ಟ್ ಮತ್ತು ಬಲೆನೊ ಖರೀದಿ ಮಾಡಿದಲ್ಲಿ ಈ ಬಗ್ಗೆ ಗಮನಹರಿಸಬೇಕಾದ ಅವಶ್ಯಕತೆಯಿದ್ದು, ಹೊಸ ಕಾರುಗಳಲ್ಲಿ ಬ್ರೇಕ್ ಬೂಸ್ಟರ್ ತೊಂದರೆ ಕಂಡುಬಂದಲ್ಲಿ ಈ ಕೂಡಲೇ ನಿಮ್ಮ ಹತ್ತಿರದ ಮಾರುತಿ ಸುಜುಕಿ ಅಧಿಕೃತ ಡೀಲರ್ಸ್‌ಗಳ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

ಇದರ ಹೊರತಾಗಿ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಬಲೆನೊ ಕಾರುಗಳು ಗ್ರಾಹಕರ ಸ್ನೇಹಿ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಬ್ರೇಕ್ ಬೂಸ್ಟರ್ ತಾಂತ್ರಿಕ ದೋಷ ದೊಡ್ಡದೇನಲ್ಲ. ಹೀಗಾಗಿ ಈ ರೀತಿಯ ತಾಂತ್ರಿಕ ದೋಷಗಳು ಕಾರುಗಳ ಮಾರಾಟ ಮೇಲೆ ಯಾವುದೇ ಪರಿಣಾಮ ಬೀರದು.

ಇನ್ನು ಆಟೋ ಉದ್ಯಮದಲ್ಲಿ ಇಂತಹ ಸಮಸ್ಯೆಗಳು ಸಾಮನ್ಯವಾಗಿದ್ದು, ಕಾರು ಉತ್ಪಾದನೆ ಸಂದರ್ಭದಲ್ಲಿ ಆಗುವ ಕೆಲವು ತಾಂತ್ರಿಕ ದೋಷಗಳಿಂದಾಗಿ ಹೀಗೆ ಆಗುವುದು ಸಹಜ. ಒಂದು ವೇಳೆ ನಿಮ್ಮ ಕಾರಿನಲ್ಲೂ ಇಂತಹ ಸಮಸ್ಯೆ ಇದ್ದಲ್ಲಿ ಈ ಕೂಡಲೇ ಅಧಿಕೃತ ಮಾರಾಟಗಾರರ ಬಳಿ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಿಕೊಳ್ಳಿ- ಹ್ಯಾಪಿ ಜರ್ನಿ.....

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಕಾರು ಚಾಲನೆ ವೇಳೆ ಗಂಡ-ಹೆಂಡತಿ ಜಗಳದಿಂದಾಗಿ ನಾಲ್ವರು ದುರ್ಮರಣ
ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು
ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..
ವಿವಿಧ ಬಣ್ಣಗಳನ್ನು ಹೊಂದಿರುವ ನಂಬರ್ ಪ್ಲೇಟ್‌ಗಳು ಏನನ್ನು ಸೂಚಿಸುತ್ತವೆ ಗೊತ್ತಾ?


Click it and Unblock the Notifications








