ಸಿಟ್ರನ್ ಸಿ5 ಏರ್‌ಕ್ರಾಸ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ
ಫೋಕ್ಸ್‌ವ್ಯಾಗನ್ ನಂತರ ಯುರೋಪ್ ಮಾರುಕಟ್ಟೆಯ 2ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಪಿಎಸ್‌ಎ ಗ್ರೂಪ್‌ನ ಸಿಟ್ರನ್ ಬ್ರಾಂಡ್ ಭಾರತದಲ್ಲಿ ಹೊಸ ಕಾರು ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿದ್ದು, 2020ರ ಮಾರ್ಚ್ ಅಂತ್ಯಕ್ಕೆ ಮೊದಲ ಕಾರು ಮಾದರಿಯಾಗಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯು ಮಾರಾಟಗೊಳ್ಳಲಿದೆ.

ಸಿ ಸೆಗ್ಮೆಂಟ್ ವಿಭಾಗದಲ್ಲಿನ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ಸೌಲಭ್ಯಗಳೊಂದಿಗೆ ಅಭಿವೃದ್ದಿಗೊಂಡಿರುವ ಎ5 ಏರ್‌ಕ್ರಾಸ್ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ರೋಡ್ ಟೆಸ್ಟಿಂಗ್ ವೇಳೆ ಹೊಸ ಕಾರು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದೆ. ಹೊಸ ಕಾರು ಜೀಪ್ ಕಂಪಾಸ್, ಹ್ಯುಂಡೈ ಟಕ್ಸನ್ ಮತ್ತು ಸ್ಕೋಡಾ ಕರೋಕ್ ಎಸ್‌ಯುವಿಗಳಿಗೆ ಇದು ತ್ರೀವ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಬಿಡುಗಡೆಯ ನಂತರ ಆಯ್ದ ನಗರಗಳಲ್ಲಿ ಮಾತ್ರವೇ ಸಿ5 ಏರ್‌ಕ್ರಾಸ್ ಮಾರಾಟಗೊಳ್ಳಲಿದೆ.

ಭಾರತದಲ್ಲಿ ಸಿಕೆ ಬಿರ್ಲಾ ಗ್ರೂಪ್ ಜೊತೆಗೂಡಿ ಕಾರು ಉತ್ಪಾದನಾ ಮತ್ತು ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿರುವ ಪಿಎಸ್ಎ ಗ್ರೂಪ್ ಸಂಸ್ಥೆಯು ದೇಶದ ಪ್ರಮುಖ 10 ನಗರಗಳಲ್ಲಿ ಮಾತ್ರವೇ ಆರಂಭಿಕ ಕಾರು ಮಾರಾಟ ಪ್ರಕ್ರಿಯೆ ಆರಂಭಿಸುತ್ತಿದೆ.

ತದನಂತರ 2021 ಹೊತ್ತಿಗೆ ದೇಶದ ಪ್ರಮುಖ ನಗರಗಳಲ್ಲೂ ಕಾರು ಮಾರಾಟ ಮಳಿಗೆಗಳನ್ನು ತೆರೆಯಲಿರುವ ಪಿಎಸ್ಎ ಗ್ರೂಪ್, ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳ ಮಾರಾಟಕ್ಕೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಯುರೋಪ್ ಮಾರುಕಟ್ಟೆಯಲ್ಲಿ ಪಿಎಸ್ಎ ಗ್ರೂಪ್ ಸಂಸ್ಥೆಯು ಸಿಟ್ರನ್, ಫ್ಯೂಜೊ ಮತ್ತು ಡಿಎಸ್ ಬ್ರಾಂಡ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಸಿಟ್ರನ್ ನಿರ್ಮಾಣದ ಸಿ5 ಏರ್‌ಕ್ರಾಸ್ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಮೂಲಗಳ ಪ್ರಕಾರ, ಸಿಟ್ರನ್ ಸಿ5 ಏರ್‌ಕ್ರಾಸ್ ಎಸ್‌ಯುವಿ ಬಿಡುಗಡೆಯಾದ ಕೆಲ ದಿನಗಳ ನಂತರ ಸಿ3 ಕಂಪ್ಯಾಕ್ಟ್ ಎಸ್‌ಯುವಿ ಕಾರು ಬಿಡುಗಡೆಯಾಗಲಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಕಾರುಗಳು ಮಹತ್ವದ ಬದಲಾಣೆಗಳೊಂದಿಗೆ ಅಭಿವೃದ್ದಿಗೊಂಡಿವೆ.

ಸಿ5 ಏರ್‌ಕ್ರಾಸ್ ಕಾರು ಮಾದರಿಯು ಬಿಎಸ್-6 ಪ್ರೇರಿತ 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಹೊಂದಿರಲಿದ್ದರೆ ಡೀಸೆಲ್ ಎಂಜಿನ್ ಮಾದರಿಯು 1.5-ಲೀಟರ್ ಜೊತೆಗೆ ಪರ್ಫಾಮೆನ್ಸ್ ಉದ್ದೇಶಕ್ಕಾಗಿ 2.0-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿರಲಿದೆ.

ಜೊತೆಗೆ ಹೊಸ ಕಾರುಗಳನ್ನು ಪರಿಚಯಿಸುವುದಕ್ಕೂ ಮುನ್ನ ದೇಶದ 80 ಪ್ರಮುಖ ನಗರಗಳಲ್ಲಿ 'ಎಕ್ಸ್‌ಪಿರೆನ್ಸ್ ಸ್ಟೋರ್'ಗಳನ್ನು ತೆರೆಯಲಿದ್ದು, ಈ ಮೂಲಕ ಗ್ರಾಹಕರನ್ನು ಹೊಸ ಕಾರ್ ಬ್ರಾಂಡ್‌ನತ್ತ ಸೆಳೆಯುವ ಮಾರುಕಟ್ಟೆ ತಂತ್ರಗಳನ್ನು ಬಳಸುತ್ತಿದೆ.

ಇದಲ್ಲದೇ ಬೆಲೆಗಳಲ್ಲಿ ತುಸು ದುಬಾರಿ ಎನ್ನಿಸಲಿರುವ ಪಿಎಸ್ಎ ಗ್ರೂಪ್ ಕಾರುಗಳ ಬೆಲೆಯನ್ನು ತಗ್ಗಿಸುವ ಉದ್ದೇಶದಿಂದ ಚೆನ್ನೈನಲ್ಲಿ ಅಸೆಂಬ್ಲಿ ಯೂನಿಟ್ ಅನ್ನು ಸಹ ತೆರೆಯಲಾಗಿದ್ದು, ಸ್ಥಳೀಯವಾಗಿ ಲಭ್ಯವಾಗುವ ಸುಮಾರು ಶೇ.90ರಷ್ಟು ತಾಂತ್ರಿಕ ಬಿಡಿಭಾಗಗಳನ್ನು ಬಳಕೆ ಮಾಡಿಕೊಂಡು ಲಾಭಾಂಶ ಮತ್ತು ಕಾರಿನ ಬೆಲೆ ಇಳಿಕೆಗೆ ಸಹಕಾರಿಯಾಗುವಂತೆ ಯೋಜನೆ ಹಮ್ಮಿಕೊಂಡಿದೆ.

ಇತ್ತೀಚೆಗೆ ಹೊಸ ಕಾರುಗಳನ್ನು ಸ್ವಂತಕ್ಕೆ ಖರೀದಿಸುವ ಬದಲು ನಿಗದಿತ ಅವಧಿಗಾಗಿ ಕಾರುಗಳನ್ನು ಲೀಸ್ ಪಡೆಯುವ ಸೌಲಭ್ಯವು ಹೆಚ್ಚು ಜನಪ್ರಿಯವಾಗುತ್ತಿದ್ದು, ಪಿಎಸ್ಎ ಗ್ರೂಪ್ ಕೂಡಾ ತನ್ನ ಸಿಟ್ರನ್ ಕಾರುಗಳಲ್ಲಿ ಲೀಸ್ ಆಯ್ಕೆಯನ್ನು ತೆರೆಯಲು ಉತ್ಸುಕವಾಗಿದೆ.

ಸದ್ಯ ಮಹೀಂದ್ರಾ ಮತ್ತು ಹ್ಯುಂಡೈ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳನ್ನು ಲೀಸ್ ಆಧಾರದ ಮೇಲೆ ಗ್ರಾಹಕರಿಗೆ ಮಾಲೀಕತ್ವ ನೀಡುತ್ತಿದ್ದು, ಇದೀಗ ಬಿಡುಗಡೆಯ ಸನಿಹದಲ್ಲಿರುವ ಸಿ5 ಏರೋಕ್ರಾಸ್ ಕಾರನ್ನು ಸಹ ಲೀಸ್ ಆಧಾರದ ಮೇಲೆ ಹೊಸ ಕಾರಿನ ಮಾಲೀಕತ್ವ ಪಡೆದುಕೊಳ್ಳಬಹುದಾಗಿದೆ.

ಈ ಮೂಲಕ ವಿನೂತನ ವಿನ್ಯಾಸ ಮತ್ತು ವಿಶೇಷ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಸಿಟ್ರನ್ ಎಸ್‌ಯುವಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುವುವ ನೀರಿಕ್ಷೆಯಲ್ಲಿದ್ದು, ಸಿ5 ಏರ್‌ಕ್ರಾಸ್ ಬಿಡುಗಡೆ ನಂತರ ಫ್ರೆಂಚ್ ಮಾರುಕಟ್ಟೆಯಲ್ಲಿರುವ ಮತ್ತಷ್ಟು ಜನಪ್ರಿಯ ಕಾರುಗಳನ್ನು ಭಾರತದಲ್ಲಿ ಸದ್ದು ಮಾಡುವ ನೀರಿಕ್ಷೆಗಳಿವೆ.

ಇನ್ನು ಸಿಟ್ರನ್ ಸಂಸ್ಥೆಯು ಸದ್ಯ ಕಾರು ಉತ್ಪಾದನಾ ಘಟಕ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸಿದ್ದು, ಸಿಬ್ಬಂದಿ ನೇಮಕ, ಮಾರುಕಟ್ಟೆ ಅಧ್ಯಯನ ಮತ್ತು ಕಾರು ಮಾರಾಟಕ್ಕೆ ಅನುಕೂಲಕರ ಪ್ರದೇಶಗಳಲ್ಲಿ ಅಧಿಕೃತ ಮಾರಾಟ ಮಳಿಗೆಗಳ ಚಾಲನೆ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದೆ.


Click it and Unblock the Notifications








