ಭಾರತಕ್ಕೂ ಕಾಲಿಡಲಿದೆ ಸಿಟ್ರನ್ ಕಂಪನಿಯ ಲಾ ಮೈಸೆನ್ ಸ್ಟೋರ್
ಫ್ರಾನ್ಸ್ ಮೂಲದ ಕಾರು ತಯಾರಕ ಕಂಪನಿ ಸಿಟ್ರನ್ ಭಾರತಕ್ಕೆ ಕಾಲಿಡುತ್ತಿದ್ದು, ವಿಭಿನ್ನವಾಗಿ ಕಾರು ಬಿಡುಗಡೆ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದೆ. ಬಹುತೇಕ ಕಂಪನಿಗಳು ದೊಡ್ಡ ಶೋರೂಂ ಗಳನ್ನು ಆಯ್ದುಕೊಂಡರೆ, ಸಿಟ್ರನ್ ಕಂಪನಿ ಮಾತ್ರ 150 ಚದುರ ಮೀಟರ್ ಜಾಗವಿದ್ದರೆ ಸಾಕು ಎಂದಿದೆ.

ಇದರ ಜೊತೆಯಲ್ಲಿಯೇ ಲಾ ಮೈಸೆನ್ ಸಿಟ್ರನ್ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದೆ. ಆಟೋ ಕಾರ್ ಇಂಡಿಯಾ ವರದಿಗಳ ಪ್ರಕಾರ, ಸಿಟ್ರನ್ ಕಂಪನಿಯು ಗ್ರಾಹಕರು ಶೋ ರೂಂಗಳಿಗೆ ಭೇಟಿ ನೀಡಿ ತಾವು ಬಯಸುತ್ತಿರುವಂತಹ ಕಾರುಗಳಿಗಾಗಿ ಸಮಯವನ್ನು ಕಳೆಯುವ ಬಗ್ಗೆ ಮಾತ್ರವಲ್ಲದೇ, ಅದರ ಆಚೆಗೂ ಯೋಚಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು 2017ರಲ್ಲಿ ಫ್ರಾನ್ಸ್ ನಲ್ಲಿ ಲಾ ಮೈಸೆನ್ ಕಾನ್ಸೆಪ್ಟ್ ಅನ್ನು ಬಿಡುಗಡೆಗೊಳಿಸಿತು. ಇದಾದ ನಂತರ ವಿಶ್ವದಾದ್ಯಂತ 17 ಸ್ಟೋರ್‍ಗಳನ್ನು ತೆರೆದಿದೆ.

ಸಿಟ್ರನ್ ಕಂಪನಿಯು ಭಾರತದಲ್ಲಿರುವ ಡೀಲರ್‍ಗಳೂ ಸಹ ಈ ಮಾದರಿಯನ್ನು, ಈ ಯೋಜನೆಯನ್ನು ಅಳವಡಿಸಿಕೊಳ್ಳಲಿ ಎಂದು ಬಯಸಿದೆ. ಫ್ರೆಂಚ್ ಭಾಷೆಯಲ್ಲಿ ಲಾ ಮೈಸೆನ್ ಎಂದರೆ ಮನೆ ಎಂದು ಅರ್ಥ. ಈ ಕಾನ್ಸೆಪ್ಟ್ ನಲ್ಲಿ ಮರ ಹಾಗೂ ಮಣ್ಣನ್ನು ಬಳಸಿ ಬೆಚ್ಚಗಿರುವ ವಾತಾವರಣವನ್ನು ಸೃಷ್ಟಿಸಲಾಗುವುದು.

ಇದರಲ್ಲಿರುವ ಮುಖ್ಯವಾದ ಅಂಶವೆಂದರೆ ಕಾರನ್ನು ಖರೀದಿಸ ಬಯಸುವ ಗ್ರಾಹಕರು, ವರ್ಚುಯಲ್ ಸಿಸ್ಟಂನಲ್ಲಿ ತಾವು ಖರೀದಿಸ ಬಯಸುವ ಕಾರಿನ ಮಾದರಿಯನ್ನು ಮನೆಯಲ್ಲಿಯೇ ವಿನ್ಯಾಸಗೊಳಿಸಿಕೊಂಡು ನಂತರ ಅದನ್ನು ಶೋರೂಂನಲ್ಲಿ ಅಂತಿಮಗೊಳಿಸಿಕೊಳ್ಳಬಹುದು. ಕಂಪನಿಯು ಶೋರೂಂನ ಗಾತ್ರಕ್ಕೆ ಬದಲಾಗಿ ಗ್ರಾಹಕರ ಆಯ್ಕೆಗೆ ಆದ್ಯತೆಯನ್ನು ನೀಡಲಿದೆ.

ಸಿಟ್ರನ್ ವರದಿಗಳ ಪ್ರಕಾರ, ಈ ಮಾದರಿಯಲ್ಲಿ, ಸ್ಟೋರ್‍ನ ಡಿಸ್‍ಪ್ಲೇನಲ್ಲಿ ಎರಡು ಕಾರುಗಳು, ಒಂದು ಟೆಕ್ ವಾಲ್, ಚಿಕ್ಕ ಕೆಫೆ ಹಾಗೂ ಮಾತುಕತೆಯ ಜಾಗಗಳಿರುತ್ತವೆ. ಸಿಟ್ರನ್ ಇಂಡಿಯಾದ, ಡಿಸ್ಟ್ರಿಬ್ಯೂಷನ್ ಸ್ಟ್ರಾಟೆಜಿ ಹಾಗೂ ನೆಟ್‍ವರ್ಕ್ ಡೆವಲಪ್‍ಮೆಂಟ್‍ನ ಉಪಾಧ್ಯಕ್ಷರಾದ ಜೊಯಲ್ ವೆರಾನಿರವರು ಮಾತನಾಡಿ, ನಮಗೆ ನಮ್ಮ 17 ಸ್ಟೋರ್‍ಗಳಿಂದ ದೊರೆತ ಮಾಹಿತಿಯಂತೆ, ಹಳೆ ರೀತಿಯ ದೊಡ್ಡ ಶೋರೂಂಗಳಿಗಿಂತ ಹೊಸ ಬಗೆಯ ಲಾ ಮೈಸೆನ್‍ನಿಂದ ಗ್ರಾಹಕರು ಹೆಚ್ಚು ಸಂತೃಪ್ತರಾಗಿರುವುದು ಕಂಡು ಬರುತ್ತದೆ ಎಂದು ತಿಳಿಸಿದ್ದಾರೆ.

ಸಿಟ್ರನ್ ಪ್ರಕಾರ, ಚಿಕ್ಕ ಗಾತ್ರದ ಶೋರೂಂಗಳು ಆತ್ಮೀಯವಾದ ಸ್ವಾಗತವನ್ನು ನೀಡಲಿವೆ. ಇದರಿಂದಾಗಿ ಡೀಲರ್‍ಗಳು ಶೋರೂಂಗಳ ಮೇಲೆ ಹೂಡಿಕೆ ಮಾಡುವ ದೊಡ್ಡ ಮೊತ್ತದ ಹಣವನ್ನು ಉಳಿತಾಯ ಮಾಡಬಹುದಾಗಿದೆ. ರಿಯಲ್ ಎಸ್ಟೇಟ್ ಬೆಲೆಗಳು ಅಧಿಕವಾಗಿರುವ ಟಯರ್ 1 ನಗರಗಳಿಗೆ ಈ ಮಾತು ಅನ್ವಯಿಸುತ್ತದೆ.
MOST READ: ಹೊಸ ಎಂಜಿನ್ ಪಡೆಯಲಿವೆ ವರ್ನಾ ಹಾಗೂ ಐ20 ಕಾರುಗಳು

ಈ ಯೋಜನೆಯು ವಿಫಲವಾಗುವ ಸಾಧ್ಯತೆಗಳೂ ಇವೆ. ಸಿಟ್ರನ್ ಕಂಪನಿಯು ಭಾರತಕ್ಕೆ ಮೊದಲ ಬಾರಿಗೆ ಕಾಲಿಡುತ್ತಿದೆ. ಗ್ರಾಹಕರು ದೊಡ್ಡ ಶೋರೂಂ ಅನ್ನು, ಬ್ರಾಂಡ್ ಅನ್ನು ಹಾಗೂ ಸ್ಥಿರತೆಯನ್ನು ಬಯಸುತ್ತಾರೆ. ಆದರೆ ಸಿಟ್ರನ್ ಕಂಪನಿಯು ಶೋರೂಂನ ಗಾತ್ರವನ್ನು ಸೀಮಿತಗೊಳಿಸುವ ಬಗ್ಗೆ ಹೇಳುತ್ತಿಲ್ಲ. ಬದಲಿಗೆ ಕನಿಷ್ಟ 150 ಚದುರ ಮೀಟರ್ ಸ್ಥಳ ಬೇಕೆಂದು ಕೇಳುತ್ತಿದೆ.

ಸಿಟ್ರನ್ ಇಂಡಿಯಾದ ಮಾರ್ಕೆಟಿಂಗ್ ಹಾಗೂ ಕಮ್ಯೂನಿಕೇಷನ್ ಡೈರೆಕ್ಟರ್ ಆದ ಅರ್ನಾಡ್ ಬೆಲ್ಲೊನಿ ರವರು ಮಾತನಾಡಿ, ನಾವು ನಮ್ಮ ಬ್ರಾಂಡ್ ಅನ್ನು ಬೆಳೆಸಲು ಹೂಡಿಕೆ ಮಾಡಲಿದ್ದೇವೆ, ನಾವು ಸಾಂಪ್ರಾದಯಕವಾದ ಜಾಹೀರಾತುಗಳು ಸೇರಿದಂತೆ ಹಲವಾರು ಆಯ್ಕೆಗಳನ್ನುಹೊಂದಿದ್ದೇವೆ. ನಾವು ನಮ್ಮ ಫ್ರೆಂಚ್‍ನ ಸಂಸ್ಕೃತ್ತಿಯ ಬಗ್ಗೆ, ನಮ್ಮ ಹಬ್ಬಗಳ ಬಗ್ಗೆ, ಮೋಟಾರ್ ಸಂಸ್ಕೃತಿಯ ಬಗ್ಗೆ ಅದರಲ್ಲಿನ ಪರಂಪರೆಯ ಬಗ್ಗೆ ತಿಳಿಸಲಿದ್ದೇವೆ ಎಂದು ಹೇಳಿದರು.

ಮೋಟಾರ್‍ಸ್ಪೋರ್ಟ್ಸ್ ಭಾರತದಲ್ಲಿ ಅಷ್ಟೇನೂ ಜನಪ್ರಿಯವಾಗಿಲ್ಲ, ಇದರಿಂದಾಗಿ ಸಿಟ್ರನ್ ಕಾರುಗಳ ಸ್ಥಿರತೆ ಹಾಗೂ ಚಾಲನಾ ಗುಣಮಟ್ಟದ ಬಗ್ಗೆ ಮನದಟ್ಟು ಮಾಡಬಹುದಾಗಿದೆ.

ಕಂಪನಿಯು ಈಗ ಡೀಲರ್‍ಗಳಿಗಾಗಿ ಹುಡುಕಾಟ ನಡೆಸಿದ್ದು, 2019ರ ಕೊನೆಯ ವೇಳೆಗೆ ಡೀಲರ್‍ಶಿಪ್‍ಗಳನ್ನು ಹೊಂದುವ ಸಾಧ್ಯತೆಗಳಿವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಸಿಟ್ರನ್ ಕಂಪನಿಯ ಯೋಜನೆಯು ಭಾರತದ ಮಟ್ಟಿಗೆ ಹೊಸದಾಗಿದೆ. ಭಾರತದಲ್ಲಿ ಕಾರನ್ನು ಖರೀದಿಸುವುದು ಕುಟುಂಬದ ಸದಸ್ಯರೆಲ್ಲರೂ ಒಟ್ಟುಗೂಡಿ ಕೈಗೊಳ್ಳುವ ನಿರ್ಣಯವಾಗಿದೆ. ಗ್ರಾಹಕರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಮನೆಯ ವಾತಾವರಣವನ್ನು ನೀಡುವುದು ಸಿಟ್ರನ್ ಕಂಪನಿಯ ಯೋಜನೆಯಾಗಿದೆ.


Click it and Unblock the Notifications