ಭಾರತದಲ್ಲಿ ಬಿಡುಗಡೆಯಾಗಲಿರುವ ಲೌರೆಟಿ ಡೈನ್ಎಕ್ಸ್ ಇವಿ ಕಾರಿನ ಮೈಲೇಜ್ ಎಷ್ಟು ಗೊತ್ತಾ?
ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಭಾರೀ ಬದಲಾವಣೆಯಾಗುತ್ತಿದ್ದು, ಜಗತ್ತಿನ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಈಗಾಗಲೇ ಬೃಹತ್ ಬಂಡವಾಳದೊಂದಿಗೆ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಹೊಸ ಹೊಸ ಯೋಜನೆ ರೂಪಿಸುತ್ತಿವೆ. ಹೀಗಿರುವಾಗ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಲೌರೆಟಿ ಕೂಡಾ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಭಾರತದಲ್ಲಿ ಮೊದಲ ಬಾರಿಗೆ ತನ್ನ ಕಾರು ಉತ್ಪನ್ನಗಳನ್ನು ಮಾರಾಟಕ್ಕೆ ಸಿದ್ದವಾಗುತ್ತಿರುವ ಲೌರೆಟಿ ಆಟೋಮೆಟಿವ್ ಕಾರ್ಪೊರೇಷನ್ ಸಂಸ್ಥೆಯು ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಮೂಲಕ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದು, ಹೊಸ ಕಾರುಗಳ ಅಭಿವೃದ್ದಿಗಾಗಿ ಬರೋಬ್ಬರಿ ಎರಡೂವರೆ ಸಾವಿರ ಕೋಟಿ ಬಂಡವಾಳವನ್ನು ಹೂಡಿಕೆ ಮಾಡುತ್ತಿದೆ.

ಬ್ರಿಟಿಷ್ ಮೂಲದ ಲೌರೆಟಿ ಸಂಸ್ಥೆಯು ಈಗಾಗಲೇ ಲಂಡನ್ ಮತ್ತು ಸ್ಪೆನ್‌ನಲ್ಲಿ ಹೊಸ ಕಾರು ಉತ್ಪಾದನಾ ಘಟಕಗಳನ್ನು ತೆರೆದಿದ್ದು, ಇದೀಗ ಭಾರತ ಸೇರಿದಂತೆ ಏಷ್ಯಾದ ಪ್ರಮುಖ ರಾಷ್ಟ್ರಗಳಲ್ಲೂ ತನ್ನ ಹೊಸ ಕಾರುಗಳನ್ನು ಮಾರಾಟ ಮಾಡುವ ಗುರಿಹೊಂದಿದೆ.

ಪುದುಚೇರಿಯಲ್ಲಿ ತನ್ನ ಮೊದಲ ಕಾರು ಉತ್ಪಾದನಾ ಘಟಕವನ್ನು ತೆರೆಯಲಿರುವ ಲೌರೆಟಿ ಸಂಸ್ಥೆಯು ಭಾರತದಿಂದಲೇ ಏಷ್ಯಾದ ಪ್ರಮುಖ ಮಾರುಕಟ್ಟೆಗಳಿಗೆ ಎಲೆಕ್ಟ್ರಿಕ್ ಕಾರಿನ ಬೇಡಿಕೆಯನ್ನು ಪೂರೈಸಿಲಿದ್ದು, ಟೆಸ್ಲಾಗಿಂತಲೂ ಅತ್ಯುತ್ತಮ ಮೈಲೇಜ್ ರೇಂಜ್ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದೆ.

ಭಾರತದಲ್ಲಿ ಮೊದಲ ಹಂತದ ಹೂಡಿಕೆಯಲ್ಲಿ ವಾರ್ಷಿಕವಾಗಿ 10 ಸಾವಿರ ಕಾರುಗಳ ಉತ್ಪಾದನಾ ಸಾಮರ್ಥ್ಯದ ಘಟಕವನ್ನು ನಿರ್ಮಾಣ ಮಾಡಲಿರುವ ಲೌರೆಟಿ ಸಂಸ್ಥೆಯು ತದನಂತರ ವಾರ್ಷಿಕವಾಗಿ 20 ಸಾವಿರ ಕಾರುಗಳ ಉತ್ಪಾದನಾ ಗುರಿಹೊಂದಿದೆ.

ಮಾಹಿತಿಗಳ ಪ್ರಕಾರ, ಲೌರೆಟಿ ಸಂಸ್ಥೆಯು ಇದೇ ವರ್ಷ ಮಾರ್ಚ್ ಆರಂಭದಿಂದಲೇ ಹೊಸ ಘಟಕದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆ ಮಾಡಲಿರುವ ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ.

ತದನಂತರವಷ್ಟೇ ಹೊಸ ಎಲೆಕ್ಟ್ರಿಕ್ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸಲಿರುವ ಲೌರೆಟಿ ಸಂಸ್ಥೆಯು 2020ರ ಕೊನೆಯಲ್ಲಿ ಇಲ್ಲವೇ 2021ರ ಆರಂಭದಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಲೌರೆಟಿ ನಿರ್ಮಾಣದ ಡೈನ್ಎಕ್ಸ್ ಕಾರು ಈಗಾಗಲೇ ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದ್ದು, ಅದೇ ಕಾರು ಭಾರತದಲ್ಲೂ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಬರೋಬ್ಬರಿ 100ಕಿಲೋ ವ್ಯಾಟ್ ಬ್ಯಾಟರಿ ಸೌಲಭ್ಯ ಹೊಂದಿರುವ ಈ ಕಾರು ಟೆಸ್ಲಾ ಕಾರಿಗಿಂತಲೂ ಹೆಚ್ಚಿನ ಮೈಲೇಜ್ ನೀಡಲಿದೆ.

ಮೊನ್ನೆಯಷ್ಟೇ ಪರೀಕ್ಷಾರ್ಥವಾಗಿ ತಮಿಳುನಾಡಿನ ಚೆನ್ನೈನಿಂದ ಜಮ್ಮು-ಕಾಶ್ಮೀರದ ಲೆಹ ತನಕ ಟೆಸ್ಟ್ ಡ್ರೈವ್ ಎರ್ಪಡಿಸಿದ್ದ ಲೌರೆಟಿ ಸಂಸ್ಥೆಯು ಪ್ರತಿ ಚಾರ್ಚಿಂಗ್‌ಗೆ ಬರೋಬ್ಬರಿ 540ಕಿ.ಮಿ ಮೈಲೇಜ್ ನೀಡಿರುವುದಾಗಿ ಪಿಟಿಐ ಸುದ್ದಿಸಂಸ್ಥೆಯ ಸಂದರ್ಶನದಲ್ಲಿ ಹೇಳಿಕೊಂಡಿದೆ.

ಇದಲ್ಲದೇ ಕಾರಿನ ಪರ್ಫಾಮೆನ್ಸ್ ವಿಚಾರವನ್ನು ಸಹ ಬಿಡುಗಡೆ ಮಾಡಲಾಗಿದ್ದು, ಅತ್ಯುತ್ತಮ ಮೈಲೇಜ್ ರೇಂಜ್‌ನೊಂದಿಗೆ ಕೇವಲ 5.4 ಸೆಕೇಂಡುಗಳಲ್ಲಿ ಸೊನ್ನೆಯಿಂದ 60ಕಿ.ಮಿ ವೇಗದಲ್ಲಿ ಕ್ರಮಿಸಬಲ್ಲ ಗುಣಹೊಂದಿದೆಯೆಂತೆ.
MOST READ: ಬಿಡುಗಡೆಗೂ ಮುನ್ನವೇ ಹಾರುವ ಕಾರಿನ ಬೆಲೆ ಪಟ್ಟಿ ಬಿಡುಗಡೆ ಮಾಡಿದ ಪಿಎಲ್-ವಿ ಲಿಬರ್ಟಿ

ಜೊತೆಗೆ ಕೇಂದ್ರದ ಸಾರಿಗೆ ಇಲಾಖೆಯೊಂದಿಗೂ ಸಹ ಕೆಲವು ಮಹತ್ವದ ಒಪ್ಪಂದಗಳಿಗೆ ಒಪ್ಪಿಗೆ ಸೂಚಿಸಿರುವ ಲೌರೆಟಿ ಸಂಸ್ಥೆಯು ದೇಶಾದ್ಯಂತ 1 ಲಕ್ಷ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲಿದ್ದು, ಹೊಸ ಕಾರಿನ ಬೆಲೆಯನ್ನು ಸಹ ಬಹಿರಂಗ ಮಾಡಿದೆ.

ಉತ್ತಮ ಮಾದರಿಯ ಬ್ಯಾಟರಿ ಸೌಲಭ್ಯದೊಂದಿಗೆ 540ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಡೈನ್ಎಕ್ಸ್ ಕಾರು ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ರಸ್ತೆಗಿಳಿಯಲಿದ್ದು, ದೆಹಲಿ ಎಕ್ಸ್‌ಶೋರೂಂ ಕಾರಿನ ಆರಂಭಿಕ ಬೆಲೆಗಳೇ ರೂ.40 ಲಕ್ಷದಿಂದ ಆರಂಭವಾಗುವ ಬಗ್ಗೆ ಸುಳಿವು ನೀಡಿದೆ.
MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ಒಟ್ಟಿನಲ್ಲಿ ಐಷಾರಾಮಿ ಸೌಲಭ್ಯಗಳ ಜೊತೆ ಜೊತೆಯಲ್ಲಿ ಗರಿಷ್ಠ ಮೈಲೇಜ್ ನೀಡಬಲ್ಲ ಲೌರೆಟಿ ಡೈನ್ಎಕ್ಸ್ ಎಲೆಕ್ಟ್ರಿಕ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಳ್ಳುವ ಎಲ್ಲಾ ಅವಕಾಶಗಳಿದ್ದು, ಭಾರತಕ್ಕೆ ಪ್ರವೇಶ ನೀಡುತ್ತಿರುವ ಟೆಸ್ಲಾ ಸಂಸ್ಥೆಗೆ ಇದು ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications








