ಸುಧಾರಿತ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿವೆ ಟಾಟಾ ಹೊಸ ಕಾರು..!
ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಆಲ್‌ಟ್ರೊಜ್, ಕ್ಯಾಸಿನಿ, ಬಿಎಸ್-6 ಕಾರುಗಳಾದ ಹ್ಯಾರಿಯರ್, ನೆಕ್ಸಾನ್, ಟಿಗೋರ್, ಟಿಯಾಗೋ ಮತ್ತು ಹೆಕ್ಸಾ ಕಾರುಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳಿಂತಲೂ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನ ಪ್ರೇರಣೆಯನ್ನು ಹೊಂದಿವೆ.

ಹೊಸ ಕಾರುಗಳ ಉತ್ಪಾದನೆಗಾಗಿ ಸದ್ಯ ಟಾಟಾ ಸಂಸ್ಥೆಯು ಒಮೆಗಾ ಮತ್ತು ಅಲ್ಫಾ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿದ್ದು, ಈ ಹಿಂದಿಗಿಂತಲೂ ಕಾರು ಉತ್ಪಾದನಾ ತಂತ್ರಜ್ಞಾನ ಬಳಕೆ ಮತ್ತು ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆಯಾಗುವ ಮೂಲಕ ಗ್ರಾಹಕರನ್ನು ಆಕರ್ಷಣೆಯಾಗುವಂತೆ ಮಾಡಿವೆ. ಈ ಹಿನ್ನಲೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಉತ್ಪಾದನೆಗಾಗಿ ಒಮೆಗಾ ಮತ್ತು ಅಲ್ಫಾ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಲಾಗುತ್ತಿದ್ದು, 2020ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಹೊಸ ಮತ್ತು ಫೇಸ್‌ಲಿಫ್ಟ್ ಕಾರುಗಳು ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ರಸ್ತೆಗಿಳಿಯಲಿವೆ.

ಬಿಡುಗಡೆಗಾಗಿ ಹೊಸ ಕಾರುಗಳು ಸದ್ಯ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಹೊಸ ಕಾರುಗಳ ಎಂಜಿನ್ ಮತ್ತು ಸುರಕ್ಷಾ ಸೌಲಭ್ಯಗಳನ್ನು ಉನ್ನತೀಕರಿಸಲಾಗಿದೆ.

ಟಾಟಾ ಸಂಸ್ಥೆಯು ಮುಂಬರುವ ಫೆಬ್ರುವರಿ ಅಂತ್ಯದ ತನಕವೂ ಬಿಎಸ್-4 ಕಾರುಗಳನ್ನು ಮಾರಾಟ ಮಾಡಲಿದ್ದು, ತದನಂತರವಷ್ಟೇ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿ ಹೊಂದಿರುವ ಹ್ಯಾರಿಯರ್, ನೆಕ್ಸಾನ್, ಹೆಕ್ಸಾ, ಟಿಗೋರ್ ಮತ್ತು ಟಿಯಾಗೋ ಕಾರುಗಳ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಲಿದೆ.

ಅದಕ್ಕೂ ಮುನ್ನ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರನ್ನು ಇದೇ ವರ್ಷ ಡಿಸೆಂಬರ್ ಅಂತ್ಯದಲ್ಲಿ ಅನಾವರಣಗೊಳಿಸಿ 2020ರ ಆರಂಭದಲ್ಲಿ ಬಿಡುಗಡೆ ನಿರ್ಧರಿಸಿರುವ ಟಾಟಾ ಸಂಸ್ಥೆಯ 7 ಸೀಟರ್ ಎಸ್‌ಯುವಿ ಮಾದರಿಯಾದ ಕ್ಯಾಸಿನಿ ಕಾರನ್ನು ಕೂಡಾ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿ ಮೇ ಅಥವಾ ಜೂನ್ ಅವಧಿಯಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ.

ಹೀಗಾಗಿ ಮೊದಲ ಹಂತವಾಗಿ 2020ರ ಜನವರಿಯಲ್ಲಿ ಆಲ್‌ಟ್ರೋಜ್ ಕಾರು ಬಿಡುಗಡೆಯಾಗಲಿದ್ದರೆ ಫೆಬ್ರುವರಿ ಅಥವಾ ಮಾರ್ಚ್ ಅಂತ್ಯಕ್ಕೆ ಬಿಎಸ್-6 ಕಾರುಗಳು ಮತ್ತು ತದನಂತರವಷ್ಟೇ ಜೂನ್ ಆರಂಭದಲ್ಲಿ 7 ಸೀಟರ್ ಕ್ಯಾಸಿನಿ ಎಸ್‌ಯುವಿ ಕಾರು ಖರೀದಿಗೆ ಲಭ್ಯವಾಗಲಿದೆ.

ಇನ್ನು ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ.
MOST READ: ದೀಪಾವಳಿ ಹಿನ್ನಲೆ ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಆಲ್‌ಟ್ರೊಜ್ ಕಾರು ಬಿಎಸ್-6 ಮಾದರಿಯ ಪೆಟ್ರೋಲ್ ಆವೃತ್ತಿಯಲ್ಲಿ ಎರಡು ಎಂಜಿನ್ ಆಯ್ಕೆಗಳು ಇರಲಿದ್ದು, ಡೀಸೆಲ್ ಆವೃತ್ತಿಯಲ್ಲಿ ಒಂದು ಆಯ್ಕೆ ಮಾತ್ರ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದ್ದು, ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ಮತ್ತು 1.5-ಲೀಟರ್ ಎಂಜಿನ್ ಮಾದರಿಗಳು ಖರೀದಿಸಬಹುದಾಗಿದೆ.
MOST READ: ಮಾರುತಿ ಎರ್ಟಿಗಾ ಪ್ರತಿಸ್ಪರ್ಧಿ ಹ್ಯುಂಡೈ ಎಂಪಿವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹಾಗೆಯೇ ಡೀಸೆಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್ ಮಾತ್ರವೇ ಲಭ್ಯವಾಗಲಿದೆ. ಪೆಟ್ರೋಲ್ ಆವೃತ್ತಿಗಾಗಿ ಆಯ್ಕೆ ಮಾಡಲಾಗಿರುವ 1.2-ಲೀಟರ್ ಎಂಜಿನ್ ಮಾದರಿಯನ್ನು ಟಿಯಾಗೋದಿಂದ ಎರವಲು ಪಡೆದಿದ್ದಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳನ್ನು ನೆಕ್ಸಾನ್ ಎಸ್‌ಯುವಿಯಿಂದ ಎರವಲು ಪಡೆಯಲಾಗಿದೆ.
MOST READ: ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ಅಧಿಕೃತ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು 2020ರ ಫೆಬ್ರುವರಿಯಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.8.50 ಲಕ್ಷಕ್ಕೆ ನಿಗದಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದರೊಂದಿಗೆ ಟಾಟಾ ಸಂಸ್ಥೆಯು ಹೊಸ ಆಲ್‌ಟ್ರೋಜ್ ಕಾರುನ್ನು ಸಹ ಈ ಹಿಂದಿನ ನೆಕ್ಸಾನ್ ಮತ್ತು ಹ್ಯಾರಿಯರ್ ಮಾದರಿಯಲ್ಲೇ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಯಾಣಿಕರ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಒದಗಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಇದರಿಂದ ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಹೊಸ ಆಲ್‌ಟ್ರೋಜ್ ಕಾರು ಹ್ಯುಂಡೈ ಐ20 ಮತ್ತು ಮಾರುತಿ ಬಲೆನೊ ಕಾರುಗಳಿಗೆ ಟಕ್ಕರ್ ನೀಡಲಿದೆ.


Click it and Unblock the Notifications