ಟಾಟಾ ಆಲ್‌ಟ್ರೋಜ್ ಖರೀದಿಗೆ ಬುಕ್ಕಿಂಗ್ ಶುರು- ದೀಪಾವಳಿ ಹೊತ್ತಿಗೆ ಹೊಸ ಕಾರು ಬಿಡುಗಡೆ ಪಕ್ಕಾ..!
ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಆಲ್‌ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಹೊಸ ಕಾರು ಖರೀದಿಗಾಗಿ ಅಧಿಕೃತವಾಗಿಯೇ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಟಾಟಾ ವಿನೂತನ ವಿನ್ಯಾಸದ ಆಲ್‌ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಬಿಡುಗಡೆಯ ಉದ್ದೇಶದಿಂದ ದೇಶದ ವಿವಿಧಡೆ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿದೆ. ಎಂಜಿನ್ ಕಾರ್ಯಕ್ಷಮತೆಯಲ್ಲಿ ಹ್ಯಾಚ್‌ಬ್ಯಾಕ್ ಕಾರು ಮಾಲೀಕರ ಆಕರ್ಷಣೆಗೆ ಕಾರಣವಾಗಿರುವ ಹೊಸ ಕಾರು ದೀಪಾವಳಿ ಹೊತ್ತಿಗೆ ಬಿಡುಗಡೆಯಾಗುವ ಸುಳಿವು ನೀಡಿದೆ.

ಹ್ಯಾರಿಯರ್ ಎಸ್‌ಯುವಿ ಬಿಡುಗಡೆಯ ಯಶಸ್ವಿ ನಂತರ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆಯಿಡುತ್ತಿರುವ ಟಾಟಾ ಸಂಸ್ಥೆಯು ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆಗೆ ಮುಂದಾಗಿದ್ದು, ಹೊಸ ಕಾರು ಹಲವು ವಿಶೇಷತೆಗಳನ್ನು ಹೊತ್ತುಬರುವ ನೀರಿಕ್ಷೆಯಲ್ಲಿದೆ.

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ.

ಆಲ್‌ಟ್ರೊಜ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಎರಡು ಎಂಜಿನ್ ಆಯ್ಕೆಗಳು ಇರಲಿದ್ದು, ಡೀಸೆಲ್ ಆವೃತ್ತಿಯಲ್ಲಿ ಒಂದು ಆಯ್ಕೆ ಮಾತ್ರ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ಮತ್ತು 1.5-ಲೀಟರ್ ಎಂಜಿನ್ ಮಾದರಿಗಳು ಅಭಿವೃದ್ಧಿಯಾಗುತ್ತಿದ್ದು, ಡೀಸೆಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್ ಲಭ್ಯವಾಗಲಿದೆ. ಪೆಟ್ರೋಲ್ ಆವೃತ್ತಿಗಾಗಿ ಆಯ್ಕೆ ಮಾಡಲಾಗಿರುವ 1.2-ಲೀಟರ್ ಎಂಜಿನ್ ಮಾದರಿಯನ್ನು ಟಿಯಾಗೋದಿಂದ ಎರವಲು ಪಡೆದಿದ್ದಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳನ್ನು ನೆಕ್ಸಾನ್ ಎಸ್‌ಯುವಿಯಿಂದ ಎರವಲು ಪಡೆಯಲಾಗಿದೆ.

ಟಾಟಾ ಸಂಸ್ಥೆಯು ಹೊಸ ಕಾರಿನ ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಕೆಲವು ಗಮನಸೆಳೆಯಬಹುದಾದ ಬದಲಾವಣೆಗಳನ್ನು ಮಾಡಿದ್ದು, ಪ್ರಮುಖ ವಿಚಾರ ಅಂದ್ರೆ ಹೊಸ ಆಲ್‌ಟ್ರೊಜ್ ಕಾರನ್ನು ಸಹ ಇಂಪ್ಯಾಕ್ಟ್ ಡಿಸೈನ್ 2.0 ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಇದು ಕಾರಿನ ತೂಕವನ್ನು ಕಡಿತಗೊಳಿಸುವಲ್ಲಿ ಸಾಕಷ್ಟು ನೆರವಾಗಿದ್ದು, ಇದು ನೇರವಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಸುಧಾರಣೆಯಾಗುವುದಲ್ಲದೇ ಮೈಲೇಜ್ ಪ್ರಮಾಣ ಕೂಡಾ ಹೆಚ್ಚಳವಾಗಿರುವುದು ಸ್ಪಾಟ್ ಟೆಸ್ಟಿಂಗ್ ವೇಳೆ ಖಚಿತವಾಗಿದೆ.
MOST READ: ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡಲಿವೆ ಬಿವೈಡಿ ಎಲೆಕ್ಟ್ರಿಕ್ ಕಾರ್ ಮತ್ತು ವ್ಯಾನ್

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ಅಧಿಕೃತ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು ಅಕ್ಟೋಬರ್ ಅಂತ್ಯಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.7.50 ಲಕ್ಷಕ್ಕೆ ನಿಗದಿಯಾಗಬಹುದು ಎಂದು ಅಂದಾಜಿಸಲಾಗಿದೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಇದರೊಂದಿಗೆ ಟಾಟಾ ಸಂಸ್ಥೆಯು ಹೊಸ ಆಲ್‌ಟ್ರೋಜ್ ಕಾರುನ್ನು ಸಹ ಈ ಹಿಂದಿನ ನೆಕ್ಸಾನ್ ಮತ್ತು ಹ್ಯಾರಿಯರ್ ಮಾದರಿಯಲ್ಲೇ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಯಾಣಿಕರ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಒದಗಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಇದರಿಂದ ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಹೊಸ ಆಲ್‌ಟ್ರೋಜ್ ಕಾರು ಹ್ಯುಂಡೈ ಐ20 ಮತ್ತು ಮಾರುತಿ ಬಲೆನೊ ಕಾರುಗಳಿಗೆ ಟಕ್ಕರ್ ನೀಡಲಿದೆ.
MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಹಾಗೆಯೇ ಟಾಟಾ ಆಲ್‌ಟ್ರೊಜ್‌ನಲ್ಲಿ ಎಲೆಕ್ಟ್ರಿಕ್ ಮಾದರಿ ಕೂಡಾ ಬಿಡುಗಡೆಯಾಗಲಿದ್ದು, ಈ ಕಾರು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಮಾರುಕಟ್ಟೆ ಪ್ರವೇಶಿಸಲಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಎಲೆಕ್ಟ್ರಿಕ್ ಆಲ್‌ಟ್ರೋಜ್ ಮಾದರಿಯು ರೂ.10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿದ್ದು, ಪ್ರತಿ ಚಾರ್ಜ್‌ಗೆ ಈ ಕಾರು 180ಕಿ.ಮಿನಿಂದ 220ಕಿ.ಮಿ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿವೆ.


Click it and Unblock the Notifications