ಟೆಸ್ಲಾ ಮಾಡೆಲ್ 3 ಪ್ರತಿಸ್ಪರ್ಧಿ ಫೋಕ್ಸ್‌ವ್ಯಾಗನ್ ಐಡಿ ರೂಮ್ಝ್ ಎಲೆಕ್ಟ್ರಿಕ್ ಅನಾವರಣ
ಜಗತ್ತಿನಾದ್ಯಂತ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣ ಮತ್ತು ಮಾರಾಟ ಪ್ರಕ್ರಿಯೆಯು ಜೋರಾಗಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಭವಿಷ್ಯ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ರಸ್ತೆಗಿಳಿಸುತ್ತಿವೆ. ಈ ನಿಟ್ಟಿನಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆ ಕೂಡಾ ತಮ್ಮ ಬಹುನೀರಿಕ್ಷಿತ ಐಡಿ ರೂಮ್ಝ್ ಕಾರನ್ನು ಅನಾವರಣಗೊಳಿಸಿದ್ದು, ಟೆಸ್ಲಾ ಜನಪ್ರಿಯ ಮಾಡೆಲ್ 3 ಕಾರಿಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಹೆಚ್ಚುತ್ತಿರುವ ಮಾಲಿನ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ 2030ರ ವೇಳೆಗೆ ವಿಶ್ವಾದ್ಯಂತ ಶೇ.100ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಉದ್ದೇಶದಿಂದ ಜಗತ್ತಿನ ಎಲ್ಲಾ ಆಟೋ ಉತ್ಪಾದನಾ ಸಂಸ್ಥೆಗಳು ವಿನೂತನ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದ್ದು, 2020ರ ನಂತರ ಶೇ. 50 ರಷ್ಟು ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಭವಿಷ್ಯ ವಾಹನ ಮಾದರಿಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿವೆ. ಇವುಗಳಲ್ಲಿ ಫೋಕ್ಸ್‌ವ್ಯಾಗನ್ ಕೂಡಾ ಒಂದಾಗಿದ್ದು, ವಿನೂತನ ಎಲೆಕ್ಟ್ರಿಕ್ ಕಾರು ಉತ್ಪನ್ನಗಳ ಮೂಲಕ ಸಂಚಲನ ಸೃಷ್ಠಿಸುವ ಯೋಜನೆ ರೂಪಿಸಿದೆ.

ಹೀಗಾಗಿ ಮೊದಲ ಹಂತದಲ್ಲಿ ಬಿಡುಗಡೆಯಾಗುವ ಐಡಿ ರೂಮ್ಝ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಶಾಂಘೈ ಆಟೋ ಮೇಳದಲ್ಲಿ ಪ್ರದರ್ಶಿಸಿದ್ದು, ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಳ್ಳುತ್ತಿರುವ ಟೆಸ್ಲಾ ಮಾಡೆಲ್ 3 ಕಾರುಗಳಿಗೆ ಇದು ತೀವ್ರ ಪೈಪೋಟಿ ನೀಡುವ ಸುಳಿವು ನೀಡಿದೆ.

ಸುಮಾರು 5 ಮೀಟರ್ ಉದ್ದಳತೆ ಹೊಂದಿರುವ ಐಡಿ ರೂಮ್ಝ್ ಕಾನ್ಸೆಪ್ಟ್ ಕಾರು ಐಷಾರಾಮಿ ಎಸ್‌ಯುವಿ ಮಾದರಿಗಳಲ್ಲೇ ವಿಶೇಷವಾದ 4 ಮೋಷನ್ ಆಲ್‌ವೀಲ್ಹ್ ಡ್ರೈವ್ ಟೆಕ್ನಾಲಜಿ ಪಡೆದುಕೊಂಡಿದ್ದು, 5 ಸೀಟರ್ ವೈಶಿಷ್ಟ್ಯತೆಯನ್ನು ಅಳವಡಿಕೆ ಹೊಂದಿದೆ.

ಹಾಗೆಯೇ ಮಾಡೆಲ್ 3 ಕಾರಿಗೆ ಪ್ರತಿಸ್ಪರ್ಧಿಯಾಗಲಿರುವ ಐಡಿ ರೂಮ್ಝ್ ಕಾನ್ಸೆಪ್ಟ್ ಕಾರು 82-ಕೆವಿಹೆಚ್ ಬ್ಯಾಟರಿ ಜೋಡಣೆ ಹೊಂದಿರಲಿದ್ದು, ಕೇವಲ 30 ನಿಮಿಷಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸಿಸ್ಟಂ ಮೂಲಕ ಶೇ.80ರಷ್ಟು ಚಾರ್ಜ್ ಮಾಡಿಕೊಳ್ಳಬಹುದು. ಈ ಮೂಲಕ ಒಂದು ಬಾರಿಗೆ ಸಂಪೂರ್ಣ ಚಾರ್ಜ್‌ಗೊಂಡ ನಂತರ ಬರೋಬ್ಬರಿ 450 ಕಿ.ಮಿ ಮೈಲೇಜ್ ಹಿಂದಿರುಗಿಸಲಿದೆ.

ಇದರಲ್ಲದೇ ಐಡಿ ರೂಮ್ಝ್ ಕಾನ್ಸೆಪ್ಟ್ ಕಾರು ಕೇವಲ ಅತಿ ಮೈಲೇಜ್ ನೀಡುವುದಲ್ಲದೇ ಪರ್ಫಾಮೆನ್ಸ್ ವಿಭಾಗದಲ್ಲೂ ಸದ್ದು ಮಾಡುವ ಸುಳಿವು ನೀಡಿದ್ದು, 302-ಬಿಎಚ್‌ಪಿ ಉತ್ಪಾದನೆ ಮೂಲಕ 6.6 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮಿ ವೇಗ ಪಡೆದುಕೊಳ್ಳಬಹುದು.

ಮಾಡೆಲ್ 3 ಕಾರಿನಂತೆಯೇ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಐಡಿ ರೂಮ್ಝ್ ಕಾರು 180 ಟಾಪ್ ಸ್ಪೀಡ್ ಹೊಂದಿದ್ದು, ಪ್ರದೇಶಗಳಿಗೆ ಅನುಗುಣವಾಗಿ ಪ್ರಯಾಣ ಬೆಳೆಸಲು ಅನುಕೂಲಕರವಾಗುವಂತೆ ವಿವಿಧ ಮಾದರಿಯ ಡ್ರೈವ್ ಮೋಡ್ ಒದಗಿಸಲಾಗಿದೆ.

ಹಾಗೆಯೇ ಹೊಸ ಕಾರಿನ ಪ್ರಯಾಣಿಕ ಆಸನಗಳು ಕೂಡಾ ಆಕರ್ಷಣೆಗೆ ಕಾರಣವಾಗಿದ್ದು, ದೂರದ ಪ್ರಯಾಣದ ಆಯಾಸವನ್ನು ಮರೆಸಲು 25 ಡಿಗ್ರಿ ಮಾದರಿಯಲ್ಲಿ ಆನಸಗಳನ್ನು ಚಾಚಿಕೊಳ್ಳಬಹುದಾಷ್ಟು ಒಳಾಂಗಣ ವಿನ್ಯಾಸವನ್ನು ಜೋಡಿಸಲಾಗಿದೆ.

ಒಟ್ಟಿನಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾದರಿಯಲ್ಲೇ ವಿಶೇಷ ವಿನ್ಯಾಸ ಹೊಂದಿರುವ ಈ ಕಾರು ಜಗತ್ತಿನ ಆಟೋ ಉದ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದ್ದು, 2021ರ ಹೊತ್ತಿಗೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಬಿಡುಗಡೆಯಾಗಲಿರುವ ಐಡಿ ರೂಮ್ಝ್ ಕಾರು ಬೆಲೆಗಳು ಮಾಡೆಲ್ 3 ಕಾರಿಗೆ ಪ್ರತಿಸ್ಪರ್ಧಿಯಾಗಲಿವೆ ಎಂದಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿವೆ.

ಸದ್ಯ ಅಮೆರಿಕದಲ್ಲಿ ಅತಿ ಹೆಚ್ಚು ಬೇಡಿಕೆಯೊಂದಿಗೆ ಮಾರಾಟವಾಗುತ್ತಿರುವ ಮಾಡೆಲ್ 3 ಕಾರುಗಳು ಬ್ಯಾಟರಿ ಸಾಮರ್ಥ್ಯದ ಆಧಾರದ ಮೇಲೆ ಭಾರತೀಯ ಬೆಲೆಗಳ ಪ್ರಕಾರ ಆರಂಭಿಕವಾಗಿ ರೂ.30 ಲಕ್ಷದಿಂದ ರೂ. 40 ಲಕ್ಷ ಮಾರಾಟ ಬೆಲೆ ಹೊಂದಿದ್ದು, ಫೋಕ್ಸ್‌ವ್ಯಾಗನ್ ಐಡಿ ರೂಮ್ಝ್ ಕೂಡಾ ಹೆಚ್ಚು ಕಡಿಮೆ ರೂ. 40 ಲಕ್ಷಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.
MOST READ: ಜಗತ್ತಿನ ಅತಿ ದುಬಾರಿ ಕಾರ್ ಕೀ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

ಆದ್ರೆ ಈ ಹೊಸ ಐಡಿ ರೂಮ್ಝ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಯಾವುದೇ ಸುಳಿವು ನೀಡಿಲ್ಲವಾದರೂ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಇದಕ್ಕೆ ಕಾರಣ 2020ರ ವೇಳೆಗೆ ಟೆಸ್ಸಾ ಕೂಡಾ ಭಾರತ ಪ್ರವೇಶ ಪಡೆಯುತ್ತಿದ್ದು, ಈಗಾಗಲೇ ಭಾರತದಲ್ಲಿ ಕಾರು ಮಾರಾಟ ಜಾಲ ಹೊಂದಿರುವ ಫೋಕ್ಸ್‌ವ್ಯಾಗನ್ ತನ್ನ ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸದೇ ಇರಲಾರದು.


Click it and Unblock the Notifications