ಲಾಕ್‌ಡೌನ್ ವಿಸ್ತರಣೆ: ಭಾರೀ ನಷ್ಟ ಅನುಭವಿಸಲಿದೆ ಆಟೋ ಉದ್ಯಮ
ಕರೋನಾ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವ ಉದ್ದೇಶದಿಂದ ಲಾಕ್‌ಡೌನ್ ಅನ್ನು ಮುಂದುವರಿಸಲಾಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ತಬ್ದಗೊಂಡಿವೆ.

ಮೊದಲ ಹಂತದ ಲಾಕ್‌ಡೌನ್‌ನಿಂದಾಗಿ ಈಗಾಗಗೇ ಸಾವಿರಾರು ಕೋಟಿ ನಷ್ಟ ಅನುಭವಿಸಿರುವ ಆಟೋ ಉದ್ಯಮ ಇದೀಗ ಲಾಕ್‌ಡೌನ್ ಅನ್ನು ವಿಸ್ತರಣೆ ಮಾಡಿರುವುದು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಮಾಹಿತಿಗಳ ಪ್ರಕಾರ, ಆಟೋ ಉದ್ಯಮವು ದಿನಂಪ್ರತಿ ಸುಮಾರು ರೂ.2 ಸಾವಿರ ಕೋಟಿಯಷ್ಟು ಅನುಭವಿಸುತ್ತಿದ್ದು, ಒಂದು ವೇಳೆ ಮೇ 3ರ ನಂತರ ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಹಲವು ಕಂಪನಿಗಳು ಪೂರ್ಣ ಪ್ರಮಾಣದಲ್ಲಿ ಕದಮುಚ್ಚುವ ಭೀತಿಯಲ್ಲಿವೆ.

ಇದಲ್ಲದೇ ಸ್ಟಾಕ್ ಇರುವ ಬಿಎಸ್-4 ವಾಹನಗಳಿಂದಲೂ ಆಟೋ ಕಂಪನಿಗಳಿಗೆ ಭಾರೀ ಪ್ರಮಾಣದ ಆರ್ಥಿಕ ಸಂಕಷ್ಟ ಶುರುವಾಗಿದ್ದು, ಸುಪ್ರೀಂಕೋರ್ಟ್ ಆದೇಶವು ಆಟೋ ಕಂಪನಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
MOST READ: ಕರೋನಾ ವಿರುದ್ಧದ ಹೋರಾಟಕ್ಕಾಗಿ 60 ಬೈಕ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಹೀರೋ

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಎಪ್ರಿಲ್ 1ರಿಂದಲೇ ಬಿಎಸ್-4 ವಾಹನಗಳ ಮಾರಾಟವನ್ನು ನಿಷೇಧಗೊಳಿಸಿ ಬಿಎಸ್-6 ವಾಹನಗಳ ಮಾರಾಟವನ್ನು ಕಡ್ಡಾಯಗೊಂಡಿದ್ದು, ಬಿಎಸ್-4 ವಾಹನಗಳ ಬ್ಯಾನ್‌ಗೆ ಕೇವಲ 10 ದಿನ ಬಾಕಿ ಇರುವಾಗ ಲಾಕ್‌ಡೌನ್ ವಿಧಿಸಲಾಗಿತ್ತು.

ಇದರಿಂದ ಹಳೆಯ ವಾಹನಗಳ ಸ್ಟಾಕ್ ಪೂರ್ಣ ಪ್ರಮಾಣದಲ್ಲಿ ಮಾರಾಟ ಯೋಜನೆಯಲ್ಲಿದ್ದ ಆಟೋ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಬಿಎಸ್-4 ವಾಹನಗಳು ಬ್ಯಾನ್ ಆಗಿದ್ದರೂ ಹಳೆಯ ವಾಹನಗಳ ಮಾರಾಟಕ್ಕೆ ಸುಪ್ರೀಂಕೋರ್ಟ್ ಕೆಲವು ವಿನಾಯ್ತಿ ನೀಡಿತ್ತು.
MOST READ: ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಏಪ್ರಿಲ್ 15ರಿಂದ ಏಪ್ರಿಲ್ 24ರ ತನಕ ಶೇ.10ರಷ್ಟು ಬಿಎಸ್-4 ವಾಹನ ಸ್ಟಾಕ್ ಮಾರಾಟಕ್ಕೆ ಅವಕಾಶ ನೀಡಿದ್ದ ಸುಪ್ರೀಂಕೋರ್ಟ್, ಮಾಲಿನ್ಯ ತಡೆಯುವುದಕ್ಕಾಗಿ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿ ಅವಕಾಶ ಮಾಡಿಕೊಟ್ಟಿತ್ತು.

ಆದರೆ ಇದೀಗ ಕರೋನಾ ವೈರಸ್ ಅಟ್ಟಹಾಸವು ದಿನಂದಿನಕ್ಕೆ ಹೆಚ್ಚುತ್ತಿದ್ದಂತೆ ಲಾಕ್‌ಡೌನ್ ಅವಧಿಯನ್ನು ಮೇ 3ರ ತನಕ ವಿಸ್ತರಣೆ ಮಾಡಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಮತ್ತೆ ಬಿಎಸ್-4 ವಾಹನ ಮಾರಾಟ ಅವಧಿಯನ್ನು ಮುಂದೂಡುವ ಸಾಧ್ಯತೆಗಳಿವೆ.
MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಈ ಮಧ್ಯೆ ಸರಕು ಸಾಗಾಣಿಕೆ ಮಾಡುತ್ತಿದ್ದ ಸುಮಾರು 3.50 ಲಕ್ಷಕ್ಕೂ ಹೆಚ್ಚು ಲಾರಿಗಳು ಮಾರ್ಗಮಧ್ಯದಲ್ಲೇ ಉಳಿದಿರುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಗೂಡ್ಸ್ ಲಾರಿಗಳಲ್ಲಿ ವಿವಿಧ ಆಟೋ ಕಂಪನಿಗಳ ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ವಾಹನಗಳಿದ್ದು, ಲಾಕ್ ಡೌನ್‌ನಿಂದಾಗಿ ರಸ್ತೆ ಬದಿಯಲ್ಲೇ ಉಳಿಯುವಂತಾಗಿದೆ.

ಆದರೆ ಪರಿಸ್ಥಿತಿಗೆ ಅನುಗುಣವಾಗಿ ಲಾಕ್ ಡೌನ್ ಪಾಲನೆ ಮಾಡಲೇಬೇಕಾದ ಅನಿವಾರ್ಯತೆಗಳಿದ್ದು, ಆಹಾರ ಪದಾರ್ಥಗಳು ಮತ್ತು ಅಗತ್ಯ ಸೇವೆಯ ವಾಹನಗಳನ್ನು ಹೊರತುಪಡಿಸಿ ಗೃಹಬಳಕೆಯ ವಸ್ತುಗಳು ಮತ್ತು ಆಟೋ ಉತ್ಪಾದನಾ ಸರಕು ಸಾಗಾಣಿಕೆಯ ವಾಹನಗಳಿಗೆ ಭಾರೀ ಹೊಡೆತ ಬೀಳುತ್ತಿದೆ.
MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಅಂದಾಜು ಒಂದರ ಪ್ರಕಾರ, ಕೇವಲ ಆಟೋ ಉತ್ಪಾದನಾ ಕಂಪನಿಗಳಿಗೆ ಮಾತ್ರ ಸಂಬಂಧಿಸಿದ ರೂ.35 ಸಾವಿರ ಕೋಟಿ ಮೌಲ್ಯದ ಹೊಸ ವಾಹನಗಳು ಮತ್ತು ಬಿಡಿಭಾಗಗಳನ್ನು ಹೊತ್ತಬರುತ್ತಿರುವ ವಾಹನಗಳು ಮಾರ್ಗ ಮಧ್ಯದಲ್ಲೇ ಸಿಲುಕಿಕೊಂಡಿವೆ.

ಇದರಲ್ಲಿ ಸಿಮೆಂಟ್, ಕಬ್ಬಿಣ ಮತ್ತು ಲೈಫ್‌ಸ್ಟೈಲ್ ಸರಕು ಹೊತ್ತು ಬರುತ್ತಿರುವ ಸರಕು ವಾಹನಗಳು ಕೂಡಾ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಇದರ ನಡುವೆ ಹೆದ್ದಾರಿಗಳಲ್ಲಿ ಕಳ್ಳತನ ಪ್ರಕರಣಗಳು ಕೂಡಾ ಲಾರಿ ಚಾಲಕರ ನಿದ್ದೆಗೆಡಿಸಿದೆ.

ಲಾಕ್ ಡೌನ್ ನಂತರ ಹೆದ್ದಾರಿಗಳಲ್ಲೇ ವಾಸ್ತವ್ಯ ಹೂಡಿರುವ ಲಾರಿ ಚಾಲಕರಿಗೆ ಒಂದು ಕಡೆ ದಿನನಿತ್ಯದ ಆಹಾರ ವ್ಯವಸ್ಥೆ ಮಾಡಿಕೊಳ್ಳುವುದು ಒಂದು ಸಮಸ್ಯೆಯಾದರೆ ಮತ್ತೊಂದು ಕಡೆ ಪ್ರತಿ ಟ್ರಕ್‌ಗಳಲ್ಲೂ ಲೋಡ್ ಮಾಡಲಾಗಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಸರಕುಗಳನ್ನು ಕಾಯ್ದುಕೊಳ್ಳುವುದು ಮತ್ತೊಂದು ಸವಾಲಾಗಿದೆ.


Click it and Unblock the Notifications