ಮುಂದಿನ 5 ವರ್ಷಗಳಲ್ಲಿ ಭಾರೀ ಬದಲಾವಣೆಯಾಗಲಿದೆ ಇವಿ ವಾಹನ ಉತ್ಪಾದನೆ ಮತ್ತು ಮಾರಾಟ
ಭಾರತವು ಸೇರಿ ವಿಶ್ವದ ಪ್ರಮುಖ ರಾಷ್ಟ್ರಗಳು 2030ಕ್ಕೆ ಶೇ.100ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ರಸ್ತೆಗಿಳಿಸುವ ಯೋಜನೆ ಹೊಂದಿದ್ದು, ಭವಿಷ್ಯದ ಗುರಿಗಾಗಿ ಈಗಿನಿಂದಲೇ ಹಲವಾರು ಕಠಿಣ ಕ್ರಮಗಳ ಮೂಲಕ ಹಂತ-ಹಂತವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ತಗ್ಗಿಸುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಖರೀದಿದಾರರನ್ನು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಸೆಳೆಯಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಫೇಮ್ 2 ಯೋಜನೆ ಅಡಿ ಈಗಾಗಲೇ ಕೇಂದ್ರ ಸರ್ಕಾರ ಮೂರು ವರ್ಷಗಳ ಅವಧಿಗಾಗಿ(2019-21) ರೂ. 10 ಸಾವಿರ ಕೋಟಿ ವಿನಿಯೊಗಿಸುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯು ಮತ್ತೊಂದು ಹಂತದ ಬೆಳವಣಿಗೆ ಕಾರಣವಾಗಲಿದೆ.

ಫೇಮ್ 2 ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡುವ ಆಟೋ ಕಂಪನಿಗಳಿಗೆ ಮಾತ್ರವಲ್ಲದೇ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೂ ಕೂಡಾ ಆಕರ್ಷಕ ಸಬ್ಸಡಿ, ತೆರಿಗೆ ವಿನಾಯ್ತಿ, ಅತಿ ಕಡಿಮೆ ಜಿಎಸ್‌ಟಿ ಸೌಲಭ್ಯಗಳನ್ನು ನೀಡುತ್ತಿರುವುದು ಗ್ರಾಹಕರ ಆಕರ್ಷಣೆಯಾಗಿದೆ.

ಇದರಿಂದ ಮುಂಬರುವ ಐದು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವು ಶೇ.30ರಿಂದ ಶೇ.40ರಷ್ಟು ಬೆಳವಣಿಗೆ ಸಾಧಿಸುವ ಎಲ್ಲಾ ಸಾಧ್ಯತೆಗಳಿದ್ದು, ಎಲೆಕ್ಟ್ರಿಕ್ ವಾಹನಗನ್ನು ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ದಿಗೊಳಿಸಿ ಮಾರಾಟ ಮಾಡುವಂತೆ ವಿವಿಧ ಯೋಜನೆಗಳ ಮೂಲಕ ಉತ್ತೇಜನ ನೀಡಲಾಗುತ್ತಿದೆ.

ಸದ್ಯ ಪ್ರಮುಖ ಆಟೋ ಕಂಪನಿಗಳು ವಿದೇಶಿ ಮಾರುಕಟ್ಟೆಗಳಿಂದ ಎಲೆಕ್ಟ್ರಿಕ್ ವಾಹನಗಳ ಬಿಡಿಭಾಗಗಳು ಮತ್ತು ಬ್ಯಾಟರಿ ಸೌಲಭ್ಯವನ್ನು ಆಮದು ಮಾಡಿಕೊಂಡು ಭಾರತದಲ್ಲಿ ಮರುಜೋಡಣೆ ಮಾಡಿ ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಹಲವು ಕಂಪನಿಗಳು ಭಾರತದಲ್ಲೇ ಸಂಪೂರ್ಣವಾಗಿ ಉತ್ಪಾದನೆ ಮಾಡುವ ಯೋಜನೆ ಹೊಂದಿವೆ.

ಇದಕ್ಕೆ ಪೂರಕವಾಗಿ ಆಟೋ ಕಂಪನಿಗಳಿಗೆ ಖಡಕ್ ವಾರ್ನ್ ಮಾಡಿರುವ ಕೇಂದ್ರ ಸರ್ಕಾರವು ಚೀನಿ ಕಂಪನಿಗಳ ಬಿಡಿಭಾಗಗಳಿಗೆ ಹೆಚ್ಚು ಅವಲಂಬನೆಯಾಗದಂತೆ ಎಚ್ಚರಿಸಿದ್ದು, ಭವಿಷ್ಯದ ಯೋಜನೆಗಳಿಗಾಗಿ ಭಾರತದಲ್ಲೇ ನಿರ್ಮಾಣದ ಬಿಡಿಭಾಗಗಳನ್ನು ಬಳಕೆ ಮಾಡುವಂತೆ ಸೂಚನೆ ನೀಡಿದೆ.

ಸದ್ಯ ಭಾರತದಲ್ಲಿ ಉತ್ಪಾದನೆಯಾಗುವ ಬಹುತೇಕ ಎಲೆಕ್ಟ್ರಿಕ್ ವಾಹನಗಳಲ್ಲಿ ಶೇ. 60ರಿಂದ ಶೇ.80 ರಷ್ಟು ಪ್ರಮಾಣದಲ್ಲಿ ಚೀನಿ ಕಂಪನಿಗಳ ಬಿಡಿಭಾಗಗಳೇ ಹೆಚ್ಚು ಬಳಕೆಯಾಗುತ್ತಿದ್ದು, ವಾಹನ ಬೆಲೆ ಇಳಿಕೆಗಾಗಿ ಅಗ್ಗದ ಬೆಲೆಯ ಚೀನಿ ಉತ್ಪನ್ನಗಳನ್ನೇ ಹೆಚ್ಚು ಬಳಕೆ ಮಾಡಲಾಗುತ್ತಿದೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಅದರಲ್ಲೂ ಎಲೆಕ್ಟ್ರಿಕ್ ವಾಹನಗಳ ಪ್ರಮುಖ ತಾಂತ್ರಿಕ ಅಂಶವಾಗಿರುವ ಲೀಥಿಯಂ ಅಯಾನ್ ಬ್ಯಾಟರಿ ಉತ್ಪನ್ನಗಳನ್ನು ಶೇ.100ರಷ್ಟು ಚೀನಿ ಮತ್ತು ತೈವಾನ್ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ.

ಹೀಗಾಗಿ ಭವಿಷ್ಯದಲ್ಲಿ ಚೀನಿ ಮಾರುಕಟ್ಟೆಯ ಬಿಡಿಭಾಗಗಳಿಗೆ ಅವಲಂಬನೆಯಾಗುವುದನ್ನು ತಪ್ಪಿಸುವಂತೆ ಆಟೋ ಕಂಪನಿಗಳಿಗೆ ಸಲಹೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ದೇಶಿಯ ಮಾರುಕಟ್ಟೆಯಲ್ಲಿನ ಬಿಡಿಭಾಗಗಳ ಬಳಕೆಯೊಂದಿಗೆ ಸ್ವದೇಶಿ ಕಂಪನಿಗಳಿಗೆ ಸಹಕರಿಸಿ ಎನ್ನುವ ಸಲಹೆ ನೀಡಿದ್ದಾರೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗಾಗಿ ವಿದೇಶಿ ಮಾರುಕಟ್ಟೆಯಲ್ಲಿನ ಬ್ಯಾಟರಿ ಸಂಪನ್ಮೂಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವತ್ತ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದು, ಸ್ಥಳೀಯ ಸಂಪನ್ಮೂಲದೊಂದಿಗೆ ಬಿಡಿಭಾಗಗಳು ಮತ್ತು ಬ್ಯಾಟರಿ ತಯಾರಿಕೆಗೆ ಸಿದ್ದತೆ ನಡೆಸಿವೆ.

2021ರ ಸುಮಾರಿಗೆ ಹಲವಾರು ಅಂತರ್‌ರಾಷ್ಟ್ರೀಯ ಕಂಪನಿಗಳು ದೇಶಿಯ ಕಂಪನಿಗಳ ಜೊತೆಗೂಡಿ ಬ್ಯಾಟರಿ ಉತ್ಪಾದನಾ ಘಟಕಗಳನ್ನು ತೆರೆಯುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಬಿಡಿಭಾಗಗಳ ಬಳಕೆಯು ಎಲೆಕ್ಟ್ರಿಕ್ ವಾಹನ ಬೆಲೆಯನ್ನು ಗಣನೀಯವಾಗಿ ಇಳಿಕೆ ಮಾಡಲು ಸಹಕಾರಿಯಾಗಲಿವೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಇದರಿಂದ 2025ರ ವೇಳೆ ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುವುದಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡಬಹುದಾಗಿದ್ದು, ಹೊಸ ಯೋಜನೆಗಳಿಗೆ ಪೂರಕವಾಗಿ ಕೇಂದ್ರ ಸರ್ಕಾರವು ಸಹಕರಿಸಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications