ವಾಹನ ಸವಾರರೇ ಸ್ಟಿಕ್ಕರ್ ಅಂಟಿಸುವ ಮುನ್ನ ಇತ್ತ ಗಮನಿಸಿ..!
ವಾಹನ ಮಾಲೀಕರು ತಮ್ಮ ವಾಹನಗಳಲ್ಲಿ ನಂಬರ್ ಪ್ಲೇಟ್‍ಗಳ ಮೇಲೆ ಜಾತಿಯ ಹೆಸರು, ಯಾವುದೇ ಸಂಘ ಸಂಸ್ಥೆಯ ಹೆಸರುಗಳ ಸ್ಟಿಕ್ಕರ್‍ಗಳನ್ನು ಅಂಟಿಸಿಕೊಂಡಿರುವುದು ಭಾರತದ ರಸ್ತೆಗಳಲ್ಲಿ ಸರ್ವೆ ಸಾಮಾನ್ಯ.

ಇದು ಕಾನೂನುಬಾಹಿರವಾಗಿದ್ದರೂ ಜನರು ತಲೆ ಕೆಡಿಸಿಕೊಳ್ಳದೇ ಈ ರೀತಿಯ ಸ್ಟಿಕ್ಕರ್ ಅಳವಡಿಕೆಯನ್ನು ಮುಂದುವರೆಸುತ್ತಿದ್ದಾರೆ. ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಹೊಸ ಮೋಟಾರು ವಾಹನ ಕಾಯ್ದೆಯಲ್ಲಿಯೂ ಸಹ ಇದನ್ನು ನಿಷೇಧಿಸಲಾಗಿದೆ. ಈ ರೀತಿಯ ಸ್ಟಿಕ್ಕರ್‍ಗಳನ್ನು ಹೊಂದಿರುವ ವಾಹನಗಳಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಬಹುದಾಗಿದೆ.

ಯಾವುದೇ ಕಾನೂನು ಬಂದರೂ, ವಾಹನಗಳಲ್ಲಿ ಸ್ಟಿಕ್ಕರ್‍ಗಳನ್ನು ಅಂಟಿಸುವುದು ಮಾತ್ರ ಕಡಿಮೆಯಾಗಿಲ್ಲ. ಇದನ್ನು ಮಟ್ಟಹಾಕಲು ಆಯಾ ರಾಜ್ಯ ಸರ್ಕಾರಗಳು ಕ್ರಮಗಳನ್ನು ಕೈಗೊಳ್ಳುತ್ತಲೇ ಇವೆ. ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿರುವವರಲ್ಲಿ ಚಂಡೀಗಢ ಪೊಲೀಸರು ಸೇರಿದ್ದಾರೆ.

ಚಂಡೀಗಢ ಪೊಲೀಸರು ಸ್ಟಿಕ್ಕರ್ ಹೊಂದಿರುವ ವಾಹನಗಳ ವಿರುದ್ಧ ವಿಶೇಷ ಅಭಿಯಾನವನ್ನು ಆರಂಭಿಸಿದ್ದಾರೆ. ತಮ್ಮ ಹುದ್ದೆ, ಜಾತಿ ಮತ್ತಿತರ ಸ್ಟಿಕ್ಕರ್‍ಗಳನ್ನು ಹೊಂದಿರುವ ವಾಹನಗಳ ವಿರುದ್ಧ ಅಭಿಯಾನವನ್ನು ಆರಂಭಿಸಲಾಗಿದೆ.

ಇದರಿಂದಾಗಿ ವಾಹನಗಳಲ್ಲಿ ವಿವಾದಾತ್ಮಕ ಸಂಗತಿಗಳನ್ನು ಅಳವಡಿಸಿಕೊಂಡಿದ್ದ ವಾಹನ ಸವಾರರಲ್ಲಿ ನಡುಕ ಉಂಟಾಗಿದೆ. ಇತ್ತೀಚಿಗೆ ಅನಧಿಕೃತ ಸ್ಟಿಕ್ಕರ್‍ಗಳನ್ನು ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಂಡೀಗಢ ಹೈಕೋರ್ಟ್ ಆದೇಶ ನೀಡಿತ್ತು.

ಈ ಮೊದಲು ಚಂಡೀಗಢ ಪೊಲೀಸರು ಹೆಚ್ಚು ಶಬ್ದವನ್ನು ಮಾಡುತ್ತಿದ್ದ ಸೈಲೆನ್ಸರ್, ಹಾರ್ನ್ ಹಾಗೂ ಎಲ್‍ಇಡಿ ಲೈಟ್‍ಗಳನ್ನು ಹೊಂದಿದ್ದ ವಾಹನಗಳ ವಿರುದ್ಧ ಅಭಿಯಾನವನ್ನು ಕೈಗೊಂಡಿದ್ದರು. ಈಗ ಅನಧಿಕೃತ ಸ್ಟಿಕ್ಕರ್‍ಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಪೊಲೀಸ್ ಎಸ್ಕಾರ್ಟ್ ವಾಹನವೊಂದು ಸ್ಟಿಕ್ಕರ್ ಅನ್ನು ಹೊಂದಿ ಚಲಿಸುತ್ತಿರುವ ವೀಡಿಯೊ ಈಗ ವೈರಲ್ ಆಗಿದೆ. ಈ ವೀಡಿಯೊವನ್ನು ನ್ಯೂಸ್ 18 ಪ್ರಕಟಿಸಿದೆ. ಚಂಡೀಗಢ ಹೈ ಕೋರ್ಟ್ ಆದೇಶದಂತೆ ಜಾತಿ ಸ್ಟಿಕ್ಕರ್ ಜೊತೆಗೆ ಬೇರೆ ಸ್ಟಿಕ್ಕರ್‍ಗಳನ್ನು ಸಹ ಹೊಂದುವಂತಿಲ್ಲ.

ಪೊಲೀಸ್, ನೌಕಾಪಡೆ, ಆರ್ಮಿ, ಏರ್ ಫೋರ್ಸ್, ಪ್ರೆಸ್ ಮೊದಲಾದ ಸ್ಟಿಕ್ಕರ್‍ಗಳನ್ನು ಖಾಸಗಿ ವಾಹನಗಳಲ್ಲಿ ಅಳವಡಿಸಿಕೊಳ್ಳುವಂತಿಲ್ಲ. ಈ ರೀತಿಯ ಸ್ಟಿಕ್ಕರ್‍ಗಳನ್ನು ಅಂಟಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ.

ಆದರೆ ಈ ರೀತಿಯ ಸ್ಟಿಕ್ಕರ್‍ಗಳನ್ನು ಸರ್ಕಾರವು ಅಧಿಕೃತವಾಗಿ ವಿತರಿಸಿರುವ ವಾಹನಗಳಲ್ಲಿ ಅಳವಡಿಸಿಕೊಳ್ಳಬಹುದು. ಇದರ ಜೊತೆಗೆ ಕೆಲವರು ನಂಬರ್ ಪ್ಲೇಟ್‍ಗಳನ್ನು ಚಿತ್ರ ವಿಚಿತ್ರ ಅಕ್ಷರಗಳಲ್ಲಿ ಬರೆಸಿರುತ್ತಾರೆ. ಇದನ್ನು ಸಹ ನಿಷೇಧಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ವಾಹನಗಳಲ್ಲಿ ನಂಬರ್ ಪ್ಲೇಟ್ ಹೊರತು ಪಡಿಸಿ ಬೇರೆ ಯಾವುದೇ ಸಂಗತಿಗಳನ್ನು ಅಳವಡಿಸುವಂತಿಲ್ಲ. ಚಂಡೀಗಢ ಹೈಕೋರ್ಟ್ ಸಹ ಪೊಲೀಸರಿಗೆ ಈ ನಿಯಮವನ್ನು ಉಲ್ಲಂಘಿಸುವವರ ಮೇಲೆ ಕೇಸ್ ದಾಖಲಿಸಲು ಹಾಗೂ ಸ್ಥಳದಲ್ಲಿಯೇ ದಂಡ ವಿಧಿಸುವ ಅಧಿಕಾರವನ್ನು ನೀಡಿದೆ.

ಈ ಆದೇಶವನ್ನು ನ್ಯಾ.ರಾಜೀವ್ ಶರ್ಮಾ ಹಾಗೂ ನ್ಯಾ. ಅಮೋಲ್ ರತನ್ ಸಿಂಗ್‍ರವರಿದ್ದ ನ್ಯಾಯ ಪೀಠ ನೀಡಿದ್ದು, ಈ ಆದೇಶವನ್ನು 72 ಗಂಟೆಗಳ ಒಳಗೆ ಜಾರಿಗೊಳಿಸುವಂತೆ ಆದೇಶದಲ್ಲಿ ತಿಳಿಸಿದೆ. ಇದರನ್ವಯ ಗುಜ್ಜಾರ್ ಎಂಬ ಸ್ಟಿಕ್ಕರ್ ಅನ್ನು ಅಂಟಿಸಿಕೊಂಡಿದ್ದ ವಾಹನಗಳಿಗೆ ದಂಡ ವಿಧಿಸಲಾಗಿದೆ.

ಈ ಸ್ಟಿಕ್ಕರ್ ಅನ್ನು ಹೊಂದಿದ್ದ ಮಹೀಂದ್ರಾ ಬೊಲೆರೊ ಹಾಗೂ ಟಾಟಾ ನ್ಯಾನೊ ಕಾರುಗಳಿಗೆ ದಂಡ ವಿಧಿಸುವುದರ ಜೊತೆಗೆ ಸ್ಥಳದಲ್ಲಿಯೇ ಈ ಸ್ಟಿಕ್ಕರ್‍ಗಳನ್ನು ತೆಗೆದು ಹಾಕಲಾಗಿದೆ. ಮೊದಲ ಬಾರಿಗೆ ರೂ.500 ದಂಡ ವಿಧಿಸಲಾಗುವುದು. ಎರಡನೇ ಬಾರಿಗೆ ರೂ.1,000 ದಂಡ ವಿಧಿಸಲಾಗುತ್ತದೆ.

ಈ ಕಾನೂನು ಚಂಡೀಗಢದ ವಾಹನಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಬದಲಿಗೆ ಚಂಡೀಗಢದಲ್ಲಿ ಚಲಿಸುವ ಬೇರೆ ರಾಜ್ಯದ ವಾಹನಗಳಿಗೂ ಅನ್ವಯಿಸುತ್ತದೆ. ಇದರಿಂದಾಗಿ ಚಂಡೀಗಢದ ಅಕ್ಕಪಕ್ಕದ ರಾಜ್ಯದಲ್ಲಿರುವ ವಾಹನಗಳಲ್ಲಿ ಈ ರೀತಿಯ ಸ್ಟಿಕ್ಕರ್ ಹೊಂದಿದ್ದ ವಾಹನಗಳ ಮಾಲೀಕರು ಇವುಗಳನ್ನು ತೆಗೆದು ಹಾಕುತ್ತಿದ್ದಾರೆ.

ವಾಹನಗಳಲ್ಲಿ ಜಾತಿ ಸೂಚಕ ಸ್ಟಿಕ್ಕರ್‍ಗಳನ್ನು ಅಳವಡಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಆದೇಶವನ್ನು ನೀಡಿದೆ. ಟೋಲ್ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಸ್ಟಿಕ್ಕರ್‍ಗಳನ್ನು ಅಳವಡಿಸಿಕೊಂಡಿದ್ದವರ ವಿರುದ್ದವೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಪೊಲೀಸರ ಈ ಕ್ರಮದಿಂದಾಗಿ ಮುಂಬರುವ ದಿನಗಳಲ್ಲಿ ಚಂಡೀಗಢದಲ್ಲಿ ಈ ರೀತಿಯ ಸ್ಟಿಕ್ಕರ್‍ಗಳನ್ನು ಅಳವಡಿಸುವವರ ಸಂಖ್ಯೆಯು ಕಡಿಮೆಯಾಗುವ ಸಾಧ್ಯತೆಗಳಿವೆ. ದೇಶಾದ್ಯಂತ ವಾಹನಗಳಲ್ಲಿ ಸ್ಟಿಕ್ಕರ್‍ಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ.

ಇದರ ಜೊತೆಗೆ ಆಂಬ್ಯುಲೆನ್ಸ್ ಹಾಗೂ ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳು ಸೈರೆನ್ ಹಾಗೂ ಫ್ಲಾಶ್‍ಗಳನ್ನು ಹೊಂದುವಂತಿಲ್ಲ. ಪ್ರಧಾನಮಂತ್ರಿಯವರ ವಾಹನಗಳಲ್ಲೂ ಇವುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ ಕೆಲವು ಸರ್ಕಾರಿ ಅಧಿಕಾರಿಗಳು ಇವುಗಳ ಬಳಕೆಯನ್ನು ಮುಂದುವರೆಸಿದ್ದಾರೆ.


Click it and Unblock the Notifications








