ಹೊಸ ಇವಿ ಪಾಲಿಸಿ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಬ್ಸಡಿ ಅನುಮೋದನೆ
ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ದೆಹಲಿ ಸರ್ಕಾರವು ಕೈಗೊಂಡಿರುವ ಇವಿ ಪಾಲಿಸಿ ಭಾರೀ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದು, ಹೊಸ ಇವಿ ಪಾಲಿಸಿ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಬ್ಸಡಿ ಅನುಮೋದನೆ ನೀಡಲಾಗಿದೆ.

ಹೊಸ ಎಲೆಕ್ಟ್ರಿಕ್ ವಾಹನಗಳ ನೀತಿಯಡಿಯಲ್ಲಿ ಸಬ್ಸಿಡಿ ನೀಡಲು ದೆಹಲಿ ಸರ್ಕಾರ 45ಕ್ಕೂ ಹೆಚ್ಚು ಇ-ರಿಕ್ಷಾ, 12 ನಾಲ್ಕು ಚಕ್ರಗಳ ವಾಹನಗಳನ್ನು ಒಳಗೊಂಡಂತೆ 100ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಮಾದರಿಗಳಿಗೆ ಸಬ್ಸಡಿ ಅನುಮೋದನೆ ನೀಡಲಾಗಿದ್ದು, ಪ್ರತ್ಯೇಕ ವೆಬ್‌ಸೈಟ್ ಮೂಲಕ ಸಬ್ಸಡಿ ವಾಹನಗಳ ಮಾಹಿತಿಯನ್ನು ಸಹ ಪ್ರಕಟಿಸಲಾಗುತ್ತಿದೆ. ಸಬ್ಸಡಿ ಯೋಜನೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಪ್ರತ್ಯೇಕ ವೆಬ್‌ಸೈಟ್ ತೆರೆಯಲಾಗಿದ್ದು, ಇಲ್ಲಿ ಇವಿ ವಾಹನ ಖರೀದಿ ಬಯಸುವ ಗ್ರಾಹಕರು ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಬಹುದು.

ದೆಹಲಿ ಸಾರಿಗೆ ಇಲಾಖೆಯ ಅಡಿ ಕಾರ್ಯನಿರ್ವಹಿಸಲಿರುವ ಇವಿ ಪಾಲಿಸಿ ವೆಬ್‌ಸೈಟ್‌ನಲ್ಲಿ ಯಾವ ವಾಹನ ಮಾದರಿಯ ಮೇಲೆ ಎಷ್ಟು ಸಬ್ಸಡಿ ಲಭ್ಯ ಎನ್ನುವ ಸಂಪೂರ್ಣ ಮಾಹಿತಿ ಲಭ್ಯವಿದ್ದು, ನಗರದಲ್ಲಿನ ಯಾವ ಯಾವ ಪ್ರದೇಶಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳು ಲಭ್ಯವಿರುತ್ತವೆ ಎನ್ನುವ ಮಾಹಿತಿಗಳನ್ನು ಸಹ ಒಳಗೊಂಡಿದೆ.

ಹೊಸ ಸಬ್ಸಡಿ ಯೋಜನೆ ಕುರಿತಂತೆ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ರೂ. 15 ಲಕ್ಷದೊಳಗಿನ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ಸಬ್ಸಡಿ ಲಭ್ಯವಿದ್ದು, ರೂ. 15 ಲಕ್ಷ ಮೇಲ್ಪಟ್ಟ ಇವಿ ವಾಹನಗಳಿಗೆ ಸಬ್ಸಡಿಯಿಲ್ಲವಾದರೂ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಲ್ಲಿ ವಿನಾಯ್ತಿ ನೀಡಲಾಗಿದೆ ಎಂದಿದ್ದಾರೆ.

ರೂ.15 ಲಕ್ಷದೊಳಗಿನ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಡಿ ಜೊತೆ ರಸ್ತೆ ಮತ್ತು ನೋಂದಣಿ ಶುಲ್ಕದಲ್ಲೂ ವಿನಾಯ್ತಿ ಲಭ್ಯವಿದ್ದಲ್ಲಿ ರೂ. 15 ಮೇಲ್ಪಟ್ಟ ವಾಹನಗಳಿಗೆ ಸಬ್ಸಡಿ ನೀಡಲಾಗುತ್ತಿಲ್ಲ. ಬದಲಾಗಿ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಲ್ಲಿ ವಿನಾಯ್ತಿ ನೀಡಿರುವುದು ಪ್ರಮುಖ ನಿರ್ಧಾರವಾಗಿದ್ದು, ಇಂಧನ ಆಧರಿತ ವಾಹನಗಳನ್ನು ಬಿಟ್ಟು ಇವಿ ವಾಹನಗಳನ್ನು ಅಳವಡಿಸಿಕೊಳ್ಳಲು ಹೊಸ ಯೋಜನೆ ಸಾಕಷ್ಟು ಸಹಕಾರಿಯಾಗಿವೆ.

ಇನ್ನು ಹೊಸ ಇವಿ ನೀತಿ ಅಡಿ ಸಬ್ಸಡಿಗೆ ಅರ್ಹರಾಗಲು ಅಗಸ್ಟ್ 7ರಿಂದ ಈಚೆಗೆ ಖರೀದಿಸಿದ ವಾಹನಗಳಿಗೆ ಮಾತ್ರ ಸಬ್ಸಡಿ ಅನ್ವಯವಾಗಲಿದ್ದರೆ ಅಕ್ಟೋಬರ್ 15ರಿಂದ ಖರೀದಿ ಮಾಡಲಾದ ವಾಹನಗಳಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ವಿನಾಯ್ತಿ ಅನ್ವಯವಾಗಲಿದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ವಾಹನ ಖರೀದಿ ನಂತರ ಸಬ್ಸಡಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ ಮಾಡಬೇಕಿರುವ ಗ್ರಾಹಕರು ಪೂರ್ಣ ವಿವರಗಳನ್ನು ದೃಡಿಕರಿಸಬೇಕು. ಮಾಹಿತಿ ಸಲ್ಲಿಸಿದ ನಂತರ ಮೂರು ದಿನದೊಳಗಾಗಿ ವಾಹನ ಖರೀದಿ ಮಾಡಿದವರ ಖಾತೆಗೆ ಸಬ್ಸಡಿ ಹಣ ಜಮಾ ಆಗಲಿದ್ದು, ಇವಿ ಮಾರಾಟ ಮಳಿಗೆಗಳು ಸರ್ಕಾರದ ವೆಬ್‌ಸೈಟ್‌ನೊಂದಿಗೆ ಲಿಂಕ್‌ಗೊಂಡಿರುತ್ತವೆ.

ದೆಹಲಿ ಸರ್ಕಾರವು ಹೊಸ ಇವಿ ನೀತಿಯಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಇ-ರಿಕ್ಷಾ ಮತ್ತು ಸರಕು ಸಾಗಾಣಿಕೆಯ ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ರೂ. 30 ಸಾವಿರ ತನಕ ಸಬ್ಸಡಿ ನೀಡಲಿದ್ದರೆ ಎಲೆಕ್ಟ್ರಿಕ್ ಕಾರುಗಳ ಖರೀದಿ ಮೇಲೆ ಗರಿಷ್ಠ ರೂ. 1.5 ಲಕ್ಷದಷ್ಟು ಸಬ್ಸಡಿ ನೀಡುತ್ತಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸಬ್ಸಡಿ ಕುರಿತಾದ ಹೆಚ್ಚಿನ ಮಾಹಿತಿಗಾಗಿ ದೆಹಲಿ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿದ್ದು, ವೆಬ್‌ಸೈಟ್‌ನಲ್ಲಿ ಸಬ್ಸಡಿ ಅನುಮೋದಿತ ಮಾದರಿಗಳು, ಇವಿ ವಾಹನ ವಿತರಕರು, ಸಬ್ಸಿಡಿ ವಿತರಣಾ ಪ್ರಕ್ರಿಯೆ ಮತ್ತು ನಗರದಾದ್ಯಂತ ಲಭ್ಯವಿರುವ ಚಾರ್ಜಿಂಗ್ ಕೇಂದ್ರಗಳ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications