ಬಿಗ್ ಬ್ರೇಕಿಂಗ್: ಬಿಎಸ್-4 ವಾಹನಗಳ ಮಾರಾಟ ಅವಧಿ ವಿಸ್ತರಣೆಯ ಜೊತೆ ಹಲವು ಷರತ್ತು ವಿಧಿಸಿದ ಸುಪ್ರೀಂ
ದೇಶಾದ್ಯಂತ ಮುಂದಿನ ತಿಂಗಳು ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆಯನ್ನು ಬ್ಯಾನ್ ಮಾಡಿದ್ದ ಸುಪ್ರೀಂಕೋರ್ಟ್ ಕೊನೆಯ ಕ್ಷಣದಲ್ಲಿ ಬ್ಯಾನ್ ಅಸ್ತ್ರವನ್ನು ಸಡಿಸಿದ್ದು, ಕರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ಆಟೋ ಕಂಪನಿಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.

ಮಾಲಿನ್ಯ ತಡೆಯುವ ಉದ್ದೇಶದಿಂದ ಕಳೆದ 2 ವರ್ಷಗಳ ಹಿಂದೆಯೇ ಬಿಎಸ್-6 ಎಮಿಷನ್ ನಿಯಮವನ್ನು 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿ ತರುವಂತೆ ಆದೇಶ ನೀಡಿದ್ದ ಸುಪ್ರೀಂಕೋರ್ಟ್ ಆಟೋ ಕಂಪನಿಗಳಿಗೆ ಖಡಕ್ ಸೂಚನೆ ನೀಡಿತ್ತು. ಆದೇಶದಂತೆ ಏಪ್ರಿಲ್ 1ರಿಂದ ಜಾರಿಗೆ ಮಾಡಲು ಇನ್ನು 15 ದಿನಗಳು ಬಾಕಿ ಇರುವಾಗ ದೇಶದಲ್ಲಿ ಕರೋನಾ ವೈರಸ್ ಭೀತಿ ಹೆಚ್ಚಿದ್ದರಿಂದ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿ ಲಾಕ್ ಡೌನ್ ಹೇರಲಾಗಿದ್ದು, ಕೊನೆಯ ಗಳಿಗೆಯಲ್ಲಿ ಮಾರಾಟವಾಗಬೇಕಿದ್ದ ಲಕ್ಷಾಂತರ ಬಿಎಸ್-4 ವಾಹನಗಳು ಮಾರಾಟವಾಗದೆ ಹಾಗೆಯೇ ಉಳಿದಿವೆ.

ಇದರಿಂದ ಕಂಗಾದ ವಾಹನ ಉತ್ಪಾದನಾ ಸಂಸ್ಥೆಗಳು ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಇಂದು ಮತ್ತೆ ಸುಪ್ರೀಂಕೋರ್ಟ್ ತದತಟ್ಟುವ ಮೂಲಕ ವಿನಾಯ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆದರೆ ಮಾರಾಟ ಅವಧಿ ವಿಸ್ತರಣೆಗೆ ಹಲವು ಕಠಿಣ ಷರತ್ತುಗಳನ್ನು ವಿಧಿಸಿದೆ.

ಕರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿನಾಯ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಇಂಡಿಯನ್ ಆಟೋ ಡೀಲರ್ಸ್ ಅಸೋಶಿಯೇಷನ್ ಸಂಸ್ಥೆಗೆ ಸುಪ್ರೀಂಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಅವಧಿ ವಿಸ್ತರಣೆ ಮಾಡಿತು.

ಏಪ್ರಿಲ್ 1ರಿಂದಲೇ ನಿಷೇಧಗೊಳ್ಳಬೇಕಿದ್ದ ಬಿಎಸ್-4 ಮಾರಾಟ ಪ್ರಕ್ರಿಯೆಯನ್ನು ಏಪ್ರಿಲ್ 24ರ ತನಕ ವಿಸ್ತರಣೆ ಮಾಡಲಾಗಿದ್ದು, ಪ್ರತಿ ಆಟೋ ಕಂಪನಿಗಳು ಸ್ಟಾಕ್ ಇರುವ ಶೇ.10 ರಷ್ಟು ಪ್ರಮಾಣದ ಬಿಎಸ್-4 ವಾಹನಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದಿದೆ. ಜೊತೆಗೆ ಬಿಎಸ್-4 ವಾಹನ ಮಾರಾಟ ಅವಧಿ ವಿಸ್ತರಣೆಯ ವಿನಾಯ್ತಿಯು ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಿಗೆ ಅನ್ವಯಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಮಾಲಿನ್ಯ ತಡೆಯಲು ಹಳೆಯ ವಾಹನಗಳಿಗೆ ಕಡಿವಾಣ ಹಾಕುವುದೇ ಮುಖ್ಯ ಎಂದಿದೆ.

ಈ ಹಿಂದೆಯೂ ಎರಡು ಬಾರಿ ಆಟೋ ಕಂಪನಿಗಳು ಬಿಎಸ್-4 ವಾಹನಗಳ ಮಾರಾಟಕ್ಕೆ ಅವಧಿಯ ವಿಸ್ತರಣೆಯ ಮನವಿಯನ್ನು ತಳ್ಳಿಹಾಕಿರುವ ಸುಪ್ರೀಂಕೋರ್ಟ್ ಕಡ್ಡಾಯವಾಗಿ ಎಪ್ರಿಲ್ 1ರಿಂದ ಬಿಎಸ್-6 ಆದೇಶವನ್ನು ಪಾಲಿಸುವಂತೆ ಖಡಕ್ ಆದೇಶ ನೀಡಿತ್ತು.

ಆದರೆ ಇದೀಗ ಕರೋನಾ ವೈರಸ್‌ನಿಂದ ವಾಹನ ಮಾರಾಟ ಬಂದ್ ಆಗಿರುವುದರಿಂದ ಆಟೋ ಕಂಪನಿಗಳ ಹೊಸ ಮರುಪರಿಶೀಲನಾ ಅರ್ಜಿಯನ್ನು ಮಾನ್ಯ ಮಾಡಿ ಷರತ್ತುಗಳೊಂದಿಗೆ ಮತ್ತೊಂದು ಅವಕಾಶವನ್ನು ನೀಡಿದೆ.

ಮಾಹಿತಿಗಳ ಪ್ರಕಾರ, ವಿವಿಧ ಆಟೋ ಕಂಪನಿಗಳ ಬಳಿ ಇನ್ನು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಬಿಎಸ್-4 ಎಂಜಿನ್ ಪ್ರೇರಿತ ವಾಹನಗಳ ಸ್ಟಾಕ್ ಇದ್ದು, ಇದು ರೂ.6,400 ಕೋಟಿ ಮೌಲ್ಯವನ್ನು ಹೊಂದಿದೆ.

ಹೀಗಾಗಿ ಬಿಎಸ್-4 ವಾಹನ ಮಾರಾಟವನ್ನು ಮಾಡಲೇಬೇಕಾದ ಅನಿವಾರ್ಯತೆಯಲ್ಲಿರುವ ಆಟೋ ಕಂಪನಿಗಳು ಕರೋನಾ ವೈರಸ್ ನೆಪವೊಡ್ಡಿ ಮತ್ತೊಂದು ಅವಕಾಶವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಏಪ್ರಿಲ್ 24ರ ನಂತರ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಕೊನೆಗೊಳ್ಳುತ್ತದೆ.


Click it and Unblock the Notifications








