ಶೀಘ್ರದಲ್ಲೇ ಸಿ5 ಏರ್‌ಕ್ರಾಸ್ ಬೆಲೆ ಹೆಚ್ಚಿಸಲಿದೆ ಸಿಟ್ರನ್ ಇಂಡಿಯಾ
ಆಟೋ ಬಿಡಿಭಾಗಗಳ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಕಳೆದ ತಿಂಗಳು ಬೆಲೆ ಏರಿಕೆ ಮಾಡಿದ್ದ ಪ್ರಮುಖ ಕಾರು ಕಂಪನಿಗಳು ಇದೀಗ ಮತ್ತೆ ಹೊಸ ವಾಹನಗಳ ದರ ಪರಿಷ್ಕರಣೆಗೆ ಮುಂದಾಗಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ. ಸಿಟ್ರನ್ ಸೇರಿದಂತೆ ಪ್ರಮುಖ ಕಾರು ಕಂಪನಿಗಳು ಜನವರಿ 1ರಿಂದಲೇ ಬೆಲೆ ಹೆಚ್ಚಳ ಮಾಡುವುದಾಗಿ ಸುಳಿವು ನೀಡಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ವಾಹನ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸಿದೆ.

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ಹೊಸ ವಾಹನಗಳ ದರಗಳನ್ನು ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, ಸಿಟ್ರನ್ ಕಂಪನಿಯು ಕಂಪನಿಯು ಸಹ ಮೂರು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ದರ ಹೆಚ್ಚಿಸುವ ಸುಳಿವು ನೀಡಿದೆ.

ಕಳೆದ ಅಕ್ಟೋಬರ್ ಕೊನೆಯಲ್ಲಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಬೆಲೆಯಲ್ಲಿ ರೂ. 1 ಲಕ್ಷದ ತನಕ ದರ ಹೆಚ್ಚಿಸಿದ್ದ ಸಿಟ್ರನ್ ಕಂಪನಿಯು ಜನವರಿ 1ರಿಂದಲೇ ಅನ್ವಯಿಸುವಂತೆ ಶೇ. 1.50 ರಿಂದ ಶೇ. 3 ರಷ್ಟು ದರ ಹೆಚ್ಚಿಸುವ ಸುಳಿವು ನೀಡಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರು ಉತ್ಪಾದನೆ ಆರಂಭಿಸಿರುವ ಸಿಟ್ರನ್ ಕಂಪನಿಯು ಮೊದಲ ಕಾರು ಮಾದರಿಯಾಗಿ ಕಳೆದ ಮೇ ತಿಂಗಳಿನಲ್ಲಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿತ್ತು. ಹೊಸ ಕಾರು ಪ್ರಮುಖ ಪ್ರತಿಸ್ಪರ್ಧಿ ಕಾರುಗಳ ನಡುವೆಯೂ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಬಿಡಿಭಾಗಗಳ ದರ ಹೆಚ್ಚಳದಿಂದಾಗಿ ಹೊಸ ಕಾರು ಇದೀಗ ಮತ್ತಷ್ಟು ದುಬಾರಿಯಾಗುತ್ತಿದೆ.

ಕಳೆದ ಬಾರಿ ಬೆಲೆ ಹೆಚ್ಚಳಗೊಂಡ ನಂತರ ಹೊಸ ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರು ಮಾದರಿಯು ಎಕ್ಸ್‌ಶೋರೂಂ ಬೆಲೆಯಲ್ಲಿ ಸುಮಾರು ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಬೆಲೆ ಹೆಚ್ಚಳದ ನಂತರ ಆರಂಭಿಕ ಬೆಲೆಯು ಇದೀಗ ಎಕ್ಸ್‌ಶೋರೂಂ ಪ್ರಕಾರ ರೂ. 31.30 ಲಕ್ಷಕ್ಕೆ ಏರಿಕೆಯಾಗಿದೆ.

ಸದ್ಯ ಸಿ5 ಏರ್‌ಕ್ರಾಸ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 31.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 32.80 ಲಕ್ಷ ಬೆಲೆ ಹೊಂದಿದ್ದು, ಜನವರಿಯಿಂದ ಹೊಸ ಕಾರಿನ ಬೆಲೆ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 1 ಲಕ್ಷದಿಂದ ರೂ. 1.50 ಲಕ್ಷ ಹೆಚ್ಚಳವಾಗಬಹುದಾಗಿದೆ.

ಇನ್ನು ನಮ್ಮ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 10 ನಗರಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಹೊಸ ಸಿ5 ಏರ್‌ಕ್ರಾಸ್ ಕಾರು ಮಾದರಿಯು ಮಧ್ಯಮ ಕ್ರಮಾಂಕದ ಐಷಾರಾಮಿ ಎಸ್‌ಯುವಿ ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದು, ಫೀಲ್ ಮತ್ತು ಶೈನ್ ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ ಸಿ5 ಏರ್‌ಕ್ರಾಸ್ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಯಲ್ಲೇ ವಿನೂತನ ಫೀಚರ್ಸ್ ಹೊಂದಿರುವ ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ತುಸು ದುಬಾರಿ ಬೆಲೆ ಎನ್ನಿಸಿದರೂ ಹಲವು ಮಾದರಿಯ ಫೀಚರ್ಸ್‌ಗಳು ಈ ಕಾರಿನಲ್ಲಿವೆ.

ಸಿ5 ಏರ್‌ಕ್ರಾಸ್ ಕಾರಿನಲ್ಲಿ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟ್ಅಪ್, ಫ್ರಂಟ್ ಗ್ರಿಲ್‌ಗೆ ಹೊಂದಿಕೊಂಡಿರುವ ಸ್ಲಿಕ್ ವಿನ್ಯಾಸದ ಎಲ್ಇಡಿ ಡಿಆರ್‌ಎಲ್ಎಸ್, 18-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಕಾರಿನ ಖದರ್‌ಗೆ ಪೂರಕವಾದ ಸರೌಂಡ್ ಬ್ಲ್ಯಾಕ್ ಕ್ಲಾಡಿಂಗ್ ಸೌಲಭ್ಯವಿದೆ.

ಹಾಗೆಯೇ ಸಿಲ್ವರ್ ಫೀನಿಶ್ಡ್ ರೂಫ್ ರೈಲ್ಸ್, ಎಲ್ಇಡಿ ಟೈಲ್‌ಲೈಟ್, ರೂಫ್ ಮೌಂಟೆಡ್ ಸ್ಪಾಯ್ಲರ್‌ನೊಂದಿಗೆ ಆಕರ್ಷಕ ನೋಟ ಹೊಂದಿದ್ದು, ಹೊಸ ಕಾರಿನ ಕಾರಿನ ಒಳಭಾಗವು ಕೂಡಾ ಹಲವಾರು ಸಾಫ್ಟ್ ಟಚ್ ಮೆಟಿರಿಯರ್‌ಗಳಿಂದ ವಿಶಾಲವಾದ ಕ್ಯಾಬಿನ್ ಪಡೆದುಕೊಂಡಿದೆ. ಇದರೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 12.3 ಇಂಚಿನ ಡಿಜಿಟಲ್ ಇನ್‌ಸ್ಟ್ರಮೆಂಟ್ ಕ್ಲಸ್ಟರ್, ಸೆಂಟರ್ ಕನ್ಸೊಲ್ ಜೊತೆ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಟೋಟೈನ್‌ಮೆಂಟ್ ಸೌಲಭ್ಯವಿದೆ.

ಹೈ ಎಂಡ್ ಮಾದರಿಗಳಲ್ಲಿ ಪನೊರಮಿಕ್ ಸನ್‌ರೂಫ್, ಡ್ಯುಯಯಲ್ ಜೋನ್ ಆಟೋ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ಆ್ಯಂಬಿಯೆಂಟ್ ಲೈಟಿಂಗ್ಸ್, ಏರ್ ಪ್ಯೂರಿಫೈರ್, ಪ್ರತ್ಯೇಕವಾಗಿರುವ ಆಗಿರುವ ಎಸಿ ವೆಂಟ್ಸ್ ಹೊಂದಿದೆ.

ಜೊತೆಗೆ ಹೊಸ ಕಾರಿನ ಹಿಂಬದಿಯಲ್ಲಿ ಆಸನ ಸಾಲಿನಲ್ಲಿ ಮೂರು ಜನ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದಾದ ಆಸನ ಸೌಲಭ್ಯವನ್ನು ನೀಡಿದ್ದು, ಸೆಗ್ಮೆಂಟ್ ಮಾದರಿಯಲ್ಲೇ ಅತಿ ಹೆಚ್ಚು ಉದ್ದಳತೆ ಮತ್ತು ಅಗಲವಾದ ವಿನ್ಯಾಸವನ್ನು ಹೊಂದಿರುವುದೇ ಕ್ಯಾಬಿನ್ ವಿಶಾಲವಾಗಿರಲು ಪ್ರಮುಖ ಕಾರಣವಾಗಿದೆ.

ಸಿ5 ಏರ್‌ಕ್ರಾಸ್ ಕಾರು 4,500 ಎಂಎಂ ಉದ್ದ, 2,099 ಎಂಎಂ ಅಗಲ, 1,710 ಎಂಎಂ ಎತ್ತರ ಮತ್ತು 2,730 ಎಂಎಂ ವೀಲ್ಹ್‌ಬೆಸ್‌ನೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತ್ಯುತ್ತಮ ಒಳಾಂಗಣ ವಿನ್ಯಾಸ ಹೊಂದಿದೆ. ಹೊಸ ಕಾರಿನಲ್ಲಿ 2.0-ಲೀಟರ್(1,997ಸಿಸಿ) ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 177-ಬಿಎಚ್‌ಪಿ ಮತ್ತು 400ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಹ್ಯುಂಡೈ ಟ್ಯುಸಾನ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.


Click it and Unblock the Notifications








