ಷರತ್ತಿನೊಂದಿಗೆ ಹಳೆ ಡೀಸೆಲ್ ವಾಹನ ಬಳಕೆಗೆ ಅವಕಾಶ ನೀಡಿದ ದೆಹಲಿ ಸರ್ಕಾರ
ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳ ಸಂಚಾರವನ್ನು ನಿಷೇಧಿಸುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದೆಹಲಿಯಲ್ಲಿ 10 ವರ್ಷ ಹಳೆಯ ಡೀಸೆಲ್ ಹಾಗೂ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ಬಳಕೆಯನ್ನು ನಿಷೇಧಿಸಲಾಗಿದೆ. ಈ ವಾಹನಗಳು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುವಂತಿಲ್ಲ.

ಈ ನಿಯಮ ಉಲ್ಲಂಘಿಸುವ ವಾಹನಗಳ ಜಪ್ತಿ ಮಾಡುವುದರ ಜೊತೆಗೆ ಕಠಿಣ ಕ್ರಮ ಜರುಗಿಸಲಾಗುವುದು. ಇದರಿಂದ ಹಳೆ ವಾಹನ ಮಾಲೀಕರಿಗೆ ವಿವಿಧ ಸಮಸ್ಯೆಗಳಾಗುತ್ತಿವೆ. ಈ ನಿಯಮದಿಂದಾಗಿ ಸಾವಿರಾರು ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೆಹಲಿ ರಾಜ್ಯ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರಿಂದ ಹಳೆ ವಾಹನ ಮಾಲೀಕರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.

ಹೊಸ ನಿಯಮಗಳ ಪ್ರಕಾರ, 10 ವರ್ಷ ಹಳೆಯ ಡೀಸೆಲ್ ವಾಹನಗಳು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬಹುದು. ಆದರೆ ಇದಕ್ಕೆ ಒಂದು ಷರತ್ತು ವಿಧಿಸಲಾಗಿದೆ. 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಿದರೆ, ಆ ವಾಹನಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಬಹುದು.

ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ನಿರ್ಧಾರವು ಹಳೆಯ ಡೀಸೆಲ್ ವಾಹನಗಳ ಮಾಲೀಕರಿಗೆ ತಮ್ಮ ವಾಹನಗಳ ಬಳಕೆಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ. ಈ ಕ್ರಮವು ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯನ್ನು ಉತ್ತೇಜಿಸಲು ನೆರವು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಈ ನಿಯಮವು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳಿಗೆ ಅನ್ವಯಿಸುತ್ತದೆಯೇ ಎಂಬುದು ಖಚಿತವಾಗಿಲ್ಲ.

ಈ ಆದೇಶಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ದೆಹಲಿ ಸರ್ಕಾರದ ಈ ಕ್ರಮವನ್ನು ಬಹುತೇಕ ಎಲ್ಲರೂ ಸ್ವಾಗತಿಸಿದ್ದಾರೆ. ಆದರೆ ಯೋಜನೆಯಲ್ಲಿರುವ ಗೊಂದಲವನ್ನು ದೆಹಲಿ ರಾಜ್ಯ ಸರ್ಕಾರವು ಪರಿಹರಿಸಬೇಕೆಂಬುದು ಎಲ್ಲರ ಆಗ್ರಹವಾಗಿದೆ. ದೆಹಲಿ ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ.

ದೆಹಲಿ ಸರ್ಕಾರವು ವಾಯು ಮಾಲಿನ್ಯದ ವಿರುದ್ಧ ಸಮರ ಸಾರಿದ್ದು, ದೆಹಲಿ ನಗರದೊಳಗೆ ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾತ್ರ ಬಳಸಬೇಕು ಎಂದು ಸೂಚಿಸಿದೆ. ನಗರದ 250 ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 11ರವರೆಗೆ ಹಾಗೂ ಸಂಜೆ 5ರಿಂದ ರಾತ್ರಿ 9ರವರೆಗೆ ವಾಣಿಜ್ಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ವಾಯು ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಇದನ್ನು ಉಲ್ಲಂಘಿಸುವ ವಾಹನಗಳಿಗೆ ಭಾರಿ ದಂಡ ವಿಧಿಸಲಾಗುವುದು ಎಂದು ವರದಿಯಾಗಿದೆ. ಈ ಅವಧಿಯಲ್ಲಿ ಮೇಲ್ಕಂಡ ನಿಷೇಧವು ಕೆಲವು ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ. ವಾಯು ಮಾಲಿನ್ಯ ಸಮಸ್ಯೆಯನ್ನು ನಿಯಂತ್ರಿಸುವುದು ಇದರ ಹಿಂದಿರುವ ಪ್ರಮುಖ ಉದ್ದೇಶವಾಗಿದೆ.

ಯಾವುದೇ ರೀತಿಯಲ್ಲಿ ಪರಿಸರ ಮಾಲಿನ್ಯವನ್ನುಂಟು ಮಾಡದ ಎಲೆಕ್ಟ್ರಿಕ್ ವಾಹನಗಳಿಗೆ ಈ ನಿಷೇಧದಿಂದ ವಿನಾಯಿತಿ ನೀಡಲಾಗಿದೆ. ದೆಹಲಿ ರಾಜ್ಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಈ ಘೋಷಣೆ ಮಾಡಿದ್ದಾರೆ. ನೋ ಎಂಟ್ರಿ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೆಹಲಿ ಮಾತ್ರವಲ್ಲದೆ ಬಹುತೇಕ ಎಲ್ಲಾ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುತ್ತಿವೆ. ಇದರಿಂದ ಕಚ್ಚಾ ತೈಲ ಆಮದು ಪ್ರಮಾಣವು ಸಹ ಕಡಿಮೆಯಾಗಲಿದೆ. ಈಗ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಈ ಮೂಲಕ ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನಗಳ ಕಾರ್ಯಾಚರಣೆಗೆ ಅಧಿಕೃತ ಅನುಮೋದನೆ ನೀಡಲಾಗಿದೆ. ಎಲೆಕ್ಟ್ರಿಕ್ ವಾಹನಗಳು ದೆಹಲಿ ನಗರದ ಯಾವುದೇ ರಸ್ತೆಯಲ್ಲಿ ಯಾವಾಗ ಬೇಕಾದರೂ ಸಂಚರಿಸಬಹುದು. ವಾಣಿಜ್ಯ ವಾಹನ ಬಳಕೆದಾರರ ತೀವ್ರ ವಿರೋಧದ ನಡುವೆ ಈ ಘೋಷಣೆ ಮಾಡಲಾಗಿದೆ. ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಚಾರವನ್ನು ನಿಷೇಧಿಸುವುದಿಲ್ಲ ಎಂದು ಈ ಮೂಲಕ ತಿಳಿಸಲಾಗಿದೆ.

ಅದರಲ್ಲೂ ವಿಶೇಷವಾಗಿ ವಾಯು ಮಾಲಿನ್ಯವನ್ನು ಪರಿಗಣಿಸಿ ತೆಗೆದುಕೊಂಡ ಯಾವುದೇ ಕ್ರಮವು ಎಲೆಕ್ಟ್ರಿಕ್ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಭವಿಷ್ಯದಲ್ಲಿ ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಹೇಳುವುದಾದರೆ, ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಪ್ರಾಬಲ್ಯ ಹೊಂದಿದೆ. ಟಾಟಾದ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿ ಈಗ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರ್ ಆಗಿದೆ. ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೇ ತನ್ನ Tigor ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಮುಂಬರುವ ದಿನಗಳಲ್ಲಿ Altroz ಹಾಗೂ Punch ಕಾರುಗಳ ಎಲೆಕ್ಟ್ರಿಕ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಇವುಗಳಲ್ಲಿ Altroz ಎಲೆಕ್ಟ್ರಿಕ್ ಕಾರು ಮೊದಲು ಮಾರಾಟಕ್ಕೆ ಬರಲಿದೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಸದ್ದು ಮಾಡಲಿವೆ ಎಂದು ಅರಿತಿರುವ ಟಾಟಾ ಮೋಟಾರ್ಸ್ ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚು ಅಭಿವೃದ್ಧಿಪಡಿಸುತ್ತಿದೆ. ಟಾಟಾ ಮೋಟಾರ್ಸ್ ಹೊರತುಪಡಿಸಿ ಇತರ ಕಂಪನಿಗಳು ಸಹ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಭಾರತದ ನಂಬರ್ 1 ಕಾರು ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ ಸಹ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕಂಪನಿಯು ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರ್ ಅನ್ನು ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಆಗಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.
ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications