ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರವು ಅವಧಿ ಮೀರಿದ ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುವ ಮಹತ್ವದ ನಿರ್ಣಯ ಕೈಗೊಂಡಿದ್ದು, ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ಪ್ರಕಟಗೊಳಿಸಲು ಅಂತಿಮ ಹಂತದ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ಓಡಾಟಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಸ್ವಯಂ ಪ್ರೇರಿತ ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಮಹತ್ವದ ನಿರ್ಣಯ ಪ್ರಕಟಿಸಿದ್ದು, ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತಿದೆ. ಹೊಸ ಸ್ಕ್ರ್ಯಾಪೇಜ್ ನೀತಿಯು 2022ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದ್ದು, 20 ವರ್ಷ ಮೇಲ್ಪಟ್ಟ ವ್ಯಯಕ್ತಿಕ ಬಳಕೆಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ಬಳಕೆಯ ವಾಹನಗಳನ್ನು ಹೊಸ ನೀತಿಯಡಿಯಲ್ಲಿ ಸ್ಕ್ರ್ಯಾಪ್‌ಗೊಳ್ಳಲಿವೆ.

ಹೊಸ ನೀತಿಯಿಂದಾಗಿ ಕೇವಲ ಆಟೋ ಉದ್ಯಮಕ್ಕೆ ಮಾತ್ರವಲ್ಲ ಮಾಲಿನ್ಯ ಮತ್ತು ತೈಲ ಆಮದು ತಗ್ಗಿಸಲು ಪರಿಣಾಮಕಾರಿಯಾದ ನೀತಿಯಾಗಿದ್ದು, ಹಳೆಯ ವಾಹನಗಳ ಬಳಕೆಗೆ ಬ್ರೇಕ್ ಹಾಕಿದ್ದಲ್ಲಿ ಅತಿ ಹೆಚ್ಚು ಇಂಧನ ಕಾರ್ಯಕ್ಷಮತೆಯ ಹೊಂದಿರುವ ಹೊಸ ವಾಹನಗಳನ್ನು ಉತ್ತೇಜಿಸಲು ಸಹಕಾರಿಯಾಗಲಿದೆ.

ಜೊತೆಗೆ ಹೊಸ ಸ್ಕ್ರ್ಯಾಪೇಜ್ ನೀತಿಯಿಂದಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಸಾಕಷ್ಟು ಸಹಕಾರಿಯಾಗಲಿದ್ದು, ಹೊಸ ನಿಯಮದಲ್ಲಿ ಹಳೆಯ ವಾಹನಗಳಿಗೆ ಮತ್ತು ಅನರ್ಹ ವಾಹನಗಳಿಗೆ ಪ್ರತ್ಯೇಕವಾಗಿ ಸ್ಕ್ರ್ಯಾಪೇಜ್ ನಿಯಮಗಳು ಅನ್ವಯವಾಗಲಿವೆ.

ಬಜೆಟ್ ಮಂಡನೆ ವೇಳೆ ಕೇವಲ ಹೊಸ ಸ್ಕ್ರ್ಯಾಪೇಜ್ ನೀತಿ ಪ್ರಮುಖಾಂಶಗಳನ್ನು ಮಾತ್ರ ಪ್ರಸ್ತಾಪಿಸಲಾಗಿದ್ದು, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನೀತಿಯ ಕುರಿತಂತೆ ಕೆಲವು ಪ್ರಮುಖ ಅಂಶಗಳನ್ನು ಒಂದಾಗಿ ಹಂಚಿಕೊಳ್ಳುತ್ತಿದೆ. ಸ್ಕ್ರ್ಯಾಪಿಂಗ್ ನೀತಿ ಅಳವಡಿಸಿಕೊಳ್ಳುವ ಮಾಲೀಕರಿಗೆ ಪರಿಹಾರವೇನು? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಅವಧಿ ಮೀರಿದ ಹಳೆಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜುರಿಗೆ ಹಾಕುವ ಮಾಲೀಕರಿಗೆ ಹಲವಾರು ಲಾಭಗಳಿವೆ ಎನ್ನುವ ಭರವಸೆ ನೀಡಿದ್ದಾರೆ.

ಹಳೆಯ ವಾಹನವನ್ನು ಸ್ವಯಂ ಪ್ರೇರಿತವಾಗಿ ಗುಜುರಿಗೆ ಹಾಕಿದ್ದಲ್ಲಿ ಹೊಸ ವಾಹನ ಖರೀದಿಗೆ ಶೇ.5 ರಷ್ಟು ವಿನಾಯ್ತಿಯ ಜೊತೆಗೆ ಹೊಸ ವಾಹನದ ರಸ್ತೆ ತೆರಿಗೆಯಲ್ಲಿ ಶೇ. 25 ರಷ್ಟು ವಿನಾಯ್ತಿ ನೀಡಲು ನಿರ್ಧರಿಸಿದ್ದು, ಹೊಸ ಯೋಜನೆಯ ಬಗೆಗೆ ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಮಧ್ಯಮ ಸಂಸ್ಥೆಯೊಂದರ ಸಂವಾದದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಜೊತೆಗೆ ನಿಗದಿತ ಅವಧಿಯಲ್ಲಿ ಸ್ವಯಂಪ್ರೇರಿತ ಗುಜುರಿ ನೀತಿ ಅಳವಡಿಸಿಕೊಳ್ಳದ ಹಳೆಯ ವಾಹನ ಮಾಲೀಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳವ ಬಗೆಗೂ ಮಾಹಿತಿ ಹಂಚಿಕೊಂಡಿರುವ ಸಾರಿಗೆ ಸಚಿವರು 8 ವರ್ಷ ಮೇಲ್ಪಟ್ಟ ಸಾರಿಗೆ ವಾಹನಗಳಿಗೆ ಮತ್ತು 15 ಮೇಲ್ಪಟ್ಟ ಖಾಸಗಿ ವಾಹನಗಳಿಗೆ ದುಬಾರಿ ಮೊತ್ತದ ಹನಿರು ತೆರಿಗೆ ವಿಧಿಸುವ ಸುಳಿವು ನೀಡಿದ್ದಾರೆ.

ಹಸಿರು ತೆರಿಗೆಯನ್ನು 8 ವರ್ಷದ ಮೇಲ್ಪಟ್ಟ ಸಾರಿಗೆ ವಾಹನಗಳ ಫಿಟ್‌ನೆಸ್ ಪ್ರಮಾಣ ಪತ್ರ ನವೀಕರಿಸುವ ಸಂದರ್ಭದಲ್ಲಿ ಮತ್ತು 15 ವರ್ಷ ಮೇಲ್ಪಟ್ಟ ವೈಯಕ್ತಿಕ ಬಳಕೆಯ ವಾಹನಗಳ ಆರ್‌ಸಿ(ನೋಂದಣಿ ಪ್ರಮಾಣಪತ್ರ) ನವೀಕರಿಸುವ ಸಂದರ್ಭದಲ್ಲಿ ಶೇ.10 ರಿಂದ ಶೇ. 25 ರಷ್ಟು ಹೆಚ್ಚಳ ಮಾಡಬಹುದಾಗಿದೆ.

ಕೇಂದ್ರ ಸರ್ಕಾರವು ವಿಧಿಸಲು ನಿರ್ಧರಿಸಿರುವ ಹಸಿರು ತೆರಿಗೆ ಪಟ್ಟಿಗೆ ದೇಶಾದ್ಯಂತ ಸುಮಾರು ನಾಲ್ಕು ಕೋಟಿ ವಾಹನಗಳು ಹಸಿರು ತೆರಿಗೆ ವ್ಯಾಪ್ತಿಯಲ್ಲಿ ಬರಲಿದ್ದು, ಇದರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಹಳೆಯ ವಾಹನಗಳಿರುವುದನ್ನು ಕೇಂದ್ರ ಸಾರಿಗೆ ಇಲಾಖೆಯ ಡೇಟಾದಲ್ಲಿ ಬಹಿರಂಗವಾಗಿದೆ. ವಾಹನ ಸಂಖ್ಯೆಗಳ ಡಿಜಿಟಲೀಕರಣದ ಪ್ರಕಾರ, ಕರ್ನಾಟಕದಲ್ಲಿ ಸುಮಾರು 70 ಲಕ್ಷ ಹಳೆಯ ವಾಹನಗಳು ಚಾಲನೆಯಲ್ಲಿವೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇದರಿಂದಾಗಿ 15 ವರ್ಷ ಮೇಲ್ಪಟ್ಟ ಹಳೆಯ ವಾಹನ ಮಾಲೀಕರಿಗೆ ಮತ್ತು 8 ವರ್ಷ ಮೇಲ್ಪಟ್ಟ ವಾಣಿಜ್ಯ ಮತ್ತು ಸಾರಿಗೆ ವಾಹನಗಳ ಮಾಲೀಕರಿಗೆ ಹಸಿರು ತೆರಿಗೆ ಹೊರೆ ಬೀಳಲಿದ್ದರೆ 20 ವರ್ಷ ಮೇಲ್ಪಟ್ಟ ಹಳೆಯ ಖಾಸಗಿ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಕಡ್ಡಾಯವಾಗಿ ಗುಜುರಿ ಸೇರಬೇಕಿದೆ.

ಇನ್ನು ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯಲ್ಲಿ ಹಳೆಯ ವಾಹನಗಳನ್ನು ಮಾಲೀಕರೇ ನೇರವಾಗಿ ಅಧಿಕೃತ ಸ್ಕ್ರ್ಯಾಪೇಜ್ ಕೇಂದ್ರಗಳಲ್ಲಿ ಸ್ಕ್ಯಾಪ್ ಮಾಡಿಸುವ ಮೂಲಕ ಹೊಸ ವಾಹನಗಳ ಖರೀದಿಗೆ ಕೆಲವು ವಿನಾಯ್ತಿ ಪಡೆದುಕೊಳ್ಳಬಹುದಾಗಿದ್ದು, ಹೊಸ ನೀತಿಯನ್ನು 2022ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆಗೊಳಿಸಲಾಗುತ್ತಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹೊಸ ಸ್ಕ್ರ್ಯಾಪಿಂಗ್ ನೀತಿಯಿಂದಾಗಿ ಸಂಗ್ರಹವಾಗುವ ಬಿಡಿಭಾಗಗಳ ಮರುಬಳಕೆಯ ಪ್ರಕ್ರಿಯೆ ಹೆಚ್ಚಳವಾಗುವುದರಿಂದ ಹೊಸ ವಾಹನಗಳ ಬೆಲೆ ಕೂಡಾ ಕಡಿತವಾಗಲಿದ್ದು, ಸಾರಿಗೆ ಇಲಾಖೆಯ ಸಚಿವರ ಮಾಹಿತಿಯೆಂತೆ ಹೊಸ ವಾಹನಗಳ ಉತ್ಪಾದನಾ ವೆಚ್ಚವು ಪ್ರಸ್ತುತ ಮಾರುಕಟ್ಟೆಗಿಂತಲೂ ಶೇ. 20ರಿಂದ ಶೇ.30 ರಷ್ಟು ಇಳಿಕೆಯಾಗುವ ನೀರಿಕ್ಷೆಯಿಟ್ಟುಕೊಳ್ಳಲಾಗಿದೆ.


Click it and Unblock the Notifications