ಹಳೆಯ ವಾಹನಗಳಿಗೆ ಹಸಿರು ತೆರಿಗೆ: ಕರ್ನಾಟಕದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿದಾರರು..
ದೇಶಾದ್ಯಂತ ಹೆಚ್ಚುತ್ತಿರುವ ವಾಯುಮಾಲಿನ್ಯ ಪ್ರಮಾಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರವು ಹಸಿರು ತೆರಿಗೆ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, 8 ವರ್ಷ ಮೇಲ್ಪಟ್ಟ ಸಾರಿಗೆ ವಾಹನಗಳಿಗೆ ಮತ್ತು 15 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳಿಗೆ ಹಸಿರು ತೆರಿಗೆ ವಿಧಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.

ವಾಯುಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಹಳೆಯ ವಾಹನಗಳಿಗೆ ಹಸಿರು ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ಕೇಂದ್ರ ರಸ್ತೆಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಅನುಮೋದನೆ ನೀಡಿದ್ದು, ಹೊಸ ಹಸಿರು ತೆರಿಗೆ ಅಧಿಸೂಚನೆಯನ್ನು ಅಧಿಕೃತವಾಗಿ ಹೊರಡಿಸುವ ಮುನ್ನ ಹೊಸ ಪ್ರಸ್ತಾವನೆಯ ಕುರಿತು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅಭಿಪ್ರಾಯ ಸಂಗ್ರಹಸಲಾಗುತ್ತಿದೆ.

ಹೊಸ ಹಸಿರು ತೆರಿಗೆ ನೀತಿಯ ಮೂಲಕ ಮಾಲಿನ್ಯ ಉಂಟುಮಾಡುವ ಹಳೆಯ ವಾಹನಗಳ ಬಳಕೆಯನ್ನು ತಡೆಯಲು ಸಾಕಷ್ಟು ಸಹಕಾರಿಯಾಗಲಿದ್ದು, ಹೊಸ ಪ್ರಸ್ತಾವನೆಗೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ.

ಹಸಿರು ತೆರಿಗೆಯನ್ನು 8 ವರ್ಷದ ಮೇಲ್ಪಟ್ಟ ಸಾರಿಗೆ ವಾಹನಗಳ ಫಿಟ್‌ನೆಸ್ ಪ್ರಮಾಣ ಪತ್ರ ನವೀಕರಿಸುವ ಸಂದರ್ಭದಲ್ಲಿ ಮತ್ತು 15 ವರ್ಷ ಮೇಲ್ಪಟ್ಟ ವೈಯಕ್ತಿಕ ಬಳಕೆಯ ವಾಹನಗಳ ಆರ್‌ಸಿ(ನೋಂದಣಿ ಪ್ರಮಾಣಪತ್ರ) ನವೀಕರಿಸುವ ಸಂದರ್ಭದಲ್ಲಿ ಶೇ.10 ರಿಂದ ಶೇ. 25 ರಷ್ಟು ಹೆಚ್ಚಳ ಮಾಡಬಹುದಾಗಿದೆ.

ಕೇಂದ್ರ ಸರ್ಕಾರವು ವಿಧಿಸಲು ನಿರ್ಧರಿಸಿರುವ ಹಸಿರು ತೆರಿಗೆ ಪಟ್ಟಿಗೆ ದೇಶಾದ್ಯಂತ ಸುಮಾರು ನಾಲ್ಕು ಕೋಟಿ ವಾಹನಗಳು ಹಸಿರು ತೆರಿಗೆ ವ್ಯಾಪ್ತಿಯಲ್ಲಿ ಬರಲಿದ್ದು, ಇದರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಹಳೆಯ ವಾಹನಗಳಿರುವುದನ್ನು ಕೇಂದ್ರ ಸಾರಿಗೆ ಇಲಾಖೆಯ ಡೇಟಾದಲ್ಲಿ ಬಹಿರಂಗವಾಗಿದೆ. ವಾಹನ ಸಂಖ್ಯೆಗಳ ಡಿಜಿಟಲೀಕರಣದ ಪ್ರಕಾರ, ಕರ್ನಾಟಕದಲ್ಲಿ ಸುಮಾರು 70 ಲಕ್ಷ ಹಳೆಯ ವಾಹನಗಳು ಚಾಲನೆಯಲ್ಲಿವೆ.

ತದನಂತರ ಉತ್ತರಪ್ರದೇಶದಲ್ಲಿ 56.54 ಲಕ್ಷ, ದೆಹಲಿಯಲ್ಲಿ 49.93 ಲಕ್ಷ, ಕೇರಳದಲ್ಲಿ 34.64 ಲಕ್ಷ, ತಮಿಳುನಾಡಿನಲ್ಲಿ 33.43 ಲಕ್ಷ, ಪಂಜಾಬ್‌ನಲ್ಲಿ 25.38 ಲಕ್ಷ ಮತ್ತು ಪಶ್ಚಿಮ ಬಂಗಾಳದಲ್ಲಿ 22.69 ಲಕ್ಷ ಹಳೆಯ ವಾಹನಗಳಿವೆ.

ನಾಲ್ಕು ಕೋಟಿ ಹಳೆಯ ವಾಹನಗಳ ಪೈಕಿ ಸುಮಾರು ಎರಡು ಕೋಟಿ ವಾಹನಗಳು 20 ವರ್ಷಕ್ಕಿಂತ ಹಳೆಯದಾದ ವಾಹನಗಳಿದ್ದು, ಇವು ಪ್ರಮುಖ ಮಾಹಾನಗರಗಳಲ್ಲಿನ ಮಾಲಿನ್ಯ ಉತ್ಪತ್ತಿಗೆ ಪ್ರಮುಖ ಕಾರಣವಾಗಿವೆ.

ಈ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಯು ಹಳೆಯ ವಾಹನಗಳಿಗೆ ಹಸಿರು ತೆರಿಗೆ ವಿಧಿಸುವ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಿದ್ದು, ಅವಧಿ ಮೀರಿದ ವಾಹನಗಳನ್ನು ಗುಜುರಿ ನೀತಿ ಅಡಿ ವಾಹನ ಓಡಾಟಕ್ಕೆ ಬ್ರೇಕ್ ಹಾಕಲಿದೆ.

ಕೇಂದ್ರ ಸಾರಿಗೆ ಇಲಾಖೆಯು 15 ವರ್ಷ ಮೇಲ್ಪಟ್ಟ ವೈಯಕ್ತಿಕ ಬಳಕೆಯ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಿಗೆ ಅನುಗುಣವಾಗಿ ಪ್ರತ್ಯೇಕ ದರ ವಿಧಿಸಲಿದ್ದು, ವಾಣಿಜ್ಯ ವಾಹನಗಳು ಸಾಮಾನ್ಯವಾಗಿ ಡೀಸೆಲ್ ಮಾದರಿಗಳಾಗಿರುವುದರಿಂದ ವಾಣಿಜ್ಯ ವಾಹನಗಳ ತೆರಿಗೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಜೊತೆಗೆ ಹೆಚ್ಚು ಮಾಲಿನ್ಯವನ್ನು ಹೊಂದಿರುವ ನಗರಗಳಿಗೆ ಅನುಗುಣವಾಗಿಯು ಹಳೆಯ ವಾಹನಗಳ ಮರುನೋಂದಣಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರದ ಶುಲ್ಕ ಸಹ ಏರಿಳಿತವಾಗಲಿದ್ದು, ಮಾಹಾನಗರಗಳಲ್ಲಿ ವಾಹನಗಳಿಗೆ ಒಂದು ಮಾದರಿ ಮತ್ತು ಎರಡನೇ ಹಂತದ ನಗರಗಳಲ್ಲಿನ ಹಳೆಯ ವಾಹನಗಳ ಹಸಿರು ತೆರಿಗೆ ದರವು ಏರಿಳಿತವಾಗಲಿದೆ.

ಇನ್ನ ಹಸಿರು ತೆರಿಗೆಯಲ್ಲಿ ವ್ಯಯಕ್ತಿಕ ಮತ್ತು ವಾಣಿಜ್ಯ ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕ ಬಳಕೆಯ ಬಸ್‌ಗಳಿಗೆ ತೆರಿಗೆ ವಿನಾಯ್ತಿ ದೊರೆಯಲಿದ್ದು, ಹೈಬ್ರಿಡ್, ಎಲೆಕ್ಟ್ರಿಕ್ ವಾಹನಗಳು, ಸಿಎನ್‌ಜಿ, ಎಥೆನಾಲ್, ಎಲ್‌ಪಿಜಿ ಬಳಕೆಯ ವಾಹನಗಳಿಗೂ ಹಸಿರು ತೆರಿಗೆಯಿಂದ ವಿನಾಯ್ತಿ ಸಿಗಲಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಆದರೆ ದೇಶಾದ್ಯಂತ ಅತಿ ಹೆಚ್ಚು ಮಾಲಿನ್ಯದಿಂದ ಬಳಲುತ್ತಿರುವ ಮಹಾನಗರಗಳಲ್ಲಿನ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ರಸ್ತೆ ತೆರಿಗೆಯನ್ನು ಶೇ. 50 ಕ್ಕೆ ಹೆಚ್ಚಳ ಮಾಡುವ ಪ್ರಸ್ತಾವನೆಯು ವಾಹನ ಮಾಲೀಕತ್ವವನ್ನು ಮತ್ತಷ್ಟು ದುಬಾರಿಯಾಗಿಸಲಿದೆ.

ಕೃಷಿ ವಾಹನಗಳಿಗೆ ವಿನಾಯ್ತಿ
ಹಸಿರು ತೆರಿಗೆ ಪ್ರಸ್ತಾವನೆಯಲ್ಲಿ ಕೃಷಿ ಚಟುವಟಿಕೆಯ ಪ್ರಮುಖ ಭಾಗವಾಗಿರುವ ಟ್ರ್ಯಾಕ್ಟರ್ ಮತ್ತು ಇತರೆ ಕೃಷಿ ಸಂಬಂಧಿತ ವಾಹನಗಳಿಗೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದ್ದು, ಹಸಿರು ತೆರಿಗೆ ಮೂಲಕ ಸಂಗ್ರಹಿಸಿದ ಆದಾಯವನ್ನು ಪ್ರತ್ಯೇಕ ಖಾತೆ ಮೂಲಕ ಮಾಲಿನ್ಯ ನಿಯಂತ್ರಣ ಯೋಜನೆಗಳಿಗಾಗಿಯೇ ಬಳಕೆ ಮಾಡಲು ನಿರ್ಧರಿಸಿದೆ.

ಹೊಸ ಪ್ರಸ್ತಾವನೆಯು ಮುಂಬರುವ 2022ರ ಎಪ್ರಿಲ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದ್ದು, ವಿವಿಧ ರಾಜ್ಯ ಸರ್ಕಾರಗಳ ಸಲಹೆಗಳ ಆಧಾರದ ಮೇಲೆ ಹೊಸ ತೆರಿಗೆ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತರುವ ಮೂಲಕ ಕಡ್ಡಾಯವಾಗಿ ಜಾರಿಗೆ ತರಲಾಗುತ್ತದೆ.


Click it and Unblock the Notifications