ದಸರಾ ಮತ್ತು ದೀಪಾವಳಿ ನಂತರವೂ ಟಾಟಾ ಕಾರುಗಳಿಗೆ ಭರ್ಜರಿ ಬೇಡಿಕೆ
ಟಾಟಾ ಮೋಟಾರ್ಸ್ ಕಂಪನಿಯು 2020ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಾಟಾ ಕಂಪನಿಯು ಕಳೆದ ವರ್ಷಕ್ಕಿಂತಲೂ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

ದಸರಾ ಮತ್ತು ದೀಪಾವಳಿ ನಂತರವೂ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ನವೆಂಬರ್ ಅವಧಿಯಲ್ಲಿ ಮಾರಾಟಕ್ಕಿಂತ ಡಿಸೆಂಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ. 9ರಷ್ಟು ಮುನ್ನಡೆ ಕಾಯ್ದುಕೊಂಡಿದ್ದರೆ, 2019ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟಕ್ಕಿಂತಲೂ ಶೇ.84 ರಷ್ಟು ಹೆಚ್ಚು ಬೆಳವಣಿಗೆ ಸಾಧಿಸಿದೆ.

2019ರ ಡಿಸೆಂಬರ್ ಅವಧಿಯಲ್ಲಿ 12,785 ಯನಿಟ್ ಕಾರುಗಳನ್ನು ಮಾರಾಟ ಮಾಡಿದ್ದ ಟಾಟಾ ಕಂಪನಿಯು 2020ರ ಡಿಸೆಂಬರ್‌ನಲ್ಲಿ 23,546 ಯುನಿಟ್ ಮಾರಾಟ ಮಾಡುವ ಮೂಲಕ ಶೇ.84 ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ತಿಂಗಳ ವಾಹನ ಮಾರಾಟದಲ್ಲಿ ಶೇ.9 ರಷ್ಟು ಬೆಳವಣಿಗೆ ಸಾಧಿಸಿರುವ ಟಾಟಾ ಕಂಪನಿಯು 2020 ನವೆಂಬರ್ ಅವಧಿಯಲ್ಲಿ 21,640 ಯನಿಟ್ ಕಾರು ಮಾರಾಟವನ್ನು ಹಿಂದಿಕ್ಕಿ ಡಿಸೆಂಬರ್ ಅವಧಿಯಲ್ಲಿ 23,546 ಯುನಿಟ್ ಮಾರಾಟ ಮಾಡಿದೆ.

ಈ ಮೂಲಕ ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ ಮೂರನೇ ಸ್ಥಾನಕ್ಕೇರಿರುವ ಟಾಟಾ ಕಂಪನಿಯು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮೂಲಕ ಪ್ರತಿ ತಿಂಗಳು 40 ಸಾವಿರ ಯುನಿಟ್ ಮಾರಾಟ ಗುರಿಹೊಂದಿದೆ. ಟಾಟಾ ಬಿಡುಗಡೆ ಮಾಡುವ ಪ್ರಮುಖ ಕಾರುಗಳಲ್ಲಿ ಆಲ್‌ಟ್ರೊಜ್ ಟರ್ಬೋ ಪೆಟ್ರೋಲ್, ಗ್ರಾವಿಟಾಸ್ ಎಸ್‌ಯುವಿ, ಮೈಕ್ರೊ ಎಸ್‌ಯುವಿ ಕಾರುಗಳು ಪ್ರಮುಖವಾಗಿವೆ.

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್‌ನಲ್ಲಿ ಪೆಟ್ರೋಲ್ ಟರ್ಬೋ ಆವೃತ್ತಿಯನ್ನು ಇದೇ ತಿಂಗಳು 13ರಂದು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರಿನ ಟೀಸರ್ ಅನಾವರಣಗೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಆರಂಭಿಸಿದೆ.

ಹೊಸ ಆಲ್‌ಟ್ರೊಜ್ ಟರ್ಬೋ ವರ್ಷನ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಯಾದ ಹ್ಯುಂಡೈ ಐ20 ಟರ್ಬೋ ಮತ್ತು ಮಾರುತಿ ಸುಜುಕಿ ಬಲೆನೊ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಹೊಸ ಕಾರು ಮಾದರಿಯು ಆಕರ್ಷಕ ಬೆಲೆಯೊಂದಿಗೆ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮ ಪರ್ಫಾಮೆನ್ಸ್ ಮತ್ತು ವಿವಿಧ ಹೊಸ ತಾಂತ್ರಿಕ ಅಂಶಗಳನ್ನು ಹೊಂದಿರಲಿದೆ.

ಸದ್ಯ ಆಲ್‌ಟ್ರೊಜ್ ಕಾರಿನಲ್ಲಿ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಫೋರ್ ಸಿಲಿಂಡರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಪೆಟ್ರೋಲ್ ಎಂಜಿನ್ ಅನ್ನು ಟಿಯಾಗೋದಿಂದ ಮತ್ತು ಡೀಸೆಲ್ ಎಂಜಿನ್ ಅನ್ನು ನೆಕ್ಸಾನ್ ಕಾರಿನಿಂದ ಎರವಲು ಪಡೆಯಲಾಗಿದೆ.

ಹಾಗೆಯೇ ಟಾಟಾ ಹೊಸ OMEGA ಕಾರು ಉತ್ಪಾದನಾ ತಂತ್ರಜ್ಞಾನವು ಹೊಸ ಕಾರುಗಳ ಅಭಿವೃದ್ದಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಹೊಸ ಕಾರುಗಳಲ್ಲಿ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯುತ್ತಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಪ್ಲ್ಯಾಟ್‌ಫಾರ್ಮ್ ಅಡಿ ಬಿಡುಗಡೆಯಾಗುತ್ತಿರುವ ಗ್ರಾವಿಟಾಸ್ ಎಸ್‌ಯುವಿ ಹೊಸ ಕಾರು ಕೂಡಾ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಖರೀದಿಗೆ ಲಭ್ಯವಿರಲಿದ್ದು, ಪ್ರೀಮಿಯಂ ಫೀಚರ್ಸ್‌ನಲ್ಲೂ ಗಮನಸೆಳೆಯಲಿದೆ.

ಹೊಸ ಕಾರಿನಲ್ಲಿ ಹ್ಯಾರಿಯರ್ ಮಾದರಿಯಲ್ಲೇ 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಹ್ಯಾರಿಯರ್‌ಗಿಂತಲೂ ತುಸು ದುಬಾರಿ ಬೆಲೆಯೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳ ಮಾರಾಟ ಗಮನಸೆಳೆಯಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇವೆರಡು ಹೊಸ ಕಾರುಗಳ ನಂತರ ಹೆಚ್‌ಬಿಎಕ್ಸ್ ಮೈಕ್ರೊ ಎಸ್‌ಯುವಿ ಮತ್ತು ಹ್ಯಾರಿಯರ್ ಪೆಟ್ರೋಲ್ ಮಾದರಿಯು ಟಾಟಾ ಕಾರು ಖರೀದಿದಾರರ ಆಯ್ಕೆಯನ್ನು ಹೆಚ್ಚಿಸಲಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರುಗಳು ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.


Click it and Unblock the Notifications