ಈ ಹೊಸ ಕಾರುಗಳ ಖರೀದಿಗೆ ಗ್ರಾಹಕರು ಕನಿಷ್ಠ ಇಷ್ಟು ದಿನಗಳ ಕಾಲ ಕಾಯಲೇಬೇಕು!
ಗ್ರಾಹಕರು ಯಾವುದೇ ಒಂದು ಹೊಸ ವಾಹನವನ್ನು ಖರೀದಿಸುವ ಮುನ್ನ ಬುಕ್ಕಿಂಗ್ ಸಲ್ಲಿಕೆ ಮಾಡಿ ಇಂತಿಷ್ಟು ದಿನಗಳ ಕಾಯಬೇಕಾದ ಪ್ರಕ್ರಿಯೆ ಸಾಮಾನ್ಯವಾಗಿರುತ್ತದೆ. ಆದರೆ ಬುಕ್ಕಿಂಗ್ ನಂತರ ಕೆಲವು ವಾಹನಗಳು ಅತಿ ಕಡಿಮೆ ಅವಧಿಯಲ್ಲಿ ಗ್ರಾಹಕರಿಗೆ ವಿತರಣೆಯಾದಲ್ಲಿ ಇನ್ನು ಕೆಲವು ವಾಹನಗಳ ಕಾಯುವಿಕೆ ಅವಧಿಯು ಗ್ರಾಹಕರಿಗೆ ಜಿಗುಪ್ಸೆ ಉಂಟು ಮಾಡಬಲ್ಲವು.

ಹೌದು, ಗ್ರಾಹಕರು ಹೊಸ ವಾಹನಗಳ ಖರೀದಿಗಾಗಿ ಬುಕ್ಕಿಂಗ್ ಮಾಡಿದ ನಂತರ ಕೆಲವು ವಾಹನಗಳ ವಿತರಣೆಗೆ ವರ್ಷಾನುಗಟ್ಟಲೇ ಕಾಯಲೇಬೇಕಾದ ಅನಿವಾರ್ಯತೆಗಳಿದ್ದು, ಅತಿ ಹೆಚ್ಚು ಕಾಯುವಿಕೆ ಪಟ್ಟಿಯಲ್ಲಿ ಹಲವಾರು ಜನಪ್ರಿಯ ಕಾರುಗಳಿವೆ. ವಾಹನಗಳ ಕಾಯುವಿಕೆ ಅವಧಿಯು ಉತ್ಪಾದನಾ ಪ್ರಮಾಣವನ್ನು ಅವಲಂಭಿಸಿದ್ದು, ಅತಿ ಹೆಚ್ಚು ಕಾಯಲೇಬೇಕಾದ ಕೆಲವು ಕಾರುಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

01. ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ
ಇ, ಇಎಕ್ಸ್, ಎಸ್, ಎಸ್‌ಎಕ್ಸ್ ಮತ್ತು ಎಸ್‌ಎಕ್ಸ್ (ಒ) ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ ಕಾರು ಮಾದರಿಯಲ್ಲಿ ಇ ಡೀಸೆಲ್ ಮ್ಯಾನುವಲ್ ಆವೃತ್ತಿಯ ಖರೀದಿಗೆ ಹೆಚ್ಚಿನ ಬೇಡಿಕೆಯಿದ್ದು, ಹೈ ಎಂಡ್ ಮಾದರಿಗಳು ಬುಕ್ಕಿಂಗ್ ಮಾಡಿದ ನಂತರ ಅತಿ ಕಡಿಮೆ ಅವಧಿಯಲ್ಲಿ ವಿತರಣೆಯಾದಲ್ಲಿ ಬೆಸ್ ವೆರಿಯೆಂಟ್‌ಗಾಗಿ ಕನಿಷ್ಠ ಎಂಟರಿಂದ ಹತ್ತು ತಿಂಗಳ ಕಾಲ ಕಾಯಬೇಕಾಗುತ್ತದೆ.

ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.17.53 ಲಕ್ಷ ಬೆಲೆ ಹೊಂದಿದ್ದು, ಆರಂಭಿಕ ಇ ಡೀಸೆಲ್ ಮ್ಯಾನುವಲ್ ಆವೃತ್ತಿಯು ರೂ.10.31 ಲಕ್ಷ ಬೆಲೆಯೊಂದಿಗೆ ಹೆಚ್ಚಿನ ಬೇಡಿಕೆ ಹೊಂದಿದ್ದರೂ ಲಾಭಾಂಶದ ದೃಷ್ಠಿಯಿಂದ ಕಂಪನಿಯು ಹೈ ಎಂಡ್ ಮಾದರಿಗಳನ್ನು ಅತಿ ಕಡಿಮೆ ಅವಧಿಯಲ್ಲಿ ವಿತರಿಸುತ್ತವೆ.

02. ನ್ಯೂ ಜನರೇಷನ್ ಮಹೀಂದ್ರಾ ಥಾರ್
ಮಹೀಂದ್ರಾ ಕಂಪನಿಯು ಕಳೆದ ಅಕ್ಟೋಬರ್ ಮೊದಲ ವಾರದಲ್ಲಿ ತನ್ನ ಬಹುನೀರಿಕ್ಷಿತ ಥಾರ್ ಎಸ್‌ಯುವಿ ಕಾರು ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿತ್ತು. ಹೊಸ ಕಾರು ಇದುವರೆಗೆ ಬರೋಬ್ಬರಿ ಸುಮಾರು 40 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ದಿನಂಪ್ರತಿ 200ರಿಂದ 250 ಗ್ರಾಹಕರು ಸರಾಸರಿಯಾಗಿ ಹೊಸ ಕಾರಿಗೆ ಬುಕ್ಕಿಂಗ್ ದಾಖಲಿಸುತ್ತಿದ್ದಾರೆ.

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿರುವ ಮಹೀಂದ್ರಾ ಕಂಪನಿಯು ಕಳೆದ ಡಿಸೆಂಬರ್ ಅವಧಿಯಲ್ಲೇ ಸುಮಾರು 7 ಸಾವಿರ ಯುನಿಟ್ ಕಾರುಗಳಿಗೆ ಬುಕ್ಕಿಂಗ್ ಪಡೆದುಕೊಂಡಿತ್ತು. ಬೇಡಿಕೆ ಹೆಚ್ಚಿರುವ ಹಿನ್ನಲೆಯಲ್ಲಿ ಉತ್ಪಾದನಾ ಪ್ರಮಾಣವನ್ನು ಸಹ ಹೆಚ್ಚಳ ಮಾಡಲಾಗಿದ್ದರೂ ಬುಕ್ಕಿಂಗ್ ನಂತರ ಹೊಸ ಕಾರು ಪಡೆದುಕೊಳ್ಳಲು ಸದ್ಯ ಕನಿಷ್ಠ 5 ತಿಂಗಳಿನಿಂದ 8 ತಿಂಗಳ ತನಕ ಕಾಯಲೇಬೇಕಾಗುತ್ತದೆ.

03. ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ
ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯು ಬಿಡುಗಡೆಗೊಂಡ ಎರಡು ತಿಂಗಳ ಅವಧಿಯಲ್ಲಿ ಸುಮಾರು 40 ಸಾವಿರ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಉತ್ಪಾದನೆಯ ಆಧಾರದ ಮೇಲೆ ಮತ್ತು ವೆರಿಯೆಂಟ್‌ಗಳಿಗೆ ಅನುಗುಣವಾಗಿ ಈ ಕಾರನ್ನು ಖರೀದಿಸಲು ಬುಕ್ಕಿಂಗ್ ನಂತರ ಕನಿಷ್ಠ 4 ತಿಂಗಳಿನಿಂದ 10 ತಿಂಗಳು ಕಾಯಬೇಕಿದೆ.

ಸೆಗ್ಮೆಂಟ್ ಇನ್ ಕ್ಲಾಸ್ ಫೀಚರ್ಸ್ ಹೊಂದಿರುವ ನಿಸ್ಸಾನ್ ಕಾರು ಮಾದರಿಯ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತಿ ಕಡಿಮೆ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸಹ ತನ್ನತ್ತ ಸೆಳೆಯುತ್ತಿದೆ.

04. ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ
ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಕಿಯಾ ಸೊನೆಟ್ ಆವೃತ್ತಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಬಿಡುಗಡೆಯಾದ ಕೆಲ ತಿಂಗಳ ಅವಧಿಯಲ್ಲೇ ಬರೋಬ್ಬರಿ 95 ಸಾವಿರಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿದೆ.

ಬುಕ್ಕಿಂಗ್ ಆಧಾರದ ಮೇಲೆ ಸೊನೆಟ್ ಕಾರಿನ ವಿತರಣೆಯನ್ನು ತೀವ್ರಗೊಳಿಸಿರುವ ಕಿಯಾ ಮೋಟಾರ್ಸ್ ಕಂಪನಿಯು ಇದುವರೆಗೆ ಸುಮಾರು 40 ಸಾವಿರ ಯುನಿಟ್ ವಿತರಣೆ ಮಾಡಿದ್ದು, ಇನ್ನುಳಿದ ಗ್ರಾಹಕರಿಗೂ ಶೀಘ್ರದಲ್ಲೇ ಹೊಸ ಕಾರು ವಿತರಣೆ ಮಾಡುವ ಸಿದ್ದತೆಯಲ್ಲಿದೆ. ಉತ್ಪಾದನೆಯ ಆಧಾರದ ಮೇಲೆ ವೆರಿಯೆಂಟ್ ಮತ್ತು ಪ್ರದೇಶಗಳಿಗೆ ಅನುಗುಣವಾಗಿ ಹೊಸ ಕಾರಿನ ವಿತರಣೆಯ ಅವಧಿ ನಿರ್ಧಾರವಾಗಲಿದ್ದು, ಸೊನೆಟ್ ಕಾರಿಗೆ ಇಂದು ಬುಕ್ಕಿಂಗ್ ಮಾಡಿದ್ದಲ್ಲಿ ಕನಿಷ್ಠ ಒಂದೂವರೆ ತಿಂಗಳಿನಿಂದ ಗರಿಷ್ಠ ನಾಲ್ಕು ತಿಂಗಳು ಕಾಯಲೇಬೇಕಿದೆ.

05. ಟಾಟಾ ಸಫಾರಿ
ಟಾಟಾ ಮೋಟಾರ್ಸ್ ಕಂಪನಿಯು ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಬಿಡುಗಡೆಯ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರು ಬಿಡುಗಡೆಯ ನಂತರ ಇದುವರೆಗೆ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ. ಹೊಸ ಸಫಾರಿ ಎಸ್‌ಯುವಿ ಬಿಡುಗಡೆಯ ನಂತರ ಇದುವರೆಗೆ ಸುಮಾರು 1,700ಕ್ಕೂ ಯುನಿಟ್ ಕಾರುಗಳನ್ನು ವಿತರಣೆ ಮಾಡಿದ್ದು, ಬುಕ್ಕಿಂಗ್ ಪ್ರಕ್ರಿಯೆಗೆ ಅನುಗುಣವಾಗಿ ಉತ್ಪಾದನಾ ಪ್ರಮಾಣವನ್ನು ಸಹ ಹೆಚ್ಚಿಸಲಾಗಿದೆ.

ಹೊಸ ಕಾರು ವಿತರಣೆ ಪಡೆದುಕೊಳ್ಳಲು ಗ್ರಾಹಕರು ಕನಿಷ್ಠ ಒಂದು ತಿಂಗಳಿನಿಂದ ಎರಡೂವರೆ ತಿಂಗಳು ಕಾಲ ಕಾಯಬೇಕಿದ್ದು, ಗ್ರಾಹಕರ ಕಾಯುವಿಕೆ ಅವಧಿಯು ವಿವಿಧ ನಗರಗಳಿಗೆ ಅನುಗುಣವಾಗಿ ನಿಗದಿಯಾಗುತ್ತದೆ.


Click it and Unblock the Notifications