ವಾರದ ಸುದ್ದಿ: ಆಟೋ ಉದ್ಯಮಕ್ಕೆ ಲಾಕ್‌ಡೌನ್ ಹೊಡೆತ, ವಾಹನ ಮಾರಾಟ ಕುಸಿತ, ಆಕ್ಸಿಜನ್ ಉತ್ಪಾದಿಸಲಿದೆ ಎಂಜಿ
ಕೋವಿಡ್ ಅಬ್ಬರದ ನಡುವೆಯೂ ಕಳೆದ ವರ್ಷದ ಕೊನೆಯಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ದೇಶಿಯ ಆಟೋ ಉದ್ಯಮವು ಹಲವಾರು ಹೊಸ ಬದಲಾವಣೆಗಳೊಂದಿಗೆ ದಾಖಲೆ ಪ್ರಮಾಣದ ವಾಹನಗಳ ಮಾರಾಟಕ್ಕೆ ಸಾಕ್ಷಿಯಾಗುತ್ತಿತ್ತು. ಆದರೆ ಇದೀಗ ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ಆಟೋ ಉದ್ಯಮವು ಮತ್ತೆ ನೆಲಕಚ್ಚುವ ಭೀತಿಯಲ್ಲಿದ್ದು, ಈ ವಾರದ ಪ್ರಮುಖ ಸುದ್ದಿಗಳ ಹೈಲೆಟ್ಸ್ ಇಲ್ಲಿ ತಿಳಿಯೋಣ.

ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟ ಕುಸಿತ
ಕಳೆದ ವರ್ಷದ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತೆ ಸಂಕಷ್ಟ ಎದುರಿಸುತ್ತಿದ್ದು, ಮಹಾರಾಷ್ಟ್ರದಲ್ಲಿರುವ ಹಲವು ಆಟೋ ಕಂಪನಿಗಳು ಈಗಾಗಲೇ ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೆ ಇನ್ನು ಕೆಲವು ವಾಹನ ಕಂಪನಿಗಳು ಉದ್ಯೋಗಿಗಳ ಆರೋಗ್ಯದ ದೃಷ್ಠಿಯಿಂದ ಹೊಸ ವಾಹನಗಳ ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಬಂದ್ ಮಾಡಿವೆ.

ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ತಗ್ಗಿರುವುರುವುದು ಭಾರೀ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮಗಳೊಂದಿಗೆ ಕೆಲವೇ ಕೆಲವು ಕಂಪನಿಗಳು ವಾಹನ ಉತ್ಪಾದನೆ ಕೈಗೊಳ್ಳುತ್ತಿವೆ. ವಾಹನ ಮಾರಾಟದಲ್ಲೂ ಕೂಡಾ ಹೊಸ ತಂತ್ರಗಳನ್ನು ಅಳವಡಿಸಿಕೊಂಡು ವೈರಸ್ ಹರಡುವಿಕೆ ತಡೆಯೊಂದಿಗೆ ಉದ್ಯಮ ವ್ಯವಹಾರ ಕೈಗೊಳ್ಳುತ್ತಿದ್ದು, ವಾಹನ ಮಾರಾಟ ಮಳಿಗೆಗಳಿಗೆ ಗ್ರಾಹಕರ ನೇರ ಭೇಟಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಆಕ್ಸಿಜನ್ ಕೊರತೆ ನಿವಾರಿಸಲು ಹೊಸ ಒಪ್ಪಂದ ಮಾಡಿಕೊಂಡ ಎಂಜಿ ಮೋಟಾರ್
ಕೋವಿಡ್ ಹರಡುವಿಕೆಯನ್ನು ತಡೆಯಲು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್-ಶೀಲ್ಡ್‌ಗಳ ಬಳಕೆಯು ಹೆಚ್ಚಿಸಲಾಗುತ್ತಿದ್ದರೂ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಅದರಲ್ಲೂ ತೀವ್ರ ಉಸಿರಾಟದಿಂದ ಬಳಲುತ್ತಿರುವ ಕೋವಿಡ್ ಸೋಂಕಿತರಿಗೆ ಅಗತ್ಯವಾಗಿರುವ ಆಕ್ಸಿಜನ್ ಕೊರತೆಯು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಆಕ್ಸಿಜನ್ ಉತ್ಪಾದನಾ ಕಂಪನಿಗಳಿಗೆ ಉತ್ಪಾದನಾ ಸಾಮಾರ್ಥ್ಯಕ್ಕಿಂತ ಹತ್ತು ಪಟ್ಟು ಬೇಡಿಕೆ ಬರುತ್ತಿದೆ.

ಹೀಗಾಗಿ ಆಕ್ಸಿಜನ್ ಪೂರೈಕೆ ಮಾಡಲು ಪರದಾಡುತ್ತಿರುವ ಆಕ್ಸಿಜನ್ ಕಂಪನಿಗಳು ಸಾಮಾರ್ಥ್ಯ ಮೀರಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಿದ್ದು, ಕೆಲವು ಆಕ್ಸಿಜನ್ ಉತ್ಪಾದನಾ ವಿವಿಧ ಕಂಪನಿಗಳ ಜೊತೆಗೂಡಿ ತಾತ್ಕಾಲಿಕ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ತೆರೆಯುತ್ತಿವೆ. ಇತ್ತೀಚೆಗೆ ಗುಜರಾತ್ ಮೂಲದ ದೇವನಂದನ್ ಗ್ಯಾಸ್ ಪ್ರೈ.ಲಿ ಕಂಪನಿಯು ಕೂಡಾ ಎಂಜಿ ಮೋಟಾರ್ ಜೊತೆಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದು, ವಡೋದರದಲ್ಲಿರುವ ತನ್ನ ಕಾರು ಉತ್ಪಾದನಾ ಘಟಕದಲ್ಲಿ ತಾತ್ಕಾಲಿಕ ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಅವಕಾಶ ನೀಡಿದೆ.

ಡೀಸೆಲ್ ಕಾರುಗಳಲ್ಲಿ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಲಿದೆ ಟೊಯೊಟಾ
ಪೆಟ್ರೋಲ್ ಹೈಬ್ರಿಡ್ ಕಾರುಗಳ ಮಾರಾಟದಲ್ಲಿ ಮುಂಚೂಣಿ ಹೊಂದಿರುವ ಟೊಯೊಟಾ ಕಂಪನಿಯು ಇದೀಗ ಡೀಸೆಲ್ ವಾಹನಗಳಲ್ಲೂ ಹೈಬ್ರಿಡ್ ತಂತ್ರಜ್ಞಾನ ಜೋಡಣೆ ಮಾಡುವ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳನ್ನು ಕೈಗೊಂಡಿದ್ದು, ಹೊಸ ಎಮಿಷನ್ ನಿಯಮಗಳನ್ನು ಪಾಲನೆ ಮಾಡಲು ಹೊಸ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರುವ ಸಿದ್ದತೆಯಲ್ಲಿದೆ.

ಡೀಸೆಲ್ ಕಾರುಗಳಿಂದ ಹೆಚ್ಚುತ್ತಿರುವ ಮಾಲಿನ್ಯವನ್ನು ತಗ್ಗಿಸಲು ಹೊಸ ಹೊಸ ತಂತ್ರಜ್ಞಾನಗಳ ಜೋಡಣೆ ಮಾಡುತ್ತಿರುವ ಟೊಯೊಟಾ ಕಂಪನಿಯು ಮೊದಲ ಹಂತದಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಹೊಸ ತಂತ್ರಜ್ಞಾನವನ್ನು ಜಿಡಿ ಸೀರಿಸ್ ಎಂಜಿನ್ ಪಡೆದುಕೊಂಡಿರುವ ಇನೋವಾ ಕ್ರಿಸ್ಟಾ ಎಂಪಿವಿ, ಫಾರ್ಚೂನರ್ ಎಸ್‌ಯುವಿಗಳು ಪಡೆದುಕೊಳ್ಳಲಿದ್ದು, ಇದು 2.4-ಲೀಟರ್ 2ಜಿಡಿ-ಎಫ್‌ಟಿವಿ ಮತ್ತು 2.8-ಲೀಟರ್ 1ಜಿಡಿ-ಎಫ್‌ಟಿವಿ ಯುನಿಟ್ ಗಳಾಗಿರುತ್ತದೆ.

ಹೊಸ ವಿನ್ಯಾಸದಲ್ಲಿ ಅನಾವರಣಗೊಂಡ ಪೊಲೊ ಫೇಸ್‌ಲಿಫ್ಟ್
ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಫೇಸ್‌ಲಿಫ್ಟೆಡ್ ಪೊಲೊ ಕಾರನ್ನು ಅನಾವರಣಗೊಳಿಸಿದೆ. ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಆರನೇ ತಲೆಮಾರಿನ ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.

ಹೊಸ ಪೊಲೊ ಫೇಸ್‌ಲಿಫ್ಟ್ ಕಾರಿನ ಹೊರ ಭಾಗದಲ್ಲಿ ಮತ್ತು ಒಳಭಾಗದಲ್ಲಿ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಹೊಸ ಪೊಲೊ ಎಂಕ್ಯೂಬಿ ಎಒ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಇದೇ ಪ್ಲಾಟ್ ಫಾರ್ಮ್ ಅಡಿಯಲ್ಲಿ ನ್ಯೂ ಜನರೇಷನ್ ಸ್ಕೋಡಾ ಫ್ಯಾಬಿಯಾ ಕಾರನ್ನು ಉತ್ಪಾದಿಸಲಾಗುತ್ತದೆ. ಇನ್ನು 2021ರ ಫೋಕ್ಸ್‌ವ್ಯಾಗನ್ ಪೊಲೊ ದೊಡ್ಡ ಗಾಲ್ಫ್ ಮಾದರಿಯ ವಿನ್ಯಾಸದೊಂದಿಗೆ ಹೋಲುವಂತಿದೆ.

ಸಿ5 ಏರ್‌ಕ್ರಾಸ್ ವಿತರಣೆಗೆ ಚಾಲನೆ
ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ ಭಾರತದಲ್ಲಿ ತನ್ನ ಮೊದಲ ಕಾರು ಮಾದರಿಯಾದ ಸಿ5 ಏರ್‌ಕ್ರಾಸ್ ಬಿಡುಗಡೆಯೊಂದಿಗೆ ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸಿದ್ದು, ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಿದ್ದ ಹೊಸ ಕಾರಿನ ವಿತರಣೆಯನ್ನು ನಮ್ಮ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 10 ನಗರಗಳಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಹೊಸ ಸಿ5 ಏರ್‌ಕ್ರಾಸ್ ಕಾರು ಮಾದರಿಯು ಮಧ್ಯಮ ಕ್ರಮಾಂಕದ ಐಷಾರಾಮಿ ಎಸ್‌ಯುವಿ ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 29.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 31.90 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಫೀಲ್ ಮತ್ತು ಶೈನ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಟೊಯೊಟಾ
ಮಧ್ಯಮ ಕ್ರಮಾಂಕದ ಕಾರು ಮಾರಾಟದಲ್ಲಿ ತನ್ನದೆ ಜನಪ್ರಿಯತೆ ಹೊಂದಿರುವ ಟೊಯೊಟಾ ಕಂಪನಿಯು ಭಾರತದಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಈ ವರ್ಷಾಂತ್ಯಕ್ಕೆ ಒಟ್ಟು ನಾಲ್ಕು ಹೊಸ ಕಾರುಗಳು ರಸ್ತೆಗಿಳಿಯಲಿವೆ.

2019ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಆಮದು ನೀತಿಯು ವಿದೇಶಿ ಕಾರು ಉತ್ಪಾದನಾ ಕಂಪನಿಗಳಿಗೆ ಸಾಕಷ್ಟು ಸಹಕಾರಿಯಾಗುತ್ತಿದ್ದು, ಹೊಸ ಆಮದು ನೀತಿ ಅಡಿಯಲ್ಲಿ ವಿದೇಶಿ ಕಾರು ಕಂಪನಿಗಳು ವಾರ್ಷಿಕವಾಗಿ 2,500 ಯುನಿಟ್ ಕಾರುಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ದೇಶಿಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವುದು ಟೊಯೊಟಾ ಕಂಪನಿಗೂ ವರವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಬಿವೈಡಿ ಇವಿ ಕಾರು
ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಕಾರ್ಯನಿರ್ವಹಣೆಯಲ್ಲಿರುವ ಚೀನಿ ಮೂಲದ ಜನಪ್ರಿಯ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಸಂಸ್ಥೆಯಾದ ಬಿವೈಡಿ ಕೂಡಾ ತನ್ನ ಬಹುಬೇಡಿಕೆಯ ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಭಾರತದಲ್ಲೂ ಬಿಡುಗಡೆಯ ಯೋಜನೆಯಲ್ಲಿದೆ.

ಚೀನಿ ಮಾರುಕಟ್ಟೆಯಲ್ಲಿ ತನ್ನದೇ ಉತ್ಪಾದನೆಯ ಬ್ಯಾಟರಿ ಸೌಲಭ್ಯ ಹೊಂದಿರುವ ಬಿವೈಡಿ ಕಾರು ಮಾದರಿಗಳು ಭಾರತದಲ್ಲೂ ಗ್ರಾಹಕರನ್ನು ಸೆಳೆಯುವ ಸಿದ್ದತೆಯಲ್ಲಿದ್ದು, ಇ6 ಎಂಪಿವಿ ಕಾರು ಮಾದರಿಯು 41kWh ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 522 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.


Click it and Unblock the Notifications