ಹಬ್ಬದ ಋತುಗಳಲ್ಲೂ ಹೊಸ ವಾಹನಗಳ ಮಾರಾಟದಲ್ಲಿ ಕುಸಿತ ಅನುಭಸಿದ ಆಟೋ ಕಂಪನಿಗಳು
ಕೋವಿಡ್ ಪರಿಣಾಮ ಉಂಟಾಗಿದ್ದ ಆರ್ಥಿಕ ಹಿನ್ನಡೆಯು ವಿವಿಧ ಕ್ಷೇತ್ರಗಳ ಬೆಳವಣಿಗೆ ಮೇಲೆ ವ್ಯತರಿಕ್ತ ಪರಿಣಾಮ ಬೀರಿದ್ದು, ಹಬ್ಬದ ಋತುಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದ ಆಟೋ ಕಂಪನಿಗಳಿಗೆ ಈ ಬಾರಿಯು ಹಿನ್ನಡೆ ಉಂಟಾಗಿದೆ.

ಹೊಸ ವಾಹನ ಮಾರಾಟದಲ್ಲಿನ ಬೆಳವಣಿಗೆ ಕೋವಿಡ್ ಮತ್ತು ಬಿಡಿಭಾಗಗಳ ಪೂರೈಕೆಯಲ್ಲಿ ಉಂಟಾಗಿರುವ ಕೊರತೆ ಕೂಡಾ ಪ್ರಮುಖ ಕಾರಣವಾಗಿದ್ದು, ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ವಾಹನ ಮಾರಾಟವು ಕಳೆದ ವರ್ಷಕ್ಕಿಂತಲೂ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ.

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್(FADA) ಮಾಹಿತಿ ಪ್ರಕಾರ ದೇಶಾದ್ಯಂತ ವಾಹನ ಮಾರಾಟವು ಸತತ ಕುಸಿತ ಬಗೆಗೆ ವರದಿ ಮಾಡಿದ್ದು, ಅಕ್ಟೋಬರ್ ಮತ್ತು ನವೆಂಬರ್ ಅವಧಿಯ ಹಬ್ಬದ ಋತುವಿನಲ್ಲಿ(ಒಟ್ಟು 42 ದಿನಗಳು) ಕಳೆದ ತಿಂಗಳಿಗಿಂತ ಶೇ. 26.64ರಷ್ಟು ವಾಹನ ಮಾರಾಟ ಕುಸಿತ ಕಂಡಿದೆ.

ಹಬ್ಬದ ಋತುಗಳಲ್ಲಿ ಹೆಚ್ಚಿನ ಮಟ್ಟದ ವಾಹನ ಮಾರಾಟ ನೀರಿಕ್ಷೆಯಲ್ಲಿದ್ದ ವಾಹನ ಉತ್ಪಾದನಾ ಕಂಪನಿಗಳಿಗೆ ತೀವ್ರ ಹಿನ್ನಡೆ ಉಂಟಾಗಿದ್ದು, ಕಳೆದ ವರ್ಷದ ಹಬ್ಬದ ಋತುಗಳ ಅವಧಿಗಿಂತ ಪ್ರಸಕ್ತ ವರ್ಷದ ವಾಹನ ಮಾರಾಟವು ಒಟ್ಟಾರೆಯಾಗಿ ಶೇ. 18ರಷ್ಟು ಕುಸಿತ ಕಂಡಿದೆ.

2021ರ ದಸರಾ ಮತ್ತು ಹಬ್ಬದ ಋತುವಿನಲ್ಲಿ ದ್ವಿಚಕ್ರ ವಾಹನ ಮಾರಾಟವು ಶೇ.6 ರಷ್ಟು ಕುಸಿತ ಕಂಡರೆ ಪ್ರಯಾಣಿಕ ಕಾರು ಮಾರಾಟವು ಶೇ. 11 ರಷ್ಟು ಕುಸಿತ ಕಂಡಿದೆ. ಹಾಗೆಯೇ ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನ ಸಂಖ್ಯೆ ಬಳಕೆಯಾಗುತ್ತಿರುವ ಟ್ರ್ಯಾಕ್ಟರ್ ಮಾರಾಟವು ಶೇ.21 ರಷ್ಟು ಕುಸಿತ ಕಂಡಿದೆ.

ಆದರೆ ಈ ವರ್ಷದ ಹಬ್ಬದ ಋತುವಿನ ತ್ರಿ ವಾಹನಗಳು ಮತ್ತು ವಾಣಿಜ್ಯ ವಾಹನಗಳ ಮಾರಾಟ ಮಾತ್ರ ಉತ್ತಮ ಬೆಳವಣಿಗೆ ಕಂಡಿದ್ದು, ತ್ರಿ ಚಕ್ರ ವಾಹನಗಳ ಮಾರಾಟದಲ್ಲಿ ಶೇ. 74 ರಷ್ಟು ಬೆಳವಣಿಗೆ ಕಂಡುಬಂದಿದ್ದರೆ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ. 26ರಷ್ಟು ಬೆಳವಣಿಗೆ ಕಂಡುಬಂದಿದೆ.

ಹೊಸ ವಾಹನಗಳ ಮಾರಾಟವು ಕುಸಿತ ಕಾಣಲು ಒಂದಡೆ ಕೋವಿಡ್ ನಿಂದಾಗಿರುವ ಆರ್ಥಿಕ ಅಸಮತೋಲನಗಳು ಕಾರಣವಾದರೆ ಮತ್ತೊಂದು ಕಡೆಗೆ ಹೊಸ ವಾಹನಗಳಿಗೆ ಅವಶ್ಯವಾಗಿ ಬೇಕಿರುವ ಸೆಮಿ ಕಂಡಕ್ಟರ್ ಪೂರೈಕೆಯಲ್ಲಿನ ಕುಂಠಿತವು ಕೂಡಾ ಉತ್ಪಾದನಾ ಪ್ರಮಾಣದ ಮೇಲೆ ಪರಿಣಾಮ ಬೀರಿದೆ.

ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ವಾಹನಗಳ ಉತ್ಪಾದನೆಗೆ ಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್(ಸೆಮಿಕಂಡಕ್ಟರ್) ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

ಚೀನಿ ಮಾರುಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವನ್ನು ಕಡಿತಗೊಳಿಸುತ್ತಿರುವುದರಿಂದ ಇತರೆ ದೇಶಗಳಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್‌ಗಳಿಲ್ಲದೆ ಪ್ರಮುಖ ಕಾರು ಕಂಪನಿಯು ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿವೆ.

ಎಲೆಕ್ಟ್ರಾನಿಕ್ ಚಿಪ್ ಇಲ್ಲದೆ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲು ಸಾಧ್ಯವಿಲ್ಲ ಎನ್ನಬಹುದು. ಹೊಸ ಕಾರಿನಲ್ಲಿರುವ ಡಿಸ್ ಪ್ಲೇ, ಸ್ಪೀಕರ್, ಸ್ಟ್ಯಾಬಿಲಿಟಿ ಕಂಟ್ರೋಲ್, ಲೈಟಿಂಗ್, ಕಾರ್ ಕನೆಕ್ಟ್ ಫೀಚರ್ಸ್ ಸೇರಿ ಪ್ರಮುಖ ತಾಂತ್ರಿಕ ಸಾಧನಗಳು ಕಾರ್ಯನಿರ್ವಹಿಸಲು ಸೆಮಿ ಕಂಡಕ್ಟರ್ ಅವಶ್ಯವಾಗಿವೆ.

ಕೋವಿಡ್ ಪರಿಣಾಮ ಬಿಡಿಭಾಗಗಳ ಪೂರೈಕೆಯ ಸರಪಳಿಯಲ್ಲಿ ಆಗಿರುವ ಸಮಸ್ಯೆಯೇ ಎಲೆಕ್ಟ್ರಾನಿಕ್ ಚಿಪ್ ಕೊರತೆಗೆ ಪ್ರಮುಖ ಕಾರಣವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೆ ಪೂರೈಕೆಯಾಗಬೇಕಿದ್ದ ಹೆಚ್ಚಿನ ಪ್ರಮಾಣದ ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಲ್ಯಾಪ್‌ಟಾಪ್, ಮೊಬೈಲ್‌ಗಳು ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನ ಉತ್ಪಾದನೆಗೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ.

ಹೀಗಾಗಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವು ವಿಶ್ವಾದ್ಯಂತ ಪ್ರಮುಖ ಕಾರು ಕಂಪನಿಗಳಿಗೆ ಹೊಡೆತ ನೀಡುತ್ತಿದ್ದು, ಭಾರತದಲ್ಲೂ ದಿನಂಪ್ರತಿ ಸಾವಿರಾರು ಕಾರುಗಳನ್ನು ಉತ್ಪಾದಿಸುವ ಪ್ರಮುಖ ಕಾರುಗಳ ಉತ್ಪಾದನೆ ಪ್ರಮಾಣದಲ್ಲಿ ಕಳೆದ ಆರು ತಿಂಗಳಿನಿಂದ ಹಿನ್ನಡೆ ಅನುಭವಿಸುತ್ತಿವೆ.

ಎಲೆಕ್ಟ್ರಾನಿಕ್ ಚಿಪ್ ಅಗತ್ಯ ಪ್ರಮಾಣದ ಸ್ಟಾಕ್ ಇಲ್ಲದಿರುವ ಕಾರಣಕ್ಕೆ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕಗಳು ಕೇವಲ ಒಂದೇ ಶಿಫ್ಟ್ ಮೂಲಕ ಉತ್ಪಾದನೆಯನ್ನು ಕೈಗೊಳ್ಳುತ್ತಿದ್ದು, ಕಳೆದ ತಿಂಗಳು ಕನಿಷ್ಠ ಪ್ರಮಾಣದ ಕಾರು ಉತ್ಪಾದನೆ ಮಾಡಿವೆ.

ಬಿಡಿಬಿಭಾಗಗಳ ಕೊರೆತೆಯು ಹೀಗೆಯೇ ಮುಂದುವರೆದಲ್ಲಿ ಪ್ರಮುಖ ಕಾರು ಉತ್ಪಾದನಾ ಕಂಪನಿಗಳ ನವೆಂಬರ್ ಅವಧಿಯಲ್ಲಿ ಕಾರು ಮಾರಾಟವು ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಗಳಿದ್ದು, ಸೆಮಕಂಡಕ್ಟರ್ ಉತ್ಪಾದನಾ ಕಂಪನಿಗಳ ಮೇಲೆ ಆಟೋ ಉತ್ಪಾದನಾ ಮತ್ತು ಎಲೆಕ್ಟ್ರಿಕ್ ಉತ್ಪನ್ನ ಉತ್ಪಾದನಾ ಕಂಪನಿಗಳು ಒತ್ತಡ ಹೇರುತ್ತಿವೆ.


Click it and Unblock the Notifications