ಇಂಧನ ಬಳಕೆಗೆ ಕಡಿವಾಣ ಹಾಕಲು ಜಾರಿಗೆ ಬರುತ್ತಿದೆ ಇಂಧನ ದಕ್ಷತೆ ಮಾನದಂಡ!
ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಮತ್ತು ಹೆಚ್ಚು ಇಂಧನ ದಕ್ಷ ವಾಹನಗಳನ್ನು ಪರಿಚಯಿಸುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಿವಿಧ ವಾಹನಗಳಿಗೆ ಅನ್ವಯಿಸುವಂತೆ ಇಂಧನ ದಕ್ಷತೆ ಮಾನದಂಡ ಜಾರಿಗೆ ಮುಂದಾಗಿದೆ.
Recommended Video
ಮುಂಬರುವ 2023ರ ಏಪ್ರಿಲ್ 1ರಿಂದಲೇ ಹೊಸ ಇಂಧನ ದಕ್ಷತೆ ಮಾನದಂಡಗಳು ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ.

ವಿವಿಧ ವರ್ಗಗಳ ಲಘು, ಮಧ್ಯಮ ಮತ್ತು ಭಾರೀ ಗಾತ್ರದ ಮೋಟಾರು ವಾಹನಗಳಿಗೆ ಏಪ್ರಿಲ್ 2023ರಿಂದ ಜಾರಿಗೆ ಬರುವಂತೆ ಇಂಧನ ದಕ್ಷತೆ ಮಾನದಂಡಗಳನ್ನು ಅನುಸರಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದ್ದು, ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ 149 ರಲ್ಲಿ ವಿವರಿಸಿದ ಕಾರ್ಯವಿಧಾನದ ಪ್ರಕಾರ ಇಂಧನ ಬಳಕೆಯ ಮಾನದಂಡಗಳ ನಿರಂತರ ಅನುಸರಣೆಯನ್ನು ಪರಿಶೀಲಿಸಲಾಗುವುದು ಎಂದು ಸಾರಿಗೆ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಜುಲೈ 1, 2022 ರಂದು ಕೇಂದ್ರ ಮೋಟಾರ್ ವಾಹನಗಳ ನಿಯಮಗಳ ಅಡಿಯಲ್ಲಿ ಲಘು, ಮಧ್ಯಮ ಮತ್ತು ಭಾರೀ ವಾಹನಗಳಿಗೆ ಇಂಧನ ಬಳಕೆಯ ಮಾನದಂಡಗಳ ಕಡ್ಡಾಯವಾಗಿ ಅನುಸರಿಸಲು ಅಧಿಸೂಚನೆಯನ್ನು ಹೊರಡಿಸಿದೆ.

ವಾಹನದ ನಿಯಮ 115G ನಲ್ಲಿರುವ ತಿದ್ದುಪಡಿಯ ಪ್ರಕಾರ ನಿಯಮ 1989 ರ ಪ್ರಕಾರ ಇಂಧನ ಬಳಕೆಯ ನಿಯಮಗಳು ಭಾರತದಲ್ಲಿ ತಯಾರಾದ ವಾಹನಗಳಿಗೆ ಮಾತ್ರವಲ್ಲ ವಿದೇಶದಿಂದ ಆಮದು ಮಾಡಿಕೊಳ್ಳುವ ವಾಹನಗಳಿಗೆ ಅನ್ವಯಿಸುತ್ತದೆ ಎಂಬುವುದು ಸ್ಪಷ್ಟಪಡಿಸುತ್ತದೆ.

ಒಟ್ಟು 3.5 ಟನ್‌ಗಳಷ್ಟು ತೂಕವಿರುವ ಎಂ1 ವರ್ಗದ ವಾಹನಗಳು (8 ಸೀಟುಗಳನ್ನು ಮೀರದ ಎಲ್ಲಾ ಪ್ರಯಾಣಿಕ ವಾಹನಗಳು) ವಾರ್ಷಿಕ ಇಂಧನ ಬಳಕೆಯ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಜೊತೆಗೆ ಎಫ್‌ಸಿಎಸ್‌ಗೆ ಅನುಗುಣವಾಗಿ ವಾಹನಗಳ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಆದ್ದರಿಂದ ಹೆಚ್ಚು ಇಂಧನ ದಕ್ಷ ವಾಹನಗಳನ್ನು ಪರಿಚಯಿಸುವುದು ಈ ಅಧಿಸೂಚನೆಯ ಉದ್ದೇಶವಾಗಿದೆ ಎಂದು ಸಾರಿಗೆ ಇಲಾಖೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಏಪ್ರಿಲ್ 1, 2023ರ ಅಧಿಸೂಚನೆಯ ದಿನಾಂಕದಿಂದ 30 ದಿನಗಳಲ್ಲಿ ಎಲ್ಲಾ ಉದ್ಯಮಿಗಳು, ಉತ್ಪಾದಕರು ಮತ್ತು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಹೊಸ ಮಾನದಂಡವು ಒಂದೇ ವಾಹನದಲ್ಲಿ ಸರಾಸರಿಯಾಗಿ ಇಷ್ಟೇ ಪ್ರಮಾಣದ ಇಂಧನವನ್ನು ಬಳಕೆ ಮಾಡಬೇಕೆಂಬದನ್ನು ಪ್ರತಿಪಾದಿಸಲಿದ್ದು, ಇದು ಹೆಚ್ಚು ಮಾಲೀನ್ಯ ಉಂಟುಮಾಡುವ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಿದೆ.

ಭಾರತದಲ್ಲಿ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ವಾಯುಮಾಲಿನ್ಯ ಪ್ರಮಾಣವು ಉಲ್ಬಣಗೊಳ್ಳುತ್ತಿದ್ದು, ಇತರೆ ನಗರಗಳಿಂತಲೂ ದೆಹಲಿಯಲ್ಲಿ ಪ್ರತಿ ವರ್ಷ ಚಳಿಗಾಲದಲ್ಲಿ ತೀವ್ರವಾದ ವಾಯು ಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದೆ.

ವಾಯು ಮಾಲಿನ್ಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರವು ಚಳಿಗಾಲದ ಮೊದಲು ಮಾಲಿನ್ಯ ಭೀತಿ ಎದುರಿಸಲು ಸಿದ್ಧತೆ ನಡೆಸುತ್ತಿದ್ದು, ದೆಹಲಿ ಸರ್ಕಾರ ಹೆಚ್ಚು ಮಾಲಿನ್ಯ ಉಂಟು ಮಾಡುವ ವಾಹನಗಳ ನಗರ ಪ್ರವೇಶವನ್ನು ನಿಷೇಧ ಹೇರಲಾಗಿದೆ.

ಚಳಿಗಾಲದ ಸಂದರ್ಭದಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಈ ವರ್ಷದ ಅಕ್ಟೋಬರ್‌ನಿಂದ 2023ರ ಫೆಬ್ರವರಿ ತನಕ ಭಾರೀ ಗಾತ್ರದ ಟ್ರಕ್‌ಗಳು ಮತ್ತು ಇತರ ಭಾರೀ ವಾಹನಗಳ ಪ್ರವೇಶವನ್ನು ದೆಹಲಿ ಸರ್ಕಾರ ನಿಷೇಧಿಸಿದೆ.

ವರದಿಯ ಪ್ರಕಾರ ಪ್ರತಿದಿನ ರಾಜಧಾನಿ ದೆಹಲಿಗೆ ಸುಮಾರು 50 ಸಾವಿರದಿಂದ 60 ಸಾವಿರ ಟ್ರಕ್‌ಗಳು ದೆಹಲಿ ಪ್ರವೇಶಿಸುತ್ತವೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯ ಉಂಟಾಗಲಿದ್ದು, ಇದಕ್ಕಾಗಿ ನಗರದಲ್ಲಿ ಅನುಮತಿಸಲಾಗುವ ಟ್ರಕ್ ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಯ ಟ್ರಕ್‌ಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ಅನುಮತಿಸಲಾಗುವ ವಾಹನಗಳಲ್ಲಿ ಸಿಎನ್‌ಜಿ ಮತ್ತು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳು ಸೇರಿದ್ದು, ಇದಲ್ಲದೆ ತರಕಾರಿ, ಹಣ್ಣುಗಳು, ಆಹಾರ ಧಾನ್ಯಗಳು, ಹಾಲು ಮತ್ತು ಇತೆರ ಆಹಾರ ಪದಾರ್ಥಗಳಂತಹ ಅಗತ್ಯ ವಸ್ತುಗಳನ್ನು ಸಾಗಿಸುವ ಎಲ್ಲಾ ಟ್ರಕ್‌ಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.

ಇದು ಕೇವಲ ದೆಹಲಿ ಕಥೆಯಾದರೆ ಇತರೆ ಪ್ರಮುಖ ಮಾಹಾನಗರಗಳು ಕೂಡಾ ಇಂತಹದೆ ಸಮಸ್ಯೆಯನ್ನು ಎದುರಿಸುತ್ತಿವೆ. ಹೀಗಾಗಿ ಮಾಲಿನ್ಯದ ಮಟ್ಟವನ್ನು ತಗ್ಗಿಸಲು ಇಂಧನ ದಕ್ಷತೆ ಮಾನದಂಡ ಸಹಕಾರಿಯಾಗಲಿದ್ದು, ಮುಂಬರುವ ಏಪ್ರಿಲ್‌ನಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ.


Click it and Unblock the Notifications