ಗ್ರಾಹಕರ ನೀರಿಕ್ಷೆಯೆಂತೆ ಅತಿ ಕಡಿಮೆ ಬೆಲೆಯಲ್ಲಿ ಹೊಸ ಸಿಟ್ರನ್ ಸಿ3 ಕಾರು ಬಿಡುಗಡೆ
ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಹೊಸ ಸಿ3 ಮೈಕ್ರೊ ಎಸ್‌ಯುವಿ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.71 ಲಕ್ಷ ಬೆಲೆ ಹೊಂದಿದೆ.

ಹೊಸ ಸಿಟ್ರನ್ ಸಿ3 ಕಾರು ಮಾದರಿಯು ಲೈವ್ ಮತ್ತು ಫೀಲ್ ಎನ್ನುವ ಎರಡು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರಿನ ಆರಂಭಿಕ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ. 5.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.06 ಲಕ್ಷ ಬೆಲೆ ಹೊಂದಿದೆ.

ಸಿಟ್ರನ್ ಕಂಪನಿಯು ಹೊಸ ಸಿ3 ಮಾದರಿಯಲ್ಲಿ ಸಿಟ್ರನ್ ಕಂಪನಿಯು ಎರಡು ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಆರಂಭಿಕ ಮಾದರಿಯು 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ತ್ರಿ-ಸಿಲಿಂಡರ್ ಪ್ಯೂರ್‌ಟೆಕ್ 82 ಪೆಟ್ರೋಲ್ ಎಂಜಿನ್ ಮತ್ತು ಹೈ ಎಂಡ್ ಮಾದರಿಯಲ್ಲಿ ಟರ್ಬೊ ಚಾರ್ಜ್ ವೈಶಿಷ್ಟ್ಯತೆಯ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಆರಂಭಿಕ ಮಾದರಿಯಲ್ಲಿ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಿದ್ದರೆ ಹೈ ಎಂಡ್ ಮಾದರಿಯಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಿದ್ದು, ಹೊಸ ಕಾರಿನಲ್ಲಿ ಸದ್ಯಕ್ಕೆ ಮ್ಯಾನುವಲ್ ಆಯ್ಕೆ ಮಾತ್ರ ನೀಡುತ್ತಿರುವ ಮುಂಬರುವ ದಿನಗಳಲ್ಲಿ ಆಟೋಮ್ಯಾಟಿಕ್ ಆವೃತ್ತಿ ಪರಿಚಯಿಸುವುದಾಗಿ ಹೇಳಿಕೊಂಡಿದೆ.

5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಆರಂಭಿಕ ಮಾದರಿಯು 82 ಬಿಎಚ್‌ಪಿ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದರೆ 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಟರ್ಬೊ ಪೆಟ್ರೋಲ್ ಆವೃತ್ತಿಯು 110 ಬಿಎಚ್‌ಪಿ, 190 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಲೈವ್ ವೆರಿಯೆಂಟ್‌ನಲ್ಲಿ 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಎಂಜಿನ್ ಮಾತ್ರ ಆಯ್ಕೆ ಲಭ್ಯವಿದ್ದರೆ ಫೀಲ್ ವೆರಿಯೆಂಟ್‌ನಲ್ಲಿ ನ್ಯಾಚುರಲಿ ಆಸ್ಪರೆಟೆಡ್ ಮತ್ತು ಟರ್ಬೊ ಪೆಟ್ರೋಲ್ ಆಯ್ಕೆ ಲಭ್ಯವಿದೆ.

ಸಿ3 ಮಾದರಿಯನ್ನು ಸಿಟ್ರನ್ ಕಂಪನಿಯು ವಿವಿಧ ಹಂತದ ಮಾರುಕಟ್ಟೆ ಅಧ್ಯಯನದೊಂದಿಗೆ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದ್ದು, ಹೊಸ ಕಾರು ಮೈಕ್ರೊ ಎಸ್‌ಯುವಿ ವೈಶಿಷ್ಟ್ಯತೆಯೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಿ3 ಮಾದರಿಯು ಸದ್ಯ ಬಿಗ್ ಹ್ಯಾಚ್‌ಬ್ಯಾಕ್ ಮಾದರಿಗಾಗಿ ಮಾರಾಟಗೊಳ್ಳುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಈ ಹೊಸ ಕಾರನ್ನು ಇದೀಗ ಮೈಕ್ರೊ ಎಸ್‌ಯುವಿ ವಿಭಾಗದಲ್ಲಿ ಪರಿಚಯಿಸಲಾಗಿದೆ.

ಸಿ3 ಮಾದರಿಯನ್ನು ಕಂಪನಿಯು ಸಿ5 ಏರ್‌ಕ್ರಾಸ್ ಮಾದರಿಯಂತೆಯೇ ಶೇ.90ರಷ್ಟು ಸ್ಥಳೀಕರಣದೊಂದಿಗೆ ಉತ್ತಮ ಬೆಲೆಯೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳ ಬದಲಾಗಿ ಭಾರತೀಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ಬಜೆಟ್ ಬೆಲೆಯಲ್ಲಿ ಉತ್ತಮವಾದ ತಾಂತ್ರಿಕ ಅಂಶಗಳೊಂದಿಗೆ ಹೊಸ ಉತ್ಪನ್ನವನ್ನು ಸಿದ್ದಪಡಿಸಿದೆ.

ಹೊಸ ಮೈಕ್ರೊ ಎಸ್‌ಯುವಿಯು ಪ್ರತಿಸ್ಪರ್ಧಿ ಕಾರು ಮಾದರಿಗಿಂತಲೂ ಸಾಕಷ್ಟು ಆಕರ್ಷಕವಾಗಿದ್ದು, ದೊಡ್ಡದಾದ ಗ್ರಿಲ್‌ನೊಂದಿಗೆ ಕ್ರೋಮ್ ಫಿನ್ಸಿಂಗ್ ಹೊಂದಿರುವ ಸಿಟ್ರನ್ ಲೊಗೊ, ವಿಭಜಿತವಾಗಿರುವ ಹೆಡ್‌ಲ್ಯಾಂಪ್, ಡಿಆರ್‌ಎಲ್, ಲೊಗೊಗೆ ಹೊಂದಾಣಿಕೆಯಾಗುವ ಎಕ್ಸ್ ಶೇಫ್ ಡಿಸೈನ್‌ನೊಂದಿಗೆ ಗಮನಸೆಳೆಯುತ್ತದೆ.

ಎರಡು ಬದಿಯಲ್ಲೂ ಸ್ಕಫ್ ಪ್ಲೇಟ್, ಏರ್ ಪ್ಯಾಕೇಟ್ ಡಿಸೈನ್, ಅಲಾಯ್ ವ್ಹೀಲ್, ರೂಫ್ ರೈಲ್ಸ್, ಡ್ಯುಯಲ್ ಟೋನ್ ರೂಫ್, ಸ್ಪ್ಲಿಟ್ ಟೈಲ್ ಲ್ಯಾಂಪ್ ಮತ್ತು 180 ಗ್ರೌಂಡ್ ಕಿಯರೆನ್ಸ್ ಆಕರ್ಷಕವಾಗಿದೆ. ಸಿಟ್ರನ್ ಕಂಪನಿಯು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಬಿಡಿಭಾಗಗಗಳಿಂತಲೂ ಹೆಚ್ಚು ಆಕರ್ಷವಾಗಿರುವ ಮತ್ತು ಚಾಲನೆಗೆ ಪೂರಕವಾದ ಆಕ್ಸೆಸರಿಸ್ ಪ್ಯಾಕೇಜ್ ಸಹ ಪರಿಚಯಿಸಲಿದ್ದು, ಹೊಸ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸುಮಾರು 78 ಆಕ್ಸೆಸರಿಸ್‌ಗಳನ್ನು ಒಳಗೊಂಡಿರಲಿದೆ.

ಹೊಸ ಕಾರಿನ ಕ್ಯಾಬಿನ್ ವೈಶಿಷ್ಟ್ಯತೆಯು ಸಹ ಆಕರ್ಷಕವಾಗಿದ್ದು, ಹೊಸ ಕಾರಿನಲ್ಲಿ 10.25-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‍ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಕ್ವಿಕ್ ಚಾರ್ಜಿಂಗ್ ಯುಎಸ್‌ಬಿ ಸಾಕೆಟ್, ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್, ಕನೆಕ್ಟ್ ಕಾರ್ ಟೆಕ್ನಾಲಜಿ, ಕ್ರೂಸ್ ಕಂಟ್ರೊಲ್, 315 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯವಿದೆ.

ಸಿ3 ಮಾದರಿಯ ಮತ್ತೊಂದು ವಿಶೇಷವೆಂದರೆ ಕಂಪನಿಯು ಬಜೆಟ್ ಕಾರಿನಲ್ಲೂ ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೌಲಭ್ಯವನ್ನು ನೀಡುತ್ತಿದ್ದು, ಎಲ್ಇಡಿ ಡಿಆರ್‌ಎಲ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ಫೋಲ್ಡ್-ಫ್ಲಾಟ್ ಹಿಂದಿನ ಸೀಟ್, ಒನ್-ಟಚ್ ಡೌನ್ ವಿಂಡೋಸ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.

ಇದಲ್ಲದೆ ಹೊಸ ಕಾರಿನಲ್ಲಿ ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಹೊಸ ಕಾರು ಅತ್ಯುತ್ತಮ ಕ್ಯಾಬಿನ್ ಸ್ಥಳಾವಕಾಶದೊಂದಿಗೆ ಹಿಂಬದಿಯ ಪ್ರಯಾಣಿಕರಿಗೆ 653 ಎಂಎಂ ಲೆಗ್‌ರೂಂನೊಂದಿಗೆ 2 ಲೀಟರ್ ಸಾಮರ್ಥ್ಯದ ಡೋರ್ ಪ್ಯಾಕೇಟ್, ಸ್ಮಾರ್ಟ್‌ಫೋನ್ ಹೋಲ್ಡರ್ ಮತ್ತು ಸೆಂಟರ್ ಕನ್ಸೊಲ್ ಹೊಂದಿದೆ.

ಸಿ3 ಕಾರಿನ ಸ್ಪೋರ್ಟಿ ಲುಕ್ ಹೆಚ್ಚಿಸಲು ಡ್ಯುಯಲ್ ಆಕ್ಸೆಂಟ್ ನೀಡುತ್ತಿರುವುದು ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದ್ದು, ಹೊಸ ಕಾರು ಒಟ್ಟು ಆರು ಸಿಂಗಲ್ ಟೋನ್ ಮತ್ತು ನಾಲ್ಕು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿಲಿದೆ.

ಇನ್ನು ಹೊಸ ಕಾರಿನಲ್ಲಿ ಹಲವಾರು ಹೊಸ ಸುರಕ್ಷತಾ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಚಾಲಕ ಮತ್ತು ಪ್ರಯಾಣಿಕರ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಹಿಂದಿನ ಬಾಗಿಲುಗಳಲ್ಲಿ ಚೈಲ್ಡ್ ಲಾಕ್, ಎಂಜಿನ್ ಇಮೊಬಿಲೈಜರ್ ಮತ್ತು ಸ್ಪೀಡ್-ಸೆನ್ಸಿಟಿವ್ ಡೋರ್ ಲಾಕ್ ಸೌಲಭ್ಯಗಳಿವೆ.

ಸಿ3 ಮಾದರಿಯೊಂದಿಗೆ ಹೆಚ್ಚಿನ ಬೇಡಿಕೆಯ ನೀರಿಕ್ಷೆಯಲ್ಲಿರುವ ಕಂಪನಿಯು ಹೊಸ ಕಾರನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಬೆಲೆ ವಿಚಾರವಾಗಿ ಟಾಟಾ ಪಂಚ್ ಮತ್ತು ಮಾರುತಿ ಸುಜುಕಿ ಇಗ್ನಿಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಹೊಸ ಸಿ3 ಕಾರು ಮಾದರಿಗಾಗಿ ಸಿಟ್ರನ್ ಕಂಪನಿಯು ರೂ.21 ಸಾವಿರ ಮುಂಗಡದೊಂದಿಗೆ ಈಗಾಗಲೇ ಬುಕಿಂಗ್ ಸಹ ಆರಂಭಿಸಿದ್ದು, ಕಂಪನಿಯು ಸದ್ಯ ಹೊಸ ಕಾರನ್ನು ದೇಶದ ಪ್ರಮುಖ 10 ನಗರಗಳಲ್ಲಿ ಮಾತ್ರ ಮಾರಾಟ ಮಾಡುತ್ತಿದೆ. ಗ್ರಾಹಕರ ಬೇಡಿಕೆಯನ್ನು ಆಧರಿಸಿ ಕಂಪನಿಯು ಹೊಸ ಕಾರಿನ ಮಾರಾಟವನ್ನು ಇತರೆ ನಗರಗಳಿಗೂ ವಿಸ್ತರಿಸುವ ಯೋಜನೆಯಲ್ಲಿದ್ದು, ಹೊಸ ಕಾರು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.


Click it and Unblock the Notifications








