ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಬಿಡುಗಡೆಯ ಮಾಹಿತಿ ಹಂಚಿಕೊಂಡ ಮಹೀಂದ್ರಾ
ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸಿ ಕಾರಣಾಂತರಗಳಿಂದ ಇವಿ ಕಾರುಗಳ ಉತ್ಪಾಯಿಂದ ತಟಸ್ಥವಾಗಿರುವ ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಕಂಪನಿಯು ನ್ಯೂ ಜನರೇಷನ್ ವೈಶಿಷ್ಟ್ಯತೆ ಹೊಂದಿರುವ ಮೊದಲ ಕಾರು ಮಾದರಿಯ ಬಿಡುಗಡೆಗೆ ಬೃಹತ್ ಯೋಜನೆ ರೂಪಿಸುತ್ತಿದೆ.

ಮಹೀಂದ್ರಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ700, ಎಕ್ಸ್‌ಯುವಿ300, ಬೊಲೆರೊ, ಸ್ಕಾರ್ಪಿಯೋ, ಥಾರ್ ಮಾದರಿಯೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಹೊಂದಿದ್ದು, ಎಸ್‌ಯುವಿ ವಿಭಾಗದಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಎಸ್‌ಯುವಿ ಕಾರುಗಳ ಪಟ್ಟಿಯಲ್ಲಿ ಸಾಮಾನ್ಯ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಮಾದರಿಗಳು ಸಹ ಮಾರುಕಟ್ಟೆ ಪ್ರವೇಶಿಸುತ್ತಿವೆ.

ಮಹೀಂದ್ರಾ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಒಟ್ಟು 13 ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಯೋಜನೆ ಅಡಿ ಎಲೆಕ್ಟ್ರಿಕ್ ಮಾದರಿಯಾದ ಇಎಕ್ಸ್‌ಯುವಿ300 ಮಾದರಿಯು ಕೂಡಾ ಬಿಡುಗಡೆಯಾಗಲಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಹೊಸ ಇಎಕ್ಸ್‌ಯುವಿ(eXUV300) ಕಾರನ್ನು ಮಾರುಕಟ್ಟೆಯಲ್ಲಿನ ಸನ್ನಿವೇಶವನ್ನು ಆಧರಿಸಿ ಇದೀಗ ಬಿಡುಗಡೆ ಮಾಡಲು ಮುಂದಾಗಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದೆ.

ಇ-ಎಕ್ಸ್‌ಯುವಿ300 ಬಿಡುಗಡೆ ಯೋಜನೆ ಕುರಿತಂತೆ 2021-22 ಹಣಕಾಸು ವರ್ಷದ ಅಂತಿಮ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸುವಾಗ ಮಹೀಂದ್ರಾ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಅವರು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಇಎಕ್ಸ್‌ಯುವಿ300 ಮಾದರಿಯನ್ನು ಮುಂದಿನ ವರ್ಷ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯ ಸುಳಿವು ನೀಡಿದ್ದಾರೆ.

2023ರ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಹೊಸ ಇಎಕ್ಸ್‌ಯುವಿ300 ಮಾದರಿಯು ಎಕ್ಸ್‌ಯುವಿ400 ಹೆಸರಿನಲ್ಲಿ ಬಿಡುಗಡೆಯಾಗಲಿದ್ದು, ಹೊಸ ಮಾದರಿಯು ಸಾಮಾನ್ಯ ಮಾದರಿಗಿಂತಲೂ ಹೆಚ್ಚಿನ ಸ್ಥಳಾವಕಾಶ ಹೊಂದಿರಲಿದೆ.

ಹೊಸ ಕಾರು ಈ ವರ್ಷಾಂತ್ಯಕ್ಕೆ ಉತ್ಪಾದನಾ ಮಾದರಿಯು ಅನಾವರಣಗೊಳ್ಳಲಿದ್ದು, 2023ರ ಆರಂಭದಲ್ಲಿ ಅಧಿತೃತವಾಗಿ ಮಾರುಕಟ್ಟೆ ಪ್ರವೇಶಿಸುವುದು ಖಚಿತವಾಗಿದೆ. ಮಹೀಂದ್ರಾ ಕಂಪನಿಯು ಇಎಕ್ಸ್‌ಯುವಿ300 ಬಿಡುಗಡೆಗೂ ಮುನ್ನ ಇಕೆಯುವಿ100 ಎಲೆಕ್ಟ್ರಿಕ್ ಕಾರು ಮಾದರಿಯ ಮಾರಾಟಕ್ಕೆ ಚಾಲನೆ ನೀಡಲಿದ್ದು, ಹೊಸ ಇಎಕ್ಸ್‌ಯುವಿ300 ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಇವಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿ ಟಾಟಾ ನೆಕ್ಸಾನ್ ಇವಿ ಮಾದರಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿದೆ.

ಮಹೀಂದ್ರಾ ಕಂಪನಿಯು ಬಿಡುಗಡೆ ಮಾಡಲಿರುವ ಹೊಸ ಎಂಟು ಎಲೆಕ್ಟ್ರಿಕ್ ಕಾರುಗಳೊಂದಿಗೆ ಐದು ಸಾಮಾನ್ಯ ಕಾರು ಮಾದರಿಗಳು ಸಹ ಬಿಡುಗಡೆಯಾಗಲಿದ್ದು, ಎಲೆಕ್ಟ್ರಿಕ್ ಕಾರುಗಳು 2022ರ ಮಧ್ಯಂತರದಿಂದ ಹಂತ-ಹಂತವಾಗಿ ಮಾರುಕಟ್ಟೆ ಪ್ರವೇಶಿಸಲಿವೆ.

2022ರಿಂದ 2027ರ ತನಕ ಎಂಟು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮಹೀಂದ್ರಾ ಕಂಪನಿಯು ಆರಂಭಿಕವಾಗಿ ಇಕೆಯುವಿ100 ನಂತರ ಇಎಕ್ಸ್‌ಯುವಿ300 ಬಿಡುಗಡೆ ಮಾಡಲಿದ್ದು, ತದನಂತರ ಮಾರುಕಟ್ಟೆಯಲ್ಲಿ ಇತರೆ ಕಾರುಗಳ ಮಾದರಿಗಳ ಎಲೆಕ್ಟ್ರಿಕ್ ಆವೃತ್ತಿಗಳನ್ನು ಪರಿಚಯಿಸಲಿದೆ.

ಡೀಸೆಲ್ ಕಾರುಗಳನ್ನು ತಗ್ಗಿಸಲು ಪೆಟ್ರೋಲ್ ಹೈಬ್ರಿಡ್ ಕಾರು ಮಾದರಿಗಳನ್ನು ಸಹ ಅಭಿವೃದ್ದಿಪಡಿಸುತ್ತಿದ್ದು, ಇಎಕ್ಸ್‌ಯುವಿ300, ಇಕೆಯುವಿ100 ನಂತರ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಯಲಿವೆ.

ಹೊಸ ಇಎಕ್ಸ್‌ಯುವಿ300 ಮಾದರಿಯು ಪ್ರತಿ ಚಾರ್ಜ್‌ಗೆ ಕನಿಷ್ಠ 380 ಕಿ.ಮೀ ನಿಂದ 420 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಟಾಟಾ ನೆಕ್ಸಾನ್ ಇವಿ ಬೆಲೆಗೆ ಸರಿಸಮನಾಗಿ ಬಿಡುಗಡೆ ಹೊಂದಬಹುದಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಸ್ಟ್ಯಾಂಡರ್ಡ್ ಮತ್ತು ಎಕ್ಸ್ಸೆಂಡ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಾಗಬಹುದಾಗಿದೆ.

ಇಕೆಯುವಿ100 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 8.25 ಲಕ್ಷ ಬೆಲೆ ಹೊಂದಿದ್ದು, 15.9kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಕನಿಷ್ಠ 150 ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಇಎಕ್ಸ್‌ಯುವಿ 300 ಮಾದರಿಯು ಹೆಚ್ಚಿನ ಮಟ್ಟದ ಬ್ಯಾಟರಿ ಪ್ಯಾಕ್‌ನೊಂದಿಗೆ ಗರಿಷ್ಠ ಮೈಲೇಜ್ ಪ್ರೇರಣೆ ಹೊಂದಿಲಿದ್ದು, ಇದು 2022ರ ಕೊನೆಯಲ್ಲಿ ಇಲ್ಲವೇ 2023ರ ಆರಂಭದಲ್ಲಿ ಬಿಡುಗಡೆಯಾಗಲಿದೆ.

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ಮಹೀಂದ್ರಾ ಕಂಪನಿಯ ಮಹೀಂದ್ರಾ ಎಲೆಕ್ಟ್ರಿಕ್ ವಿಭಾಗವು ಮತ್ತಷ್ಟು ಹೊಸ ಇವಿ ವಾಹನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ವಾಣಿಜ್ಯ ವಾಹನಗಳ ಮಾದರಿಗಳಂತೆಯೇ ಪ್ರಯಾಣಿಕರ ಎಲೆಕ್ಟ್ರಿಕ್ ವಾಹನ ಮಾದರಿಯ ಮಾರಾಟದಲ್ಲೂ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಇನ್ನು ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಮೇಲೆ ಈಗಾಗಲೇ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಮಹೀಂದ್ರಾ ಕಂಪನಿಯು ಇತ್ತೀಚೆಗೆ ಹೆಚ್ಚುವರಿಯಾಗಿ ರೂ. 3 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಹೊಸ ಬಂಡವಾಳದೊಂದಿಗೆ ಕಂಪನಿಯು ಇದುವರೆಗೆ ಸುಮಾರು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದಂತಾಗಿದೆ.


Click it and Unblock the Notifications