ಹೊಸ ಕಾರುಗಳಲ್ಲಿ 6 ಏರ್‌ಬ್ಯಾಗ್ ಕಡ್ಡಾಯ ನೀತಿಗೆ ಮಾರುತಿ ಸುಜುಕಿ ಅಸಮಾಧಾನ!
ದೇಶಾದ್ಯಂತ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಲ್ಲಿ ಪ್ರಾಣಹಾನಿಯನ್ನು ತಪ್ಪಿಸಲು ಕೇಂದ್ರ ಸರ್ಕಾರವು ಕಠಿಣ ರಸ್ತೆ ನಿಯಮಗಳ ಜೊತೆಗೆ ವಾಹನಗಳ ಗುಣಮಟ್ಟದಲ್ಲೂ ಭಾರೀ ಬದಲಾವಣೆ ತರುತ್ತಿದ್ದು, ಕೇಂದ್ರ ಸರ್ಕಾರವು ಇತ್ತೀಚೆಗೆ ಮುಂಬರುವ ಎಲ್ಲಾ ಹೊಸ ಕಾರು ಮಾದರಿಗಳಲ್ಲಿ ಕಡ್ಡಾಯವಾಗಿ 6 ಏರ್‌ಬ್ಯಾಗ್‌ಗಳನ್ನು ಜೋಡಣೆ ಮಾಡುವ ಬೆಗೆಗೆ ಹೊಸ ಆದೇಶ ನೀಡಿದೆ.

ಕಾರು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುವ ಕೇಂದ್ರ ಸರ್ಕಾರದ ಹೊಸ ನೀತಿಯನ್ನು ಬಹುತೇಕ ಕಾರು ಉತ್ಪಾದನಾ ಕಂಪನಿಗಳು ಸ್ವಾಗತಿಸಿದ್ದು, ಶೀಘ್ರದಲ್ಲಿಯೇ ಪ್ರತಿ ಕಾರು ಮಾದರಿಗಳನ್ನು 6 ಏರ್‌ಬ್ಯಾಗ್ ನಿಯಮಕ್ಕೆ ಬದಲಾಯಿಸುವ ಭರವಸೆ ನೀಡಿವೆ. ಆದರೆ ದೇಶದ ಅಗ್ರ ಕಾರು ಮಾರಾಟ ಕಂಪನಿಯಾಗಿರುವ ಮಾರುತಿ ಸುಜುಕಿ ಮಾತ್ರ ಹೊಸ ನೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಣ್ಣ ಕಾರು ಖರೀದಿಗೆ ಮೇಲೆ ವ್ಯಾಪಕವಾದ ಪರಿಣಾಮ ಬೀರುವ ಬಗೆಗೆ ಕಳವಳ ವ್ಯಕ್ತಪಡಿಸಿದೆ.

ಪ್ರಯಾಣಿಕರ ಸುರಕ್ಷತೆಗೆ ಗರಿಷ್ಠ ಏರ್‌ಬ್ಯಾಗ್ ಅಳವಡಿಕೆಯು ಸ್ವಾಗತರ್ಹವಾದರೂ ಹೊಸ ನಿಯಮ ವಿವಿಧ ಆಯಾಮಗಳಲ್ಲಿ ಸಣ್ಣ ಕಾರು ಮಾರಾಟ ಮೇಲೆ ಭಾರೀ ಹೊಡೆತ ನೀಡುವ ಬಗೆಗೆ ಮಾರುತಿ ಸುಜುಕಿ ತಗಾದೆ ತೆಗೆದಿದೆ.

ಒಂದು ವೇಳೆ ಎಂಟ್ರಿ ಲೆವಲ್ ಮಾದರಿಯಲ್ಲೂ 6 ಏರ್‌ಬ್ಯಾಗ್ ಅಳವಡಿಸುವುದಾದರೆ ಅದರ ಬೆಲೆ ಈಗಿರುವ ಬೆಲೆಗಿಂತಲೂ ಶೇ. 30 ರಷ್ಟು ಹೆಚ್ಚಳವಾಗಬಹುದು ಎನ್ನಲಾಗಿದ್ದು, ಇದರಿಂದ ಕಾರು ಖರೀದಿ ಕನಸು ಹೊಂದಿರುವ ಸಣ್ಣ ಕಾರು ಖರೀದಿದಾರಿಗೆ ಇದು ಮಾರಕವಾಗಲಿದೆ ಎಂದಿದೆ.

ಸದ್ಯ ಮಾರುಕಟ್ಟೆಯಲ್ಲಿ ಕಳೆದ ವರ್ಷದಿಂದಲೇ ಪ್ರತಿ ಕಾರು ಮಾದರಿಯಲ್ಲೂ ಮುಂಭಾಗದಲ್ಲಿ ಎರಡು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗಿದ್ದು, ಡ್ಯುಯಲ್ ಏರ್‌ಬ್ಯಾಗ್ ಸೇರಿದಂತೆ ಸೇಫ್ಟಿ ಫೀಚರ್ಸ್ ಜಾರಿ ನಂತರವೇ ಎಂಟ್ರಿ ಲೆವಲ್ ಕಾರುಗಳ ಬೆಲೆ ಕಳೆದ ಕೆಲ ತಿಂಗಳಿನಲ್ಲಿ ಸುಮಾರು ರೂ.40 ಸಾವಿರದಿಂದ ರೂ. 70 ಸಾವಿರದಷ್ಟು ಹೆಚ್ಚಳವಾಗಿವೆ.

ಇದೀಗ ಹೊಸದಾಗಿ ಕಡ್ಡಾಯ ಮಾಡಲಾಗಿರುವ 6 ಏರ್‌ಬ್ಯಾಗ್ ನೀತಿಯಿಂದ ಹೊಸ ಕಾರುಗಳ ಬೆಲೆ ಮತ್ತಷ್ಟು ಹೆಚ್ಚಳವಾಗಲಿದ್ದು, ಆರು ಏರ್‌ಬ್ಯಾಗ್ ಸೌಲಭ್ಯ ಜೋಡಣೆಗಾಗಿ ಸದ್ಯ ಉತ್ಪಾದನೆಯಲ್ಲಿರುವ ಪ್ಲ್ಯಾಟ್‌ಫಾರ್ಮ್‌ಗಳನ್ನು ಸಾಕಷ್ಟು ಉನ್ನತೀಕರಿಸುವ ಅವಶ್ಯವಿದೆ.

ಜೊತೆಗೆ ಆರು ಏರ್‌ಬ್ಯಾಗ್ ಜೋಡಣೆಗಾಗಿ ಕಾರುಗಳ ಇಂಟಿರಿಯರ್ ಸೌಲಭ್ಯವನ್ನು ಸಾಕಷ್ಟು ಬದಲಾವಣೆಗೊಳಿಸಬೇಕಿದ್ದು, ಏರ್‌ಬ್ಯಾಗ್ ಕಾರ್ಯಕ್ಷಮತೆ ಹೆಚ್ಚಿಸಲು ಅದಕ್ಕೆ ಪೂರಕವಾದ ತಂತ್ರಜ್ಞಾನ ಮತ್ತು ವಿನ್ಯಾಸಗಳನ್ನು ಅಮೂಲಾಗ್ರವಾಗಿ ಬದಲಾವಣೆಗೊಳಿಸಬೇಕಾಗುತ್ತದೆ.

ಅಂತಿಮ ಒಂದು ಎಂಟ್ರಿ ಲೆವಲ್ ಕಾರಿನ ಬೆಲೆಯು ಕನಿಷ್ಠವೆಂದರೂ ಒಂದೇ ಬಾರಿಗೆ ರೂ. 80 ಸಾವಿರದಿಂದ ರೂ.1.50 ಲಕ್ಷದ ತನಕ ಹೆಚ್ಚಳವಾಗಬಹುದಾಗಿದ್ದು, ಇದು ಈಗಾಗಲೇ ಹೆಚ್ಚಿನ ಏರ್‌ಬ್ಯಾಗ್ ಹೊಂದಿರುವ ಕಾರು ಮಾದರಿಗಳಿಗೆ ಯಾವುದೇ ಪರಿಣಾಮ ಬೀರದಿದ್ದರೂ ಡ್ಯುಯಲ್ ಏರ್‌ಬ್ಯಾಗ್ ಫೀಚರ್ಸ್ ಹೊಂದಿರುವ ಮಾರುತಿ ಸುಜುಕಿ ನಿರ್ಮಾಣದ ಪ್ರಮುಖ ಎಂಟ್ರಿ ಲೆವಲ್ ಮಾದರಿಗಳಿಗೆ ತೀವ್ರ ಹಿನ್ನಡೆ ಉಂಟುಮಾಡಬಹುದು.

ದೇಶಾದ್ಯಂತ ಸದ್ಯ ಕಾರು ಮಾರಾಟದಲ್ಲಿನ ಮೊದಲ ಹತ್ತು ಸ್ಥಾನದಲ್ಲಿ ಮೊದಲ ಆರು ಸ್ಥಾನದಲ್ಲಿ ಅಧಿಪತ್ಯ ಹೊಂದಿರುವ ಮಾರುತಿ ಸುಜುಕಿಗೆ ಸಣ್ಣ ಕಾರುಗಳಿಗೆ ಪ್ರಮುಖ ಜೀವಾಳವಾಗಿದ್ದು, ಹೊಸ ನೀತಿ ಅಳವಡಿಕೆಯಿಂದ ಬೆಲೆ ಏರಿಕೆಯಾಗಿ ಮಾರಾಟ ಕುಸಿಯುವ ಆತಂಕ ಹೊಂದಿದೆ.

ಸದ್ಯ ಕೇಂದ್ರ ಸರ್ಕಾರವು ಕಾರು ಸುರಕ್ಷತೆಯನ್ನು ಖಾತ್ರಿಪಡಿಸಲು ಗ್ಲೋಬಲ್ ಕ್ರ್ಯಾಶ್ ಟೆಸ್ಟಿಂಗ್ ಮೂಲಕ #SaferCarsForIndia ಅಭಿಯಾನ ಮೂಲಕ ಕಳಪೆ ಕಾರು ಮಾದರಿಗಳಿಗೆ ಬ್ರೇಕ್ ಹಾಕುತ್ತಿದ್ದು, 6 ಏರ್‌ಬ್ಯಾಗ್ ನಿಯಮದಿಂದ ಮತ್ತಷ್ಟು ಕಾರು ಮಾರಾಟವು ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.

ಆರು ಏರ್‌ಬ್ಯಾಗ್ ಜೋಡಣೆಗಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳನ್ನು ಉನ್ನತೀಕರಿಸುವ ಬದಲಾಗಿ ಹೊಸ ಕಾರು ಮಾದರಿಗಳನ್ನೇ ಬಿಡುಗಡೆ ಮಾಡುವ ಬಗೆಗೆ ಕೆಲ ಕಾರು ಕಾರು ಕಂಪನಿಗಳು ಎದುರು ನೋಡುತ್ತಿವೆ.

ಇನ್ನು ಹೊಸ ಕಾರುಗಳ ಖರೀದಿಯ ವೇಳೆ ಗ್ರಾಹಕರು ಅಗ್ಗದ ಬೆಲೆಯ ಮಾದರಿಗಳಿಗೆ ಮಾದರಿಗಳಿಂತಲೂ ಸುರಕ್ಷಿತ ಮಾದರಿಗಳಿಗೆ ಒತ್ತು ನೀಡುತ್ತಿರುವುದು ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದು, ಇತ್ತೀಚೆಗೆ ಮಾರುಕಟ್ಟೆ ಪ್ರವೇಶಿಸಿರುವ ಪ್ರಮುಖ ಕಾರು ಮಾದರಿಗಳು ಸುರಕ್ಷತೆಯಲ್ಲಿ ಗಮನಸೆಳೆಯುತ್ತಿವೆ.

ಆಧುನಿಕ ಕಾಲಘಟ್ಟದಲ್ಲಿ ಹೊಸ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಗೂ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದ್ದು, ಇದರ ಭಾಗವಾಗಿ ಕಾರುಗಳ ಸುರಕ್ಷತಾ ಗುಣಮಟ್ಟವು ಸಾಕಷ್ಟು ಸುಧಾರಿಸಿದೆ. ವಾಹನಗಳ ಸುರಕ್ಷತೆ ಖಚಿತಪಡಿಸಲು ಭಾರತ ಸರ್ಕಾರವು 2019ರ ಅಕ್ಟೋಬರ್ 1ರಿಂದ ಪ್ರತಿ ಹೊಸ ಕಾರಿಗೂ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಕಡ್ಡಾಯಗೊಳಿಸಿದ್ದು, ಸುರಕ್ಷತೆ ಇಲ್ಲದ ಕಾರುಗಳಿಗೆ ಮಾರಾಟಕ್ಕೆ ಬ್ರೇಕ್ ಹಾಕಲಾಗುತ್ತಿದೆ.

ಹೊಸ ವಾಹನಗಳಲ್ಲಿ ಗರಿಷ್ಠ ಸುರಕ್ಷತೆಗಾಗಿ ಅಂತರ್‌ರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, #SAFERCARSFORINDIA ಅಭಿಯಾನದಡಿ ಹೊಸ ಕಾರುಗಳ ಸುರಕ್ಷತೆಯನ್ನು ಸುಧಾರಿಸಲಾಗುತ್ತಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಸುರಕ್ಷಾ ಕಾರು ಮಾದರಿಯಾಗಿ ಗುರುತಿಸಲು ಕನಿಷ್ಠ 3 ಅಂಕಗಳ ಅವಶ್ಯಕತೆಯಿದ್ದು, 5 ಅಂಕಗಳನ್ನು ಗಿಟ್ಟಿಸಿಕೊಂಡಿರುವ ಕಾರುಗಳು ಅತ್ಯುತ್ತಮ ಕಾರು ಮಾದರಿಯಾಗಿ ಗುರುತಿಸಲಾಗುತ್ತದೆ. ಇತ್ತೀಚೆಗೆ ನಡೆಸಲಾದ 2022ರ ಮೊದಲ ಕ್ರ್ಯಾಶ್ ಟೆಸ್ಟ್‌ನಲ್ಲಿ ಪ್ರಮುಖ ಕಾರುಗಳ ಸುರಕ್ಷತೆಯನ್ನು ಪರೀಕ್ಷಿಸಲಾಗಿದ್ದು, ಟಾಟಾ ಮತ್ತು ಮಹೀಂದ್ರಾ ನಿರ್ಮಾಣದ ಪ್ರಮುಖ ಕಾರುಗಳು ಉತ್ತಮ ಮುನ್ನಡೆ ಕಾಯ್ದುಕೊಂಡಿವೆ. ಆದರೆ ಮಾರುತಿ ಸುಜುಕಿ ನಿರ್ಮಾಣ ಒಂದೆರಡು ಮಾದರಿಗಳನ್ನು ಮಾದರಿಗಳನ್ನು ಹೊರತುಪಡಿಸಿ ಉಳಿದ ಕಾರುಗಳು ಕಳೆಪೆ ಗುಣಮಟ್ಟದಿಂದ ಕೂಡಿದ್ದು, ಮಾರಾಟ ಸಂಖ್ಯೆಗೆ ಮಾತ್ರ ಒತ್ತು ನೀಡದೆ ಗ್ರಾಹಕರ ಸುರಕ್ಷತೆಯತ್ತ ಗಮನಹರಿಸುವ ಅವಶ್ಯವಿದೆ ಎನ್ನಬಹುದು.


Click it and Unblock the Notifications