ಬಹುನೀರಿಕ್ಷಿತ ರೆನಾಲ್ಟ್ ಡಸ್ಟರ್ ಹೊಸ ಬದಲಾವಣೆಯೊಂದಿಗೆ ಮತ್ತೆ ಬರುತ್ತೆ.. ಯಾವಾಗ ಲಾಂಚ್?

ಒಂದು ಕಾಲದಲ್ಲಿ ಎಲ್ಲರ ಫೆವರೇಟ್ ಆಗಿದ್ದ ರೆನಾಲ್ಟ್‌ನ ಡಸ್ಟರ್ ಕಾರು ಹೊಸ ಲುಕ್‌ನೊಂದಿಗೆ ಮತ್ತೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆಯಂತೆ. ಸದ್ಯ ಈ ಕಾರಿನ ಉತ್ಪಾದನೆಯನ್ನು ನಿಲ್ಲಿಸಲಾಗಿದ್ದು, ಹೊಸ ವೈಶಿಷ್ಟ್ಯ ಹಾಗೂ ನೂತನ ಬದಲಾವಣೆಗಳೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಅದರ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಯೋಣ ಬನ್ನಿ.

ಡಸ್ಟರ್ ಎಂಬುದು ರೆನಾಲ್ಟ್ ಕಂಪನಿಯು 2012ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ ಕಾರು. ಇದು ಭಾರೀ ಹಿಟ್ ಆಗಿತ್ತು. ಹಲವರು ಗ್ರಾಹಕರು ಈ ಕಾರನ್ನು ಇಷ್ಟಪಟ್ಟು ಖರೀದಿಸಿದ್ದರು. ಇದಕ್ಕೆ ಮುಖ್ಯ ಕಾರಣ ಅದರ ಲುಕ್. ಈ ಕಾರು ಕೆಲವು ಅನಿರೀಕ್ಷಿತ ಕಾರಣಗಳಿಂದ ಮಾರುಕಟ್ಟೆಯಿಂದ ದೂರವಾಯಿತು ಎಂದು ಹೇಳಬಹುದು. ಸರಿ ಸುಮಾರು 10 ವರ್ಷ ಮಾರಾಟವಾದ ರೆನಾಲ್ಟ್‌ನ ಡಸ್ಟರ್ ಕಾರು, ಫೆಬ್ರವರಿ 2022ರಲ್ಲಿ ತನ್ನ ಉತ್ಪಾದನೆಯನ್ನು ಸ್ಥಗಿತಗೊಂಡು ಮಾರುಕಟ್ಟೆಯಿಂದ ದೂರವಾಯಿತು.

ಈ ಕಾರು ಮಾರುಕಟ್ಟೆಗೆ ಬಂದ ಮೇಲೆ ಒಂದಷ್ಟು ದಿನ ತನ್ನದೇ ಆದ ಪ್ರಾಬಲ್ಯ ಸಾಧಿಸಿತ್ತು. ಆದರೆ, ಇತರೆ ಪ್ರತಿಸ್ಪರ್ಧಿ ಕಾರು ತಯಾರಿಕ ಕಂಪನಿಗಳು ಡಸ್ಟರ್ ಕಾರಿಗಿಂತಲ್ಲೂ ಹೆಚ್ಚಿನ ವೈಶಿಷ್ಟ್ಯವಿದ್ದ ಅನೇಕ ವಿವಿಧ ಕಾರುಗಳನ್ನು ಬಿಡುಗಡೆ ಮಾಡಿದರು. ಇದನ್ನು ಗ್ರಾಹಕರು ಇಷ್ಟಪಟ್ಟ ಕಾರಣ, ಈ ಕಾರಿನ ಮಾರಾಟ ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿತು. ಇದೀಗ ಸಂಪೂರ್ಣ ಫೇಸ್‌ಲಿಫ್ಟ್ ಆವೃತ್ತಿಯಿಂದ ಮಾತ್ರ ಡಸ್ಟರ್‌ನ ಮಾರಾಟವನ್ನು ಮತ್ತೆ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ರೆನಾಲ್ಟ್ ನಂಬಿದ್ದು, ಇದಕ್ಕಾಗಿ ತಯಾರಿಗಳನ್ನು ಆರಂಭಿಸಿದೆ.

ಡಸ್ಟರ್ ಕಾರು ಮಾರುಕಟ್ಟೆಯಲ್ಲಿ ಇದ್ದಾಗ ಅದರ 2ನೇ ತಲೆಮಾರಿನ ಕಾರು 2017ರಲ್ಲಿ ಮಾರಾಟಕ್ಕೆ ಬಂದಿತು. ಆ ನಂತರ, ಗ್ರಾಹಕರ ಈ ಕಾರನ್ನು ಖರೀದಿಸಲು ಆಸಕ್ತಿ ತೋರಲಿಲ್ಲ ಎಂದು ಹೇಳಬಹುದು. ಆದರೆ, ಈ ಕಾರು ಸ್ಥಗಿತಗೊಂಡ ನಂತರ ಅನೇಕ ಜನರು ಇದನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ಇದೀಗ ರೆನಾಲ್ಟ್ ಈ ಕಾರನ್ನು ರೂಪಾಂತರಗೊಳಿಸುವುದಾಗಿ ಘೋಷಿಸಿದೆ. ಇದು ಅನೇಕ ಆಟೋಮೊಬೈಲ್ ಪ್ರಿಯರಿಗೆ ಖುಷಿತಂದಿದ್ದು, ಹೊಸ ಕಾರು ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿರುವುದು ಮಾತ್ರ ಖಂಡಿತ.

ರೆನಾಲ್ಟ್ ಇಂಡಿಯಾ 2024-25ರಲ್ಲಿ ಹೊಸ ಪೀಳಿಗೆಯ ಡಸ್ಟರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಇದಕ್ಕಾಗಿ ಸುಮಾರು 500 ಮಿಲಿಯನ್ ಯುಎಸ್‌ ಡಾಲರ್ ಹೂಡಿಕೆ ಮಾಡುವ ಮೂಲಕ ಭಾರತದಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಲು ಎದುರು ನೋಡುತ್ತಿದೆ. ಫ್ರೆಂಚ್ ತಯಾರಕ ರೆನಾಲ್ಟ್, ಪ್ರಸ್ತುತ ಕ್ವಿಡ್, ಟ್ರೈಬರ್, ಕಿಕ್ಸ್ ಮತ್ತು ಕಿಗರ್ ಅನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಈ ಹೊಸ ಕಾರು, CMF-B ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿದೆಯಂತೆ.

ಹೊಸ ಡಸ್ಟರ್ ಅನ್ನು ರೆನಾಲ್ಟ್ ಕಂಪನಿಯು ಏಳು ಆಸನಗಳ ಎಸ್‌ಯುವಿಯಂತೆ ಮಾರುಕಟ್ಟೆಗೆ ತರಲಿದೆ ಎಂದು ಅಂದಾಜಿಸಲಾಗಿದೆ. ಇದರ ಆರ್ಕಿಟೆಕ್ ಡಿಸೈನ್ ಅನ್ನು ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಕ್ಕೂ ಹೊಂದಿಕೆಯಾಗುವಂತೆ ರೆಡಿ ಮಾಡಲಾಗುತ್ತಿದೆ ಎಂದು ಸದ್ಯ ವರದಿಯಾಗಿದೆ. ನಿಸ್ಸಾನ್‌ನೊಂದಿಗಿನ ರೆನಾಲ್ಟ್ ಒಪ್ಪಂದದ ಪ್ರಕಾರ, ಎಸ್‌ಯುವಿಗಳ ಎಲ್ಲ ತಂತ್ರಜ್ಞಾನವನ್ನು ನಿಸ್ಸಾನ್‌ ಕಂಪನಿ ಹೊಂದಿದೆ. ಇವನ್ನೆಲ್ಲ ಗಮನಿಸಿದರೆ ಡಸ್ಟರ್ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ನಿಸ್ಸಾನ್ ಮತ್ತು ರೆನಾಲ್ಟ್ ಜಂಟಿಯಾಗಿ ನಡೆಸುತ್ತಿರುವ ಉತ್ಪಾದನಾ ಘಟಕವು ಚೆನ್ನೈನ ಓರಗಡಂ ಪ್ರದೇಶದಲ್ಲಿ ಇದೆ. ಹೊಸ ಡಸ್ಟರ್‌ಗಾಗಿ CMF ಪ್ಲಾಟ್‌ಫಾರ್ಮ್‌ ಈ ಘಟಕದಲ್ಲಿ ನಿರ್ಮಿಸುವ ನಿರೀಕ್ಷೆಯಿದೆ. ಈ ಕಾರಿನಲ್ಲಿ ಅಳವಡಿಸಬಹುದಾದ ಎಂಜಿನ್‌ನ ವಿವರಗಳನ್ನು ಈವರೆಗೆ ಬಿಡುಗಡೆ ಮಾಡಿಲ್ಲ. ಹಿಂದಿನ ಡಸ್ಟರ್ ಕಾರು, 1.0-ಲೀಟರ್ 3-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿತ್ತು. ಅದೇ ಎಂಜಿನ್‌ನ ಟರ್ಬೊ ಆವೃತ್ತಿಯನ್ನು ಸಹ ಪಡೆದುಕೊಂಡಿತು. ಹೊಸ ಕಾರಿನಲ್ಲಿ ಎಂಜಿನ್ ಕಾರ್ಯಕ್ಷಮತೆ ಮತ್ತಷ್ಟು ಉತ್ತಮವಾಗಿರಬಹುದು ಎಂದು ಅಂದಾಜು ಮಾಡಲಾಗಿದೆ.

ಹೊಸ ಡಸ್ಟರ್ ಕಾರು ಮಾರಾಟಕ್ಕೆ ಬಂದರೆ, ಅದು ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದ ಕಾರಾಗಿ ಗ್ರಾಹಕರಿಗೆ ಖರೀದಿಗೆ ಸಿಗಲಿದೆ. ಪ್ರಸ್ತುತ ಮಾರುಕಟ್ಟೆ ಅದೇ ವಿಭಾಗದಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಎಂಜಿ ಆಸ್ಟರ್ ಮುಂತಾದ ಕಾರುಗಳಿದ್ದು, ಹೊಸ ಡಸ್ಟರ್ ಈ ಕಾರುಗಳಿಗೆ ಭಾರೀ ಪೈಪೋಟಿ ನೀಡಬೇಕಾಗಿದ್ದು, ಅದರಂತೆ ಕಂಪನಿಯು ಸಹ ಈ ಕಾರನ್ನು ರೆಡಿ ಮಾಡಲು ಯೋಜನೆಯನ್ನು ರೂಪಿಸಿದೆ.

Most Read Articles

Kannada
English summary
The much awaited renault duster is back with a new facelift
Story first published: Saturday, December 31, 2022, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X