ವಾರದ ಸುದ್ದಿ: ಸಿಟ್ರನ್ ಸಿ3 ಬಿಡುಗಡೆ, ಗ್ರ್ಯಾಂಡ್ ವಿಟಾರಾ ಅನಾವರಣ, ಎಕ್ಸ್‌ಯುವಿ700 ರೀಕಾಲ್..
ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಹೊಸ ಕಾರುಗಳ ಅನಾವರಣ ಮತ್ತು ಬಿಡುಗಡೆ ಸುದ್ದಿಗಳು ಪ್ರಮುಖವಾಗಿದ್ದು, ಕೆಳಗಿನ ಸ್ಲೈಡ್‌ಗಳಲ್ಲಿ ಈ ವಾರದ ಪ್ರಮುಖ ಸುದ್ದಿಗಳ ಮತ್ತಷ್ಟು ಮಾಹಿತಿಗಳನ್ನು ಒಂದೊಂದಾಗಿ ನೋಡೋಣ.

ಸಿಟ್ರನ್ ಸಿ3 ಕಾರು ಬಿಡುಗಡೆ
ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಹೊಸ ಸಿ3 ಮೈಕ್ರೊ ಎಸ್‌ಯುವಿ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಲೈವ್ ಮತ್ತು ಫೀಲ್ ಎನ್ನುವ ಎರಡು ವೆರಿಯೆಂಟ್‌ಗಳನ್ನು ಹೊಂದಿದೆ. ಹೊಸ ಕಾರಿನ ಆರಂಭಿಕ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ. 5.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.06 ಲಕ್ಷ ಬೆಲೆ ಹೊಂದಿದೆ.

ಸಿ3 ಮಾದರಿಯಲ್ಲಿ ಸಿಟ್ರನ್ ಕಂಪನಿಯು ಎರಡು ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಆರಂಭಿಕ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವೈಶಿಷ್ಟ್ಯತೆಯ 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ತ್ರಿ-ಸಿಲಿಂಡರ್ ಪ್ಯೂರ್‌ಟೆಕ್ 82 ಪೆಟ್ರೋಲ್ ಎಂಜಿನ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವೈಶಿಷ್ಟ್ಯತೆಯ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ. ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಿಂತಲೂ ಅತ್ಯುತ್ತಮ ಫೀಚರ್ಸ್ ಹೊಂದಿದ್ದು, ಹೊಸ ಕಾರಿನಲ್ಲಿ ಸದ್ಯಕ್ಕೆ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡಲಾಗಿಲ್ಲ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣ
ಮಾರುತಿ ಸುಜುಕಿ ಕಂಪನಿಯು ತನ್ನ ಬಹುನೀರಿಕ್ಷಿತ ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಹೊಸ ಕಾರು ಮಾದರಿಯು ಟೊಯೊಟಾ ಹೊಸ ಹೈರೈಡರ್ ಎಸ್‌ಯುವಿ ಮಾದರಿಯನ್ನು ಆಧರಿಸಿ ಬಿಡುಗಡೆಯಾಗಲಿದೆ. ಪೆಟ್ರೋಲ್ ಹೈಬ್ರಿಡ್ ಎಂಜಿನ್ ಅಭಿವೃದ್ದಿಯಲ್ಲಿ ಈಗಾಗಲೇ ಸಾಕಷ್ಟು ಮುನ್ನಡೆ ಸಾಧಿಸಿರುವ ಟೊಯೊಟಾ ಕಂಪನಿಯು ಇದೀಗ ಹೈರೈಡರ್ ಮತ್ತು ಗ್ರಾಂಡ್ ವಿಟಾರಾ ಮಾದರಿಗಳಾಗಿ ವಿವಿಧ ಟ್ಯೂನ್ ಹೊಂದಿರುವ 1.5 ಲೀಟರ್ ಟಿಎನ್‌ಜಿಎ ಅಟ್ಕಿನ್ಸನ್ ಸೈಕಲ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ.

ಇದು ಸ್ವಯಂ ಚಾರ್ಜಿಂಗ್ ವೈಶಿಷ್ಟ್ಯತೆಯ ಪ್ರಬಲ ಹೈಬ್ರಿಡ್ ಎಂಜಿನ್ ಆಯ್ಕೆಯಾಗಿದ್ದು, ಇದು 115.56 ಬಿಎಚ್‌ಪಿ ಮತ್ತು 122 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದರೊಂದಿಗೆ ಕಂಪನಿಯು ಹೊಸ ಗ್ರ್ಯಾಂಡ್ ವಿಟಾರಾದಲ್ಲಿ ತನ್ನ ಹೊಸ 1.5 ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ನೀಡುತ್ತಿದೆ.

ಸ್ಕಾರ್ಪಿಯೊ-ಎನ್ ಎಲ್ಲಾ ವೆರಿಯೆಂಟ್‌ಗಳ ಬೆಲೆ ಬಹಿರಂಗ
ಹೊಸ ಮಹೀಂದ್ರಾ ಸ್ಕಾರ್ಪಿಯೊ-ಎನ್ ಆಟೋಮ್ಯಾಟಿಕ್ 6-ಸೀಟರ್ ಮತ್ತು ಫೋರ್-ವೀಲ್ ಡ್ರೈವ್ (4WD) ವೆರಿಯೆಂಟ್‌ಗಳ ಪರಿಚಯಾತ್ಮಕ ಬೆಲೆಗಳನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದು, ಅದರಂತೆ ಸ್ಕಾರ್ಪಿಯೋ-ಎನ್ ಎಕ್ಸ್‌ಶೋರೂಂ ಪ್ರಕಾರ 11.99 ಲಕ್ಷ ರೂ.ನಿಂದ ಆರಂಭವಾಗಿ ಟಾಪ್ ಎಂಡ್ ವೆರಿಯೆಂಟ್ ಬೆಲೆ 23.9 ಲಕ್ಷ ರೂ.ವರೆಗೆ ಇದೆ.

ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಹೊಸ ಕಾರಿನ ವಿವಿಧ ಮಾದರಿಗಳಿಗೆ ಅನುಗುಣವಾಗಿ ಹಲವಾರು ಡ್ರೈವ್ ಮೋಡ್ ಪಡೆದುಕೊಳ್ಳಬಹುದಾಗಿದೆ.

2022ರ ಎಸ್-ಪ್ರೆಸ್ಸೊ ಬಿಡುಗಡೆ
ಹೊಸ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಾದರಿಯು ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.25 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.99 ಲಕ್ಷ ಬೆಲೆ ಹೊಂದಿದ್ದು, ಹೊಸ ಮಾದರಿಯು ಈ ಬಾರಿ ಹಲವಾರು ಹೊಸ ಫೀಚರ್ಸ್ ಸೇರಿದಂತೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಹಾರ್ಟ್‌ಟೆಕ್ ಪ್ಲ್ಯಾಟ್‌ಫಾರ್ಮ್ ಅಡಿ ನಿರ್ಮಾಣಗೊಂಡಿರುವ ಹೊಸಕಾರು ಮಾದರಿಯು ಈ ಬಾರಿ ಹೊಸ ತಲೆಮಾರಿನ ವೈಶಿಷ್ಟ್ಯತೆಯ ಕೆ10ಸಿ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ಇದು ಐಡಲ್ ಸ್ಟಾರ್ಟ್/ಸ್ಟಾಪ್ ಸೌಲಭ್ಯದೊಂದಿಗೆ ಹೆಚ್ಚಿನ ಮಟ್ಟದ ಇಂಧನ ದಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ
ಭಾರತದಲ್ಲಿ ಕಾರು ಉತ್ಪಾದನೆ ಆರಂಭಿಸಿದ ನಂತರ ಕಿಯಾ ಇಂಡಿಯಾ ಕಂಪನಿಯು ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಕಂಪನಿಯು ಅತಿ ಕಡಿಮೆ ಅವಧಿಯಲ್ಲಿ ಬರೋಬ್ಬರಿ 5 ಲಕ್ಷ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದೆ. ಸೆಲ್ಟೊಸ್ ಮೂಲಕ ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ ಕಿಯಾ ಕಂಪನಿಯು ಸದ್ಯ ಸೊನೆಟ್, ಕಾರ್ನಿವಾಲ್ ಮತ್ತು ಕಾರೆನ್ಸ್ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಕಿಯಾ ಕಾರೆನ್ಸ್ ಎಂಯುವಿ ಮಾದರಿಯು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಾರೆನ್ಸ್ ಕಾರು ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ದಾಖಲೆ ಮಟ್ಟದ ಬೇಡಿಕೆ ಪಡೆದುಕೊಂಡಿದೆ.

5 ಸೀರಿಸ್ 50ಎಂ ಜಹ್ರೇ ಎಡಿಷನ್ ಬಿಡುಗಡೆ
ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಸರಣಿಯಲ್ಲಿ ಹೊಸದಾಗಿ 5 ಸೀರಿಸ್ 50ಎಂ ಜಹ್ರೇ ಎಡಿಷನ್ ಬಿಡುಗಡೆಗೊಳಿಸಿದ್ದು, ಹೊಸ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 67.50 ಲಕ್ಷ ಬೆಲೆ ಹೊಂದಿದೆ. ಹೊಸ ಜಹ್ರೇ ಆವೃತ್ತಿಯ ಟಾಪ್-ಆಫ್-ಲೈನ್‌ನಲ್ಲಿರುವ 5 ಸೀರಿಸ್ 530ಐ ಎಂ ಸ್ಪೋರ್ಟ್ ಟ್ರಿಮ್ ಅನ್ನು ಆಧರಿಸಿದ್ದು, ಎಂ ಸರಣಿಯಲ್ಲಿ ಕಂಪನಿಯು 50ನೇ ವರ್ಷದ ಸಂಭ್ರಮಾಚರಣೆಗಾಗಿ ಈ ಹೊಸ ಆವೃತ್ತಿಯನ್ನು ಮಾರಾಟ ಮಾಡುತ್ತಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಕಂಪನಿಯು ತನ್ನ ಜನಪ್ರಿಯ ಸೆಡಾನ್ ಮಾದರಿಯಾದ 5 ಸೀರಿಸ್ 50ಎಂ ಹಲವಾರು ವಿಶೇಷ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, 5 ಸೀರಿಸ್ 50ಎಂ ಜಹ್ರೇ ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಕಂಪನಿಯು ತನ್ನ ಹೊಸ ಆವೃತ್ತಿಯನ್ನು ಇದೀಗ ಭಾರತದಲ್ಲೂ ಪರಿಚಯಿಸಿದ್ದು, ಹೊಸ ಕಾರು ಮರ್ಸಿಡಿಸ್ ಬೆಂಝ್ ನಿರ್ಮಾಣ ಪ್ರಮುಖ ಸೆಡಾನ್ ಮಾದರಿಗಳಿಗೆ ಇದು ಉತ್ತಮ ಪೈಪೋಟಿಯಾಗಿದೆ.

ಎಕ್ಸ್‌ಯುವಿ700 ರೀಕಾಲ್
ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಮಾದರಿಗೆ ಭಾರೀ ಬೇಡಿಕೆಯ ನಡುವೆಯೂ ಕೆಲವು ಗ್ರಾಹಕರಿಂದ ಎಕ್ಸ್‌ಯುವಿ700 ತಾಂತ್ರಿಕ ಸೌಲಭ್ಯಗಳ ಕುರಿತಾಗಿ ದೂರುಗಳು ಹೆಚ್ಚಳವಾಗುತ್ತಿದ್ದು, ಗ್ರಾಹಕರಿಂದ ದೂರ ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಮಹೀಂದ್ರಾ ಕಂಪನಿಯು ತಾಂತ್ರಿಕ ದೋಷದಿಂದ ಕೂಡಿರುವ ಪ್ರಮುಖ ವೆರಿಯೆಂಟ್‌ಗಳನ್ನು ಹಿಂಪಡೆಯುತ್ತಿದೆ.

4x4 ಡ್ರೈವ್ ಸಿಸ್ಟಂ ಹೊಂದಿರುವ ಎಕ್ಸ್‌ಯುವಿ700 ಮಾದರಿಯ ಎಲ್ಲಾ ವೆರಿಯೆಂಟ್‌ಗಳಲ್ಲೂ ಹಿಂಬದಿಯ ಚಕ್ರದಲ್ಲಿರುವ ಶಾಕ್ ಅಬ್ಸಾರ್ವರ್‌ನಲ್ಲಿ ತೊಂದರೆ ಉಂಟಾಗುತ್ತಿದ್ದು, ಸದ್ಯ ಜೋಡಣೆ ಮಾಡಲಾಗಿರುವ ಎಂಟು ಸುತ್ತುಗಳನ್ನು ಹೊಂದಿರುವ ಶಾಕ್ ಅಬ್ಸಾರ್ವರ್ ಅನ್ನು ಒಂಬತ್ತು ಸುತ್ತು ಹೊಂದಿರು ಶಾಕ್ ಅಬ್ಸಾರ್ವರ್‌ಗೆ ಬದಲಾಯಿಸುವ ಸುಳಿವು ನೀಡಿದೆ. ಆಫ್ ರೋಡ್ ಡ್ರೈವ್ ಸಂದರ್ಭದಲ್ಲಿ ರಿಯರ್ ಶಾಕ್ ಅಬ್ಸಾರ್ವರ್‌ನಲ್ಲಿ ಆಗುತ್ತಿರುವ ಸಮಸ್ಯೆ ಕುರಿತಂತೆ ಹಲವಾರು ಗ್ರಾಹಕರು ಕಂಪನಿಗೆ ದೂರು ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಕಂಪನಿಯು 4x4 ಡ್ರೈವ್ ಸಿಸ್ಟಂ ಹೊಂದಿರುವ ಎಲ್ಲಾ ವೆರಿಯೆಂಟ್‌ಗಳನ್ನು ಇದೀಗ ಒಂಬತ್ತು ಸುತ್ತುಗಳನ್ನು ಹೊಂದಿರುವ ಶಾಕ್ ಅಬ್ಸಾರ್ವರ್‌ಗೆ ಉಚಿತವಾಗಿ ಬದಲಾಯಿಸುವುದಾಗಿ ಹೇಳಿಕೊಂಡಿದೆ.


Click it and Unblock the Notifications