ವಾರದ ಸುದ್ದಿ:ಕ್ರ್ಯಾಶ್ ಟೆಸ್ಟಿಂಗ್ ಪಟ್ಟಿ ಬಿಡುಗಡೆ, ಕಿಯಾ ಕಾರೆನ್ಸ್ ಬಿಡುಗಡೆ, ಎಂಜಿ ಎಕ್ಸ್‌ಪರ್ಟ್ ಶುರು..
ಭಾರತದಲ್ಲಿ ಇವಿ ವಾಹನಗಳ ಸುರಕ್ಷತೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇವಿ ವಾಹನಗಳ ಸುರಕ್ಷತೆಯನ್ನ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವಾರು ಹೊಸ ಮಾನದಂಡಗಳನ್ನು ರೂಪಿಸುತ್ತಿದ್ದು, ಹೊಸ ಮಾನದಂಡಗಳ ಪರಿಣಾಮ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಪ್ರಮುಖ ಹೊಸ ಕಾರುಗಳು ಉತ್ತಮ ರೇಟಿಂಗ್ಸ್ ಪಡೆದುಕೊಂಡಿವೆ. ಇದರ ಜೊತೆಗೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ವಿವಿಧ ಹೊಸ ವಾಹನಗಳ ಬಿಡುಗಡೆ ಸೇರಿದಂತೆ ಆಟೋ ಉದ್ಯಮದಲ್ಲಿನ ಪ್ರಮುಖ ಬೆಳವಣಿಗಳು ನಡೆದಿದ್ದು, ಕೆಳಗಿನ ಸ್ಲೈಡ್‌ಗಳಲ್ಲಿ ವಾರದ ಪ್ರಮುಖ ಸುದ್ದಿಗಳ ಹೈಲೆಟ್ಸ್ ಒಂದೊಂದಾಗಿ ನೋಡೋಣ.

ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ಹೊಸ ಕಾರುಗಳಿವು!
ಹೊಸ ಕಾರುಗಳ ಖರೀದಿಯ ವೇಳೆ ಗ್ರಾಹಕರು ಇತ್ತೀಚೆಗೆ ಅಗ್ಗದ ಬೆಲೆಯ ಕಾರು ಮಾದರಿಗಳಿಂತಲೂ ಸುರಕ್ಷಿತ ಹೊಂದಿರುವ ಕಾರುಗಳ ಖರೀದಿಗೆ ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಕಾರು ಉತ್ಪಾದನಾ ಕಂಪನಿಗಳು ಸುರಕ್ಷಾ ಮಾನದಂಡಗಳನ್ನು ಉನ್ನತೀಕರಿಸುತ್ತಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಆಧಾರದ ಮೇಲೆ ಅತ್ಯುತ್ತಮ ಸುರಕ್ಷಾ ಫೀಚರ್ಸ್ ಹೊಂದಿರುವ ಹಲವಾರು ಪ್ರಯಾಣಿಕ ಬಳಕೆಯ ವಾಹನಗಳು ಖರೀದಿ ಲಭ್ಯವಿದ್ದರೂ ಎಂಟ್ರಿ ಲೆವಲ್ ಮತ್ತು ಮಧ್ಯಮ ಗಾತ್ರದ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಸುರಕ್ಷಾ ಕಾರು ಮಾದರಿಯಾಗಿ ಗುರುತಿಸಲು ಕನಿಷ್ಠ 3 ಅಂಕಗಳು ಅವಶ್ಯವಿದ್ದು, 5 ಅಂಕಗಳನ್ನು ಗಿಟ್ಟಿಸಿಕೊಂಡಿರುವ ಕಾರುಗಳನ್ನು ಅತ್ಯುತ್ತಮ ಕಾರು ಮಾದರಿ ಎಂದು ಗುರುತಿಸಲಾಗುತ್ತದೆ. ಕೇಂದ್ರ ಸರ್ಕಾರದ ಹೊಸ ಮಾನದಂಡಗಳ ನಂತರ ಇತ್ತೀಚೆಗೆ ಬಿಡುಗಡೆಯಾದ ಬಜೆಟ್ ಬೆಲೆಯ ಕಾರುಗಳು ಸಹ 5 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಗಳಾದ ಮಹೀಂದ್ರಾ ಮತ್ತು ಟಾಟಾ ಕಂಪನಿಗಳು ಈ ವಿಚಾರದಲ್ಲಿ ಅಗ್ರಸ್ಥಾನದಲ್ಲಿವೆ.

ಕಾರೆನ್ಸ್ ಎಂಯುವಿ ಬಿಡುಗಡೆ
ಕಿಯಾ ಇಂಡಿಯಾ(Kia India) ಕಂಪನಿಯು ತನ್ನ ಬಹುನೀರಿಕ್ಷಿತ ಕಾರೆನ್ಸ್ ಎಂಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.99 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರೆನ್ಸ್ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರಲಿದ್ದು, ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ಎನ್ನುವ ಐದು ವೆರಿಯೆಂಟ್‌ಗಳೊಂದಿಗೆ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ.

ಟ್ರೈಬರ್ ಲಿಮಿಟೆಡ್ ಎಡಿಷನ್ ಬಿಡುಗಡೆ
ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಮಿನಿ ಎಂಪಿವಿ ಮಾದರಿಯಾದ ಟ್ರೈಬರ್ ಮಾದರಿಯಲ್ಲಿ ಸೀಮಿತ ಅವಧಿಗಾಗಿ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದ್ದು, ಟ್ರೈಬರ್ ಮಿನಿ ಎಂಪಿವಿ ಮೂಲಕ ಭಾರತದಲ್ಲಿ ಹೊಸ ದಾಖಲೆ ನಿರ್ಮಿಸಿರುವ ರೆನಾಲ್ಟ್ ಕಂಪನಿಯು 1 ಲಕ್ಷ ಯುನಿಟ್ ಮಾರಾಟ ಗುರಿ ತಲುಪಿದ ಸಂಭ್ರಮಕ್ಕಾಗಿ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದೆ.

ಲಿಮಿಟೆಡ್ ಎಡಿಷನ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.24 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಸ್ಟ್ಯಾಂಡರ್ಡ್ ಆರ್‌ಎಕ್ಸ್‌ಟಿ ಮಾದರಿಯನ್ನು ಆಧರಿಸಿದೆ. ಟ್ರೈಬರ್ ಎಲ್ಇ ಆರ್‌ಎಕ್ಸ್‌ಟಿ ರೂಪಾಂತರಗಳು ಮೂನ್‌ಲೈಟ್ ಸಿಲ್ವರ್/ಬ್ಲ್ಯಾಕ್ ರೂಫ್ ಮತ್ತು ಸೀಡರ್ ಬ್ರೌನ್/ಬ್ಲ್ಯಾಕ್ ರೂಫ್ ಆಯ್ಕೆ ಹೊಂದಿದ್ದು, 14 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಜೋಡಿಸಲಾಗಿದೆ. ಜೊತೆಗೆ ಅಕಾಝಾ ಫ್ಯಾಬ್ರಿಕ್ ಅಪ್ಹೋಲ್ಸ್ಟರಿ, ಕಪ್ಪು ಬಾಗಿಲಿನ ಹಿಡಿಕೆಗಳು, ಪಿಯಾನೋ ಬ್ಲ್ಯಾಕ್ ಫಿನಿಶ್ ಜೊತೆಗೆ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ.

ಬಿಎಂಡಬ್ಲ್ಯು ಎಕ್ಸ್3 ಡೀಸೆಲ್ ವೆರಿಯೆಂಟ್ ಬಿಡುಗಡೆ
ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 2022ರ ಎಕ್ಸ್3 ಎಸ್‍ಯುವಿಯ ಎರಡು ಪೆಟ್ರೋಲ್ ಆವೃತ್ತಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿಯ ಡೀಸೆಲ್ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಬಿಎಂಡಬ್ಲ್ಯು ಎಕ್ಸ್3 ಡೀಸೆಲ್ ವೆರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.65.50 ಲಕ್ಷವಾಗಿದೆ.

2022ರ ಬಿಎಂಡಬ್ಲ್ಯು ಎಕ್ಸ್3 ಡೀಸೆಲ್ ರೂಪಾಂತರದದಲ್ಲಿ 2.0-ಲೀಟರ್ ನಾಲ್ಕು-ಸಿಲಿಂಡರ್, ಟ್ವಿನ್ ಟರ್ಬೂ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿ ಕೇವಲ 7.9 ಸೆಕೆಂಡ್‌ಗಳಲ್ಲಿ ಗಂಟೆಗೆ 0 -100 ಕಿಮೀ ವೇಗವನ್ನು ಪಡೆಯುತ್ತದೆ ಇನ್ನು ಈ ಎಸ್‍ಯುವಿ 213 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಬಿಡುಗಡೆ
ಇಟಲಿ ಮೂಲದ ಐಷಾರಾಮಿ ಸ್ಪೋರ್ಟ್ಸ್ ಕಾರ್ ಬ್ರ್ಯಾಂಡ್ ಲ್ಯಾಂಬೊರ್ಗಿನಿ ತನ್ನ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಕಾರು ಐದು ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ಸುಧಾರಿತ ಒಳಾಂಗಣ ನವೀಕರಣ ಹೊಂದಿದ್ದು, ಹೊಸ ಕಾರಿನಲ್ಲಿ 5.2-ಲೀಟರ್ V10 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 631 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಹಲವು ಕಸ್ಟಮೈಜ್ಡ್ ಸೌಲಭ್ಯ ಹೊಂದಿರುವ ಈ ಕಾರು ಎಕ್ಸ್‌ಶೋರೂಂ ಪ್ರಕಾರ ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ.50 ಲಕ್ಷ ಹೆಚ್ಚುವರಿ ಮೊತ್ತದೊಂದಿಗೆ ರೂ. 3.80 ಕೋಟಿ ಬೆಲೆ ಹೊಂದಿರಬಹುದು ಎನ್ನಲಾಗಿದೆ.

ಎಂಜಿ ಎಕ್ಸ್‌ಪರ್ಟ್ ಪ್ಲಾಟ್‌ಫಾರ್ಮ್ ಆರಂಭ
ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಕಾರು ಮಾರಾಟದಲ್ಲಿ ನಿರಂತರವಾಗಿ ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಕೋವಿಡ್ ಸಂದರ್ಭದಲ್ಲಿ ತನ್ನ ಸಂಭಾವ್ಯ ಗ್ರಾಹಕರಿಗೆ ಮನೆಯಲ್ಲಿಯೇ ಕುರಿತು ಶೋರೂಂ ಭೇಟಿ ಅನುಭವನ್ನು ನೀಡುವಂತಹ ಎಕ್ಸ್‌ಪರ್ಟ್ ಪ್ಲಾಟ್‌ಫಾರ್ಮ್ ಆರಂಭಿಸಿದೆ.

ಕೋವಿಡ್ ಹರಡುವಿಕೆಗೂ ಮೊದಲೇ ಹಲವಾರು ಆಟೋ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್ ತೆರೆದಿದ್ದರೂ ಬಳಕೆದಾರರ ಸಂಖ್ಯೆಯು ತೀರಾ ವಿರಳವಾಗಿತ್ತು. ಆದರೆ ಕೋವಿಡ್ ಹೆಚ್ಚಳದ ನಂತರ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ಬಳಕೆಯು ಹೆಚ್ಚಳವಾಗುತ್ತಿದ್ದು, ಎಂಜಿ ಮೋಟಾರ್ ಇಂಡಿಯಾ ಕೂಡಾ ಎಆರ್ ತಂತ್ರಜ್ಞಾನ ಪ್ರೇರಿತ ಎಂಜಿ ಎಕ್ಸ್‌ಪರ್ಟ್(MG eXpert) ವರ್ಚುವಲ್ ಶೋರೂಂ ಆರಂಭಿಸಿದೆ.

ವಿಶೇಷ ಆಫರ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್ ಜೊತೆಗೆ ವಿಶೇಷ ಪ್ಯಾಕೇಜ್ ನೀಡುತ್ತಿದ್ದು, ಕನಿಷ್ಠ ರೂ.15 ಸಾವಿರದಿಂದ ಗರಿಷ್ಠ ರೂ. 40 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ. ಟಿಯಾಗೊ, ಟಿಗೋರ್, ಆಲ್‌ಟ್ರೊಜ್, ನೆಕ್ಸಾನ್, ಹ್ಯಾರಿಯರ್ ಮತ್ತು ನೆಕ್ಸಾನ್ ಕಾರುಗಳ ಮೇಲೆ ವಿಶೇಷ ಆಫರ್ ಲಭ್ಯವಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಪಡೆದುಕೊಳ್ಳಬಹುದಾಗಿದೆ.

ಹೊಸ ಆಫರ್‌ಗಳಲ್ಲಿ ಆರಂಭಿಕ ಕಾರು ಮಾದರಿಯಾದ ಟಿಯಾಗೋ ಹ್ಯಾಚ್‌ಬ್ಯಾಕ್ ಮಾದರಿಯ ಮೇಲೆ ಕಂಪನಿಯು ರೂ.20 ಸಾವಿರ ತನಕ ಆಫರ್ ಘೋಷಿಸಿದ್ದು, ರೂ. 20 ಸಾವಿರ ಮೌಲ್ಯದ ಆಫರ್‌ನಲ್ಲಿ ರೂ. 10 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 10 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ.

ಫಾಸ್ಟ್ ಚಾರ್ಜಿಂಗ್ ಕಾರಿಡಾರ್ ಪ್ರಾರಂಭ
ಮುಂಬರುವ ಅಕ್ಟೋಬರ್ ವೇಳೆಗೆ ದೇಶದ ಪ್ರಮುಖ ಕಡೆಗಳಲ್ಲಿ ಒಂದು ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಗುರಿಹೊಂದಿರುವ ಭಾರತ್ ಪೆಟ್ರೋಲಿಯಂ ಕಂಪನಿಯು ಈಗಾಗಲೇ ಆಯ್ದ ಪೆಟ್ರೋಲ್ ಬಂಕ್‌ಗಳಲ್ಲಿಯೇ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆ ಚಾಲನೆ ನೀಡಿದೆ.

ಕಂಪನಿಯು ಇತ್ತೀಚೆಗೆ ಚೆನ್ನೈ-ತಿರುಚಿ-ಮಧುರೈನ ನಡುವಿನ 900 ಕಿಮೀ ಹೆದ್ದಾರಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಫಾಸ್ಟ್ ಚಾರ್ಜಿಂಗ್ ಕಾರಿಡಾರ್ ಪ್ರಾರಂಭಿಸಿದ್ದು, ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ CCS-2 ಮಾನದಂಡ ಹೊಂದಿರುವ ಡಿಸಿ ಫಾಸ್ಟ್-ಚಾರ್ಜರ್‌ಗಳನ್ನು ಅಳವಡಿಸಿದೆ. ಡಿಸಿ ಫಾಸ್ಟ್-ಚಾರ್ಜರ್‌ಗಳ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಟ್ಟದ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಹಂತ-ಹಂತವಾಗಿ 7 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಯೋಜನೆ ಸಿದ್ದಪಡಿಸಿದೆ.

ಹೊಸ ಬಣ್ಣದ ಆಯ್ಕೆ ಪಡೆದುಕೊಂಡ ಟಾಟಾ ಸಫಾರಿ
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳನ್ನು ಗ್ರಾಹಕರ ಬೇಡಿಕೆಯೆಂತೆ ನಿರಂತರವಾಗಿ ಹೊಸ ಬದಲಾವಣೆಗಳೊಂದಿಗೆ ಉನ್ನತೀಕರಿಸುತ್ತಿದ್ದು, ಕಂಪನಿಯು ತನ್ನ ಎಸ್‌ಯುವಿ ಮಾದರಿಯಾದ ಸಫಾರಿ ಎಸ್‌ಯುವಿಯಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದೆ.

ಸಫಾರಿ ಎಸ್‌ಯುವಿಯಲ್ಲಿ ಡಾರ್ಕ್ ಎಡಿಷನ್ ಬಿಡುಗಡೆಯ ನಂತರ ಇದೀಗ ಅಡ್ವೆಂಚರ್ ಪೆರಸೊನಾ ಆವೃತ್ತಿಯಲ್ಲಿ ಹೊಸ ಫೀಚರ್ಸ್‌ನೊಂದಿಗೆ ಉನ್ನತೀಕರಿಸಿದ್ದು,ಹೊಸ ಆರ್ಕಸ್ ವೈಟ್ ಬಣ್ಣದ ಆಯ್ಕೆ ನೀಡಿದೆ. ಆಕರ್ಸ್ ವೈಟ್ ಜೊತೆಗೆ ಸಫಾರಿ ಮಾದರಿಯಲ್ಲಿ ಈಗಾಗಲೇ ವಿವಿಧ ಏಳು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಎರಡನೇ ಸಾಲಿನ ಆಸನಗಳಲ್ಲೂ ಏರ್ ವೆಂಟಿಲೆಟೆಡ್ ಸೌಲಭ್ಯವನ್ನು ನೀಡಿದೆ.

ಕಾಜಿರಂಗ ಸ್ಪೆಷಲ್ ಎಡಿಷನ್ ಅನಾವರಣ
ಜನಪ್ರಿಯ ಐಪಿಎಲ್ ಸರಣಿಯಲ್ಲಿ ಸತತ ನಾಲ್ಕನೇ ವರ್ಷವೂ ಪ್ರಾಯೋಜಕತ್ವ ವಹಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಈ ಬಾರಿಯ ಐಪಿಎಲ್‌ನಲ್ಲಿ ಹೊಚ್ಚ ಹೊಸ ಪಂಚ್ ಕಾರು ಮಾದರಿಯನ್ನು ಪ್ರದರ್ಶನಗೊಳಿಸಲು ನಿರ್ಧರಿಸಿದ್ದು, ಪ್ರಾಯೋಜಕತ್ವ ವಿಶೇಷತೆಗಾಗಿ ಟಾಟಾ ಕಂಪನಿಯು ಪಂಚ್ ಕಾರಿನಲ್ಲಿ ಕಾಜಿರಂಗ ಎನ್ನುವ ವಿಶೇಷ ಆವೃತ್ತಿಯನ್ನು ಅಭಿವೃದ್ದಿಪಡಿಸಿದೆ.

ಐಪಿಎಲ್‌ನಲ್ಲಿ ಪ್ರದರ್ಶನಗೊಳ್ಳುವ ಹೊಸ ಪಂಚ್ ಕಾಜಿರಂಗ ಆವೃತ್ತಿಯು ಟೂರ್ನಿ ಮುಕ್ತಾಯದ ನಂತರ ಹರಾಜುಗೊಳ್ಳಲಿದ್ದು, ಹರಾಜು ಪ್ರಕ್ರಿಯೆಯಿಂದ ಬಂದ ಹಣವನ್ನು ಟಾಟಾ ಮೋಟಾರ್ಸ್ ಕಂಪನಿಯು ಸಂಪೂರ್ಣವಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಂರಕ್ಷಣಾ ಅಭಿವೃದ್ದಿ ಕಾರ್ಯಗಳಿಗೆ ದೇಣಿಗೆ ನೀಡಲು ನಿರ್ಧರಿಸಿದೆ. ಪಂಚ್ ಕಾಜಿರಂಗ ಮಾದರಿಯು ಮಾತ್ರ ಒಂದೇ ಯುನಿಟ್‌ನೊಂದಿಗೆ ಹರಾಜುಗೊಳ್ಳಲಿದ್ದರೆ ಇನ್ನುಳಿದ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಕಾಜಿರಂಗ ಮಾದರಿಗಳು ಸಾಮಾನ್ಯ ಕಾರು ಮಾದರಿಗಳಂತೆ ಮಾರಾಟಗೊಳ್ಳಲಿವೆ.


Click it and Unblock the Notifications