Bharat NCAP: ಭಾರತ್ ಎನ್‌ಸಿಎಪಿ ನಾಳೆಯಿಂದ ಜಾರಿ, ಇನ್ನೂ ಯಾವ ಕಾರು ಸುರಕ್ಷಿತವೆಂದು ಸುಲಭವಾಗಿ ತಿಳಿಯುತ್ತೆ!
ಭಾರತದಲ್ಲಿ ಹೊಸ ಕಾರು ಖರೀದಿಸುವವರೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ನಾಳೆಯಿಂದ (ಆಗಸ್ಟ್ 22) ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್ ಎನ್‌ಸಿಎಪಿ - Bharat NCAP) ಅನ್ನು ಜಾರಿಗೊಳಿಸಲಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೇಂದ್ರ ರಸ್ತೆ ಸಾರಿಗೆ & ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಅಧಿಕೃತವಾಗಿ ಭಾರತ್ ಎನ್‌ಸಿಎಪಿಗೆ ಚಾಲನೆ ನೀಡಲಿದ್ದಾರೆ. ಇಲ್ಲಿ 3.5 ಟನ್‌ಗಳಿಗಿಂತ ಕಡಿಮೆ ತೂಕವಿರುವ ದೇಶ - ವಿದೇಶದಲ್ಲಿ ಉತ್ಪಾದಿಸುವ ಪೆಟ್ರೋಲ್, ಡೀಸೆಲ್ ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ಚಾಲಿತ ವಾಹನಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ.

ಭಾರತ್ ಎನ್‌ಸಿಎಪಿ ಅಡಿಯಲ್ಲಿ, ವಾಹನ ತಯಾರಕ ಕಂಪನಿಗಳು, ಸ್ವಯಂಪ್ರೇರಣೆಯಿಂದ ತಮ್ಮ ಕಾರುಗಳನ್ನು ಪರೀಕ್ಷಿಸಲು ನೀಡಬಹುದು ಎಂದು ಸಾರಿಗೆ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪರೀಕ್ಷೆಗೆ ಒಳಗಾಗುವ ಕಾರಿನ ಕಾರ್ಯಕ್ಷಮತೆಯ ಆಧಾರದ ಮೇಲೆ ವಯಸ್ಕ ರಕ್ಷಣೆ ವಿಭಾಗ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ ಗ್ಲೋಬಲ್ ಎನ್‌ಸಿಎಪಿ ರೀತಿಯಲ್ಲಿ ಸ್ಟಾರ್ ರೇಟಿಂಗ್‌ನ್ನು ನೀಡಲಾಗುತ್ತದೆ.
ಭಾರತ್ ಎನ್‌ಸಿಎಪಿಯಿಂದ ಕೊಡಲಾಗುವ ಸುರಕ್ಷತಾ ರೇಟಿಂಗ್ ಅನುಗುಣವಾಗಿ ಗ್ರಾಹಕರು, ತಮಗೆ ಯಾವ ಕಾರು ಸೂಕ್ತವಾಗಿದೆ ಎಂಬುದನ್ನು ತೀರ್ಮಾನ ಮಾಡಬಹುದು ಎಂದು ಕೇಂದ್ರ ಸಾರಿಗೆ ಸಚಿವಾಲಯ ತಿಳಿಸಿದೆ. ಗ್ಲೋಬಲ್ ಎನ್‌ಸಿಎಪಿಯಂತೆಯೇ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಪರೀಕ್ಷೆಯಲ್ಲಿ ಎಲ್ಲ ವಾಹನ ತಯಾರಕ ಕಂಪನಿಗಳು, ಸ್ವಯಂಪ್ರೇರಿತವಾಗಿ ತಮ್ಮ ಕಾರುಗಳನ್ನು ಪರೀಕ್ಷೆಗೆ ಒಳಪಡಿಸಬಹುದು.

ನಿಮಗೆ ತಿಳಿದಿರಲಿ.. ಮುಂಬರುವ ದಿನಗಳಲ್ಲಿ ಪ್ರತಿಯೊಂದು ಕಾರುಗಳನ್ನು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಒಳಗಾಗುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸುವ ಸಾಧ್ಯತೆಯೂ ಇದೆ. ಭಾರತ್ ಎನ್‌ಸಿಎಪಿ ಪರೀಕ್ಷಾ ನಿಯಮಗಳು ಬಹುತೇಕ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಪ್ರೋಟೋಕಾಲ್‌ಗಳಿಗೆ ಹೋಲಿಕೆಯಾಗಲಿವೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ಅದರಂತೆಯೇ 1 - 5 ಸ್ಟಾರ್ ರೇಟಿಂಗ್ ನೀಡಲಾಗುತ್ತದೆ ಎಂದು ಕೂಡ ತಿಳಿಸಿತ್ತು.
ಕೇಂದ್ರ ಸರ್ಕಾರ ನಾಳೆಯಿಂದ ಜಾರಿಗೊಳಿಸಲು ಹೊರಟಿರುವ ಭಾರತ್ ಎನ್‌ಸಿಎಪಿಯನ್ನು ಈಗಾಗಲೇ ಪ್ರಮುಖ ಕಾರು ತಯಾರಕ ಸಂಸ್ಥೆಗಳಾದ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಟೊಯೊಟಾ, ಸ್ಕೋಡಾ, ಕಿಯಾ ಹಾಗೂ ಮಹೀಂದ್ರಾ ಕಂಪನಿಗಳು ಸ್ವಾಗತಿಸಿವೆ. ಮಹೀಂದ್ರಾ, ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಭಾರತ್ ಎನ್‌ಸಿಎಪಿಯನ್ನು ಸ್ವಾಗತಿಸುತ್ತೇವೆ ಎಂದು ಕಳೆದ ತಿಂಗಳು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿತ್ತು.
ಗ್ಲೋಬಲ್ ಎನ್‌ಸಿಎಪಿಯಿಂದ ಕಾರಿನ ಸುರಕ್ಷತೆಯಲ್ಲಿ ಟಾಪ್ 5 ರೇಟಿಂಗ್ ಪಡೆದಿರುವ ಟಾಟಾ ಮೋಟಾರ್ಸ್, ಸ್ಕೋಡಾ, ಮಹೀಂದ್ರಾ ಕಂಪನಿ ಸೇರಿದಂತೆ 1 - 2 ಸ್ಟಾರ್ ರೇಟಿಂಗ್ ಪಡೆದಿರುವ ಮಾರುತಿ ಸುಜುಕಿಯು ಒಪ್ಪಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ವಿಶ್ವದಲ್ಲಿ ಅತಿಹೆಚ್ಚು ರಸ್ತೆ ಅಪಘಾತವಾಗುವ ದೇಶಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಭಾರತದಲ್ಲಿ, ಈ ಪರೀಕ್ಷೆಯು ಗ್ರಾಹಕರಿಗೆ ಸೇಫ್ಟಿ ಸಲುವಾಗಿ ಅವರ ಇಷ್ಟದ ಕಾರನ್ನು ಆಯ್ದುಕೊಳ್ಳಲು ನೆರವಾಗುತ್ತದೆ.
ದೇಶ - ವಿದೇಶ ಪ್ರಮುಖ ಕಂಪನಿಗಳು ತಮ್ಮ ಕಾರುಗಳ ಬಗ್ಗೆ ಖರೀದಿದಾರರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸಿ, ಮಾರಾಟ ಪ್ರಮಾಣವನ್ನು ದ್ವಿಗುಣಗೊಳಿಸಿಕೊಳ್ಳಲು ಸ್ವಯಂಪ್ರೇರಿತವಾಗಿ ಭಾರತ್ ಎನ್‌ಸಿಎಪಿ ಪರೀಕ್ಷೆಗೆ ಒಳಗಾಗಬಹುದು. ಇನ್ನೂ ಅನೇಕ ತಯಾರಕರು, ಈ ಟೆಸ್ಟ್ ಕಡ್ಡಾಯಗೊಳಿಸುವವರೆಗೂ ಇದರಿಂದ ಹಿಂದೆ ಕೂಡ ಸರಿಯಬಹುದು. ಒಟ್ಟಿನಲ್ಲಿ ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಮಹತ್ವದ ಕ್ರಮ ಇದಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications