Mahindra ಸ್ಕಾರ್ಪಿಯೊ, Toyota ಇನ್ನೋವಾ ಸೇರಿ ಈ ಕಾರುಗಳಿಗೆ ಭಾರೀ ಡಿಮ್ಯಾಂಡ್: ವಿತರಣೆಗೆ ವರ್ಷಗಳೇ ಬೇಕು
ಭಾರತದ ಮಾರುಕಟ್ಟೆಯಲ್ಲಿ ಈ ಮೇ ತಿಂಗಳಲ್ಲಿಯು ಮಹೀಂದ್ರಾ ಸ್ಕಾರ್ಪಿಯೊ ಎನ್, ಟೊಯೊಟಾ ಇನ್ನೋವಾ ಹೈಕ್ರಾಸ್ ಸೇರಿದಂತೆ ವಿವಿಧ ಕಂಪನಿಯ ಪ್ರಮುಖ ಕಾರುಗಳು ದೊಡ್ಡಮಟ್ಟದಲ್ಲಿ ಬೇಡಿಕೆ ಹೊಂದಿವೆ. ಅದರಲ್ಲೂ ಕೆಲವು ಕಾರುಗಳಿಗೆ ಇವತ್ತು ಬುಕಿಂಗ್ ಮಾಡಿದರೂ ವಿತರಣೆ ಪಡೆಯಲು ವರ್ಷಗಳೇ ಕಾಯಬೇಕು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಮೊದಲಿಗೆ ಮಹೀಂದ್ರಾ ಸ್ಕಾರ್ಪಿಯೊ ಎನ್ ಬಗ್ಗೆ ಮಾತನಾಡೋಣ, ಈ ಎಸ್‌ಯುವಿ ದೇಶೀಯ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್ ಹೊಂದಿದೆ. ಇದರ Z2, Z4 ಹಾಗೂ Z6 ರೂಪಾಂತರಗಳನ್ನು ಇವತ್ತು ಬುಕಿಂಗ್ ಮಾಡಿದರೂ ಡೆಲಿವರಿ ಪಡೆಯಲು ಕನಿಷ್ಠವೆಂದರೂ 24 ತಿಂಗಳು ಕಾಯಬೇಕು. ಸ್ಕಾರ್ಪಿಯೊ ಎನ್ ರೂ.13.05 ಲಕ್ಷದಿಂದ ರೂ.24.51 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಮತ್ತೊಂದು ಜನಪ್ರಿಯ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ, ಬರೊಬ್ಬರಿ ಒಂದೂವರೆ ವರ್ಷ ಕಾಯುವಿಕೆ ಅವಧಿ ಹೊಂದಿದ್ದು, ಟಾಪ್ ಎಂಡ್ ಮಾದರಿಗಳಿಗೆ ಕೆಲವಡೆ ಬುಕಿಂಗ್ ಸ್ಥಗಿತಗೊಳಿಸಲಾಗಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಈ ಎಂಪಿವಿ ರೂ.18.55 ಲಕ್ಷದಿಂದ ರೂ.29.99 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದೆ. 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಗ್ರಾಹಕರನ್ನು ಆಕರ್ಷಿಸುವ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.
ಭಾರತದ ಗ್ರಾಹಕರಿಗೆ ಮಹೀಂದ್ರಾ ಥಾರ್ 3 ಡೋರ್ ರೂಪದಲ್ಲಿ ಖರೀದಿಗೆ ಲಭ್ಯವಿದ್ದು, ತಾನೇನು ಕಡಿಮೆ ಇಲ್ಲವೆಂಬಂತೆ ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿದೆ. ಆಸಕ್ತ ಗ್ರಾಹಕರು, ಇವತ್ತು ಬುಕ್ ಮಾಡಿದರೂ ವಿತರಣೆ ಪಡೆಯಲು ಸುಮಾರು 17 ತಿಂಗಳು ಕಾಯಬೇಕು. ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದ್ದು, ರೂ.10.54 ಲಕ್ಷದಿಂದ ರೂ.16.78 ಲಕ್ಷ ದರದಲ್ಲಿ ಖರೀದಿಗೆ ಸಿಗಲಿದೆ. ಪೆಟ್ರೋಲ್, ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 15.2 kmpl ಮೈಲೇಜ್ ನೀಡಲಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕೂಡ ಸುಮಾರು 15 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದ್ದು, ಕಂಪನಿಯು ಕೆಲವೇ ದಿನಗಳ ಹಿಂದಷ್ಟೇ ಈ ಕಾರಿನ ಬೆಲೆಯನ್ನ ಏರಿಕೆ ಮಾಡಿದ್ದು, ರೂ.60,000 ವರಗೆ ಹೆಚ್ಚಳವಾಗಿದೆ. ಇದರೊಂದಿಗೆ ಭಾರತ ಮಾರುಕಟ್ಟೆಯಲ್ಲಿ ರೂ.10.73 ಲಕ್ಷದಿಂದ ರೂ.19.74 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದ್ದು, 19.39 - 27.97 kmpl ಮೈಲೇಜ್ ನೀಡಲಿದೆ.
ಮಹೀಂದ್ರಾ XUV 700 ಎಸ್‌ಯುವಿಯನ್ನು ಇವತ್ತು ಬುಕಿಂಗ್ ಪಡೆಯಲು ವಿತರಣೆ ಪಡೆಯಲು ಕನಿಷ್ಠವೆಂದರೂ 11 ತಿಂಗಳು ಕಾಯಬೇಕು. ಈ ಎಸ್‌ಯುವಿ ರೂ.14.01 ಲಕ್ಷದಿಂದ ರೂ.26.18 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ NCAPಯಿಂದ 5 ಸ್ಟಾರ್ ರೇಟಿಂಗ್ ಹೊಂದಿದ್ದು, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಟ್ವಿನ್ ಡಿಜಿಟಲ್ ಸ್ಕ್ರೀನ್ಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ದಕ್ಷಿಣ ಕೊರಿಯಾದ ಕಿಯಾದ 'ಕ್ಯಾರೆನ್ಸ್' ಕಾರು ಸಹ ದೇಶೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಹೊಂದಿದ್ದು, ಗರಿಷ್ಠ 11 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ. ರೂ.10.45 ಲಕ್ಷದಿಂದ ರೂ.18.95 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 1.5 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದಿದ್ದು, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು, ಮಾರುತಿ ಸುಜುಕಿಯ ಜನಪ್ರಿಯ ಕಾರು, ಬ್ರೆಜ್ಜಾ 10 ತಿಂಗಳ ಕಾಯುವಿಕೆ ಅವಧಿಯನ್ನು ಹೊಂದಿದ್ದು, ರೂ.8.29 ಲಕ್ಷದಿಂದ ರೂ.14.14 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಕಿಯಾ ಸೋನೆಟ್ 9 ತಿಂಗಳು, ಹುಂಡೈ ಕ್ರೆಟಾ 8 ತಿಂಗಳು ಹಾಗೂ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ 6 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ.


Click it and Unblock the Notifications