Toyota Rumion: ಕೈಗೆಟುಕುವ ಬೆಲೆ, 27 ಕಿ.ಮೀ ಮೈಲೇಜ್... 2 ಸಣ್ಣ ಕುಟುಂಬಗಳು ಪ್ರಯಾಣಿಸಬಹುದು!
ಭಾರತದಲ್ಲಿ ಟೊಯೊಟಾ ಕಾರುಗಳಿಗೆ ಉತ್ತಮ ಬೇಡಿಕೆಯಿದ್ದು ಇದೀಗ ಟೊಯೊಟಾದಿಂದ ಅನಾವರಣಗೊಂಡ ಹೊಸ ರೂಮಿಯಾನ್ ಮಾದರಿ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇದು ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿಯ ರಿಬ್ಯಾಡ್ಜ್ ಆವೃತ್ತಿಯಾಗಿದೆ. ಎರ್ಟಿಗಾ ಕೂಡ ಉತ್ತಮ ಮಾರಾಟ ಕಾಣುತ್ತಿದ್ದು, ರೂಮಿಯಾನ್ ಅದಕ್ಕಿಂತ ಹೆಚ್ಚು ಬೇಡಿಕೆ ಪಡೆಯಲಿದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಈ ಹೊಸ ಟೊಯೊಟಾ ರೂಮಿಯಾನ್ (Toyota Rumion) ಎಂಪಿವಿಯ ಬೆಲೆ ಮತ್ತು ಬುಕಿಂಗ್ ಮೊತ್ತವನ್ನು ಇನ್ನು ಘೋಷಿಸಿಲ್ಲ. ಆದರೆ ಈಗಾಗಲೇ ಮಾರಾಟದಲ್ಲಿರುವ ಎರ್ಟಿಗಾದಂತೆಯೇ ಬಹುತೇಕ ರೂಮಿಯಾನ್‌ನಲ್ಲಿಯೂ ಇರಬಹುದಾದ್ದರಿಂದ ಬೆಲೆ ಹೆಚ್ಚೂ ಕಡಿಮೆ ಎರ್ಟಿಗಾದಷ್ಟೇ ಇರಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಇನ್ನು ಮಾರುತಿ ಸುಜುಕಿ ಎರ್ಟಿಗಾಗೆ ಹೋಲಿಸಿದರೆ, ಟೊಯೊಟಾ ರೂಮಿಯಾನ್ ಕೆಲವೇ ಬದಲಾವಣೆಗಳನ್ನು ಪಡೆದಿದೆ.

ಟೊಯೊಟಾ ರೂಮಿಯಾನ್ ಹೊಸ ಬಂಪರ್, ಹೊಸ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾದಂತೆಯೇ ಗ್ರಿಲ್ ಅನ್ನು ಪಡೆದಿದೆ. ಉಳಿದಂತೆ ಸೌಕರ್ಯಯುತ ಕ್ಯಾಬಿನ್ ಮತ್ತು 7 ಆಸನಗಳ ಸಂರಚನೆಯು ಮಾರುತಿ ಸುಜುಕಿ ಎರ್ಟಿಗಾದಲ್ಲಿರುವಂತೆಯೇ ಇರುತ್ತದೆ. ಈ ಮೂಲಕ ಮೂರು ಜನರಿರುವ ಎರಡು ಕುಟುಂಬಗಳು ರೂಮಿಯಾನ್‌ನಲ್ಲಿ ಪ್ರಯಾಣಿಸಬಹುದು.
ಬೆಲೆಗಳ ವಿಷಯಕ್ಕೆ ಬಂದರೆ ಮೊದಲೇ ಹೇಳಿದಂತೆ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎರ್ಟಿಗಾ ಆರಂಭಿಕ ಬೆಲೆ 8.64 ಲಕ್ಷ ರೂ. ಇದ್ದು, ಟಾಪ್ ರೂಪಾಂತರದ ಬೆಲೆ 13.08 ಲಕ್ಷ ರೂ. ಇದೆ. ಇವೆರಡು ಎಕ್ಸ್ ಶೋ ರೂಂ ಬೆಲೆಗಳಾಗಿವೆ. ಹೆಚ್ಚೂ ಕಡಿಮೆ ಇದೇ ಬೆಲೆಯ ಅಂತರದಲ್ಲಿ ರೂಮಿಯಾನ್ ಕೂಡ ಬಿಡುಗಡೆಯಾಗುವ ಸಾಧ್ಯತೆಗಳು ಇವೆ.

ಪರ್ಫಾಮೆನ್ಸ್‌ಗೆ ಸಂಬಂಧಿಸಿದಂತೆ, ಟೊಯೊಟಾ ರೂಮಿಯಾನ್ 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ ಗರಿಷ್ಠ 103 HP ಪವರ್ ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ.
ಪೆಟ್ರೋಲ್ ಹೊರತಾಗಿ, ಟೊಯೊಟಾ ರೂಮಿಯಾನ್‌ನಲ್ಲಿ ಸಿಎನ್‌ಜಿ ಆಯ್ಕೆಯನ್ನು ಸಹ ನೀಡಲಾಗುತ್ತದೆ. CNG ಎಂಜಿನ್‌ನ ಪವರ್ ಔಟ್‌ಪುಟ್ ಕೇವಲ 88 HP ಪವರ್ ಮತ್ತು 121.5 Nm ಟಾರ್ಕ್ ಇದೆ. ಇನ್ನು ಮೈಲೇಜ್ ವಿಷಯಕ್ಕೆ ಬಂದರೆ ಎರ್ಟಿಗಾದಂತೆಯೇ ಸಿಎನ್‌ಜಿಯಲ್ಲಿ ಉತ್ತಮ ಮೈಲೇಜ್ ನೀಡಲಿದೆ. ಮೂಲಗಳ ಪ್ರಕಾರ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 20.51 ಕಿ.ಮೀ ಹಾಗೂ ಸಿಎನ್‌ಜಿಯಲ್ಲಿ ಕೆ.ಜಿಗೆ 26.11 ಕಿ.ಮೀ ಮೈಲೇಜ್ ನೀಡಲಿದೆ ಎಂದು ವರದಿಯಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟೊಯೊಟಾ ರೂಮಿಯಾನ್ ಅಧಿಕೃತ ಮಾರಾಟವನ್ನು ಆರಂಭಿಸಿಲ್ಲ. ಮಾರಾಟಕ್ಕೆ ಬಂದಾಗ ಮಾತ್ರ ಅಧಿಕೃತ ಬೆಲೆಯನ್ನು ಪ್ರಕಟಿಸಲಾಗುವುದು. ಟೊಯೊಟಾ ಭಾರತದಲ್ಲಿ ರೂಮಿಯಾನ್ ಅನ್ನು ಆದಷ್ಟು ಬೇಗ ಬಿಡುಗಡೆ ಮಾಡಲು ತುದಿಗಾಲಲ್ಲಿ ನಿಂತಿದೆ. ಈ ಕಾರನ್ನು ಕೆಲವೇ ವಾರಗಳಲ್ಲಿ ಬಿಡುಗಡೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ.
ಇನ್ನು ಟೊಯೊಟಾ ರೂಮಿಯಾನ್ ಮಾರುತಿ ಎರ್ಟಿಗಾದ ರೀಬ್ಯಾಡ್ಜ್ ಆವೃತ್ತಿಯಾಗಿರುವುದರಿಂದ ಎರ್ಟಿಗಾದೊಂದಿಗೆ ಪವರ್‌ಟ್ರೇನ್ ಮತ್ತು ವೈಶಿಷ್ಟ್ಯಗಳನ್ನು ಸಹ ಹಂಚಿಕೊಳ್ಳುತ್ತದೆ. ಆದ್ರೂ ಎರ್ಟಿಗಾಗಿಂತ ಭಿನ್ನವಾಗಿ ಕಾಣಲು ಇವೆರಡರ ನಡುವೆ ಬೆರಳೆಣಿಕೆಯಷ್ಟು ವ್ಯತ್ಯಾಸಗಳನ್ನು ಮಾತ್ರ ನಿರೀಕ್ಷಿಸಲಾಗಿದೆ. ಗ್ರಿಲ್, ಬಣ್ಣದ ಆಯ್ಕೆ, ಬಂಪರ್‌ನಂತಹ ಪ್ರಮುಖ ವ್ಯತ್ಯಾಸಗಳನ್ನು ರೂಮಿಯಾನ್‌ನಲ್ಲಿ ನೋಡಬಹುದು.

ಟೊಯೊಟಾ ಬ್ರಾಂಡ್‌ನಲ್ಲಿನ ಇನ್ನೋವಾ ಕ್ರಿಸ್ಟಾಗೆ ಪರ್ಯಾಯವಾಗಿ ಹೆಚ್ಚು ಕೈಗೆಟುಕುವ ಮತ್ತು ಹೆಚ್ಚು ಬಹುಮುಖ ಕಾರನ್ನು ಹುಡುಕುತ್ತಿರುವವರಿಗೆ ಟೊಯೊಟಾ ರೂಮಿಯಾನ್ ಅತ್ಯುತ್ತಮ ಆಯ್ಕೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಟೊಯೊಟಾ ರೂಮಿಯಾನ್ ಬಿಡುಗಡೆ ಮಾಹಿತಿ ಸಿಕ್ಕ ಕೂಡಲೇ ಲೇಖನ ಮೂಲಕ ಓದಗರಿಗೆ ಮಾಹಿತಿ ನೀಡಲಾಗುವುದು. ಈ ಹೊಸ ಕಾರಿನ ಕುರಿತು ನಿಮ್ಮ ಅಭಿಪ್ರಯಾಗಳನ್ನು ತಪ್ಪದೆ ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications