Upcoming Cars in April: ಭಾರತದಲ್ಲಿ ಎಲ್ಲ ದಾಖಲೆ ಪುಡಿ ಮಾಡಲು ಏಪ್ರಿಲ್‌ನಲ್ಲಿ ಬರಲಿವೆ ಟಾಪ್ ಕಾರುಗಳು
ದೇಶದಲ್ಲಿ ಧೂಳೆಬ್ಬಿಸಲು ಪ್ರಮುಖ ಕಾರು ತಯಾರಕ ಕಂಪನಿಗಳು, ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ವಿವಿಧ ಮಾದರಿಗಳನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಿವೆ. ಪ್ರಮುಖವಾಗಿ ಎಂಜಿ ಕಾಮೆಟ್, ಮಾರುತಿ ಸುಜುಕಿ ಫ್ರಾಂಕ್ಸ್, ಮರ್ಸಿಡಿಸ್ AMG GT 63 S E ಪರ್ಫಾರ್ಮೆನ್ಸ್ ಹಾಗೂ ಲಂಬೋರ್ಗಿನಿ ಉರಸ್ ಎಸ್ ಸೇರಿವೆ. ಹೆಚ್ಚಿನ ವಿವರ ಇಲ್ಲಿದೆ.
ಮೊದಲಿಗೆ ಎಂಜಿ ಕಾಮೆಟ್ ಕಾರಿನ ಬಗ್ಗೆ ಮಾತನಾಡುವುದಾದರೆ, ಇದೊಂದು ಅತ್ಯಂತ ಪುಟ್ಟ ಎಲೆಕ್ಟ್ರಿಕ್ ಕಾರಾಗಿದ್ದು, ಈ ಹಿಂದೆ ಭಾರತದ ರಸ್ತೆಗಳಲ್ಲಿ ಸಂಚರಿಸುತ್ತಿದ್ದ 'ರೇವಾ' ಕಾರಿನಂತೆ ಕಾಣುತ್ತದೆ. ಇದು 20 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರಲಿದೆ. ಜೊತೆಗೆ ಇದರಲ್ಲಿ ಅಳವಡಿಸಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ 40 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 200 - 250 km ರೇಂಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

ಬ್ರಿಟನ್ ಮೂಲದ ಎಂಜಿ ಕಂಪನಿ, ಈ ಕಾರನ್ನು ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್' (GSEV) ಪ್ಲಾಟ್‌ಫಾರ್ಮ್‌ನಡಿ ವಿನ್ಯಾಸ ಮಾಡಿದ್ದು, ಇದರ ತಯಾರಿಕೆಗೆ ಸ್ಥಳೀಯವಾಗಿ ಟಾಟಾ ಆಟೋಕಾಂಪ್‌ನಿಂದ ಬ್ಯಾಟರಿಗಳನ್ನು ಪಡೆದುಕೊಳ್ಳುತ್ತಿರುವುದರಿಂದ ಬೆಲೆ ಕೊಂಚ ಕಡಿಮೆ ಇರಬಹುದು. ರೂ.15 ಲಕ್ಷದೊಳಗೆ ಖರೀದಿಗೆ ಸಿಗಬಹುದು. ಅಲ್ಲದೆ, ಇದು ಎರಡು ಡೋರ್ ಹೊಂದಿರುವ ಜೊತೆಗೆ ಯುವಕರನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ಪಡೆದಿದೆ.
ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯನ್ನು ಮುಂದಿನ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡುವುದಾಗಿ ಘೋಷಿಸಿದೆ. ಇದನ್ನು ಕಳೆದ ಜನವರಿಯಲ್ಲಿ ನಡೆದ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಲಾಗಿತ್ತು. ಅಂದಿನಿಂದಲೇ ಹೆಚ್ಚಿನ ನೀರಿಕ್ಷೆ ಹುಟ್ಟುಹಾಕಿತ್ತು. ಈವರೆಗೆ 15,500 ಬುಕಿಂಗ್ ಪಡೆದುಕೊಂಡಿದೆ. ಆಸಕ್ತ ಗ್ರಾಹಕರು ಈಗಲೂ ಬುಕ್ ಮಾಡಬಹುದು. ರೂ.7.50 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು.
ಈ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ, ಎರಡು ಎಂಜಿನ್ ಆಯ್ಕೆಯಲ್ಲಿ ದೊರೆಯಲಿದೆ. ಅವುಗಳೆಂದರೆ, 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್. ಜೊತೆಗೆ ಈ ಎಸ್‌ಯುವಿ, 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆರ್ಕಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್ ನಂತಹ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.
ಇಟಾಲಿಯ ಸೂಪರ್ ಕಾರು ತಯಾರಕ ಕಂಪನಿ ಲಂಬೋರ್ಗಿನಿ ದೇಶೀಯ ಮಾರುಕಟ್ಟೆನಲ್ಲಿ ಏಪ್ರಿಲ್ ಅಂತ್ಯದೊಳಗೆ ಎಂಟ್ರಿ ಲೆವೆಲ್ 'ಉರಸ್ ಎಸ್' ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ. ಇದು 4.0-ಲೀಟರ್, ಟ್ವಿನ್ ಟರ್ಬೋಚಾರ್ಜ್ಡ್ ವಿ8 ಎಂಜಿನ್ ಹೊಂದಿದ್ದು, 659 bhp ಪವರ್ ಹಾಗೂ 850 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 305 km/h ಟಾಪ್ ಸ್ವೀಡ್ ಹೊಂದಿದ್ದು, ಕೇವಲ 3.5 ಸೆಕೆಂಡುಗಳಲ್ಲಿ 0-100 km/h ವೇಗವನ್ನು ಪಡೆಯಲಿದೆ.
ಮರ್ಸಿಡಿಸ್, ಪವರ್ ಫುಲ್ ಸೆಡಾನ್ 'AMG GT 63 S E ಪರ್ಫಾರ್ಮೆನ್ಸ್' ಅನ್ನು ಏಪ್ರಿಲ್ 11 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು 4.0-ಲೀಟರ್, ಟ್ವಿನ್ ಟರ್ಬೋಚಾರ್ಜ್ಡ್ ವಿ8 ಎಂಜಿನ್ 834.5 bhp ಗರಿಷ್ಠ ಪವರ್, 1,400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕೇವಲ 2.9 ಸೆಕೆಂಡುಗಳಲ್ಲಿ 100km/h ವೇಗವನ್ನು ಪಡೆಯಲಿದೆ.
ಒಟ್ಟಾರೆ, ಮುಂದಿನ ತಿಂಗಳು ಬಿಡುಗಡೆಯಾಗುವ ಎಂಜಿ ಕಾಮೆಟ್ ಹಾಗೂ ಮಾರುತಿ ಸುಜುಕಿ ಫ್ರಾಂಕ್ಸ್ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿವೆ. ಆದರೆ, ಮರ್ಸಿಡಿಸ್ AMG GT 63 S E ಪರ್ಫಾರ್ಮೆನ್ಸ್, ಲಂಬೋರ್ಗಿನಿ ಉರಸ್ ಎಸ್ ಹೆಚ್ಚಿನ ದರವನ್ನು ಹೊಂದಿರಲಿವೆ. ವಿತರಣೆ ಶುರುವಾದ ಮೇಲೆ ಈ ಕಾರುಗಳ ಕಾರ್ಯಕ್ಷಮತೆ ಬಗ್ಗೆ ಮಾಹಿತಿ ಸಿಗಲಿದೆ.


Click it and Unblock the Notifications