ಫೆಬ್ರವರಿ ಟಾಪ್-10 ಕಾರುಗಳು: ಮಾರುತಿ ಅಬ್ಬರಕ್ಕೆ ಟಾಟಾ ಸರಿಯಾದ ಪೈಪೋಟಿ
ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ವಾಹನ ಉದ್ಯಮ ಭಾರೀ ಬೆಳವಣಿಗೆ ಸಾಧಿಸಿದೆ. ವಿದೇಶಿ ಬ್ರಾಂಡ್‌ಗಳಿಗೆ ಭಾರತವು ಉತ್ತಮ ಲಾಭ ಗಳಿಕೆಯ ಮಾರುಕಟ್ಟೆಯಾಗಿ ಬೆಳೆದುನಿಂತಿದೆ. ಇದಕ್ಕೆ ಉದಾಹರಣೆಯೆಂದರೆ ಫೆಬ್ರವರಿ 2024 ರಲ್ಲಿ ಕೇವಲ ಈ ಟಾಪ್ 10 ಕಾರುಗಳೇ ಬರೋಬ್ಬರಿ 1,61,378 ಯುನಿಟ್‌ಗಳ ಸಾಮೂಹಿಕ ಮಾರಾಟವನ್ನು ದಾಖಲಿಸಿವೆ.
ಜೊತೆಗೆ ಕಳೆದ ವರ್ಷ (2023) ಫೆಬ್ರವರಿಯಲ್ಲಿ ಮಾರಾಟವಾಗಿದ್ದ 1,16,992 ಯುನಿಟ್‌ಗಳಿಗೆ ಹೋಲಿಸಿಕೊಂಡರೆ ಈ ವರ್ಷ ಶೇ37.94 ರಷ್ಟು ಬೆಳವಣಿಗೆಯಾಗಿದೆ. ಮಾರುತಿ ಬಲೆನೊ, ಡಿಜೈರ್ ಮತ್ತು ಬ್ರೆಝಾವನ್ನು ಹೊರತುಪಡಿಸಿ, ಟಾಪ್ 10 ನಲ್ಲಿರುವ ಇತರ ಎಲ್ಲಾ ಕಾರುಗಳು ಸಕಾರಾತ್ಮಕ ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿರುವುದು ವಿಶೇಷ.

ಮಾರುತಿ ಸುಜುಕಿ ಭಾರತದಲ್ಲಿ ಕೆಲ ದಶಕಗಳಿಂದ ಅಗ್ರ ಸ್ಥಾನದಲ್ಲಿ ಮುಂದುವೆರೆಯುತ್ತಿದೆ. ಈಗಲೂ ಅದೇ ವೇಗವನ್ನು ಮುಂದುವರಿಸಿದ್ದು, ಫೆಬ್ರವರಿ 2024 ರಲ್ಲಿ ಟಾಪ್ 10 ಪಟ್ಟಿಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. ಟಾಪ್ 10 ಕಾರುಗಳಲ್ಲಿ ಆಶ್ಚರ್ಯಕರವಾಗಿ 6 ಕಾರುಗಳು ಮಾರುತಿ ಕಾರುಗಳಾಗಿವೆ. ಇದರಲ್ಲಿ ವ್ಯಾಗನ್ ಆರ್ ಕಾರು ಭಾರತೀಯರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ.
ಬರೋಬ್ಬರಿ 19,412 ಕಾರುಗಳ ಮಾರಾಟದೊಂದಿಗೆ ಮಾರುತಿ ವ್ಯಾಗನ್ ಆರ್ ಮೊದಲ ಸ್ಥಾನದಲ್ಲಿದೆ. ವಾರ್ಷಿಕವಾಗಿ ಶೇ14.94 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಟಾಪ್ 10 ಕಾರುಗಳಲ್ಲಿ ವ್ಯಾಗನ್ಆರ್ ಪಾಲು ಶೇ12.03 ರಷ್ಟಿದೆ. ಇದಾದ ನಂತರ ಬಲೆನೋ ಇದೆಯಾದರೂ ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಮಾರಾಟವಾಗಿದ್ದು, ಈ ವರ್ಷ ಬಲೆನೋಗಿಂತ ಕಡಿಮೆ ಮಾರಾಟವಾದ್ರೂ ಟಾಟಾ ಪಂಚ್ ಎರಡನೇ ಸ್ಥಾನ ಧಕ್ಕಿಸಿಕೊಂಡಿದೆ.

ಏಕೆಂದರೆ ಟಾಟಾ ಪಂಚ್ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡಿದೆ. ಪಂಚ್ ನೆಕ್ಸಾನ್ ಗಿಂತ ಗಮನಾರ್ಹ ಅಂತರದಿಂದ ಮುಂದಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ 11,169 ಯುನಿಟ್‌ಗಳಿಗೆ ಹೋಲಿಸಿದರೆ ಈ ಬಾರಿ 18,438 ಯುನಿಟ್ ಗಳನ್ನು ಮಾರಾಟ ಮಾಡುವ ಮೂಲಕ ಶೇ 65.08 ರಷ್ಟು ಪ್ರಭಾವಶಾಲಿ ಲಾಭವನ್ನು ತಂದುಕೊಂಟ್ಟಿದೆ. ಪಟ್ಟಿಯಲ್ಲಿ ಪಂಚ್ ಪಾಲು ಶೇ11.43 ರಷ್ಟಿದೆ.
ಪಂಚ್ ನಂತರ ಮರಳಿ 3ನೇ ಸ್ಥಾನದಿಂದ ಕ್ರಮವಾಗಿ 6ನೇ ಸ್ಥಾನದವರೆಗೆ ಮಾರುತಿ ದಕ್ಕಿಸಿಕೊಂಡಿದೆ. ಬಲೆನೊ ಮೂರನೇ ಸ್ಥಾನದಲ್ಲಿದ್ದು, ಫೆಬ್ರವರಿಯಲ್ಲಿ 17,517 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಾರ್ಷಿಕವಾಗಿ ಶೇ 5.78% ರಷ್ಟು ಇಳಿಕೆಯನ್ನು ಕಂಡಿದೆ. ಬಲೆನೊ ಟಾಪ್ 10 ಪಟ್ಟಿಯಲ್ಲಿ ಶೇ10.85 ಪಾಲನ್ನು ಪಡೆದಿದೆ.

ಬ್ರೆಝಾ ಮತ್ತು ಡಿಜೈರ್ ಮಾರಾಟವು 15 ಸಾವಿರಕ್ಕಿಂತ ಹೆಚ್ಚಿದ್ದರೂ, ವಾರ್ಷಿಕವಾಗಿ ಬೆಳವಣಿಗೆಯಲ್ಲಿ ಇಳಿಕೆಯಾಗಿದೆ. ಬ್ರೆಝಾ ಮಾರಾಟವು ಶೇ0.14 ರಷ್ಟು ಹಾಗೂ ಡಿಜೈರ್ ಶೇ5.72 ರಷ್ಟು ಕುಸಿದಿದೆ. ಮಾರುತಿ ಎರ್ಟಿಗಾ 6ನೇ ಸ್ಥಾನದಲ್ಲಿದ್ದು 15,519 ಕಾರುಗಳನ್ನು ಮಾರಾಟ ಮಾಡಿದೆ. ವಾರ್ಷಿಕವಾಗಿ ಶೇ 139.79 ರಷ್ಟು ಬೆಳವಣಿಗೆ ಸಾಧಿಸಿದೆ.
ಹ್ಯುಂಡೈ ಕ್ರೆಟಾ 7 ನೇ ಸ್ಥಾನದಲ್ಲಿದ್ದು, ಫೆಬ್ರವರಿಯಲ್ಲಿ 15,276 ಯುನಿಟ್ ಕ್ರೆಟಾ ಕಾರುಗಳು ಮಾರಾಟವಾಗಿವೆ. ವಾರ್ಷಿಕವಾಗಿ ಶೇ 46.59 ರಷ್ಟು ಬೆಳವಣಿಗೆ ಸಾದಿಸಿದೆ. ಮಹೀಂದ್ರಾ ಸ್ಕಾರ್ಪಿಯೋ/ಎನ್ 8ನೇ ಸ್ಥಾನದಲ್ಲಿದ್ದು, ಶೇ 116.56 ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸುವ ಮೂಲಕ ಮಾರಾಟವು ದ್ವಿಗುಣಗೊಂಡಿದೆ.

9ನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್ ಇದ್ದು, ಬರೋಬ್ಬರಿ 14,395 ಯುನಿಟ್ ಕಾರುಗಳು ಮಾರಾಟವಾಗಿವೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಮಾರಾಟವಾದ 13,914 ಕಾರುಗಳಿಗೆ ಹೋಲಿಸಿದರೆ ವಾರ್ಷಿಕವಾಗಿ 3.46 ರಷ್ಟು ಬೆಳವಣಿಗೆ ಸಾಧಿಸಿದೆ. ಮಾರುತಿ ಫ್ರಾಂಕ್ಸ್ 14,168 ಕಾರುಗಳ ಮಾರಾಟದೊಂದಿಗೆ 10ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ನಿಮ್ಮಿಷ್ಟದ ಕಾರನ್ನು ಕಮೆಂಟ್ ಮಾಡಿ.


Click it and Unblock the Notifications








