ಗಡ್ಕರಿಯವರ ಹೈಬ್ರಿಡ್ ಕಾರುಗಳ 5 ಲಕ್ಷ ರೂ. ಬೆಲೆ ಇಳಿಕೆಗೆ 'ನೋ' ಎಂದ ಸೀತಾರಾಮನ್: ಕಾರಣವೇನು?
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕೆಲವು ತಿಂಗಳ ಹಿಂದೆ ಹೈಬ್ರಿಡ್ ಕಾರುಗಳ ಮೇಲಿನ GST (ಸರಕು ಮತ್ತು ಸೇವಾ ತೆರಿಗೆಯನ್ನು)ಯನ್ನು ಗಣನೀಯವಾಗಿ ಕಡಿಮೆ ಮಾಡಲು ಪ್ರಸ್ತಾಪಿಸಿದ್ದರು. ಆದರೆ ಈಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ನಿತಿನ್ ಗಡ್ಕರಿ ಪ್ರಸ್ತಾಪಿಸಿದ್ದ ಈ ಕ್ರಮದಿಂದಾಗಿ ಹೈಬ್ರಿಡ್ ವಾಹನಗಳ ಬೆಲೆಯನ್ನು 5 ಲಕ್ಷ ರೂ. ಇಳಿಕೆ ಮಾಡಬಹುದಿತ್ತು. ಆದರೆ ಈಗ, ಸರ್ಕಾರವು ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಮೊದಲು ಹೆಚ್ಚಿಸಲು ಬಯಸುತ್ತಿದೆ ಎಂಬುದು ನಿರ್ಮಲಾ ಸೀತಾರಾಮನ್ ಅವರ ವಾದವಾಗಿದೆ ಎಂದು ವರದಿಗಳು ತಿಳಿಸಿವೆ. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಮೂಲಕ ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸಲು ಮತ್ತು ದೇಶದಲ್ಲಿ ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ಅವರು ಬಯಸುತ್ತಿದ್ದಾರೆ. ಹಾಗಾಗಿ ಹೈಬ್ರಿಡ್ ಕಾರುಗಳ ಜಿಎಸ್‌ಟಿ ಇಳಿಕೆ ಬಗ್ಗೆ ಮುಂಬರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ನೇತೃತ್ವದ ಹಣಕಾಸು ಸಚಿವಾಲಯವು ಚರ್ಚಿಸುವ ನಿರೀಕ್ಷೆಯಿಲ್ಲ.

ಗಡ್ಕರಿ ಪ್ರಸ್ತಾವನೆ ಏನು?: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕೆಲವು ತಿಂಗಳ ಹಿಂದೆ ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಪ್ರಸ್ತಾಪಿಸಿದ್ದರು. ಶೇ.48ರಿಂದ ಶೇ.12ಕ್ಕೆ ಇಳಿಸುವಂತೆ ಅವರು ಹಣಕಾಸು ಸಚಿವರನ್ನು ಒತ್ತಾಯಿಸಿದ್ದರು. ಇಂಧನ ಚಾಲಿತ ವಾಹನಗಳಿಗಿಂತ ಸ್ವಚ್ಛವಾಗಿರುವ ಹೈಬ್ರಿಡ್‌ಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ ಎಂದು ಹೇಳಿದ್ದರು.
ನ್ಯೂಸ್ 18ನ ರೈಸಿಂಗ್ ಭಾರತ್ ಶೃಂಗಸಭೆ 2024 ರಲ್ಲೂ ಮಾತನಾಡಿದ್ದ ಗಡ್ಕರಿ, ಹೈಬ್ರಿಡ್ ವಾಹನಗಳ ಪರಿಸರ ಪ್ರಯೋಜನಗಳನ್ನು ಒತ್ತಿ ಹೇಳಿದ್ದರು. ಇಂಧನ ಚಾಲಿತ ವಾಹನಗಳಿಗೆ ಹೋಲಿಸಿದರೆ ಈ ವಾಹನಗಳು ಶೇ60 ರಷ್ಟು ಎಲೆಕ್ಟ್ರಿಕ್ ಚಾಲಿತವಾಗಿವೆ. ಕಡಿಮೆ ಮಾಲಿನ್ಯವನ್ನು ಹೊರಸೂಸುತ್ತವೆ. ಹೈಬ್ರಿಡ್‌ಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವುದರಿಂದ ಅವುಗಳ ಖರೀದಿಗೆ ಉತ್ತೇಜನ ಸಿಗುತ್ತದೆ ಎಂದು ಗಡ್ಕರಿ ಹೇಳಿದ್ದರು.

ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?: ಹೈಬ್ರಿಡ್ ವಾಹನಗಳ ಮೇಲಿನ ಪ್ರಸ್ತುತ ಜಿಎಸ್‌ಟಿ ದರಗಳನ್ನು ಉಳಿಸಿಕೊಂಡು, ಎಲೆಕ್ಟ್ರಿಕ್ ವಾಹನಗಳಿಗೆ ಜಿಎಸ್‌ಟಿಯನ್ನು ಕಡಿಮೆ ಮಾಡುವತ್ತ ಗಮನ ಹರಿಸುವ ಮೂಲಕ ಎಲೆಕ್ಟ್ರಿಕ್ ವಾಹನ ವಲಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದಾರೆ. ಈ ಮೂಲಕ ಹೈಬ್ರಿಡ್‌ಗಳ ಸಂಭಾವ್ಯ ಅಲ್ಪಾವಧಿಯ ಪ್ರಯೋಜನಗಳನ್ನು ಹಣಕಾಸು ಸಚಿವರು ಕಡೆಗಣಿಸಿದ್ದಾರೆ ಎಂದು ವರದಿಯಾಗಿದೆ. ಈ ಕ್ರಮವು, ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಿರುವ ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಆಟೋಮೋಟಿವ್ ನಂತಹ ಭಾರತೀಯ ವಾಹನ ತಯಾರಕರಿಗೆ ಅನುಕೂಲಕರವಾಗಲಿದೆ.
ಒಂದು ವೇಳೆ ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿ ಕಡಿತದ ಗಡ್ಕರಿ ಅವರ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದರೆ, ಭಾರತದಲ್ಲಿ ಜನಪ್ರಿಯ ಬ್ರಾಂಡ್‌ಗಳ ಹೈಬ್ರಿಡ್ ಕಾರುಗಳ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದಿತ್ತು. ದೇಶದಲ್ಲಿ ಪ್ರತಿ ಹೈಬ್ರಿಡ್ ಕಾರು ಎಷ್ಟು ಅಗ್ಗವಾಗಿರಬಹುದು ಎಂಬ ವಿವರಗಳು ಈ ಕೆಳಗಿನಂತಿವೆ.

ಪ್ರಸ್ತುತ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.20.09 ಲಕ್ಷಗಳಾಗಿದೆ. ಪ್ರಸ್ತಾವಿತ ಶೇ12 ಜಿಎಸ್‌ಟಿ ಮತ್ತು ಶೇ15 ಸೆಸ್‌ನೊಂದಿಗೆ, ಹೊಸ ಎಕ್ಸ್ ಶೋರೂಂ ಬೆಲೆ ಸುಮಾರು 14.54 ಲಕ್ಷ ರೂ. ಇರಬಹುದಿತ್ತು. ಇದರರ್ಥ ಈ ಕಡಿತವು 5.55 ಲಕ್ಷ ರೂ.ಗಳ ಬೆಲೆ ಕಡಿತವಾಗಬಹುದು.
ಹಾಗೆಯೇ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಹೈಬ್ರಿಡ್ ರೂಪಾಂತರದ ಬೆಲೆ ರೂ.20.19 ಲಕ್ಷಗಳಾಗಿದ್ದು, ಜಿಎಸ್‌ಟಿ ಕಡಿತ ಬಳಿಕ ಸುಮಾರು 5-6 ಲಕ್ಷ ರೂ. ಇಳಿಕೆಯಾಗುತಿತ್ತು. ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ 25.72 ಲಕ್ಷ ರೂ.ಗಳಿಂದ 30.698 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ. ಇದರಲ್ಲೂ 5.55 ಲಕ್ಷ ರೂ.ಗಳ ಬೆಲೆ ಕಡಿತವಾಗಬಹುದಿತ್ತು.


Click it and Unblock the Notifications








