ಡಸ್ಟರ್, ಇಕೊಸ್ಪೋರ್ಟ್‌ಗೆ ಸೆಡ್ಡು ನೀಡಲು ಷೆವರ್ಲೆ ಟ್ರಾಕ್ಸ್ ಎಂಟ್ರಿ?
ಬ್ರೆಜಿಲ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ಷೆವರ್ಲೆ ಟ್ರಾಕ್ ಎಸ್‌ಯುವಿ ನಿಕಟ ಭವಿಷ್ಯದಲ್ಲಿ ಭಾರತಕ್ಕೆ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ವಾಹನ ಮೂಲಗಳು ವರದಿ ಮಾಡಿವೆ.
ಪ್ರಮುಖವಾಗಿಯೂ ರೆನೊ ಡಸ್ಟರ್ ಹಾಗೂ ಇತ್ತೀಚೆಗಷ್ಟೇ ಲಾಂಚ್ ಆಗಿರುವ ಫೋರ್ಡ್ ಇಕೊಸ್ಪೋರ್ಟ್ ಪ್ರತಿಸ್ಪರ್ಧಿ ರೂಪದಲ್ಲಿ ಭಾರತಕ್ಕೆ ಷೆವರ್ಲೆ ಟ್ರಾಕ್ಸ್ ಪರಿಚಯಿಸಲು ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಇರಾದೆ ಹೊಂದಿದೆ. ಇದನ್ನು ಷೆವಿ ಟ್ರಾಕರ್ (Tracker or Trax) ಎಂದೂ ಹೆಸರಿಸಲಾಗುತ್ತಿದೆ.
ಹಾಗೊಂದು ವೇಳೆ ಷೆವರ್ಲೆ ಟ್ರಾಕ್ಸ್ ಆಗಮನವಾದಲ್ಲಿ ಕ್ರೀಡಾ ಬಳಕೆಯ ವಾಹನಗಳಲ್ಲಿ ದೇಶದಲ್ಲಿ ನಿಕಟ ಪೈಪೋಟಿ ಏರ್ಪಡಲಿದೆ. ಇದು ದೇಶದ ನೂತನ ಕಾರು ಖರೀದಿ ಗ್ರಾಹಕರ ದೃಷ್ಟಿಕೋನದಲ್ಲಿ ಉತ್ತಮ ಬೆಳವಣಿಗೆಯಾಗಿದ್ದು, ಅಂತರಾಷ್ಟ್ಟೀಯ ಮಟ್ಟದಲ್ಲೂ ಭಾರತದ ಮಾರುಕಟ್ಟೆ ಬೆಳೆಯಲಿದೆ.

ಬ್ರೆಜಿಲ್ ಮಾರುಕಟ್ಟೆಯಲ್ಲಿ ಜುಲೈ 14ರಂದು ಲಾಂಚ್ ಆಗಿರುವ ಷೆವರ್ಲೆ ಟ್ರಾಕ್ಸ್ ಭಾರತಕ್ಕೂ ಎಂಟ್ರಿ ಕೊಡುವ ಸಾಧ್ಯತೆಗಳು ಹೆಚ್ಚಾಗಿವೆ. ಇದು ಐದು ಸೀಟುಗಳ ಎಸ್‌ಯುವಿ ಆಗಿರಲಿದ್ದು, ಮೊದಲ ನೋಟದಲ್ಲೇ ಆಕ್ರಮಣಕಾರಿ ವಿನ್ಯಾಸ ಪಡೆದುಕೊಂಡಿದೆ.

opel mocca ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ನೂತನ ಷೆವರ್ಲೆ ಟ್ರಾಕ್ 4.2 ಮೀಟರ್ ಉದ್ದ ಹೊಂದಿರಲಿದೆ. ಅಂದರೆ ಭಾರತದಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನಾಲ್ಕು ಮೀಟರ್ ಉದ್ದ ಪರಿಮಿತಿ ಇರಬೇಕಾಗಿದೆ.

ಬ್ರೆಜಿಲ್ ಮಾರುಕಟ್ಟೆಯಲ್ಲಿ 1.6 ಲೀಟರ್ ಹಾಗೂ 1.8 ಲೀಟರ್ ಇಕೊ ಟೆಕ್ ಎಂಜಿನ್ ಆಳವಡಿಸಲಾಗಿದೆ. ಇನ್ನು ಭಾರತದಲ್ಲಿ 1.4, 1.6 ಪೆಟ್ರೋಲ್ ಹಾಗೂ 1.7 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಾಧ್ಯತೆಗಳಿವೆ. ಅಂದರೆ ಇದು ಇಕೊಸ್ಪೋರ್ಟ್‌ನ ಇಕೊ ಬೂಸ್ಟ್ ಪ್ರತಿಸ್ಪರ್ಧಿಯಾಗಿ ಇಕೊ ಟೆಕ್ ಎಂಜಿನ್ ಪಡೆದುಕೊಳ್ಳಲಿದೆ.

ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಾಧ್ಯತೆಯಿದೆ. ಕಾರಿನ ಅಗಲ 1.77 ಮೀಟರ್ ಆಗಿರಲಿದೆ.

ಹೆಚ್ಚಿನ ಸ್ಥಳಾವಕಾಶ
ವಿಶೇಷವಾಗಿಯೂ ಭಾರತ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ವಿಶಾಲವಾದ ಬೂಟ್ ರೂಂ ಲಗ್ಗಿತ್ತಿಸಲಾಗುತ್ತಿದೆ.

ಸ್ಟಾರ್ಟ್ ಸ್ಟಾಪ್ ಸಿಸ್ಟಂ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಎಲ್ಲ ಸ್ಟಾಂಡರ್ಡ್ ಮಾಡೆಲ್‌ಗಳಲ್ಲಿ ಲಭ್ಯವಾಗಲಿದೆ. ಹಾಗೆಯೇ 17 ಇಂಚು ಅಲಾಯ್ ವೀಲ್ ಪಡೆದುಕೊಳ್ಳಲಿದೆ.

ಬ್ರೆಜಿಲ್ ಮಾರುಕಟ್ಟೆಯಲ್ಲಿ ಷೆವರ್ಲೆ ಟ್ರಾಕ್ಸ್ ಬೆಲೆ 15.9 ಲಕ್ಷ ರು.ಗಳಿಂದ 19 ಲಕ್ಷ ರು.ಗಳ ವರೆಗಿದೆ. ಇದು ಭಾರತ ಮಾರುಕಟ್ಟೆಯಲ್ಲಿ ಬೇಸ್ ವೆರಿಯಂಟ್ 10 ಲಕ್ಷ ರು. ಹಾಗೂ ಟಾಪ್ ಎಂಡ್ ವೆರಿಯಂಟ್ 12 ಲಕ್ಷ ರು.ಗಳಿಗೆ ಆಗಮನವಾಗುವ ಸಾಧ್ಯತೆಗಳಿವೆ.


Click it and Unblock the Notifications








