ಇನ್ನು ಅಪಘಾತ ದೂರದ ಮಾತು ಎಂದಿದೆ ಟೊಯೊಟಾ
ನಮ್ಮ ದೈನಂದಿನ ಜೀವನದಲ್ಲಿ ಸಾವಿರಾರು ವಾಹನ ಅಪಘಾತ ಪ್ರಕರಣಗಳನ್ನು ಸದಾ ಕೇಳುತ್ತಿರುತ್ತೇವೆ. ಬಹುತೇಕ ಅಪಘಾತ ಪ್ರಕರಣಗಳು ಚಾಲಕರ ಅಸಡ್ಡೆಯಿಂದಲೇ ಸಂಭವಿಸುತ್ತದೆ ಎಂಬುದು ಸಹ ಅಷ್ಟೇ ಸತ್ಯ. ಇಲ್ಲಿ ಸವಾರರು 'ಅವಸರವೇ ಅಪಘಾತಕ್ಕೆ ಕಾರಣ' ಎಂಬ ವೇದವಾಕ್ಯವನ್ನು ಗಾಳಿಗೆ ತೂರಿಬಿಡುತ್ತಾರೆ. ಪರಿಣಾಮ ಮೃತ್ಯುಕೂಪಕ್ಕೆ ಶರಣಾಗುವ ಎಷ್ಟೋ ಘಟನೆಗಳನ್ನು ನಾವು ವಾರ್ತಾ ಪತ್ರಿಕೆಗಳಲ್ಲಿ ಓದಿರುತ್ತೇವೆ.
ಹಾಗಿರುವಾಗ ನೂತನ ಸಂಶೋಧನೆಯಲ್ಲಿ ತೊಡಗಿರುವ ಕಾರು ತಯಾರಕ ಸಂಸ್ಥೆಗಳು ರಸ್ತೆ ಅಪಘಾತಗಳನ್ನು ಆದಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಮೊರೆ ಹೋಗುತ್ತವೆ.
ಹೀಗೆ ಸಂಶೋಧನೆಯಲ್ಲಿ ತೊಡಗಿರುವ ಜಗತ್ತಿನ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟೊಯೊಟಾ, ನೂತನ ಆಟೋ ಪೈಲಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದು ರಸ್ತೆಗಳಲ್ಲಿ ಸಂಚರಿಸುವಾಗ ಅಪಘಾತ ತಡೆಗಟ್ಟಲು ನೆರವಾಗಲಿದೆ ಎಂದು ಕಂಪನಿ ಪ್ರತಿಪಾದಿಸಿದೆ.

ಟೊಯೊಟಾ ಮುಂದಿನ ಜನಾಂಗದ ಕಾರುಗಳಿಗೆ ನೂತನ ಆಟೋ ಪೈಲಟ್ ಸಿಸ್ಟಂ ಆಳವಡಿಕೆಯಾಗಲಿದೆ. ಇದು ಅಪಘಾತ ತಡೆಗಟ್ಟುವುದಲ್ಲದೆ ಕಾರು ರಸ್ತೆಯ ಮಧ್ಯದಲ್ಲಿ ಸಂಚರಿಸುವುದನ್ನು ಖಾತ್ರಿಪಡಿಸಲಿದೆ.

ಈ ಚಾಲನಾ ಪೂರಕ ತಂತ್ರಜ್ಞಾನಗಳು ಮಾನವ ತಪ್ಪುಗಳನ್ನು ಕಡಿಮೆಗೊಳಿಸಲು ನೆರವಾಗುವುದಲ್ಲದೆ ಡ್ರೈವಿಂಗ್ ಒತ್ತಡ ಕಡಿಮೆ ಮಾಡಲಿದೆ. ಈ ಮೂಲಕ ಟ್ರಾಫಿಕ್ ಅಪಘಾತಗಳನ್ನು ತಪ್ಪಿಸಬಹುದಾಗಿದೆ.

ಆಟೋ ಪೈಲಟ್ ಸಿಸ್ಟಂ ಮುಖಾಂತರ ಸ್ವಯಂಕೃತ ಗಣಕಯಂತ್ರ ಕಾರ್ಯ ನಿರ್ವಹಿಸಲಿದೆ. ಇದು ಅಪಘಾತ ಸಂದರ್ಭದಲ್ಲಿ ಚಾಲಕನಿಗೆ ಎಚ್ಚರಿಕೆ ರವಾನಿಸುವುದಲ್ಲದೆ, ಕಾರನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ.

ಅದೇ ರೀತಿ ಮುಂದಿನ ದಿನಗಳಲ್ಲಿ ಆಟೋಮೇಟಡ್ ಹೈವೇ ಡ್ರೈವಿಂಗ್ ಅಸಿಸ್ಟ್ (ಎಎಚ್‌ಡಿಎ) ಸೇವೆ ಕೂಡಾ ಜಾರಿಗೊಳಿಸುವ ಇರಾದೆಯನ್ನು ಕಂಪನಿ ಹೊಂದಿದೆ.

ನಿಮ್ಮ ಮಾಹಿತಿಗಾಗಿ, ಟೊಯೊಟಾ ಈಗಾಗಲೇ ಲೆಕ್ಸಸ್ ಲಗ್ಷುರಿ ಸೆಡಾನ್ ಕಾರಿಗೆ ಅಪಘಾತಪೂರ್ವ ಬ್ರೇಕಿಂಗ್ ಅಸಿಸ್ಟ್ ಸಿಸ್ಟಂನ್ನು ಆಳವಡಿಸಿದೆ. ಇದು 2015ರ ವೇಳೆಗೆ ಇತರ ಮಾಡೆಲ್‌ಗೂ ಲಭ್ಯವಾಗಲಿದೆ.


Click it and Unblock the Notifications








