ರೋಡ್ ವಿಲನ್ ನೀನಾಗಬೇಡ ಗೆಳೆಯ..
ರಸ್ತೆಗಳಲ್ಲಿ ದಿನನಿತ್ಯ ಇಂತಹ "ರೋಡ್ ರೇಜ್" ನಡೆದು ರೇಜಿಗೆ ಹುಟ್ಟಿಸುತ್ತವೆ. ಕೆಲವರು ಇಂತಹ ಸಮಯದಲ್ಲಿ ಹಣ ವಸೂಲಾತಿಗಾಗಿ ರೌದ್ರವತಾರದ ಅಭಿನಯ ಮಾಡುತ್ತಾರೆ. ಅದು ನಾವು ತುಂಬಾ ಪ್ರೀತಿಸುವ ವಾಹನವಾಗಿರಬಹುದು. ಆದರೆ ಅದಕ್ಯಾಕೆ ಅಷ್ಟು ಮೈಬಿದ್ದು ಹೋಗುತ್ತೇವೆ? ನಮ್ಮ ವಾಹನಕ್ಕೆ ಚಿಕ್ಕ ಗೀರು ಬಿದ್ದರೂ ಹೊಡೆದಾಟ, ಬಡಿದಾಟಕ್ಕೆ ನಾವ್ಯಾಕೆ ಇಳಿಯಬೇಕು? ತಪ್ಪು ಮಾಡದಿದ್ದರೂ ಕೆಲವೊಮ್ಮೆ ರಸ್ತೆಯಲ್ಲಿ ಅಮಾಯಕರು ಯಾಕೆ ಒದೆ ತಿನ್ನುತ್ತಾರೆ?
ಕೊಂಚ ಬುದ್ಧಿ ಉಪಯೋಗಿಸಿದರೆ ನಾವು ರೋಡ್ ವಿಲನ್ ಗಳಾಗುವುದನ್ನು ಅಥವಾ ರೋಡ್ ವಿಲನ್ ಗಳಿಂದ ಪಾರಾಗಬಹುದು. ಇಲ್ಲಿವೆ ಕೆಲವು ಟಿಪ್ಸ್:
* ಸ್ವಲ್ಪ ಬೇಗ ಹೊರಡಿ: ಅರ್ಜೆಂಟಾಗಿ, ವೇಗವಾಗಿ ವಾಹನ ಚಲಾಯಿಸಲು ಹೆಚ್ಚಿನವರು ನೀಡುವ ಕಾರಣ. ಟೈಮಿಲ್ಲ ಅಂತ. ಆಫೀಸ್ ಗೆ ತಡವಾಗುತ್ತಿದೆ ಎಂದು ಎಡೆಸಿಕ್ಕಲ್ಲಿ ವಾಹನ ನುಗ್ಗಿಸಿಕೊಂಡು ಹೋಗುವವರೇ ಹೆಚ್ಚು. ಅವಸರ ಎಂದಿಗೂ ಅಪಾಯ. ಸ್ವಲ್ಪ ಬೇಗ ಮನೆಯಿಂದ ಹೊರಡರೆ ಇಂತಹ ಸಮಸ್ಯೆಗಳಿಂದ ಮುಕ್ತಿದೊರಕಬಹುದು.
* ಕ್ಷಮಿಸಿ: ರಸ್ತೆಯಲ್ಲಿ ಕೆಲವು ತಪ್ಪುಗಳು ಆಗುವುದು ಸಹಜ. ಇಂತಹ ಆಕಸ್ಮಿಕ ಸನ್ನಿವೇಶಗಳ ಸಂದರ್ಭದಲ್ಲಿ ವಿನಮ್ರ ನಗುವಿನೊಂದಿಗೆ "ಸಾರಿ" ಅಂತ ಹೇಳಿನೋಡಿ. ಸಾರಿ ಎಂಬ ಪದ ಅದ್ಭುತವನ್ನೇ ಸೃಷ್ಟಿಸಿಬಿಡುತ್ತದೆ. ರಸ್ತೆಯಲ್ಲಿ ಮಾರಾಮಾರಿ ನಡೆಯಬೇಕಿದ್ದ ಪ್ರಕರಣ "ಸಾರಿ" ಎಂಬ ಪದದಿಂದಾಗಿ ಶಾಂತಿಯಲ್ಲಿ ಪರ್ಯಾವಸನವಾಗುತ್ತದೆ.
* ಸರಿಯಾದ ವಿಮೆ ನಿಮ್ಮ ವಾಹನಕ್ಕಿರಲಿ: ರೋಡ್ ರೇಜ್ ಸಂದರ್ಭದಲ್ಲಿ ನೀವು ಹೆಚ್ಚು ಚಿಂತೆ ಮಾಡುವುದು ವಾಹನ ರಿಪೇರಿಗೆ ಉಂಟಾಗುವ ವೆಚ್ಚದ ಕುರಿತು. ಇದೇ ಕಾರಣಕ್ಕೆ ರಸ್ತೆಯಲ್ಲಿ ನೀವು ಸ್ಥಿಮಿತ ಕಳೆದುಕೊಂಡು ಆತನ ಮೇಲೆ ಹೊಡೆಯಲು ಹೋಗುತ್ತೀರಿ. ವಾಹನಕ್ಕೆ ಸಮರ್ಪಕವಾದ ವಿಮಾ ಪಾಲಿಸಿಗಳಿದ್ದರೆ ಹಣಕಾಸು ನಷ್ಟದ ಕುರಿತ ಚಿಂತೆಯನ್ನು ಕಡಿಮೆ ಮಾಡಿಕೊಳ್ಳಬಹುದು.
* ರಂಪ ಮಾಡದೇ ಮರೆತುಬಿಡಿ: ರಸ್ತೆಯಲ್ಲಿ ಯಾರಿಗೂ ಇತರರನ್ನು ಕೊಲೆ ಮಾಡುವ ಉದ್ದೇಶ ಇರುವುದಿಲ್ಲ. ವಾಹನಕ್ಕೆ ಡಿಕ್ಕಿ ಹೊಡೆಯುವಉದ್ದೇಶ ಯಾರಿಗೂ ಇರುವುದಿಲ್ಲ. ಹೆಚ್ಚಾಗಿ ಇಂತಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ. ಕೆಲವೊಮ್ಮೆ ಇದಕ್ಕೆ ನಾವು ಮತ್ತು ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಾತ ಅಲ್ಲದೇ ಬೇರೆ ಯಾವುದೋ ವಿಷಯ ಕಾರಣವಾಗಿರಬಹುದು. ಅಂದರೆ ಒಮ್ಮೆಗೆ ಯಾರಾದರೂ ರಸ್ತೆಯಲ್ಲಿ ಅಡ್ಡಬಂದಾಗ ಅಥವಾ ಪ್ರಾಣಿಗಳು ಅಡ್ಡಬಂದಾಗ ಇಂತಹ ಅಪಘಾತಗಳಾಗಬಹುದು. ಆಕಸ್ಮಿಕ ಘಟನೆ ನಡೆಯಲು ಕಾರಣ ಏನೆಂದು ತಿಳಿದುಕೊಂಡು ವಾಹನಕ್ಕೆ ತಾಗಿಸಿದಾತನ್ನು ಕ್ಷಮಿಸುವ ಗುಣ ನಮಗಿರಲಿ.
* ರಸ್ತೆಯ ಮೇಲೆ ಎಚ್ಚರಿಕೆಯ ದೃಷ್ಟಿ: ರಸ್ತೆಯಲ್ಲಿ ಚಾಲಕರಿಗೆ ಗೊತ್ತಾಗದಂತೆ ಅರ್ಜೆಂಟ್ ನಲ್ಲಿರುವ ವ್ಯಕ್ತಿಗಳು ಚಲಿಸುತ್ತಿರುತ್ತಾರೆ. ಯಾರು ಯಾವ ಕಡೆಯಿಂದ ಬರುತ್ತಾರೆ ಅನ್ನೋದೆ ಗೊತ್ತಾಗುವುದಿಲ್ಲ. ಕೆಲವೊಂದು ವಾಹನಗಳು ಓವರ್ ಟೆಕ್ ಮಾಡುವ ಭರದಲ್ಲಿರುತ್ತವೆ. ಇಂತಹ ಹವಾ ಕಂಡಾಕ್ಷಣ ಒಂದಿಷ್ಟು ಎಚ್ಚರಿಕೆಯಿಂದ ನಿಧಾನವಾಗಿ ಚಲಿಸಬೇಕು. ಕೆಲವು ನಿಮಿಷ ತಡವಾದರೂ ಪರವಾಗಿಲ್ಲ. ಸುಮ್ಮಗೆ ರಸ್ತೆಯಲ್ಲಿ ಮಾರಾಮಾರಿ, ಸಾವು ನೋವುಗಳು ಸಂಭವಿಸುವುದನ್ನು ತಪ್ಪಿಸಬಹುದು.
* ಆಹಂ ಬಿಟ್ಟುಬಿಡೋಣ: ರೋಡ್ ರೇಜ್ ಗೆ ಮುಖ್ಯ ಕಾರಣ ನಮ್ಮಲ್ಲಿರುವ ಆಹಂ. ನಾವು ಇಗೋ ವನ್ನು ಮನೆಯಲ್ಲಿಯೇ ಬಿಟ್ಟುಬರೋಣ. ರಸ್ತೆಯಲ್ಲಿ ಯಾವುದೋ ಮೊಟೊಜಿಪಿ ರೇಸ್ ವಿನ್ ಮಾಡಲು ಪ್ರಯಾಣಿಸುತ್ತಿಲ್ಲ ಎಂಬುದು ನೆನಪಿನಲ್ಲಿರಲಿ. ಇಂತಹ ಇಗೊದಿಂದ ಹೆಚ್ಚಿನ ರಸ್ತೆ ಅಪಘಾತಗಳು ನಡೆಯುತ್ತವೆ.
* ಪರಿಸ್ಥಿತಿ ಅವಲೋಕನ: ಬೆಂಗಳೂರು, ದೆಹಲಿ, ಮುಂಬೈ ಮುಂತಾದ ಕಡೆ ಹೆಚ್ಚಿನವರು ವಲಸಿಗರಾಗಿರುತ್ತಾರೆ. ಅಲ್ಲಿ ಯಾರ ಪರವಾಗಿ ಎಷ್ಟು ಜನ ನಿಲ್ಲುತ್ತಾರೋ ಅದು ರೋಡ್ ರೇಜ್ ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಸ್ಥಳೀಯರಾಗಿದ್ದರೆ ಹೆಚ್ಚಿನ ಸ್ಥಳೀಯರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ನೀವು ಯಾವುದೋ ಊರಿನಿಂದ ವಲಸೆ ಬಂದವರಾಗಿದ್ದರೆ ನಿಮ್ಮ ತಪ್ಪಿಲ್ಲದಿದ್ದರೂ ಹೆಚ್ಚಾಗಿ ಪರಿಸ್ಥಿತಿ ನಿಮ್ಮ ವಿರುದ್ಧವಾಗಿರುತ್ತದೆ. ಸುಮ್ಮಗೆ ರಿಸ್ಕ್ ಯಾಕೆ? ಪರಿಸ್ಥಿತಿ ಅವಲೋಕಿಸಿ, ರೋಡ್ ರೇಜ್ ನಿಂದ ಪಾರಾಗೋಣ.
*ಶಾಂತಿಯುತವಾಗಿ ವರ್ತಿಸಿ: ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಬೈಕ್ ಅಥವಾ ಕಾರ್ ಗಿಂತ ನಿಮ್ಮ ಮನೆಯವರಿಗೆ ನಿಮ್ಮ ಅವಶ್ಯಕತೆಯಿದೆ ಎಂಬುದು ನೆನಪಿನಲ್ಲಿದ್ದರೆ ಸಾಕು. ಹೀಗಾಗಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಡ್ ಮಾಡೋಣ. ರೋಡ್ ರೇಜ್ ಗೆ ಅವಕಾಶ ನೀಡದಂತೆ ಶಾಂತಿಯುತವಾಗಿ ವರ್ತಿಸೋಣ.


Click it and Unblock the Notifications









