ಜೋಪಾನ ರಾತ್ರಿಯಾಯ್ತು... ಜಾಗರಣೆ ಜಾಸ್ತಿ ಬೇಕು!

ಬೆಂಗಳೂರಿನಿಂದ ಮಂಗಳೂರಿಗೆ, ಚೆನ್ನೈಗೆ, ಆಂಧ್ರಕ್ಕೆ ಹೀಗೆ ರಾತ್ರಿ ಬಸ್ ಹತ್ತಿಬಿಡುವರು ಹೆಚ್ಚು. ಸ್ವತಃ ವಾಹನ ಹೊಂದಿದ್ದವರೂ ರಾತ್ರಿಯೇ ಊರಿನತ್ತ ಪ್ರಯಾಣ ಬೆಳೆಸುತ್ತಾರೆ. ನಾಳೆ ಯಾವುದೋ ಊರಿನಲ್ಲಿ ಪ್ರಾಜೆಕ್ಟ್ ಇದೆಯೆಂದೋ ರಾತ್ರಿ ಬೈಕ್ ಸವಾರಿ ಮಾಡಿಬಿಡುತ್ತಾರೆ. ನೀರವ ಕತ್ತಲನ್ನು ಸೀಳಿಕೊಂಡು ಲೆಕ್ಕವಿಲ್ಲದಷ್ಟು ವಾಹನಗಳು ಸಾಗುತ್ತಿರುತ್ತವೆ. ಆದರೆ...
ಸಮೀಕ್ಷೆಯೊಂದರ ಪ್ರಕಾರ ಹಗಲು ನಡೆಯುವ ಅಪಘಾತಕ್ಕಿಂತ ಮೂರು ಪಟ್ಟು ಅಪಘಾತಗಳು ರಾತ್ರಿ ಜಾವ ನಡೆಯುತ್ತದಂತೆ! ಕತ್ತಲಲ್ಲಿ ನಾವು ಹೆಚ್ಚು ದೂರವನ್ನು ನೋಡಲಾರೆವು. ಎದುರಿನಲ್ಲಿ ಬೇರೆ ವಾಹನ ಬರುತ್ತಿದ್ದರೆ ಕಣ್ಣಿಗೆ ಮತ್ತಷ್ಟು ಮಂಕು ಕವಿಯಬಹುದು. ಈ ಕಾರಣಕ್ಕೆ ಹೆಚ್ಚು ವೇಗದಲ್ಲಿ ಹೋಗುವುದು ಅಪಾಯ. ಕಾಣದ ಕತ್ತಲಲ್ಲಿ ಯಾವ ತಿರುವಿದೆಯೋ, ಹಳ್ಳ ಕೊಳ್ಳಗಲಿವೆಯೋ....
ರಾತ್ರಿ ಕೇವಲ ಹೆಡ್ ಲೈಟ್ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತೇವೆ. ಹಾಗಾಗಿ ನಮ್ಮ ದೃಷ್ಟಿ ವ್ಯಾಪ್ತಿ ತೀರಾ ಕಮ್ಮಿ. ಇಲ್ಲಿ ಚಾಲಕರಿಗೆ ಕಣ್ಣಲತೆಯ ವ್ಯಾಪ್ತಿಯಲ್ಲಿ ಪ್ರಯಾಣಿಸುವ ಅನಿವಾರ್ಯತೆ. ಇಂತಹ ಸನ್ನಿವೇಶದಲ್ಲಿ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ.
ರಾತ್ರಿ ರಸ್ತೆ ಸ್ಪಷ್ಟವಾಗಿ ಕಾಣುವುದಿಲ್ಲ. ರಸ್ತೆಯ ಪರಿಚಯನೂ ಇರುವುದಿಲ್ಲ. ಹೀಗಾಗಿ ನಿದ್ದೆ ಕಣ್ಣಲ್ಲಿ ಪ್ರಯಾಣಿಸುವುದು ಅಪಾಯ. ಶೇ. 90ರಷ್ಟು ಚಾಲಕರು ರಾತ್ರಿ ಪ್ರಯಾಣದಲ್ಲಿ ತೂಕಡಿಸುತ್ತಾರಂತೆ. ಕತ್ತಲಲ್ಲಿ ರಸ್ತೆಯ ಗ್ರಹಿಕೆ ಕಷ್ಟವಾಗುತ್ತದೆ.
ಕತ್ತಲ ಡ್ರೈವಿಂಗ್ ನಲ್ಲಿ ಆಯಾಸ ಆಗುವುದು ಬೇಗವಂತೆ. ಸೋಮಾರಿತನ, ಆಲಸ್ಯತನ ಕತ್ತಲ ಡ್ರೈವಿಂಗ್ ನ ಶತ್ರುಗಳು. ರಾತ್ರಿ ವಾಹನ ಚಾಲನೆ ಹೆಚ್ಚಿನವರಿಗೆ ಬೋರ್ ಹೊಡೆಸುತ್ತದೆ. ಇದು ಕೂಡ ರಾತ್ರಿ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತದೆ.
ಪ್ರತಿರಾತ್ರಿ ಪ್ರಯಾಣಕ್ಕೆ ಮುನ್ನ ಹೆಡ್ ಲೈಟ್, ಹಿಂಬದಿಯ ಲೈಟ್, ಸಿಗ್ನಲ್ ಲೈಟ್, ಕನ್ನಡಿ, ಕಿಟಕಿಗಳನ್ನು ಕ್ಲೀನ್ ಮಾಡಬೇಕು. ಯಾಕೆಂದರೆ ರಾತ್ರಿ ಸ್ಪಷ್ಟವಾಗಿ ಕಾಣುವುದಕ್ಕೆ ಇವು ಅತ್ಯಂತ ಅಗತ್ಯ.
ರಾತ್ರಿ ಕುಡಿದು ಪ್ರಯಾಣಿಸುವುದು ಅಪಾಯಕಾರಿ. ಡ್ರಿಂಕ್ಸ್ ಹಾಕದೇ ರಾತ್ರಿ ಡ್ರೈವಿಂಗ್ ಮಾಡಲಾಗುವುದಿಲ್ಲ ಎಂದು ಹೇಳುವುದು ಅಪಾಯ. ಸ್ವಲ್ಪ ಕುಡಿದು ಕೆಲವು ದೂರ ಪ್ರಯಾಣಿಸಿದರೆ ಆಲಸ್ಯ, ಸೋಮಾರಿತನ, ಆಯಾಸ ಹೆಚ್ಚಾಗುತ್ತದೆ.
ರಾತ್ರಿ ಡ್ರೈವಿಂಗ್ ಮಾಡುವಾಗ ಸ್ಮೋಕಿಂಗ್ ಮಾಡುವುದನ್ನು ಕಡಿಮೆ ಮಾಡಿ. ಸಾಧ್ಯವಾದರೆ ಬಿಟ್ಟುಬಿಡಿ. ನಿಕೊಟಿನ್ ಮತ್ತು ಕಾರ್ಬನ್ ಮಾನೊಕ್ಷೈಡ್ ರಾತ್ರಿ ದೃಷ್ಟಿಯನ್ನು ಮಂಕಾಗಿಸುತ್ತದೆ. ರಾತ್ರಿ ಪ್ರಯಾಣದಲ್ಲಿ ಸರಿಯಾಗಿ ಕಣ್ಣು ಕಾಣುವುದು ಅತ್ಯಂತ ಅಗತ್ಯ. ರಸ್ತೆಯಲ್ಲಿ ಡ್ರೈವಿಂಗ್ ಮಾಡುವಾಗ ಯಾವುದೇ ಡೌಟ್ ಬಂದರೂ ಬೀಮ್ ಲೈಟ್ ಫೋಕಸ್ ಮಾಡಿ ನೋಡಬೇಕು.
ರಾತ್ರಿ ಟ್ರಾಫಿಕ್ ನಲ್ಲಿ ಪ್ರಯಾಣಿಸುವಾಗ ನಿಮ್ಮ ವಾಹನಕ್ಕೂ ಮುಂದಿನ ವಾಹನಕ್ಕೂ ಸಾಕಷ್ಟು ಅಂತರವಿರಲಿ. ಕೆಲವೊಮ್ಮೆ ಮುಂದಿನ ವಾಹನ ಎಷ್ಟು ದೂರದಲ್ಲಿದೆ ಎಂದು ಕಣ್ಣು ಗುರುತಿಸುವಲ್ಲಿ ಸೋಲುತ್ತದೆ. ಯಾಕೆಂದರೆ ರಾತ್ರಿಯಲ್ಲಿ ದೃಷ್ಟಿ ಮಂದವಾಗಿರುತ್ತದೆ.
ಯಾವುದಾದರೂ ವಾಹನವನ್ನು ಹಿಂಬಾಲಿಸುವಾಗ ಲೈಟ್ ಬೀಮ್ ಬಳಕೆ ಮಾಡಬೇಡಿ. ಇದು ಮುಂದೆ ವಾಹನ ಚಲಾಯಿಸುತ್ತಿರುವ ಚಾಲಕನ ದೃಷ್ಟಿಯನ್ನು ಮಂಕಾಗಿಸಬಹುದು.
ರಾತ್ರಿ ದೂರ ಪ್ರಯಾಣದಲ್ಲಿ ಅಲ್ಲಲ್ಲಿ ಗಾಡಿ ನಿಲ್ಲಿಸಿ ಪ್ರಯಾಣಿಸುವುದು ಒಳ್ಳೆಯದು. ಸಾಧ್ಯವಾದರೆ ಸ್ನಾಕ್ಸ್, ಪಾನೀಯಗಳನ್ನು ಕುಡಿದು ಸಂಚಾರಿಸಿ. ಇದರಿಂದ ನಿಮಗೆ ಡ್ರೈವಿಂಗ್ ಮಾಡಲು ಹೆಚ್ಚು ಶಕ್ತಿ ದೊರಕುತ್ತದೆ. ಬೆಳಗಾಗಲು ಸಾಕಷ್ಟು ಸಮಯವಿರುವಾಗ, ಅಥವಾ ಮುಂಜಾನೆ ಡ್ರೈವಿಂಗ್ ಮಾಡಲು ಸಾಕಷ್ಟು ಕಠಿಣ ಸಮಯ. ಎಚ್ಚರಿಕೆಯಿಂದ ಪ್ರಯಾಣಿಸಿ.


Click it and Unblock the Notifications








