ಅಪಘಾತ ರಹಿತ ವಾಹನ ಚಾಲನೆಗೆ ಸಲಹೆಗಳು
ಕಾರಿನಲ್ಲಿ ಕುಳಿತು ಇಗ್ನಿಷನ್ ತಿರುಗಿಸಿದ ನಂತರ ನಮ್ಮ ಬದುಕು ಮತ್ತು ಸಾವಿನ ನಡುವಿನ ಪ್ರಯಾಣ ಆರಂಭವಾಗುತ್ತದೆ. ತುಸು ಮೈಮರೆತರೆ, ಎಚ್ಚರ ತಪ್ಪಿದರೆ ಸಾವು ಗ್ಯಾರಂಟಿ. ನಿರ್ಲಕ್ಷ್ಯದ ವಾಹನ ಸವಾರಿ ಅಪಘಾತಕ್ಕೆ ಅತ್ಯಂತ ಪ್ರಮುಖ ಕಾರಣ. ನಿಮ್ಮ ತಪ್ಪಿನಿಂದ ನಿಮ್ಮ ಪ್ರಾಣ ಮಾತ್ರವಲ್ಲದೇ ರಸ್ತೆಯಲ್ಲಿರುವ ಅಮಾಯಕರ ಪ್ರಾಣಕ್ಕೂ ಇದು ಮಾರಕ.
ಕಾರನ್ನು ನಿತ್ಯ ಪರೀಕ್ಷಿಸುತ್ತಿರಬೇಕು. ನಿಮ್ಮ ಕಾರಿಗೆ ನೀವೇ ಮಾಸ್ಟರ್ ಮತ್ತು ಡಾಕ್ಟರ್. ಟೈರ್ ಸವೆದಿದೆಯಾ? ಎಂಜಿನ್ ಹೇಗಿದೆ? ವೈಪರ್ ಕೆಲಸ ಮಾಡುತ್ತಾ? ಹೆಡ್ ಲೈಟ್ ಉರಿಯುತ್ತಾ? ಹೀಗೆ ಸಣ್ಣವಿಷಯವನ್ನೂ ಬಿಡದೇ ಪರಿಶೀಲಿಸುತ್ತಿರಬೇಕು. ವಾಹನದ ಕುರಿತು ನೀವು ಕೇರ್ ತೆಗೆದುಕೊಂಡರೆ ನಿಮ್ಮ ಕುರಿತು ವಾಹನ ಕೂಡ ತುಸು ಕೇರ್ ತೆಗೆದುಕೊಳ್ಳುತ್ತದೆ.
ಕಾರಿನೊಳಗಿರುವ ವಸ್ತುಗಳು ಕೂಡ ನಮ್ಮ ದಿನವನ್ನು ನಿರ್ಣಯಿಸುತ್ತದೆ. ಉದಾಹರಣೆಗೆ ಮೊಬೈಲ್ ಫೋನ್. ಇತ್ತೀಚೆಗೆ ವಾಹನ ಸವಾರಿಯಲ್ಲಿ ಮೊಬೈಲ್ ಯಮನ ಸಹವರ್ತಿಯಾಗಿ ಖ್ಯಾತಿ ಪಡೆದಿದೆ. ಕರೆ ಸ್ವಿಕರಿಸುವುದು, ಕರೆ ಮಾಡುವುದು, ಸಂದೇಶ ರವಾನಿಸುವುದು, ಇಂಟರ್ ನೆಟ್ ನೋಡುತ್ತಿರುವುದು ಇವೆಲ್ಲ ವಾಹನ ಸವಾರಿಯಲ್ಲಿ ಅಪಾಯಕ್ಕೆ ಅಹ್ವಾನ.
ಕುಡಿದು ವಾಹನ ಸವಾರಿ ಮಾಡುವುದು ಕೂಡ ಅಪಾಯಕಾರಿ. ಕುಡಿದು ಸ್ಟೇರಿಂಗ್ ಮುಟ್ಟುವುದಿಲ್ಲವೆಂದು ನಿಮ್ಮೊಳಗೆ ನೀವೇ ಶಪಥ ಹಾಕಿಕೊಳ್ಳಿ. ಜಗತ್ತಿನಲ್ಲಿರುವ ಹೆಚ್ಚಿನ ವಾಹನ ಅಪಘಾತಗಳಿಗೆ ಕುಡಿತ ಕಾರಣ. ಡೋಂಟ್ ಡ್ರಿಂಕ್ ಆಂಡ್ ಡ್ರೈವ್.
ಹೀಗೆ ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರಿನಲ್ಲಿ ಕುಳಿತು ಇಗ್ನಿಷನ್ ತಿರುಗಿಸುತ್ತಿದ್ದೀರಿ. ವಿಮಾನದಲ್ಲಿ ಮಾತ್ರವಲ್ಲ. ನಿಮ್ಮ ಕಾರಿನಲ್ಲೂ ತಪ್ಪದೇ ಸೀಟ್ ಬೆಲ್ಟ್ ಹಾಕಿಕೊಳ್ಳಿ. ಅದು ಕೂಡ ಲೂಸ್ ಲೂಸಾಗಿ ಧರಿಸದಿರಿ. ಸಮರ್ಪಕವಾಗಿ ಹೊಂದಾಣಿಕೆ ಮಾಡಿಕೊಂಡು ಸೀಟ್ ಬೆಲ್ಟ್ ಹಾಕಿಕೊಳ್ಳಿ.
ಸೈಡ್ ಮಿರರ್ ಕಡೆಗೊಮ್ಮೆ ನೋಡಿ. ಹೆಚ್ಚಿನವರ ಸೈಡ್ ಮಿರರ್ ನಲ್ಲಿ ಅವರ ವಾಹನವೇ ಕಾಣುತ್ತಿರುತ್ತದೆ. ಹಿಂಬದಿಯಲ್ಲಿ ಬರುವ ವಾಹನ ಕಾಣದಿದ್ದರೆ ಅಪಘಾತವಾಗುವ ಸಂಭವ ಹೆಚ್ಚು. ಸ್ಪಷ್ಟವಾಗಿ ಕಾಣುವಂತೆ ಸೈಡ್ ಮಿರರ್ ಹಾಕೋದು ಅತ್ಯಂತ ಅಗತ್ಯ. ಹ್ಯಾಪಿ ಡ್ರೈವಿಂಗ್.


Click it and Unblock the Notifications









