ಕಾರಿನ ಹೆಲ್ತ್ ಸಮಸ್ಯೆ ಕಂಡುಹಿಡಿಯೋದು ಹೇಗೆ?
ಒಮ್ಮೊಮ್ಮೆ ಕಾರು ಚಾಲನೆ ಕೊಂಚ ಹಾರ್ಡ್ ಎನಿಸಬಹುದು. ನೇರವಾಗಿ ಕಾರು ಚಲಾಯಿಸಲು ಹೆಚ್ಚು ಶ್ರಮ ಬೇಕಾಗಬಹುದು. ಅಂದ್ರೆ ಕಾರಿನ ಸ್ಟೇರಿಂಗ್ ನೀವು ಹೇಳಿದ ಹಾಗೇ ಕೇಳದಿರಬಹುದು.
ಹಾಗಾದರೆ ನಿಮ್ಮ ಕಾರಿನ ಎದುರಿನ ಚಕ್ರದಲ್ಲಿ ಏನೋ ಸಮಸ್ಯೆ ಇದೆ ಎಂದು ಅರ್ಥ ಮಾಡಿಕೊಳ್ಳಬಹುದು. ಅಥವಾ ಸ್ಟೇರಿಂಗ್ ವೀಲ್ ಬಿಡಿಭಾಗದಲ್ಲಿ ಏನೋ ತೊಂದರೆಯಿದೆ ಎಂದು ಅರ್ಥ. ಇದನ್ನು ತಕ್ಷಣ ಸರಿಮಾಡಿಕೊಳ್ಳಿ. ಇಲ್ಲವಾದಲ್ಲಿ ಹೆಚ್ಚು ನಷ್ಟ ಗ್ಯಾರಂಟಿ.
ಕೆಲವೊಮ್ಮೆ ನಿಮ್ಮ ಕಾರು ಎಡಕ್ಕೆ ಅಥವಾ ಬಲಕ್ಕೆ ಹೆಚ್ಚು ವಾಲುತ್ತ ಸಾಗುತ್ತಿದೆ ಎಂದೆನಿಸುತ್ತಿದೆಯೇ? ಇದರರ್ಥ ನಿಮ್ಮ ಕಾರಿನ ಚಕ್ರದ ಜೋಡಣೆಯಲ್ಲಿ ಏನೋ ತೊಂದರೆ ಇದೆ. ಅಥವಾ ಒಂದು ಚಕ್ರ ಹೆಚ್ಚು ಫ್ಲಾಟ್ ಆಗಿದೆ ಎಂದು ತಿಳಿದುಕೊಳ್ಳಬಹುದು. ತಕ್ಷಣ ಏನು ಸಮಸ್ಯೆ ಇದೆ ಎಂದು ತಿಳಿದು ಸರಿಪಡಿಸಿಕೊಳ್ಳಿ.
ಚಾಲನೆ ಮಾಡುವಾಗ ನಿಮ್ಮ ಕಾರು ವೈಬ್ರೆಟ್ ಆಗುತ್ತಿದೆಯೇ? ಅಂದ್ರೆ ಕಾರಿನ ಟೈರ್ ಸಮತೋಲನ ಸರಿಯಾಗಿಲ್ಲವೆಂದು ತಿಳಿದುಕೊಳ್ಳಬಹುದು. ಜೊತೆಗೆ ಕಾರಿನ ಷಾಕಬ್ಸರ್ಬರ್ ಕುರಿತೂ ಗಮನ ಹರಿಸಬೇಕು. ಕಾರು ಸರಿಯಾಗಿ ಸಮತೋಲನದಿಂದ ಚಲಿಸಬೇಕಾದರೆ ಷಾಕಬ್ಸರ್ಬರ್ ಬದಲಾಯಿಸಬೇಕಾದೀತು.
ಬ್ರೇಕ್ ಹಾಕಿದಾಗ ಕಾರು ಒಂದು ಸೈಡಿಗೆ ದೂಡಿದ ಹಾಗೇ ಆಗುತ್ತಿದೆಯೇ? ಹಾಗಾದರೆ ಖಂಡಿತವಾಗಿಯೂ ನೀವು ಕಾರನ್ನು ರಿಪೇರಿ ಮಾಡಲೇಬೇಕು.
ಬ್ರೇಕ್ ಪೆಡಲಿನಲ್ಲಿ ಯಾವುದಾದರೂ ಸಮಸ್ಯೆ ಕಂಡು ಬರುತ್ತಿದೆಯೇ? ಅದರ ಪೆಡಲ್ ಸರಿಯಾಗಿ ಪರಿಶೀಲಿಸಿ. ಅದರ ಪ್ಯಾಡ್ ಸವೆದಿರಬಹುದು. ಪೆಡಲ್ ಅಡಿಯಲ್ಲಿ ಯಾವುದಾದರೂ ವಸ್ತು ಅಡ್ಡ ಬರುತ್ತಿರಬಹುದು. ಟೇಕ್ ಕೇರ್.
ಕಾರು ಸ್ಟಾರ್ಟ್ ಮಾಡಲು ತೊಂದರೆಯಾಗುತ್ತಿದ್ದರೆ ಎಂಜಿನ್ ನಲ್ಲಿ ಏನೋ ಸಮಸ್ಯೆ ಇದೆ ಎಂದು ತಿಳಿದುಕೊಳ್ಳಬಹುದು. ಕಾರು ಲೆಕ್ಕಕ್ಕಿಂತ ಹೆಚ್ಚು ಆಯಿಲ್ ಕುಡಿಯುತ್ತಿದ್ದರೆ ಅಲ್ಲೂ ಏನೋ ಸಮಸ್ಯೆ ಇದೆ ಎಂದರ್ಥ.
ಕಾರಿನ ಕೀ ತೆಗೆದ ನಂತರವೂ ಎಂಜಿನ್ ರನ್ ಆದರೆ ಆಕ್ಸಿಲರೇಷನ್ ಸಮಸ್ಯೆಯಿದೆ ಎಂದರ್ಥ. ನಿತ್ಯ ಪ್ರಯಾಣಿಸುವಾಗ ಕೇಳುವ ಎಂಜಿನ್ ಸದ್ದು ಯಾವತ್ತಾದರೂ ಭಿನ್ನವಾಗಿ ಕೇಳಿದರೆ ಖಂಡಿತಾ ಕಡೆಗಣಿಸಬೇಡಿ.
ಯಾವತ್ತಿನ ಹಾಗೇ ಗೇರ್ ಶಿಫ್ಟ್ ಆಗುತ್ತಿಲ್ಲ ಎಂದಾದರೆ ಆಕ್ಸಿಲರೇಷನ್ ನಲ್ಲಿ ಏನೋ ಸಮಸ್ಯೆಯಿದೆ ಎಂದು ತಿಳಿದುಕೊಳ್ಳಬಹುದು. ಹೀಗೆ ನಮ್ಮ ದೇಹದಂತೆ ಕಾರಿನ ಆರೋಗ್ಯ ಕೂಡ ಕೆಡುವ ಮುನ್ನ ಮುನ್ಸೂಚನೆ ನೀಡುತ್ತದೆ. ತಕ್ಷಣ ರಿಪೇರಿ ಮಾಡಿಕೊಂಡರೆ ಹೆಚ್ಚು ಖರ್ಚಾಗೋದನ್ನು ತಪ್ಪಿಸಿಕೊಳ್ಳಬಹುದು.


Click it and Unblock the Notifications









