ಸುರಕ್ಷಿತ ಚಾಲನೆಗೆ ಟಾಪ್ 10 ಸಲಹೆಗಳು
ದೇಶದಲ್ಲಿ ರಸ್ತೆ ಅಪಘಾತಗಳಿಂದ ಸಾವು ನೋವುಗಳ ಸಂಖ್ಯೆ ದಿನದಿಂದ ದಿನಕ್ಕೆ ವರ್ಧಿಸುತ್ತಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಬಹುತೇಕ ರಸ್ತೆ ಅಪಘಾತಗಳು ಚಾಲಕರ ಅಜಾಗರೂಕತೆಯಿಂದಲೇ ಸಂಭವಿಸುತ್ತದೆ.
ಇಂದಿನ ಯಾಂತ್ರಿಕ ಜೀವನದಲ್ಲಿ ಪ್ರತಿಯೊಬ್ಬರು ಸಹ ತಮ್ಮ ದಿನನಿತ್ಯ ಚಟುವಟಿಕೆಗಳನ್ನು ಪೂರ್ಣಗೊಳಿಸುವುದರಲ್ಲಿ ತುಂಬಾನೇ ತಲ್ಲೀನರಾಗಿರುತ್ತಾರೆ. ಹಾಗಿರುವಾಗ ದುಡುಕಿನ ಚಾಲನೆಗೆ ಮುಂದಾಗಿ ಅಪಘಾತವನ್ನು ಆಹ್ವಾನಿಸುತ್ತಾರೆ.
ಅಪಘಾತಗಳಿಂದಾಗಿ ಪ್ರತಿದಿನ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಇನ್ನೊಂದೆಡೆ ನಿಮ್ಮ ಆಗಮನಕ್ಕಾಗಿ ಕಾದುನಿಂತಿರುವ ಕುಟುಂಬವೊಂದಿದೆ ಎಂಬುದನ್ನು ಮರೆಯದಿರಿ. ಸುರಕ್ಷಿತ ವಾಹನ ಚಾಲನೆಯಿಂದ ಮಾತ್ರ ಇದು ಸಾಧ್ಯ. ಈ ನಿಟ್ಟಿನಲ್ಲಿ ರಸ್ತೆ ನಿಯಮಗಳ ಬಗ್ಗೆ ಮಾಹಿತಿ ಹೊಂದಿರುವುದು ಅತಿ ಮುಖ್ಯವಾಗಿದೆ.
ಕನ್ನಡ ಡ್ರೈವ್ ಸ್ಪಾರ್ಕ್ ಇಂದಿನ ಈ ಲೇಖನದ ಮೂಲಕ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಲು ಕೆಲವೊಂದು ಮಹತ್ವದ 10 ಟಿಪ್ಸ್‌ಗಳನ್ನು ನಿಮ್ಮ ಮುಂದಿರಿಸಲಿದೆ. ಖಂಡಿತವಾಗಿಯೂ ಈ ಲೇಖನ ನಿಮ್ಮ ನೆರವಿಗೆ ಬರುವ ನಂಬಿಕೆಯನ್ನು ಡ್ರೈವ್ ಸ್ಪಾರ್ಕ್ ಹೊಂದಿದ್ದು, ನಿಮ್ಮ ಬೆಲೆ ಬಾಳುವ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

ತುಂಬಾನೇ ಸುಸ್ತಾಗಿದ್ದರೆ...
ಚಾಲನೆಗೆ ಏಕಾಗ್ರತೆ ಅತಿ ಮುಖ್ಯ. ಹಾಗಾಗಿ ನೀವು ತುಂಬಾನೇ ಸುಸ್ತಾಗಿದ್ದು, ಮೈ ಕೈ ನೋವು ಕಾಣಿಸಿಕೊಂಡಿದ್ದಲ್ಲಿ ಅಥವಾ ಆರೋಗ್ಯ ಕೆಟ್ಟು ಹೋಗಿದ್ದಲ್ಲಿ ಡ್ರೈವಿಂಗ್‌ನಿಂದ ದೂರವುಳಿಯುವುದು ಒಳಿತು. ಯಾಕೆಂದರೆ ದಣಿವು ಕೇವಲ ನಿಮ್ಮ ಶರೀರವನ್ನಷ್ಟೇ ಅಲ್ಲ ಮನಸ್ಸನ್ನು ದುರ್ಬಲಗೊಳಿಸುತ್ತದೆ. ಇದು ಡ್ರೈವಿಂಗ್ ಮೇಲೂ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿವೆ. ಮೇಲೆ ಸೂಚಿಸಿದಂತೆ ತುಂಬಾನೇ ಸುಸ್ತಾಗಿದ್ದರೆ ದೂರ ಪ್ರಯಾಣದಿಂದಲೂ ದೂರವಿರಿ.

ಪಾನಮತ್ತರಾಗಿ ಗಾಡಿ ಚಲಾಯಿಸದಿರಿ
ಇದು ಎರಡು ವಿಧದಲ್ಲಿ ನಿಮಗೆ ಕಂಟಕ ಸೃಷ್ಟಿಮಾಡಲಿದೆ. ಮೊದಲನೆಯದಾಗಿ ನೀವು ಪಾನಮತ್ತರಾಗಿ ಡ್ರೈವಿಂಗ್ ಮಾಡಿದರೆ ಟ್ರಾಫಿಕ್ ಪೊಲೀಸರಿಂದ ಬಚಾವಾಗುವ ಸಾಧ್ಯತೆ ಕಡಿಮೆ. ಹಾಗೆಯೇ ಕುಡಿದ ಮತ್ತಿನಲ್ಲಿ ಚಾಲನೆ ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಮೊಬೈಲ್ ಫೋನ್ ಬಳಕೆ ಬೇಡ
ಇಂದಿನ ಯುವ ಜನಾಂಗ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ತುಂಬಾನೇ ಬೇಸರದ ಸಂಗತಿ. ಡ್ರೈವಿಂಗ್ ವೇಳೆ ಮೊಬೈಲ್ ಫೋನ್ ಬಳಕೆ ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ. ಆದರೆ ಯಾವುದೇ ಕಾರಣಕ್ಕೂ ಚಾಲನೆ ವೇಳೆ ನಿಮ್ಮ ಏಕಾಗ್ರತೆಗೆ ಭಂಗವನ್ನುಂಟು ಮಾಡಬಲ್ಲ ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡದಿರಿ.

ಅಪಘಾತಕ್ಕೆ ಅವಸರವೇ ಕಾರಣ
ಡ್ರೈವಿಂಗ್ ವೇಳೆ ಕಂಡುಬರುತ್ತಿರುವ ಇನ್ನೊಂದು ಸಾಮಾನ್ಯ ದೃಶ್ಯವೆಂದರೆ, ಲೇನ್‌ನಲ್ಲಿ ತಮ್ಮ ಜಾಗವನ್ನು ಇತರ ವಾಹನಗಳು ವಶಪಡಿಸಿಕೊಳ್ಳದಿರುವ ನಿಟ್ಟಿನಲ್ಲಿ ಚಾಲಕರು ತಮ್ಮ ಮುಂದಿರುವ ವಾಹನದ ನೇರ ಹಿಂದುಗಡೆ ವಾಹನ ನಿಲ್ಲಿಸಿಬಿಡುವ ಗೋಜಿಗೆ ಹೋಗುತ್ತಾರೆ. ಆದರೆ ಅಪಘಾತಕ್ಕೆ ಅವಸರವೇ ಕಾರಣ ಎಂಬುದನ್ನು ಮರೆಯದಿರಿ. ಹಾಗೆಯೇ ಯಾವತ್ತೂ ಮುಂದಿರುವ ಕಾರಿಗಿಂತ ನಿರ್ದಿಷ್ಟ ಅಂತರವನ್ನು ಕಾಯ್ದುಕೊಳ್ಳಿರಿ...

ಜಾಗರೂಕರಾಗಿರಿ...
ನಾವು ಈ ಹಿಂದೆಯೇ ಹಲವು ಬಾರಿ ಉಲ್ಲೇಖಿಸಿರುವಂತೆಯೇ ಡ್ರೈವಿಂಗ್ ಎಂಬುದನ್ನು ಅನಿಶ್ಚಿತತೆಯಿಂದ ಕೂಡಿದ ಕಲೆಯಾಗಿದೆ. ಹಾಗಾಗಿ ನೀವು ತಪ್ಪು ಮಾಡದಿದ್ದರೂ ಎದುರುಗಡೆಯಿಂದ ಬರುವ ವಾಹನಗಳ ಅಜಾಗರೂಕತೆಯಿಂದಲೂ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ ಡ್ರೈವಿಂಗ್ ವೇಳೆ ಸದಾ ಜಾಗರೂಕರಾಗುವುದು ಅತಿ ಅಗತ್ಯವಾಗಿದೆ.

ಇಂಡಿಕೇಟರ್ ಸದ್ಭಳಕೆ
ರಸ್ತೆಗಳಲ್ಲಿ ಎಡ-ಬಲ ತಿರುವುಗಳು ಬರುವುದು ಸಾಮಾನ್ಯ. ಈ ವೇಳೆಯಲ್ಲಿ ಉಚಿತ ಸಮಯಕ್ಕೆ ಇಂಡಿಕೇಟರ್ ಬಳಸಲು ಮರೆಯದಿರಿ. ಇಲ್ಲೂ ಕಂಡುಬರುವ ಸಾಮಾನ್ಯ ದೃಶ್ಯವೆಂದರೆ ನಾನು ಡ್ರೈವಿಂಗ್‌ನಲ್ಲಿ ಸಾಕಷ್ಟು ಪರಿಣಿತಿಯನ್ನು ಹೊಂದಿದ್ದು, ಹಾಗಾಗಿ ತಿರುವಿನಲ್ಲಿ ಇಂಡಿಕೇಟರ್‌ನ ಅಗತ್ಯವಿಲ್ಲದೆ ಗಾಡಿ ಓಡಿಸಭಲ್ಲೆ ಎಂಬ ತಪ್ಪು ಭಾವನೆ ಮೂಡಿರುತ್ತದೆ. ಆದರೆ ನಿಮ್ಮ ಮನದಲ್ಲಿ ತೋಚಿರುವ ಅಹಂಭಾವವನ್ನು ಹಿಂದಿನಿಂದ ಅಥವಾ ಮುಂಭಾಗದಿಂದ ಬರುವ ವಾಹನಗಳು ಹೇಗೆ ಅರಿಯಲು ಸಾಧ್ಯ? ಹಾಗಾಗಿ ರಾತ್ರಿ ಹಾಗೂ ದಿನದ ಸಮಯದಲ್ಲಿ ತಿರುವಿನಲ್ಲಿ ಇಂಡಿಕೇಟರ್ ಬಳಕೆ ಮಾಡಲು ಮರೆಯದಿರಿ.

ಶಾರ್ಟ್ ಕಟ್ ಬೇಡ
ಬೇಗನೆ ಗುರಿ ಮುಟ್ಟುವ ನಿಟ್ಟಿನಲ್ಲಿ ಅಥವಾ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಅಪರಿಚಿತ ಶಾರ್ಟ್ ಕಟ್ ಮಾರ್ಗವನ್ನು ಬಳಸಿದಿರಿ. ಈ ಮೂಲಕ ಸ್ವತ: ಅಪಘಾತವನ್ನು ಆಹ್ವಾನಿಸಿದಿರಿ.

ಕಾರು ನಿರ್ವಹಣೆ
ಹೇಗೆ ನಮ್ಮ ಅಸ್ತಿತ್ವಕ್ಕೆ ಆಹಾರ ಸೇವಿಸುವುದು ಎಷ್ಟು ಮುಖ್ಯವೋ ಅದೇ ರೀತಿ ವಾಹನಗಳ ನಿರ್ವಹಣೆ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಅಂದರೆ ಆಯಿಲ್, ಬ್ಯಾಟರಿ ಮತ್ತು ಚಕ್ರಗಳನ್ನು ನಿಯಮಿತವಾಗಿ ಪರಿಶೀಲಿಸಿರಿ. ಈ ಮೂಲಕ ಕಾರಿನ ಹೊಸತನವನ್ನು ಕಾಪಾಡಿಕೊಳ್ಳಬಹುದು.

ಆತ್ಮ ಸಂಯಮ
ಇವೆಲ್ಲದರಕ್ಕಿಂತ ಮಿಗಿಲಾಗಿ ಆತ್ಮ ಸಂಯಮ ಪಾಲಿಸುವುದು ಅಷ್ಟೇ ಮುಖ್ಯ. ವಿನಾ ಕಾರಣ ಮುಂದಿರುವ ಕಾರುಗಳನ್ನು ಓವರ್‌ಟೇಕ್ ಮಾಡುವ ಗೋಜಿಗೆ ಹೋಗದೆ ಅಥವಾ ರಸ್ತೆಯನ್ನು ರೇಸ್ ಟ್ರ್ಯಾಕ್ ಎಂಬುದಾಗಿ ತಪ್ಪಾಗಿ ಅರ್ಥ ಮಾಡಿಕೊಳ್ಳದೇ ನಿಧಾನವಾಗಿ ಚಲಿಸಿ ನಿಮ್ಮ ಗುರಿ ತಲುಪಿ. ನೆನಪಿರಲಿ ನಿಧಾನವೇ ಪ್ರಧಾನ!

ಸಂಚಾರ ನಿಯಮ ಪಾಲಿಸಿ
ಹಾಗೆಯೇ ಅಂತಿಮವಾಗಿ ರಸ್ತೆಗಳಲ್ಲಿ ಡ್ರೈವಿಂಗ್ ನೆರವಿಗೆ ಆಳವಡಿಸಲಾಗಿರುವ ಕಡ್ಡಾಯ, ಎಚ್ಚರಿಕೆ ಹಾಗೂ ಮಾಹಿತಿ ಚಿಹ್ನೆಗಳನ್ನು ಪಾಲಿಸಿ ನಿಮ್ಮ ಚಾಲನೆಯನ್ನು ಇನ್ನಷ್ಟು ಆನಂದಮಯವಾಗಿಸಿ...ಎಲ್ಲರಿಗೂ ಹ್ಯಾಪಿ ಡ್ರೈವಿಂಗ್!


Click it and Unblock the Notifications








