ಹಳೆಕಾರಿಗೆ ಹೊಸ ಮೆರುಗು ನೀಡಲು 3 ಸಲಹೆಗಳು
ಆ ಗಳಸ್ಯ ಕಂಠಸ್ಯ ಸ್ನೇಹಿತರಿಬ್ಬರೂ ಒಂದೇ ಬಾರಿ, ಒಂದೇ ಶೋರೂಂನಿಂದ ಫಿಯೆಟ್ ಫಾಬಿಯಾ ಕಾರುಗಳನ್ನು ಖರೀದಿಸಿದ್ದರು. ನನ್ನ ನೆನಪಿನ ಪ್ರಕಾರ, ಖರೀದಿಸಿ ಸುಮಾರು 2 ವರ್ಷ ಕಳೆದಿದೆ. ಆದ್ರೆ ಆ ಎರಡೂ ಕಾರುಗಳನ್ನು ಅಕ್ಕಪಕ್ಕ ನಿಲ್ಲಿಸಿದರೆ ಹಾಗೆನಿಸದು.
ಅದ್ರಲ್ಲಿ ಒಬ್ಬನ್ನ ಕಾರು ಈಗಷ್ಟೇ ಶೋರೂಂನಿಂದ ಬಂದ ಹಾಗೆ ಯಾವತ್ತೂ ಇರುತ್ತದೆ. ಅದೇಷ್ಟು ಶುಭ್ರತೆ, ಲಕಲಕ ಹೊಳೆಯುತ್ತಿರುತ್ತದೆ. ಮತ್ತೊಬ್ಬನ ಕಾರಿನ ಬಗ್ಗೆ ಹೇಳಿ ಸುಖವಿಲ್ಲ. ಆತ ಶುದ್ಧ ಸೋಮಾರಿ. ಪರಿಣಾಮವಾಗಿ ಆತನ ಕಾರು ಲಗಾಡಿ ಹೋಗಿದೆ.
ಮತ್ತೊಬ್ಬನ ಕಾರು ಹೊಚ್ಚಹೊಸದರಂತೆ ಕಾಣುವುದಕ್ಕೆ ಕಾರಣ ಆತನ ಕಾಳಜಿ. ಅಷ್ಟೊಂದು ಜತನದಿಂದ ಕಾರನ್ನು ನೋಡಿಕೊಂಡಿದ್ದಾನೆ. ಹಾಗಂತ ತುಂಬಾ ವೆಚ್ಚ ಮಾಡಿ ಈ ರೀತಿ ಇಟ್ಟುಕೊಂಡಿದ್ದಾನೆ ಎಂದು ಭಾವಿಸಬೇಕಿಲ್ಲ. ಕಾರು ಈ ರೀತಿಯಿರಲು ಏನು ಮಾಡಬೇಕು ಎನ್ನುವುದಕ್ಕೆ ಆತ ನೀಡಿದ ಸಲಹೆಯನ್ನು ನಿಮ್ಮ ಮುಂದಿಟ್ಟಿದ್ದೇನೆ. ನಿಮಗೂ ಉಪಯೋಗವಾದೀತು.
ಮಳೆಹನಿ ಮಾತ್ರ ಕಾರಿನ ವೈರಿ ಎಂದು ಕೆಲವರು ಭಾವಿಸುತ್ತಾರೆ. ಆದ್ರೆ ಹಕ್ಕಿ ಹಿಕ್ಕೆ, ರಸ್ತೆಯಲ್ಲಿರುವ ಧೂಳು, ಪರಿಸರ ಮಾಲಿನ್ಯ ಕಾರುಗಳ ಆರೋಗ್ಯ ಕೆಡಿಸುತ್ತದೆ. ಕಾರಿನ ಸೌಂದರ್ಯ ಹೆಚ್ಚಿಸಲು ಅಥವಾ ಸೌಂದರ್ಯ ಕೆಡದಿರಲು ಮೂರು ಟಿಪ್ಸ್ ಆತ ಕೊಟ್ಟಿದ್ದಾನೆ.
ಮೊದಲ ಟಿಪ್ಸ್: ವಾಷಿಂಗ್
ಕಾರನ್ನು ನಿಯಮಿತವಾಗಿ ತೊಳೆಯುವುದು ಅತ್ಯಂತ ಮುಖ್ಯ. ಇದರಿಂದ ಕಾರಿಗೆ ಹಿಡಿದ ಧೂಳು ಇತ್ಯಾದಿಗಳು ಹೋಗುತ್ತವೆ. ಆದ್ರೆ ತೊಳೆಯುವುದಕ್ಕೂ ಟೆಕ್ನಿಕ್ ಇದೆ. ಕಾರನ್ನು ಯಾವ ರೀತಿ ತೊಳೆಯಬೇಕು ಎಂದು ತಿಳಿಯಬೇಕಾದರೆ ಈ ಲಿಂಕ್ ಪ್ರವೇಶಿಸಿ.
ಎರಡನೇ ಟಿಪ್ಸ್: ಪಾಲೀಶ್
ಕಾರು ಪಾಲೀಶ್ ಮಾಡಲು ಹೆಚ್ಚು ಸಮಯವೇನೂ ಬೇಕಿಲ್ಲ. ಸೂಕ್ತವಾದ ಪಾಲೀಶ್ ಖರೀದಿಸಿ ಬಟ್ಟೆಗೆ ಅದ್ದಿ ವಾಹನದ ಮೇಲ್ಬಾಗಕ್ಕೆ ಪಾಲೀಶ್ ಮಾಡಿದರೆ ಸಾಕು. ಈಗ ಮಾರುಕಟ್ಟೆಯಲ್ಲಿ ಮೆಟಾಲಿಕ್, ಡೆಕೊ ಇತ್ಯಾದಿ ವಾಹನ ಶ್ಯಾಂಪೂಗಳು ದೊರಕುತ್ತವೆ. ನಿಮ್ಮ ಕಾರು ಡೀಲರ್ ಸೂಚಿಸಿದ ಕಾರು ಶ್ಯಾಂಪೂ ಬಳಸಬಹುದು. ಕ್ರೀಮ್ ಪಾಲೀಶ್ ಕೂಡ ಬಳಕೆ ಮಾಡಬಹುದು.
ಮೂರನೇ ಟಿಪ್ಸ್: ವ್ಯಾಕ್ಸ್ ಬಳಕೆ
ಕಾರು ಪಾಲೀಶ್ ಮಾಡುವಂತೆ ವ್ಯಾಕ್ಸ್ ಕೂಡ ಕಾರಿಗೆ ಉಜ್ಜಬಹುದು. ಆದ್ರೆ ಪಾಲೀಶ್ ಗೂ ವ್ಯಾಕ್ಸ್ ಗೂ ಇರುವ ವ್ಯತ್ಯಾಸವೆಂದರೆ ವ್ಯಾಕ್ಸ್ ಒಣಗುವರೆಗೆ ನೀವು ಕಾಯಬೇಕು. ಅದು ಒಣಗಿದ ನಂತರ ಮತ್ತೊಮ್ಮೆ ವ್ಯಾಕ್ಸ್ ಮಾಡಬಹುದು. ಫಸ್ಟ್ ಕೋಟ್ ಮತ್ತು ಸೆಕೆಂಡ್ ಕೋಟ್ ವ್ಯಾಕ್ಸ್ ಮಾಡಿದರೆ ನಿಮ್ಮ ಕಾರು ಲಕ ಲಕ ಹೊಳೆಯುತ್ತದೆ.
ಕಾರು ತೊಳೆದು ಪಾಲೀಶ್ ಮಾಡಿ ವ್ಯಾಕ್ಸ್ ಮಾಡಿದರೆ ಹೊಸ ಕಾರಿನಂತೆ ಕಂಗೊಳಿಸುತ್ತದೆ.


Click it and Unblock the Notifications









