Car overheat: ಕಾರು ಹೆಚ್ಚು ಬಿಸಿಯಾದ್ರೆ ಈ ಸಲಹೆಗಳು ನನಪಿರಲಿ... ಯಾವುದೇ ಕಾರಣಕ್ಕೂ ಕೆಲವನ್ನು ಮಾಡದಿರಿ
ಬೇಸಗೆ ಬಂತೆಂದರೆ ಸಾಕು ಬಿಸಿಲಿನ ಹೊಡೆತಕ್ಕೆ ನಾವು ಹೊರಗೆ ಓಡಾಡುವುದೇ ಅಪರೂಪವಾಗಿಬಿಡುತ್ತದೆ. ಅದೇ ರೀತಿ ವಾಹನಗಳು ಕೂಡ ಬಿಸಿಲಿನ ಶಾಖಕ್ಕೆ ಹಲವು ಸಮಸ್ಯೆಗಳಿಗೆ ತುತ್ತಾಗುತ್ತವೆ. ಅದರಲ್ಲೂ ಮುಖ್ಯವಾಗಿ ಎಂಜಿನ್ car overheat ಆಗುವುದು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದ್ದು, ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬುದನ್ನು ಇಲ್ಲಿ ನೋಡೋಣ.
ಸುಡುವ ಶಾಖವು ನಿಮ್ಮ ವಾಹನದ ಎಂಜಿನ್ ಮೇಲೆ ಪರಿಣಾಮ ಬೀರುವುದರಿಂದ ನೀವು ಲಾಂಗ್ ಡ್ರೈವ್ ಹೋದಾಗ ತುಂಬಾ ಜಾಗರೂಕರಾಗಿರದಿದ್ದರೆ, ರಸ್ತೆಯಲ್ಲಿ ಸ್ಥಗಿತಗೊಂಡು ಪರದಾಡುವಂತಾಗುತ್ತದೆ. ಹಾಗಾಗಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತಿಳಿದಿದ್ದರೇ ಈ ಬೇಸಿಗೆಯಲ್ಲಿ ನಿಮ್ಮ ಕಾರು ಬಿಸಿಯಾದ ಕೂಡಲೇ ಈ ಪ್ರಮುಖ 5 ವಿಷಯಗಳನ್ನು ಮಾಡುವ ಮೂಲಕ ಸಮಸ್ಯೆಯಿಂದ ಪಾರಾಗಬಹುದು.

ತಕ್ಷಣವೇ ಪಾರ್ಕ್ ಮಾಡಿ: ನಿಮ್ಮ ಕಾರು ಹೆಚ್ಚು ಬಿಸಿಯಾಗುತ್ತಿದೆ ಎಂದು ತಿಳಿದ ಕೂಡಲೇ ತಕ್ಷಣವೇ ಸುರಕ್ಷಿತ ಸ್ಥಳದಲ್ಲಿ ಪಕ್ಕಕ್ಕೆ ನಿಲ್ಲಸಬೇಕು. ಯಾವುದೇ ಕಾರಣಕ್ಕೂ ಡ್ರೈವಿಂಗ್ ಅನ್ನು ಮುಂದುವರಿಸಬಾರದು, ಏಕೆಂದರೆ ಸಮಸ್ಯೆ ಗಂಭೀರತೆಯನ್ನು ಅರಿಯದೇ ಡ್ರೈವಿಂಗ್ ಮುಂದುವರಿಸಿದರೆ ಎಂಜಿನ್‌ಗೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ನೆರಳಿನಲ್ಲಿ ಮೊದಲು ಪಾರ್ಕ್ ಮಾಡಿ.
ಎಂಜಿನ್ ಆಫ್ ಮಾಡಿ: ಒಮ್ಮೆ ನೀವು ಕಾರನ್ನು ಪಕ್ಕಕ್ಕೆ ಪಾರ್ಕ್ ಮಾಡಿದ ಕೂಡಲೇ ಎಂಜಿನ್ ಅನ್ನು ಆಫ್ ಮಾಡುವುದು ಮುಖ್ಯ. ಏಕೆಂದರೆ ಎಂಜಿನ್ ಅನ್ನು ತಣ್ಣಗಾಗಿಸುವುದು ಮೊದಲ ಉಪಾಯವಾಗಿದೆ. ಯಾವುದೇ ಕಾರಣಕ್ಕೂ ಬಾನೆಟ್ ತೆರೆಯಬೇಡಿ ಹೆಚ್ಚು ಬಿಸಿಯಾಗಿದ್ದಾಗ ತೆರೆಯಲು ಮುಂದಾದರೆ ಕೈಗೆ ಹಾನಿಯಾಗಬಹುದು. ಹಾಗಾಗಿ ಕಾರು, ಎಂಜಿನ್ ಮತ್ತು ಕೂಲಿಂಗ್ ವ್ಯವಸ್ಥೆಯನ್ನು ತಂಪಾಗಿಸಲು ಕೆಲವು ನಿಮಿಷಗಳ ಕಾಲ ಕಾಯಬೇಕು.

ಕೂಲಂಟ್ ಮಟ್ಟ ನೋಡಬೇಕು: ಎಂಜಿನ್ ತಂಪಾದ ನಂತರ ಕೂಲಂಟ್ ರಿಸರ್ವಾಯರ್ ಟ್ಯಾಂಕ್‌ನಿಂದ ಕೂಲಂಟ್ ಮಟ್ಟವನ್ನು ಪರೀಕ್ಷಿಸಿ, ಕಾರು ಬಿಸಿಯಾಗಿರುವಾಗ ರೇಡಿಯೇಟರ್ ಕ್ಯಾಪ್ ಅನ್ನು ತೆರೆಯಲು ಪ್ರಯತ್ನಿಸಬೇಡಿ. ಕೂಲಂಟ್ ಮಟ್ಟ ಕಡಿಮೆಯಿದ್ದರೆ ಅದನ್ನು ಮೇಲಕ್ಕೆತ್ತಬಹುದು, ಕೂಲಂಟ್ ಇಲ್ಲದಿದ್ದರೆ ತಾತ್ಕಾಲಿಕವಾಗಿ ನೀರನ್ನು ಸಹ ಬಳಸಬಹುದು. ಆದರೆ ತಣ್ಣೀರು ಬಿಸಿಯಾದ ಎಂಜಿನ್‌ಗೆ ಸರಿಯಾಗಿ ಹೋಗುವುದಿಲ್ಲ, ಎಂಜಿನ್ ಬ್ಲಾಕ್ ಬಿರುಕು ಬಿಡಬಹುದಾದ ಕಾರಣ ತಣ್ಣೀರು ಸೇರದಂತೆ ಎಚ್ಚರಿಕೆ ವಹಿಸಿ.
ಸೋರಿಕೆ ಪರಿಶೀಲಿಸಿ: ಕೂಲಂಟ್ ಕಡಿಮೆಯಾಗಿದ್ದರೆ, ಮೊದಲು ಎಲ್ಲಾದರೂ ಸೋರಿಕೆ ಆಗುತ್ತಿದ್ದೆಯೇ ಎಂದು ಒಮ್ಮೆ ಪರಿಶೀಲಿಸಿ. ಕಾರಿನ ಕೆಳಗೆ ಕೂಲಂಟ್‌ನ ಗುಂಡಿಗಳು ಅಥವಾ ರೇಡಿಯೇಟರ್, ಹೋಸ್‌ಗಳು ಅಥವಾ ನೀರಿನ ಪಂಪ್‌ನ ಸುತ್ತಲೂ ಸೋರಿಕೆ ಇದೆಯೇ ಎಂಬುದನ್ನು ನೋಡಿ. ಒಂದು ವೇಳೆ ಸೋರಿಕೆ ಆಗುತ್ತಿದ್ದರೇ ಸಾಧ್ಯವಾದಷ್ಟು ಬೇಗ ಸರಿಪಡಿಸಿದರೆ ತುಸು ನಿರಾಳರಾಗಬಹುದು.

ಮೆಕಾನಿಕ್ ಸಹಾಯ ಪಡೆಯಿರಿ: ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದರೆ ಮೆಕ್ಯಾನಿಕ್‌ಗೆ ಕರೆ ಮಾಡಿ. ಎಂಜಿನ್ ಇನ್ನೂ ಹೆಚ್ಚು ಬಿಸಿಯಾಗುತ್ತಿದ್ದರೆ ಯಾವುದೇ ಕಾರಣಕ್ಕೂ ಕಾರನ್ನು ಓಡಿಸಬೇಡಿ, ಇದು ಎಂಜಿನ್‌ಗೆ ಮತ್ತಷ್ಟು ಹಾನಿ ಉಂಟುಮಾಡುತ್ತದೆ. ಮೆಕ್ಯಾನಿಕ್ ಅಥವಾ ಸರ್ವಿಸ್ ಸ್ಟೇಷನ್ ಹತ್ತಿರದಲ್ಲಿದ್ದರೂ ಸಹ, ನಿಮ್ಮ ಕಾರನ್ನು ಓಡಿಸಬೇಡಿ. ಏಕೆಂದರೆ ಅಗತ್ಯ ಘಟಕಗಳಿಗೆ ಮತ್ತಷ್ಟು ಹಾನಿಯಾಗಬಹುದು.
ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ, ನೀವು ರಸ್ತೆಯಲ್ಲಿ ಸುರಕ್ಷಿತವಾಗಿ ನಿಮ್ಮ ಕಾರಿನ ಬಗ್ಗೆ ಕಾಳಜಿ ವಹಿಸಬಹುದು. ಹಾಗೆಯೇ ನಿಮ್ಮ ಕಾರುಗಳನ್ನು ದೊಡ್ಡ ರಿಪೇರಿಗಳಿಂದ ರಕ್ಷಿಸಬಹುದು. ನಿಮ್ಮ ಎಂಜಿನ್ ತಾಪಮಾನವನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತು ನಿಮ್ಮ ಕಾರು ಹೆಚ್ಚು ಬಿಸಿಯಾಗಲು ಪ್ರಾರಂಭಿಸಿದರೆ ತಕ್ಷಣ ಎಚ್ಚೆತ್ತು ಮೇಲಿನ ಸಲಹೆಗಳನ್ನು ಅನುಸರಿಸಿ.


Click it and Unblock the Notifications








