24 ಲಕ್ಷದ ಕಾರಿನಲ್ಲಿ ಓಡಾಡುವನು ಹೇಗೆ ಬಡವ ಆಗ್ತಾನೆ? ಬಿಗ್ ಬಾಸ್ ವಿನ್ನರ್ ಗಿಲ್ಲಿ ವಿರುದ್ಧ ಧ್ರುವಂತ್ ಕೆಂಡ..ಕೆಂಡ
ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ, ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಇರಬೇಕು. ಆದರೆ ಕೆಲವರು ಸೋತ ನಂತರ ಹಗೆತನ ಬೆಳೆಸಿಕೊಂಡು ಮತ್ತು ಅದನ್ನು ಪೋಷಿಸಿಕೊಂಡು ಬರುತ್ತಾರೆ. ದ್ವೇಷ ಸಾಧಿಸಲು ಮುಂದಾಗುತ್ತಾರೆ. ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಾರೆ. ಸೋಲನ್ನು ಗೌರವಯುತವಾಗಿ ಸ್ವೀಕರಿಸುವ ಮನೋಭಾವ ಇವರಲ್ಲಿ ಇರುವುದೇ ಇಲ್ಲ. ಆ ಗುಣ ಒಲಿಯುವುದು ಇಲ್ಲ.
ಗೆದ್ದವರ ಶ್ರಮ ಕೊಂಡಾಡುವ ಬದಲು ಅವರ ಸಾಧನೆಯನ್ನು ಪ್ರಶ್ನೆ ಮಾಡುತ್ತಾ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಗೆದ್ದವರ ನೈಜ ಬದುಕಿನ ಏರಿಳಿತದ ಪ್ರಯಾಣವನ್ನೇ ಡ್ರಾಮಾ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಧ್ರುವಂತ್ ಕೂಡ ಇಂತಹದ್ದೇ ಪ್ರಯತ್ನ ಮಾಡುತ್ತಿದ್ದಾರಾ..? ಗೊತ್ತಿಲ್ಲ. ಆದರೆ ನೋಡುಗರಲ್ಲಿ ಇಂತಹದ್ದೊಂದು ಅನುಮಾನ ಕಾಡುತ್ತಿದೆ. ಅದಕ್ಕೆ ಕಾರಣ ಧ್ರುವಂತ್ ಅವರ ನಡೆ ಮತ್ತು ನುಡಿ.

ಹೌದು. ''ಬಿಗ್ ಬಾಸ್'' ಟ್ರೋಫಿಗೆ ಗಿಲ್ಲಿಯೇ ಈ ಬಾರಿ ಅರ್ಹ ವ್ಯಕ್ತಿ ಎಂಬ ಅಭಿಪ್ರಾಯ ಹಲವರಲ್ಲಿ ಇತ್ತು. ಹಲವರು ಗಿಲ್ಲಿನೇ ಗೆಲ್ಲಬೇಕೆಂದು ಬಯಸಿದ್ದರು. ಇದಕ್ಕೆ ಕೈಗನ್ನಡಿಯೇ ಗಿಲ್ಲಿ ಗೆದ್ದ ನಂತರ ನಡೆದ ಸಂಭ್ರಮಾಚರಣೆ. ಅಭೂತಪೂರ್ವ ಮೆರವಣಿಗೆ.
ಆದರೆ ಗಿಲ್ಲಿಯ ಈ ಗೆಲುವನ್ನು ಇಬ್ಬರು ಮಾತ್ರ ಇವತ್ತು ಕೂಡ ಒಪ್ಪಲು ತಯಾರಿಲ್ಲ. ಇಬ್ಬರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಪೈಕಿ ಒಬ್ಬರು ಅಶ್ವಿನಿ ಗೌಡ ಆದರೆ ಮತ್ತೊಬ್ಬರು ಧ್ರುವಂತ್. ಇದಕ್ಕೆ ಪುರಾವೆ ಎನ್ನುವಂತೆ ಗಿಲ್ಲಿ ನಾನು ಬಡವ ಎಂಬ ಸಿಂಪತಿ ಕಾರ್ಡ್‌ನ್ನು ಉಪಯೋಗ ಮಾಡಿ ಗೆದ್ದಿದ್ದಾರೆ ಎಂಬ ವಾದವನ್ನು ಇಬ್ಬರು ಮಾಡುತ್ತಿದ್ದಾರೆ. 24 ಲಕ್ಷದ ಕಾರು ಹೊಂದಿರುವ ವ್ಯಕ್ತಿ ಅದ್ಹೇಗೆ ಬಡವನಾಗ್ತಾನೆ..? ಎಂಬ ಪ್ರಶ್ನೆಯನ್ನು ಸದ್ಯ ಧ್ರುವಂತ್ ಕೇಳಿದ್ದಾರೆ.
ಹೌದು, '' ಪ್ರಜಾವಾಣಿ'' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಧ್ರುವಂತ್, ನಿಜಾ ಎಲ್ಲಿಯೂ ಗಿಲ್ಲಿ ನಾನು ಬಡವ ಎಂದು ಹೇಳಿಕೊಂಡಿಲ್ಲ. ಆದರೆ ತಮ್ಮ ವೇಷಭೂಷಣದಿಂದ ಆ ರೀತಿ ಬಿಂಬಿಸಿದ್ದಾರೆ ಎಂದು ಹೇಳಿದ್ದಾರೆ. ಮಾತಿಗಿಂತ ಕೃತಿ ಪ್ರಭಾವಶಾಲಿಯಾಗಿರುತ್ತೆ ಎಂದು ಹೇಳಿರುವ ಧ್ರುವಂತ್ ನಾನು ಬರೀ ಬನಿಯನ್, ಚಡ್ಡಿ ಹಾಕೊಂಡು ಇದ್ರೆ ನೀವೇನು ನನ್ನ ಶ್ರೀಮಂತ ಅಂತೀರಾ..? ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದುವರೆದು ನಾನು ಕೇಳ್ಪಟ್ಟೆ ಅವರ ಬಳಿ ಎಂಜಿ ಹೆಕ್ಟರ್ ಕಾರ್ ಇದೆ. 24 ಲಕ್ಷದ ಮೇಲೆ ಇರುವ ಕಾರ್ ಅದು ಎಂದಿದ್ದಾರೆ. ಹೋಗಲಿ ಸೆಕೆಂಡ್ ಹ್ಯಾಂಡ್ ಎಂದೇ ಅಂದುಕೊಳ್ಳೋಣ ಆದರೂ ಅದರ ಬೆಲೆ 15 ಲಕ್ಷದ ಮೇಲಿರುತ್ತೆ ಎಂದಿದ್ದಾರೆ.

ಎಂಜಿ ಹೆಕ್ಟರ್ ಗಾಡಿಯಲ್ಲಿ ಅವರು ಓಡಾಡುತ್ತಾರೆ, ಬಡವ ಹಾಗೇ ಓಡಾಡುತ್ತಾನಾ..? ಎಂಬ ಪ್ರಶ್ನೆಯನ್ನು ಮಾಡಿರುವ ಧ್ರುವಂತ್ ಬಡವ ಅಂದರೆ ಯಾರು ಎಂದು ಉದಾಹರಣೆಯನ್ನು ನೀಡಿದ್ದಾರೆ. ಕೆಲವರಿಗೆ ಹೊಲ ಕೂಡ ಇರುವುದಿಲ್ಲ, ಒಂದು ಎತ್ತು ಇಟ್ಕೊಂಡು ಬೇರೆಯವರ ಹೊಲದಲ್ಲಿ ದುಡಿಮೆ ಮಾಡ್ತಾರೆ, ಪ್ರತಿ ದಿನ ಕೂಲಿ ಬಂದರೆ ಅವರಿಗೆ ಊಟ, ನಮ್ಮ ಮನೆಯಲ್ಲೂ ಚಿಕ್ಕ ತೋಟ ಇದೆ, ಅಲ್ಲಿ ಕೆಲಸಕ್ಕೆ ಬರ್ತಾರೆ ಅವರು ಬಡವರು ಎಂದು ಹೇಳಿರುವ ಧ್ರುವಂತ್ ಅವರಿಗೆ ಒಂದು ಮನೆಗೆ ಕೂಡ ಇಷ್ಟ ಇದೆ, ಬದುಕು ಕಟ್ಟಿಕೊಳ್ಳೋಕೆ ಊರಿಂದ ಊರಿಗೆ ವಲಸೆ ಬರ್ತಾರೆ, ಅವರು ಬಡವರು ಎಂದಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡೋಕೆ ಆಗಲ್ಲ ಅವರು ಬಡವರು ಎಂದಿದ್ದಾರೆ. ಮಕ್ಕಳನ್ನೂ ಕೆಲಸಕ್ಕೆ ಕಳಿಸ್ತಾರೆ ಅವರು ಬಡವರು ಎಂದಿದ್ದಾರೆ.
ಎಂಜಿ ಹೆಕ್ಟರ್ ಗಾಡಿಯಲ್ಲಿ ಓಡಾಡ್ತಾರೆ. ಬಡವ ಅಂತಾ ಹೇಳ್ತಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಧ್ರುವಂತ್ ಅವರ ತಂದೆಯ ಬಗ್ಗೆ ನನಗೆ ಗೌರವ ಇದೆ. ಅವರು ಬಹಳ ಕಷ್ಟಪಟ್ಟಿದ್ದಾರೆ ಅನ್ಸುತ್ತೆ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ಬಡವ ಅನ್ನೋ ಸಿಂಪತಿ ಕಾರ್ಡ್‌ನ ಯೂಸ್ ಮಾಡಿದ್ದಾನೆ. ಬಡವರ ಮಕ್ಕಳು ಬೆಳಿಬೇಕು ಅನ್ನೋದು ನಾನು ಒಪ್ಪಲ್ಲ ಎಂದು ಹೇಳಿದ್ದಾರೆ.
ಸಹಜವಾಗಿ ಧ್ರುವಂತ್ ಅವರ ಈ ಮಾತುಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ನಾವು ಬಡವ ಅಂತ ಗಿಲ್ಲಿಗೆ ವೋಟ್ ಹಾಕಿಲ್ಲ ಅವರ ನಡೆ ನುಡಿ ನೋಡಿ ವೋಟ್ ಮಾಡಿರುವುದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅವನು ಬಡವ ಅಂತ ತೋರಿಸಿಕೊಂಡೇ ಗೆದ್ದ ಏನಿವಾಗ ಎಂಬ ಪ್ರಶ್ನೆಯನ್ನು ಕೂಡ ಕೇಳಲಾಗುತ್ತಿದೆ.
Credit: Filmibeat


Click it and Unblock the Notifications








