ಪ್ರತಿ ದಶಕದ ವೇಗದ ಕಾರುಗಳು: 1880ರಿಂದ ಇಂದಿನ ವರೆಗೂ..!
ಕಳೆದೆರಡು ಶತಮಾನಗಳಲ್ಲಿ ಇಡೀ ವಾಹನ ಜಗತ್ತು ಅನೇಕ ವಿಕಾಸದ ಮೆಟ್ಟಿಲುಗಳನ್ನು ಹಾದು ಬಂದಿವೆ. ಮಾನವನ ನಿರಂತರ ಅಧ್ಯಯನದ ಫಲವಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಸೃಷ್ಟಿಯಾಗುತ್ತಲೇ ಇವೆ.
Also Read: ಭೂಮಿಯ ಮೇಲಿನ 10 ಅತಿ ವೇಗದ ರಸ್ತೆಗಳು
ಚೊಚ್ಚಲ ಕಾರಿನಿಂದ ಹಿಡಿದು ಇಂದಿನ ಯುಗದ ಸೂಪರ್, ಹೈಪರ್ ಕಾರುಗಳ ವರೆಗೂ ವಾಹನ ಜಗತ್ತು ಬೆಳೆದು ನಿಂತಿದೆ. ಹಾಗಿರುವಾಗ ಪ್ರತಿ ದಶಕದ ವೇಗದೂತ ಕಾರುಗಳ ಬಗ್ಗೆಮಾಹಿತಿಗಳನ್ನು ಕೊಡುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಲಿದ್ದೇವೆ. ಶೂನ್ಯದಿಂದ ಆರಂಭವಾಗುವ ಈ ವೇಗದ ಓಟವು ಇಂದು ಗಂಟೆಗೆ 450 ಕೀ.ಮೀ. ವೇಗದ ವರೆಗೂ ಬೆಳೆದು ನಿಂತಿದೆ.

1880-1889
ವಿಶ್ವದ ಮೊದಲ ಮೋಟಾರ್ ವ್ಯಾಗನ್ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾರ್ಲ್ ಬೆಂಝ್ ಕಂಡು ಹಿಡಿದಿರುವ ಬೆಂಝ್ ಮೋಟಾರ್ ವ್ಯಾಗನ್ 1880ರಿಂದ 1889ರ ವರೆಗಿನ ದಶಕದ ಅತಿ ವೇಗದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಗಂಟೆಗೆ 16.09 ಕೀ.ಮೀ. (10mph) ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿತ್ತು.

1890 – 1899
ಸ್ಟೀಮ್ ನಿಯಂತ್ರಿತ ಸ್ಟಾನ್ಲಿ ರುನಾಬೌಟ್ ( Stanley Runabout ) 19ನೇ ಶತಮಾನದ ಅಂತ್ಯದಲ್ಲಿ ಅತ್ಯಂತ ವೇಗ ಕಾರೆನಿಸಿಕೊಂಡಿತ್ತು. ಇದು ಗಂಟೆಗೆ 48.28 ಕೀ.ಮೀ. (30mph) ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಪಡೆದಿತ್ತು.

1900 – 1909
20ನೇ ಶತಮಾನದ ಆರಂಭದಲ್ಲಿ ರೇಸ್ ಕಾರೆಂಬ ಖ್ಯಾತಿಯೊಂದಿಗೆ ಎಂಟ್ರಿ ಕೊಟ್ಟಿರುವ ಮರ್ಸಿಡಿಸ್ ಸಿಂಪ್ಲೆಕ್ಸ್ ಗಂಟೆಗೆ 117.48 ಕೀ.ಮೀ. (73mph) ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಪಡೆದುಕೊಂಡಿತ್ತು.

1910 – 1919
ಒಂದನೇ ಲೋಕ ಮಹಾಯುದ್ಧಕ್ಕೆ ಹೇತುವಾದ ಈ ದಶಕದಲ್ಲಿ ವಾಹನ ಜಗತ್ತಿನಲ್ಲೂ ಹಲವಾರು ಏರುಪೇರುಗಳು ಸಂಭವಿಸಿದ್ದವು. ಈ ನಡುವೆ ಫೆರ್ಡಿನಾಂಡ್ ಪೋರ್ಷೆ ಅವರಿಂದ ವಿನ್ಯಾಸಿತ ಆಸ್ಟ್ರೊ ಡೈಮ್ಲರ್ ಪ್ರಿನ್ಸ್ ಹೆನ್ರಿ ಕಾರು ಗಂಟೆಗೆ 136.79 ಕೀ.ಮೀ. (85mph) ವೇಗದಲ್ಲಿ ಸಂಚರಿಸುವಷ್ಟು ಪ್ರಾವೀಣ್ಯತೆಯನ್ನು ಹೊಂದಿತ್ತು.

1920 – 1929
ಅಮೆರಿಕನ್ ಎಂಜಿನಿಯರ್ ತಂತ್ರಗಾರಿಕೆಗೆ ಹೊಸ ಕೋಡು ನೀಡಿರುವ ಡ್ಯುಸೆನ್ ಬರ್ಗ್ ಮಾಡೆಲ್ ಜೆ (Duesenberg model J) ಕಾರು ವಿಶ್ವದ ಅತ್ಯಂತ ಶಕ್ತಿಶಾಲಿ ಕಾರು ಮಾತ್ರವಲ್ಲದೆ 191.51 ಕೀ.ಮೀ. (119 mph) ವೇಗದಲ್ಲಿ ಚಲಿಸುವ ಮೂಲಕ ಅಂದಿನ ದಶಕದ ಅತ್ಯಂತ ವೇಗದ ಕಾರುಗಳಲ್ಲಿ ಒಂದೆನಿಸಿಕೊಂಡಿತ್ತು.

1930 – 1939
ಮಾಡೆಲ್ ಜೆ ಮುಂದುವರಿದ ಆವೃತ್ತಿಯಾಗಿರುವ ಡ್ಯುಸೆನ್ ಬರ್ಗ್ ಮಾಡೆಲ್ ಎಸ್‌ಜೆ ತನ್ನ ಹಿಂದಿನ ಮಾದರಿಯ ವೇಗವನ್ನು ಹಿಮ್ಮೆಟ್ಟಿಸಿತ್ತು. ಇದು ಗಂಟೆಗೆ 225.30 ಕೀ.ಮೀ. (140mph) ವೇಗದಲ್ಲಿ ಸಂಚರಿಸುವಷ್ಟು ಶಕ್ತವಾಗಿತ್ತು.

1940 – 1949
ಎರಡನೇ ಲೋಕ ಮಹಾಯುದ್ಧದ ಬಳಿಕ ಜಾಗ್ವಾರ್ ಅತಿ ನೂತನ ಎಕ್ಸ್‌ಕೆ 120 ಕಾರನ್ನು ಸಿದ್ಧಗೊಳಿಸಿತ್ತು. ಹೆಸರಲ್ಲೇ ಸೂಚಿಸಿದಂತೆ ಈ ಕಾರು ಗಂಟೆಗೆ 120 ಮೈಲು ವೇಗದಲ್ಲಿ (193.12 ಕೀ.ಮೀ.) ಸಂಚರಿಸುವ ಸಾಮರ್ಥ್ಯ ಹೊಂದಿತ್ತು.

1950 – 1959
ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಹೆಚ್ಚು ಜನಪ್ರಿಯತೆ ಸಾಧಿಸಿರುವ ವಿಶ್ವ ವಿಖ್ಯಾತ ಆಸ್ಟನ್ ಮಾರ್ಟಿನ್ ಕಾರುಗಳು ವಾಹನ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈ ಪೈಕಿ 1950ರ ದಶಕದಲ್ಲಿ ಬಿಡುಗಡೆಗೊಂಡಿರುವ ಆಸ್ಟನ್ ಮಾರ್ಟಿನ್ ಡಿಬಿ4 ಜಿಟಿ ಕಾರು ಗಂಟೆಗೆ ಗರಿಷ್ಠ 246.22 ಕೀ.ಮೀ. (153mph) ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿತ್ತು.

1960 – 1969
ವಾಹನ ಲೋಕದಲ್ಲಿ ಅತಿ ಹೆಚ್ಚು ಬದಲಾವಣೆ ಹಾಗೂ ಹೊಸ ತಂತ್ರಗಾರಿಕೆಯು ಅವಿಷ್ಕರವಾಗುತ್ತಿರುವ ಸಮಯವಿದು. ಈ ಕಾಲಘಟ್ಟದಲ್ಲಿ ಬಿಡುಗಡೆಗೊಂಡ ಇಟಲಿಯ ಐಕಾನಿಕ್ ಫೆರಾರಿ ಸಂಸ್ಥೆಯ 365 ಜಿಟಿಬಿ/4 ಡೇಟೋನಾ ಗಂಟೆಗೆ 280.02 ಕೀ.ಮೀ. (174mph) ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಪಡೆದುಕೊಂಡಿತ್ತು.

1970 – 1979
1970ರ ದಶಕದಲ್ಲಿ ಲಂಬೋರ್ಗಿನಿ ಕೌಂಟೆಕ್ ಮಾದರಿಗೆ ಪ್ರಮುಖ ಎದುರಾಳಿಯ ರೂಪದಲ್ಲಿ ಫೆರಾರಿ ಜಿಟಿ4 ಬರ್ಲಿನೆಟ್ಟಾ ಬಾಕ್ಸರ್ ಉದಯವಾಗಿತ್ತು. ನಿಸ್ಸಂಶವಾಗಿಯೂ ವೇಗದ ವಿಚಾರದಲ್ಲೂ ಈ ಪ್ರಸಿದ್ಧ ಫೆರಾರಿ ಕಾರು ಗಂಟೆಗೆ 281.63 ಕೀ.ಮೀ. (175mph) ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿತ್ತು.

1980 – 1989
1986ನೇ ಇಸವಿಯಲ್ಲಿ ಲಗ್ಗೆಯಿಟ್ಟಿರುವ ಪೋರ್ಷೆ 959 ಅಂದಿನ ಕಾಲದಲ್ಲಿ ವಿಶ್ವದ ಅತಿ ವೇಗದ ಕಾರೆಂಬ ಗೌರವಕ್ಕೆ ಪಾತ್ರವಾಗಿತ್ತು. ಗಂಟೆಗೆ 321.86 ಕೀ.ಮೀ. (200mph) ವೇಗದಲ್ಲಿ ಸಂಚರಿಸಬಲ್ಲ ಈ ಕಾರನ್ನು ಬಳಿಕ ಫೆರಾರಿ ಎಫ್40 ಹಿಂದಿಕ್ಕಿತ್ತು.

1990 – 1999
20ನೇ ಶತಮಾನದ ಅಂತ್ಯದಲ್ಲಿ ಪರಿಚಯವಾಗಿರುವ ಅತಿ ವೇಗದ ಮೆಕ್ ಲ್ಯಾರೆನ್ ಎಫ್1 ಕಾರು ಗಂಟೆಗೆ 386.24 ಕೀ.ಮೀ. (240 mph) ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಪಡೆದುಕೊಂಡಿತ್ತು.

2000 – 2009
ಗಂಟೆಗೆ 431.30 ಕೀ.ಮೀ. (268mph) ವೇಗದಲ್ಲಿ ಸಂಚರಿಸಬಲ್ಲ ಶೆಲ್ಬಿ ಎಸ್‌ಎಸ್‌ಸಿ ಏರೋ ಕಾರು 2007ರಲ್ಲಿ ವಿಶ್ವದ ಅತ್ಯಂತ ವೇಗದ ಕಾರೆಂಬ ಅಧಿಕೃತ ಗಿನ್ನೆಸ್ ದಾಖಲೆ ಪಟ್ಟವನ್ನು ಆಲಂಕರಿಸಿತ್ತು.

2010ರಿಂದ ಇಂದಿನ ವರೆಗೂ...
ಪ್ರಸ್ತುತ ವಿಶ್ವದ ಅತಿ ವೇಗದ ಕಾರೆಂಬ ದಾಖಲೆಗೆ ಹೆನೆಸ್ಸೆ ವೆನೊಮ್ ಜಿಟಿ ಪಾತ್ರವಾಗಿದೆ. ಇದು ಗಂಟೆಗೆ 434.52 ಕೀ.ಮೀ. (270mph) ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಪ್ರಸಕ್ತ ದಶಕದಲ್ಲಿ ಈ ಕಾರಿನ ದಾಖಲೆಯನ್ನು ಬೇರೆ ಯಾರಾದರೂ ಮೀರಿ ನಿಲ್ಲುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

ವಾಯು ಜಲ ಭೂಮಿಯ 10 ಅತಿ ವೇಗದ ವಾಹನಗಳು


Click it and Unblock the Notifications








