ಕರ್ನಾಟಕದಲ್ಲಿ 22 ಗ್ರೀನ್ ಎಕ್ಸ್ ಪ್ರೆಸ್ ಹೈವೇ ನಿರ್ಮಿಸಲಿರುವ ಕೇಂದ್ರ ಸರ್ಕಾರ
ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಕರ್ನಾಟಕದ 22 ಗ್ರೀನ್ ಎಕ್ಸ್‌ಪ್ರೆಸ್ ಹೆದ್ದಾರಿಗಳಿಗಾಗಿ ರೂ.1.5 ಲಕ್ಷ ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಿದೆ.

ಇದರಲ್ಲಿ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಜೋಡಣೆಯು ಸೇರಿದೆ. ಮುಂದಿನ ಕೆಲವು ವರ್ಷಗಳಲ್ಲಿ ಪೂರ್ಣಗೊಳ್ಳಲಿರುವ ಈ ಹೆದ್ದಾರಿ ಯೋಜನೆಗೆ ರೂ.50,000 ಕೋಟಿ ವೆಚ್ಚವಾಗಲಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿರವರು ಮಾತನಾಡಿದರು.

ಕರ್ನಾಟಕದ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿ ರೂ.1.5 ಲಕ್ಷ ಕೋಟಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯ ವಾರ್ಷಿಕ ಮೊತ್ತವು ರೂ.2,150 ಕೋಟಿಗಳಾಗಿದೆ. ಇದನ್ನು ನಾವು ರೂ.3,990 ಕೋಟಿಗೆ ಏರಿಸಿದ್ದೇವೆ ಎಂದು ಹೇಳಿದರು.

ಐದು ದಿನಗಳ ಅಂತರರಾಷ್ಟ್ರೀಯ ನಿರ್ಮಾಣ ಸಲಕರಣೆ ಹಾಗೂ ನಿರ್ಮಾಣ ತಂತ್ರಜ್ಞಾನ ವ್ಯಾಪಾರ ಮೇಳವಾದ 10 ನೇ ಆವೃತ್ತಿಯ ಎಕ್ಸಾನ್ 2019ರ ಉದ್ಘಾಟನಾ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು.

ಕರ್ನಾಟಕ ಸರ್ಕಾರ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‍ಹೆಚ್‍ಎಐ) ಸಹಯೋಗದೊಂದಿಗೆ ಭಾರತೀಯ ಕೈಗಾರಿಕಾ ಒಕ್ಕೂಟವು ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ನಾವು 22 ಗ್ರೀನ್ ಎಕ್ಸ್ ಪ್ರೆಸ್ ಹೈವೇಗಳನ್ನು ನಿರ್ಮಿಸುತ್ತಿದ್ದೇವೆ. ಇದರಲ್ಲಿ ಪುಣೆ - ಬೆಂಗಳೂರು ನಡುವಿನ 600 ಕಿ.ಮೀ ಹೊಸ ಗ್ರೀನ್ ಎಕ್ಸ್ ಪ್ರೆಸ್ ಹೈವೇಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ರೂ.50,000 ಕೋಟಿ ವೆಚ್ಚವಾಗಲಿದೆ.

ಗಡ್ಕರಿರವರ ಹೆದ್ದಾರಿ ಸಚಿವಾಲಯ ಹಾಗೂ ಕರ್ನಾಟಕ ಸರ್ಕಾರವು 2,300 ಕಿ.ಮೀನ ಹೊಸ ರಸ್ತೆಗಳಿಗೆ ಅನುಮೋದನೆ ನೀಡಿದ್ದು, ಇದರ ಯೋಜನಾ ವರದಿ ಸಿದ್ಧವಾಗಿದೆ. ಈ ಯೋಜನೆಗೆ ಬಿಡ್ಡಿಂಗ್ ಅನ್ನು ಶೀಘ್ರದಲ್ಲೇ ಶುರು ಮಾಡಲಾಗುವುದು.

ಕರ್ನಾಟಕದ ಮುಖ್ಯಮಂತ್ರಿಗಳು ಭೂಸ್ವಾಧೀನಕ್ಕೆ ಎದುರಾಗುವ ಅಡ್ಡಿ ಆತಂಕಗಳನ್ನು ನಿವಾರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಗಡ್ಕರಿರವರು ತಿಳಿಸಿದರು. ಬೆಂಗಳೂರಿನಲ್ಲಿ ನಿರ್ಮಿಸಲಾಗುವ ಮತ್ತೊಂದು ರಿಂಗ್ ರಸ್ತೆಯ ಯೋಜನೆಯ ಬಗ್ಗೆಯೂ ಸಹ ಸಭೆಯಲ್ಲಿ ಚರ್ಚಿಸಲಾಗಿದೆ.

ಇದರಲ್ಲಿ ಭೂಸ್ವಾಧೀನಕ್ಕಾಗಿ 80%ನಷ್ಟು ಹಣವನ್ನು ರಾಜ್ಯಗಳು ಭರಿಸಬೇಕೆಂಬ ರಾಜ್ಯ ಸರ್ಕಾರದ ಮನವಿಯನ್ನು ಕೇಂದ್ರ ಸರ್ಕಾರವು ಒಪ್ಪಿಕೊಂಡಿದೆ ಎಂದು ಅವರು ಹೇಳಿದರು. ಸಚಿವಾಲಯವು ರಿಂಗ್ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರವು ಸ್ಟೀಲ್ ಹಾಗೂ ಸಿಮೆಂಟ್ ಮೇಲಿನ ತೆರಿಗೆಗೆ ವಿನಾಯಿತಿ ನೀಡಲಿದೆ ಎಂಬ ನಿರೀಕ್ಷೆಯಲ್ಲಿದೆ.

ರಿಂಗ್ ರಸ್ತೆಗೆ ಸಂಬಂಧಪಟ್ಟ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಇದು ಕರ್ನಾಟಕದ ಮುಖ್ಯಮಂತ್ರಿಯವರು ಜನತೆಗೆ ನೀಡುತ್ತಿರುವ ಉತ್ತಮ ಕೊಡುಗೆಯಾಗಿದೆ ಎಂದು ಗಡ್ಕರಿ ಹೇಳಿದರು. ಈ ಹೆದ್ದಾರಿ ಯೋಜನೆಗಳು ಕರ್ನಾಟಕದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿವೆ ಎಂದು ಅವರು ಅಭಿಪ್ರಾಯಪಟ್ಟರು.


Click it and Unblock the Notifications