Viral Video: ಅಯ್ಯೋ.. ಇದು ಲಾರಿ ಅಲ್ಲ.. ಮಾರುತಿ ಕಾರು, ಬರೋಬ್ಬರಿ 24 ಡ್ರಮ್ ಸಾಗಿಸಿದ ಭೂಪ!
ಪ್ರಪಂಚದಾದ್ಯಂತ ಸಾಮಾಜಿಕ ಜಾಲತಾಣ (Social media) ಎಂಬುದು ಬೃಹದಾಕಾರದ ಹೆಮ್ಮರವಾಗಿ ಬೆಳೆದು ನಿಂತಿದೆ. ಕೆಲವರು ತಮ್ಮ ದಿನನಿತ್ಯದ ಕೆಲಸ ಭಾಗವಾಗಿ ಗೊತ್ತೋ ಗೊತ್ತಿಲ್ಲದೋ ಏನನ್ನಾದರೂ ಮಾಡುತ್ತಾರೆ.. ಅದು ಹಲವರಿಗೆ ದೊಡ್ಡ ಅದ್ಭುತದ ರೀತಿಯಲ್ಲಿ ಭಾಸವಾಗುತ್ತದೆ. ಕೆಲ ದಿನಗಳಿಂದ ಅಂತಹದೇ ವಿಡಿಯೋವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಫುಲ್ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ 4 ಜನ ಕುಳಿತುಕೊಂಡು ಪ್ರಯಾಣಿಸಬಹುದಾದ ಮಾರುತಿ 800 (Maruti 800) ಕಾರಿನ ಮೇಲೆ ಸರಿ ಸುಮಾರು 24 ಡ್ರಮ್‍ಗಳನ್ನು ಸಾಗಿಸಿದ್ದಾನೆ.
'ಮೌರ್ಯ ಸೌಂಡ್ ಅಫೀಷಿಯಲ್' ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸಖತ್ ಹಲ್‌ಚಲ್ ಸೃಷ್ಟಿಸುತ್ತಿದೆ. ಬೈಕ್ ಸವಾರನೊಬ್ಬ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾನೆ. ಮಾರುತಿ 800 ಕಾರಿನ ಸಂಖ್ಯೆಯಲ್ಲಿ ಗಮನಿಸಿದಾಗ, ಅದು ಮಹಾರಾಷ್ಟ್ರದ ನೋಂದಣಿ ಹೊಂದಿದೆ. ಬಹುಶಃ ಅಲ್ಲಿನ ವ್ಯಕ್ತಿಯೊಬ್ಬ ಹೀಗೆ ಮಾಡಿರಬಹುದು.

ಸದ್ಯ, ಇನ್‌ಸ್ಟಾಗ್ರಾಮ್ ವೈರಲ್ ಆಗುತ್ತಿರುವ ವಿಡಿಯೋದ ದೃಶ್ಯಗಳಲ್ಲಿ ಮಾರುತಿ 800 ಹ್ಯಾಚ್‌ಬ್ಯಾಕ್ ಮೇಲ್ಭಾಗ ಒಂದಲ್ಲ ಎರಡಲ್ಲ ಬರೋಬ್ಬರಿ 24 ಬೃಹತ್ ಗಾತ್ರದ ಡ್ರಮ್‍ಗಳನ್ನು ಹಗ್ಗದಿಂದ ಕಟ್ಟಲಾಗಿದೆ. ಕಾರು ತುಂಬಾ ಹಳೆಯದಾಗಿದ್ದರೂ ಭಾರಿ ವೇಗದಲ್ಲಿ ಹೋಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, 'ಇದು ಮಾರುತಿ 800 ಕಾರಿನ ಪವರ್' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗ, 'ಅರ್ಜೆಂಟ್ ಡೆಲಿವರಿ' ಎಂದು ಹೇಳಿದ್ದಾರೆ. ಇನ್ನೊಬ್ಬರು, 'ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ' ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು, 'ಭಾರತದಲ್ಲಿ ಮಾತ್ರ ಇದನ್ನು ನೋಡಲು ಸಾಧ್ಯ' ಎಂದಿದ್ದಾರೆ.

ಈ ವಿಡಿಯೋದಲ್ಲಿ ಇಷ್ಟೊಂದು ಡ್ರಮ್‍ಗಳನ್ನು ಸಾಗಿಸಲು ಆ ವ್ಯಕ್ತಿ ಬಳಕೆ ಮಾಡಿಕೊಂಡ 'ಮಾರುತಿ 800' ಕಾರಿನ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯುವುದಾದರೆ, 80 & 90 ದಶಕದಲ್ಲಿ ಕಾರು ತೆಗದುಕೊಳ್ಳಬೇಕೆಂಬ ಎಷ್ಟೋ ಮಧ್ಯಮ ವರ್ಗದ ಜನರ ಕನಸನ್ನು ಇದೇ ಮಾರುತಿ 800 ಸಾಕಾರಗೊಳಿಸಿತ್ತು. 1983 ಡಿಸೆಂಬರ್ 14ರಂದು ದೆಹಲಿಯ ಹರ್ಪಾಲ್ ಸಿಂಗ್ ಎಂಬುವವರಿಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು, ಮೊದಲ ಕಾರಿನ ಕೀಯನ್ನು ಹಸ್ತಾಂತರಿಸಿದ್ದರು.
1986-87ರಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 1 ಲಕ್ಷ ಯುನಿಟ್ ಮಾರುತಿ 800 ಕಾರುಗಳನ್ನು ತಯಾರಿಸಲಾಗಿತ್ತು. ಅದು 2005-06ರಲ್ಲಿ 25 ಲಕ್ಷ ಯುನಿಟ್‌ಗಳಿಗೆ ತಲುಪಿತ್ತು. ಆ ಬಳಿಕ, ದೇಶೀಯ ಮಾರುಕಟ್ಟೆಯಲ್ಲಿ ನಡೆದ ವ್ಯಾಪಕ ಕ್ರಾಂತಿಯಿಂದ ಮಾರುತಿ 800 ಕಾರಿನ ಜನಪ್ರಿಯತೆ ನಿಧಾನವಾಗಿ ಇಳಿಮುಖವಾಯಿತು. 2014ರಲ್ಲಿ ಕಂಪನಿಯು ಈ ಕಾರಿನ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು.
ಈ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದಾಗ ರೂ.2.06 ಲಕ್ಷದಿಂದ ರೂ.2.38 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿತ್ತು. ಪೆಟ್ರೋಲ್ & ಎಲ್‌ಪಿಜಿ ಎಂಜಿನ್‌ನೊಂದಿಗೆ ಖರೀದಿಗೆ ದೊರೆಯುತ್ತಿತ್ತು. ಜೊತೆಗೆ 14 ರಿಂದ 16 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತಿತ್ತು. ಆ ನಂತರ ಮಾರುತಿ 800 ಜಾಗಕ್ಕೆ ಆಲ್ಟೊ 800 ಬಂತು. ಕಳೆದ ವರ್ಷ ಅದರ ಮಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಆಲ್ಟೊ ಕೆ10 ಖರೀದಿಗೆ ದೊರೆಯುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications