ಇದೇ ಬಲಭೀಮ.. ರಗಡ್ ಲುಕ್‌ನ ಟೊಯೊಟಾ ಕಾರು ಖರೀದಿಸಿದ ಖ್ಯಾತ ನಟ!
ಬಾಲಿವುಡ್ ಹಿರಿಯ ನಟ ಜಾಕಿ ಶ್ರಾಫ್ (Jackie Shroff) ಅವರು, 68ರ ವಯಸ್ಸಿನಲ್ಲೂ ಫುಲ್ ಆಕ್ಟಿವ್ ಆಗಿದ್ದಾರೆ. ಹಿಂದಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ, ಪಂಜಾಬಿ ಸೇರಿದಂತೆ 13 ಭಾರತೀಯ ಭಾಷೆಗಳ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಜಾಕಿ ಶ್ರಾಫ್ ಅವರಿಗೆ ಕಾರುಗಳ ಮೇಲೆಯೂ ವಿಶೇಷ ಪ್ರೀತಿಯಿದೆ. ದುಬಾರಿ ಬೆಲೆಯ ಐಷಾರಾಮಿ ಬಿಎಂಡಬ್ಲ್ಯು ಎಂ5, ಜೀಪ್ ಕಂಪಾಸ್, ಫಿಯೆಟ್ 1000, ಜಾಗ್ವಾರ್ ಎಕ್ಸ್‌ಕೆ ಹಾಗೂ ಇಸುಜು ವಿ-ಕ್ರಾಸ್‌ನ ಮಾಲೀಕರಾಗಿದ್ದಾರೆ.
ಈಚೆಗೆ ನಟ ಜಾಕಿ ಶ್ರಾಫ್ ಹೊಚ್ಚ ಹೊಸ ಟೊಯೊಟಾ ಹಿಲಕ್ಸ್ (Toyota Hilux) ಪಿಕ್ಅಪ್ ಟ್ರಕ್‌ನ್ನು ಖರೀದಿ ಮಾಡಿದ್ದಾರೆ. ಇದನ್ನು ಸಂಪೂರ್ಣವಾಗಿ ಕಸ್ಟಮೈಸ್ ಮಾಡಲಾಗಿದೆ. ಮುಂಬೈನ ತಮ್ಮ ನಿವಾಸದಲ್ಲಿ ನೂತನ ಕಾರನ್ನು ವಿತರಣೆ ಪಡೆದಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದೆ.

ಹೊಸ ಟೊಯೊಟಾ ಹಿಲಕ್ಸ್ ವಿಶೇಷತೆಗಳೇನು:
ಈ ಪಿಕ್ಅಪ್ ಟ್ರಕ್ ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಕನಿಷ್ಠ ರೂ.28 ಲಕ್ಷ ಹಾಗೂ ಗರಿಷ್ಠ ರೂ.35.37 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಪಡೆದಿದೆ. ಸ್ಟ್ಯಾಂಡರ್ಡ್ (STD), ಹೈ (High) ಹಾಗೂ ಹೈ ಎಟಿ (High AT) ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ನೋಡುಗರ ಕಣ್ಣು ಕುಕ್ಕುವಂತಿದೆ. ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲೈಟ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ವೈಟ್ ಪರ್ಲ್ ಕ್ರಿಸ್ಟಲ್ ಶೈನ್, ಎಮೋಷನಲ್ ರೆಡ್, ಗ್ರೇ ಮೆಟಾಲಿಕ್, ಸೂಪರ್ ವೈಟ್ ಮತ್ತು ಆಟಿಟ್ಯೂಡ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.
ನೂತನ 'ಟೊಯೊಟಾ ಹಿಲಕ್ಸ್' ದೊಡ್ಡ ಗಾತ್ರದ ಕಾರಾಗಿದೆ. 5,325 ಮಿ.ಮೀ ಉದ್ದ, 1,855 ಮಿ.ಮೀ ಅಗಲ ಹಾಗೂ 1815 ಮಿ.ಮೀ ಎತ್ತರವಿದೆ. 217 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 3,085 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಬರೋಬ್ಬರಿ 2,286 ಕೆಜಿ ತೂಕವಿದೆ.
ಈ ಕಾರು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 2.8-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 204 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 500 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 12 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 185 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 10.1 ಸೆಕೆಂಡುಗಳಲ್ಲಿ 0 ರಿಂದ 50 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಇದರ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 435 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (8 ಇಂಚು), ಅನಲಾಗ್ ಇನ್ಸ್ಟ್ರುಮೆಂಟ್ ಡಿಸ್‌ಪ್ಲೇ, ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್, ಡುಯಲ್ ಝೋನ್ ಆಟೋ ಕ್ಲೇಮೇಟ್ ಕಂಟ್ರೋಲ್, ಡುಯಲ್ ಜೋನ್ ಎಸಿ ಹಾಗೂ 6-ಸ್ಪೀಕರ್ ಸೌಂಡ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಹೊಸ 'ಟೊಯೊಟಾ ಹಿಲಕ್ಸ್' ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. 7 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಹೆಚ್ಎಸಿ (ಹಿಲ್ ಅಸಿಸ್ಟ್ ಕಂಟ್ರೋಲ್), ಹಿಲ್ ಸ್ಟಾರ್ಟ್ ಅಸಿಸ್ಟ್ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.


Click it and Unblock the Notifications








