ಅಪ್ಪ - ಮಗನ ಬಾಂಧವ್ಯ: ಕ್ರಿಕೆಟಿಗ ಸರ್ಫರಾಜ್ ಖಾನ್ ತಂದೆಗೆ 'ಥಾರ್' ಗಿಫ್ಟ್ ನೀಡುತ್ತೇನೆ.. ಆನಂದ್ ಮಹೀಂದ್ರಾ
ದೇಶದ ಪ್ರಖ್ಯಾತ ಉದ್ಯಮಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra), ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದವರನ್ನು ಗುರುತಿಸಿ ತಮ್ಮ ಕಂಪನಿಯ ವಾಹನಗಳನ್ನು ಉಡುಗೊರೆಯಾಗಿ ಕೊಡುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಸದಾ ಸಕ್ರಿಯರಾಗಿದ್ದು, ತಮಗೆ ಕುತೂಹಲದಿಂದ ಕಾಣುವ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಟೀಮ್ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ (Sarfaraz Khan) ಅವರ ತಂದೆ ನೌಶಾದ್ ಖಾನ್ (Naushad Khan) ಅವರಿಗೆ ಮಹೀಂದ್ರಾ ಥಾರ್ (Mahindra Thar) ಎಸ್‌ಯುವಿಯನ್ನು ಗಿಫ್ಟ್ ನೀಡಲು ಆನಂದ್ ಮಹೀಂದ್ರಾ ಅವರು ಮುಂದಾಗಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬಿಸಿಸಿಐ ಹಂಚಿಕೊಂಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಹಾಗೆಯೇ 'ಕಠಿಣ ಪರಿಶ್ರಮ, ಧೈರ್ಯ, ತಾಳ್ಮೆ.. ಮಗನಿಗೆ ಸ್ಫೂರ್ತಿ ತುಂಬಲು ತಂದೆಗೆ ಇದಕ್ಕಿಂತ ಉತ್ತಮವಾದ ಗುಣಗಳು ಯಾವುವು?. ಸ್ಪೂರ್ತಿದಾಯಕ ಪೋಷಕರಾಗಿರುವ ನೌಶಾದ್ ಖಾನ್ ಅವರು ಥಾರ್ ಕಾರನ್ನು ಉಡುಗೊರೆಯಾಗಿ ಸ್ವೀಕರಿಸಿದರೆ ಅದು ನನ್ನ ಗೌರವವಾಗಿರುತ್ತದೆ' ಎಂದು ಆನಂದ್ ಮಹೀಂದ್ರಾ ಅವರು ಶೀರ್ಷಿಕೆ ಬರೆದಿದ್ದಾರೆ. ಈ ಪೋಸ್ಟ್ 37 ಸಾವಿರಕ್ಕೂ ಹೆಚ್ಚಿನ ಲೈಕ್ ಪಡೆದುಕೊಂಡಿದೆ.
ಗುರುವಾರ ರಾಜ್‌ಕೋಟ್‌ನ ನಿರಂಜನ್ ಷಾ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಅವರು, ಅರ್ಧಶತಕವನ್ನು ಬಾರಿಸುವ ಮೂಲಕ ಸುದ್ದಿ ಮಾಡಿದ್ದರು. ಅನಿಲ್ ಕುಂಬ್ಳೆ ಅವರು ಸರ್ಫರಾಜ್ ಅವರಿಗೆ ಟೆಸ್ಟ್ ಕ್ಯಾಪ್ ನೀಡಿದ ನಂತರ ತಂದೆ ನೌಶಾದ್ ಭಾವುಕರಾಗಿದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ತಮ್ಮ ಚೊಚ್ಚಲ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಮೈದಾನಕ್ಕೆ ಬಂದ ಸರ್ಫರಾಜ್, 66 ಎಸೆತಗಳಲ್ಲಿ ಭರ್ಜರಿ 62 ರನ್‌ಗಳನ್ನು ಸಿಡಿಸಿದರು. ರವೀಂದ್ರ ಜಡೇಜಾರೊಂದಿಗೆ 77 ರನ್‌ಗಳ ಜೊತೆಯಾಟವಾಡಿದರು. ಆದರೆ, ಇಂಗ್ಲೆಂಡ್ ತಂಡದ ಮಾರ್ಕ್ ವುಡ್ ರನೌಟ್ ಮಾಡಿದ್ದರಿಂದ ಪೆವಿಲಿಯನ್ ಸೇರಬೇಕಾಯಿತು. ಅಲ್ಲಿಯೇ ಗ್ಯಾಲರಿಯಲ್ಲಿ ಇದ್ದ ಸರ್ಫರಾಜ್ ತಂದೆ ನೌಶಾದ್, ಮಗ ಬ್ಯಾಟಿಂಗ್ ಮಾಡುವುದನ್ನು ಆಸಕ್ತಿಯಿಂದ ವೀಕ್ಷಿಸಿದರು.
ಮಹೀಂದ್ರಾ ಥಾರ್ (Mahindra Thar) ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಇದೊಂದು ಆಫ್ ರೋಡ್ ಎಸ್‌ಯುವಿಯಾಗಿದೆ. 3-ಡೋರ್ ಆಯ್ಕೆಯಲ್ಲಿ ದೊರೆಯಲಿದ್ದು, ರೂ.11.25 ಲಕ್ಷದಿಂದ ರೂ.17.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಎಕ್ಸ್ (ಒ), ಎಲ್ಎಕ್ಸ್ ರೂಪಾಂತರ ಮತ್ತು ಎವರೆಸ್ಟ್ ವೈಟ್, ಅಕ್ವಾಮರೀನ್, ರೆಡ್ ರೇಜ್ ಸೇರಿದಂತೆ 5 ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ.
ಈ ಥಾರ್ 1.5-ಲೀಟರ್ ಡೀಸೆಲ್, 2.2-ಲೀಟರ್ ಡೀಸೆಲ್ ಮತ್ತು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 6-ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. 4WD (ಫೋರ್ ವೀಲ್ ಡ್ರೈವ್), RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದ್ದು, 15.2 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
ಮಹೀಂದ್ರಾ ಥಾರ್ ಎಸ್‌ಯುವಿಯಲ್ಲಿ 4 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications