ದೂರು ನೀಡುವ ಬದಲು ನಾವೇ ಏನಾದರೂ ಮಾಡೋಣ... ಸ್ಟಾರ್ ನಟನ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ
ಸಿನಿಮಾ ನಟರಿಗೆ ಅಭಿಮಾನಿಗಳು ಸುಮ್ಮನೆ ಹುಟ್ಟಿಕೊಳ್ಳುವುದಿಲ್ಲ, ಅವರು ಮಾಡುವ ಸಾಮಾಜಿಕ ಕಾರ್ಯಗಳು ಹಾಗೂ ನಿಸ್ವಾರ್ಥ ಸೇವೆಯಿಂದ ಜನರಲ್ಲಿ ಮನ್ನಣೆ ಗಳಿಸುತ್ತಾರೆ. ಇತ್ತಿಚಗೆ ಹಾಲಿವುಡ್ ನಟ ಮತ್ತು ಮಾಜಿ ಬಾಡಿಬಿಲ್ಡರ್ ಅರ್ನಾಲ್ಡ್ ಗುಂಡಿ ಬಿದ್ದಿದ್ದ ರಸ್ತೆಯನ್ನು ಸ್ವತಃ ತಾವೇ ದುರಸ್ಥಿಗೊಳಿಸಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.
ಹಾಲಿವುಡ್ ನಟ, ಚಲನಚಿತ್ರ ನಿರ್ಮಾಪಕ ಮತ್ತು ನಿವೃತ್ತ ವೃತ್ತಿಪರ ಬಾಡಿಬಿಲ್ಡರ್ ಅರ್ನಾಲ್ಡ್ ತಮ್ಮ ದೈತ್ಯ ದೇಹದಿಂದಲೇ ವಿಶ್ವದಾದ್ಯಂತ ಗುರ್ತಿಸಿಕೊಂಡಿದ್ದವರು. ನಂತರ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಹಾಗೆಯೇ ಅರ್ನಾಲ್ಡ್ ಸಮಾಜ ಸೇವೆಯಲ್ಲೂ ಮುಂದಿರುತ್ತಾರೆ. ಇತ್ತೀಚೆಗೆ ಮಹಿಳಾ ಸೈಕ್ಲಿಸ್ಟ್ ಒಬ್ಬರಿಗೆ ತಮ್ಮ ಕಾರನ್ನು ಡಿಕ್ಕಿ ಹೊಡೆದ ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸುದ್ದಿಯಾಗಿದ್ದರು. ಇದಾದ ಬಳಿಕ ಇತ್ತೀಚಿಗೆ ವಿಡಿಯೋವೊಂದನ್ನು ಹರಿಬಿಟ್ಟು ಈಗ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ಸಾಮಾನ್ಯವಾಗಿ ನಾವು ಮನೆ ಮುಂದೆ ಯಾವುದಾದರೂ ಗುಂಡಿಗಳು ಇದ್ದರೇ ಸ್ವತಃ ನಾವೇ ದುರಸ್ಥಿ ಮಾಡುತ್ತೇವೆ. ಒಂದು ವೇಳೆ ಮುಖ್ಯ ರಸ್ತೆಗಳಲ್ಲಿ ಗುಂಡಿಗಳು ಬಿದ್ದರೇ ಅವುಗಳನ್ನು ದುರಸ್ಥಿ ಮಾಡಲು ಸಂಬಂಧಪಟ್ಟ ಇಲಾಖೆಗೆ ತಿಳಿಸುತ್ತೇವೆ. ಆದರೆ ಇಲ್ಲಿ ಅರ್ನಾಲ್ಡ್ ಸ್ವತಃ ತಾವೇ ರಸ್ತೆಯೊಂದರಲ್ಲಿ ಗುಂಡಿಯನ್ನು ದುರಸ್ಥಿ ಮಾಡಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದ್ದು, ಅಭಿಮಾನಿಗಳು ಸೇರಿದಂತೆ ಅಲ್ಲಿನ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಅರ್ನಾಲ್ಡ್ ಅವರು ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್ ಆಗಿದ್ದವರು. ತಮ್ಮ ಅವಧಿಯಲ್ಲಿ ಉತ್ತಮ ಸೇವೆ ಮಾಡಿರುವುದಾಗಿ ಅಲ್ಲಿನ ಸಾರ್ವಜನಿಕರು ಹೇಳುತ್ತಾರೆ. ಇನ್ನು ವಿಷಯಕ್ಕೆ ಬಂದರೆ ಈ ವಿಡಿಯೋವನ್ನು ಅರ್ನಾಲ್ಡ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಡೀ ನೆರೆಹೊರೆಯವರ ಕಾರುಗಳು ಮತ್ತು ಬೈಸಿಕಲ್‌ಗಳನ್ನು ವಾರಗಟ್ಟಲೆ ಹಾನಿಗೊಳಿಸುತ್ತಿರುವ ಈ ದೈತ್ಯ ಗುಂಡಿಯನ್ನು ಸರಿಪಡಿಸಿದ್ದೇನೆ. ನನ್ನ ತಂಡದೊಂದಿಗೆ ಅದನ್ನು ಸರಿಪಡಿಸಿದೆ. ನಾವು ದೂರು ನೀಡುವ ಬದಲು ನಾವೇ ಏನಾದರೂ ಮಾಡೋಣ ಎಂದು ನಾನು ಯಾವಾಗಲೂ ಹೇಳುತ್ತೇನೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಭಾರತದಲ್ಲಿ ಮಾತ್ರವಲ್ಲದೇ ಅಮೆರಿಕಾದಲ್ಲೂ ರಸ್ತೆಯ ಸ್ಥಿತಿಯ ಬಗ್ಗೆ ಜನರು ದೂರುತ್ತಿರುವುದನ್ನು ನೋಡುತ್ತಿರುವುದು ಬಹುಶಃ ಇದೇ ಮೊದಲಿರಬಹುದು. ಏಕೆಂದರೆ ವಿಶ್ವದ ದೊಡ್ಡಣ ಎಂದು ಕರೆಸಿಕೊಳ್ಳುವ ಅಮೆರಿಕಾ ರಸ್ತೆ ದುರಸ್ಥಿ ವಿಷಯದಲ್ಲಿ ಹಿಂದುಳಿದಿದೆ ಎನ್ನುವುದು ವಿಪರ್ಯಾಸ. ಇನ್ನು ವಿಡಿಯೋ ವಿಷಯಕ್ಕೆ ಬಂದರೆ ಅರ್ನಾಲ್ಡ್ ಹಾಗೂ ಇನ್ನಿಬ್ಬರು ಸೇರಿ ರಸ್ತೆಯ ಗುಂಡಿ ಸರಿಪಡಿಸುವ ಕೆಲಸ ಮಾಡುತ್ತಿರುವುದನ್ನು ನೋಡಬಹುದು. ಅರ್ನಾಲ್ಡ್ ಸ್ವತಃ ಡಾಂಬಾರು ಮಿಶ್ರಣವನ್ನು ಗುಂಡಿಯ ಮೇಲೆ ಹಾಕುವುದನ್ನು ನೋಡಬಹುದು.
ನೆರೆಹೊರೆಯಲ್ಲಿ ವಾಸಿಸುವ ಜನರು ಈ ಕೆಲಸಕ್ಕೆ ಧನ್ಯವಾದ ಹೇಳುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು. ಇಂತಹ ಸನ್ನಿವೇಶಗಳು ಕೇವಲ ಸೆಲಿಬ್ರಿಟಿಗಳು ಮಾಡಿದಾಗ ಮಾತ್ರ ವೈರಲ್ ಆಗುತ್ತವೆ. ಭಾರತದಲ್ಲೂ ಇಂತಹ ಹಲವು ಘಟನೆಗಳು ನಡೆದರೂ ಅಷ್ಟೇನು ವೈರಲ್ ಆಗಿರಲಿಲ್ಲ. 2021 ರಲ್ಲಿ ಮುಂಬೈನ ರಸ್ತೆಯೊಂದರ ಮಧ್ಯೆ ಎರಡು ದೊಡ್ಡ ಹೊಂಡಗಳು ಬಿದ್ದಿದ್ದವು, ಈ ಗುಂಡಿಗಳೇ ಟ್ರಾಫಿಕ್ ಜಾಮ್‌ಗೆ ಕಾರಣವಾಗಿತ್ತು. ಮುಂಬೈನ ಟ್ರಾಫಿಕ್ ಪೊಲೀಸ್ ಒಬ್ಬರು ಇದನ್ನು ಮನಗಂಡು ಗುಂಡಿಯನ್ನು ಮರಳಿನಿಂದ ತುಂಬುತ್ತಿದ್ದ ವಿಡಿಯೋ ಹೊರಬಂದಿತ್ತು.
ಸಮೀಪದಲ್ಲೇ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಗುಂಡಿಗಳನ್ನು ತುಂಬಲು ಬೇಕಾದ ಸಾಮಗ್ರಿಗಳು ಲಭ್ಯವಾಗುತ್ತಿರುವುದು ಈ ಅಧಿಕಾರಿಯ ಗಮನಕ್ಕೆ ಬಂದಿದೆ. ಸೇತುವೆ ನಿರ್ಮಾಣ ಕಾಮಗಾರಿಯ ಅವಶೇಷಗಳನ್ನು ಹೊತ್ತೊಯ್ದು ಹೊಂಡಗಳನ್ನು ತುಂಬಿಸಿದ್ದರು. ಈ ಮೂಲಕ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಹೀಗೆ ಭಾರತದಲ್ಲೂ ಇಂತಹ ಘಟನೆಗಳು ನಡೆದರೂ ಬೆಳಕಿಗೆ ಬಾರದಿರಲು ಕಾರಣ ಅವರು ಸೆಲಬ್ರಿಟಿಗಳಾಗದಿರುವುದು ಎಂದೇ ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications